ಸೌಲಭ್ಯಗಳಿಲ್ಲದೆ ಸೊರಗಿದ ನಾಗರಾಳ
Team Udayavani, Jan 21, 2020, 4:12 PM IST
ನರೇಗಲ್ಲ: ರೋಣ ತಾಲೂಕು ಸರಹದ್ದಿನ ಕೊನೆಯ ಊರು, ಸಚಿವ ಸಿ.ಸಿ. ಪಾಟೀಲ ಮತಕ್ಷೇತ್ರದಲ್ಲಿ ಬರುವ ನಾಗರಾಳ ಗ್ರಾಮದ ಜನತೆಗೆ ಮೂಲಸೌಲಭ್ಯಗಳು ಮರೀಚಿಕೆಯಾಗಿವೆ.
ನಾಗರಾಳ ಸಮೀಪದ ಕುರುಡಗಿ ಗ್ರಾಪಂ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಸುಮಾರು 400ಕ್ಕೂ ಅ ಧಿಕ ಮನೆಗಳಿವೆ. ಇಲ್ಲಿ ಅರ್ಧಕ್ಕೆ ನಿಂತ ಸಿ.ಸಿ ರಸ್ತೆ ಕಾಮಗಾರಿಗಳು ಕಣ್ಮುಂದೆ ಬರುತ್ತವೆ. ರಸ್ತೆಗಳು ತಗ್ಗು ದಿನ್ನೆಗಳಿಂದ ಕೂಡಿವೆ.
ಬಸ್ ಸೌಕರ್ಯ ಇಲ್ಲ: ಇಲ್ಲಿನ ಜನರು ನಾಗರಾಳ ಗ್ರಾಮದಿಂದ ಗದಗ, ರೋಣ, ನರೇಗಲ್ಲ, ಅಬ್ಬಿಗೇರಿ ಸೇರಿದಂತೆ ವಿವಿಧ ಗ್ರಾಮಗಳಿಗೆ ವ್ಯಾಪಾರ-ವಹಿವಾಟುಗಳಿಗೆತೆರಳಲು ಬಸ್ ಸೌಕರ್ಯ ಇಲ್ಲದಿರುವುದು ದೊಡ್ಡ ತಲೆ ನೋವುವಾಗಿದೆ. ವಿದ್ಯಾರ್ಥಿಗಳು
ಶಿಕ್ಷಣಕ್ಕಾಗಿ ಗಜೇಂದ್ರಗಡ, ನರೇಗಲ್ಲ, ಅಬ್ಬಿಗೇರಿ, ರೋಣ ನಗರಗಳಿಗೆ ಗ್ರಾಮದ ಸಣ್ಣ ಹಳ್ಳದಲ್ಲಿರುವ ಅಡ್ಡ ದಾರಿ ಹಿಡಿದು ಸುಮಾರು 3 ಕಿ.ಮೀ ದೂರದಲ್ಲಿರುವ ಯರೇಬೇಲೇರಿ ಗ್ರಾಮ ಅಥವಾ ಬೆನಕೊಪ್ಪ ಕ್ರಾಸ್‌ವರೆಗೆ ನಡೆದುಕೊಂಡು ಹೋಗಬೇಕು.
ಸ್ವಚ್ಛತೆ ಇಲ್ಲ: ನಾಗರಾಳ ಊರು ಸ್ವಚ್ಛ- ಸುಂದರ ಗೊಳಿಸುವ ಪ್ರಯತ್ನವನ್ನು ಮಾತ್ರ ಕುರುಡಗಿ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾಡಲು ಇದೂವರೆಗೂ ಮುಂದಾಗಿಲ್ಲ. ಎಲ್ಲಿ ನೋಡಿದರೂ ಕಸ, ಕಡ್ಡಿ, ತ್ಯಾಜ್ಯ ತುಂಬಿಕೊಂಡಿದೆ. ಚರಂಡಿ ಹಾಗೂ ಕಸದ ತೊಟ್ಟಿಗಳ ಸಮರ್ಪಕ ನಿರ್ವಹಣೆ ಇಲ್ಲದೇ ಕಸ ತುಂಬಿ ದುರ್ವಾಸನೆ ಬೀರುತ್ತಿದೆ.
ಸ್ಥಗಿತಗೊಂಡ ಘಟಕ: ಇಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿರುವುದರಿಂದ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ಇಲ್ಲಿನ ಜನರು ಅನಿವಾರ್ಯವಾಗಿ ಕೆರೆಯ ನೀರನ್ನೇ ಕುಡಿದು ಜೀವನ ನಡೆಸುತ್ತಿದ್ದಾರೆ. ಸ್ಥಗಿತಗೊಂಡ ಶುದ್ಧ ನೀರಿನ ಘಟಕ ರಿಪೇರಿ ಮಾಡಿಸುವುದಕ್ಕೆ ಅಧಿ ಕಾರಿಗಳು ಮುಂದೆ ಬಂದಂತಿಲ್ಲ.
ಸಾಮೂಹಿಕ ಶೌಚಾಲಯ ಇಲ್ಲ: ಗ್ರಾಮದ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಾಮೂಹಿಕ ಶೌಚಾಲಯ ಇಲ್ಲದೇ ಇರುವುದರಿಂದ ಅಬ್ಬಿಗೇರಿ, ನೀರಲಗಿ ರಸ್ತೆಗಳ ಪಕ್ಕದಲ್ಲಿ ಶೌಚಕ್ಕೆ ಕುಳಿತುಕೊಳ್ಳುವ ಸ್ಥಿತಿ ಇದೆ. ಮಹಿಳೆಯರು ಬಯಲು ಶೌಚಕ್ಕೆ ತೆರಳುವ ಸಮಯದಲ್ಲಿ ವಾಹನಗಳು ಬಂದರೆ ಮುಜುಗರ ಪಡುವ ಪರಿಸ್ಥಿತಿ ಇದೆ. ಪುರುಷರು ಹೊಲ, ತೋಟಗಳಿಗೆ ಹೋಗುತ್ತಾರೆ. ರಸ್ತೆಯ ಅಕ್ಕಪಕ್ಕದಲ್ಲಿ ಶೌಚದ ವಾಸನೆಗೆ ಸಾಕಾಗಿ ಹೋಗಿದೆ.
ಸರ್ಕಾರಿ ಆಸ್ಪತ್ರೆಗಳಿಲ್ಲ: ಕುರುಡಗಿ ಗ್ರಾಪಂ ವ್ಯಾಪ್ತಿಗೆ ಒಳಪಡುವ ಯರೇಬಲೇರಿ, ನಾಗರಾಳ ಗ್ರಾಮಕ್ಕೆ ಸರ್ಕಾರಿ ಆಸ್ಪತ್ರೆ ಹಾಗೂ ಪಶು ಆಸ್ಪತ್ರೆ ಇಲ್ಲದಿರುವುದರಿಂದ ಇಲ್ಲಿನ ರೋಗಿಗಳು, ಗರ್ಭಿಣಿಯರು, ವೃದ್ಧರು ಸಮಸ್ಯೆ ಕಂಡರೆ, ಜಾನುವಾರುಗಳಿಗೆ ತೊಂದರೆ ಕಂಡು ಬಂದರೆ ಗದಗ ನಗರಕ್ಕೆ ತೆರಳುವ ಸ್ಥಿತಿ ಇದೆ.
ರೋಣ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಲಭ್ಯವಿರುವ 14ನೇ ಹಣಕಾಸು ಹಾಗೂ ಎಂಜಿಎನ್‌ಆರ್‌ಜಿ ಯೋಜನೆಯಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕೂಡಲೇ ಕುರುಡಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹಾಗೂ ಅಧ್ಯಕ್ಷರೊಂದಿಗೆ ಚರ್ಚಿಸಿ ಗ್ರಾಮಕ್ಕೆ ಮೂಲ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. -ಸಂತೋಷಕುಮಾರ ಪಾಟೀಲ, ತಾಲೂಕು ಪಂಚಾಯತ್ ಇಒ
-ಸಿಕಂದರ ಎಂ. ಆರಿ