ವರುಣನ ಅವಕೃಪೆಗೆ ರೈತ ಕಂಗಾಲು

•ತೇವಾಂಶವಿಲ್ಲದೆ ಕಮರುತ್ತಿದೆ ಭೂಮಿಯಲ್ಲಿ ಬಿತ್ತಿದ ಹೆಸರು ಬೀಜ •

Team Udayavani, Jun 19, 2019, 10:15 AM IST

ನರಗುಂದ: ತಾಲೂಕಿನಲ್ಲಿ ಬಿತ್ತನೆ ಮಾಡಿದ ಕೆಲವು ರೈತರ ಹೆಸರು ಬೀಜ ಮೊಳಕೆ ಹಂತದಲ್ಲೇ ಮಳೆಯಿಲ್ಲದೇ ಕಮರುತ್ತಿದೆ.

ನರಗುಂದ: ಸತತ ಐದು ವರ್ಷಗಳಿಂದ ಭೀಕರ ಬರಗಾಲ ಸ್ಥಿತಿಗೆ ಕಂಗೆಟ್ಟಿರುವ ತಾಲೂಕಿನ ರೈತಾಪಿ ವರ್ಗ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲೂ ಸಂಕಷ್ಟ ಎದುರಿಸುವಂತಾಗಿದೆ. ಜೂನ್‌ ಮೊದಲ ವಾರದಲ್ಲಿ ಸುರಿದ ಅಷ್ಟಿಷ್ಟು ಮಳೆಗೆ ಹೆಸರು ಬೀಜ ಬಿತ್ತನೆ ಮಾಡಿದ ರೈತರು ಇದೀಗ ವರುಣನ ಅವಕೃಪೆಗೆ ಕಂಗಾಲಾಗಿದ್ದು, ಹೆಸರು ಬೆಳೆಗಳ ಮೇಲೆ ಕರಿನೆರಳು ಆವರಿಸಿದೆ.

ಕಳೆದ ಐದು ವರ್ಷಗಳಿಂದ ಹಿಂಗಾರು ಮತ್ತು ಮುಂಗಾರು ಸೇರಿ ಬಹುತೇಕ ಬೆಳೆಗಳಿಂದ ವಂಚಿತವಾದ ರೈತರು ತೀವ್ರ ಬರಗಾಲ ಸ್ಥಿತಿ ಎದುರಿಸುತ್ತಿದ್ದು, ಈ ವರ್ಷವೂ ಮುಂದುವರೆಯುವ ಲಕ್ಷಣ ಗೋಚರಿಸುತ್ತಿದೆ. ಇದು ಇಡೀ ಕೃಷಿ ವಲಯವನ್ನು ಆತಂಕಕ್ಕೀಡು ಮಾಡಿದೆ.

ಹೆಸರಿಗೆ ಕರಿನೆರಳು: ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಹೆಸರು ಬೀಜ ಬಿತ್ತನೆ ವೇಳೆಗೆ ಸಾಕಷ್ಟು ಸುರಿದ ಮಳೆರಾಯ ಮತ್ತೇ ಮೋಡದ ಮರೆಯಲ್ಲಿ ಮಾಯವಾಗಿದ್ದರಿಂದ ಅಷ್ಟಿಷ್ಟು ರೈತರು ಮಾತ್ರ ಹೆಸರು ಬೆಳೆ ತೆಗೆದರು. ಆಗಲೂ ಬಹುತೇಕ ರೈತರು ಹೆಸರಿನಿಂದ ವಂಚಿತವಾದರು. ಬಳಿಕ ಹಿಂಗಾರು ಅವಧಿಗೆ ನವಿಲುತೀರ್ಥ ರೇಣುಕಾ ಜಲಾಶಯ ರೈತರಿಗೆ ವರವಾದ್ದರಿಂದ ಕಾಲುವೆ ನೀರಿನಿಂದ ಅನ್ನದ ಗಂಜಿಗೆ ನೆರವಾಯಿತು.

ಪ್ರಸಕ್ತ ಸಾಲಿನ ಜೂನ್‌ ತಿಂಗಳಲ್ಲಿ ಒಂದಿಷ್ಟು ಸುರಿದ ಮಳೆರಾಯ ರೈತರಲ್ಲಿ ಭರವಸೆ ಮೂಡಿಸಿತ್ತು. ಮಳೆರಾಯನ ಮೇಲೆ ಭರವಸೆ ಹೊತ್ತ ರೈತರು ಕೃಷಿ ಕಚೇರಿ ಬಾಗಿಲು ಬಡಿದು ಸಾಲಶೂಲ ಮಾಡಿ ಹೆಸರು ಬಿತ್ತನೆ ಬೀಜ ಖರೀದಿಸಿದರು. ಬಹುತೇಕ ರೈತರು ಒಣ ಮಣ್ಣಿನಲ್ಲೇ ಹೆಸರು ಬಿತ್ತನೆ ಮಾಡಿ ಕೈಸುಟ್ಟುಕೊಂಡಂತಾಗಿದೆ. ಕಳೆದ 15 ದಿನಗಳ ಹಿಂದೆ ತಾಲೂಕಿನಲ್ಲಿ ರೈತರು ಹೆಸರು ಬೀಜ ಬಿತ್ತನೆ ಮಾಡಿದ್ದರು. ಆದರೆ ಮಿಂಚಿ ಮರೆಯಾದ ಮಳೆರಾಯನ ಆಟಾಟೋಪಕ್ಕೆ ಮತ್ತೇ ರೈತರು ಕಂಗಾಲಾಗಿದ್ದಾರೆ. ಬಹುತೇಕ ರೈತರು ಬಿತ್ತನೆ ಮಾಡಿದ ಹೆಸರು ಬೀಜ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದು, ಒಂದಷ್ಟು ರೈತರ ಹೆಸರು ಬೀಜ ಮೊಳಕೆ ಹಂತದಲ್ಲೇ ಕಮರಿ ಹೋಗುತ್ತಿವೆ.

ಕೆಲವು ರೈತರ ಮೊಳಕೆಯೊಡೆದ ಹೆಸರು ಬೆಳೆ ಎರಡಿಂಚು ಅಳತೆಯಲ್ಲೇ ತೇವಾಂಶ ಕೊರತೆಯಿಂದ ಬಾಡಿ ನಿಂತಿದ್ದು, ರೈತರು ಸಂಕಷ್ಟ ಸ್ಥಿತಿ ಎದುರಿಸುವಂತಾಗಿದೆ. ಮತ್ತೂಂದೆಡೆ ಸಾಲಶೂಲ ಮಾಡಿ ಹೆಸರು ಬಿತ್ತನೆ ಬೀಜ ತಂದು ಮನೆಯಲ್ಲಿಟ್ಟುಕೊಂಡ ರೈತರು ವರುಣನಿಗೆ ಹಿಡಿಶಾಪ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ 7500 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೀಜ ಬಿತ್ತನೆಗೆ ಕೃಷಿ ಇಲಾಖೆ ಗುರಿ ಇಟ್ಟುಕೊಂಡಿತ್ತು.


ಈ ವಿಭಾಗದಿಂದ ಇನ್ನಷ್ಟು

  • ಗದಗ: ಗದಗ-ಬೆಟಗೇರಿ ನಗರಸಭೆ ವಾರ್ಡ್‌ ನಂ.4ರ ವ್ಯಾಪ್ತಿಯ ವಸಂತ್‌ ಸಿಂಗ್‌ ಜಮಾದಾರ ನಗರಕ್ಕೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು...

  • ನರೇಗಲ್ಲ: ಅಬ್ಬಿಗೇರಿ ಗ್ರಾಮದಿಂದ ಡ.ಸ. ಹಡಗಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಕಳೆದ ಹತ್ತಾರು ದಶಕಗಳಿಂದ ಡಾಂಬರೀಕರಣ ಆಗದೇ ಕಲ್ಲು, ಮಣ್ಣಿನಿಂದ ಕೂಡಿದ...

  • ನರಗುಂದ: ತಾಲೂಕಿನಲ್ಲಿ ಕಡಲೆ ಬೆಳೆಗೆ ಕಾಯಿಕೊರಕ ಹುಳುವಿನ ಬಾಧೆ ಕಂಡು ಬಂದಿದ್ದು, ಮುಂದೆ ಕುಂಕುಮ ರೋಗ ಬರುವ ಸಾಧ್ಯತೆಯಿದೆ ಎಂದು ಕೃಷಿ ವಿಜ್ಞಾನಿ ಮತ್ತು ಕೀಟ...

  • ಗಜೇಂದ್ರಗಡ: ಘನತ್ಯಾಜ್ಯ ವಸ್ತುಗಳಿಂದ ತಯಾರಿಸುತ್ತಿದ್ದ ಗಜೇಂದ್ರ ಗೋಲ್ಡ್‌ ಹೆಸರಿನ ಸಾವಯುವ ಜೈವಿಕ ಗೊಬ್ಬರ ಪ್ರಚಾರದ ಕೊರತೆಯಿಂದ ಬೇಡಿಕೆ ಕಳೆದುಕೊಂಡು...

  • ಲಕ್ಷ್ಮೇಶ್ವರ: ತಾಲೂಕಿನ ಮಾಗಡಿ ಕೆರೆಗೆ ಆಗಮಿಸುವ ವಿದೇಶಿ ಪಕ್ಷಿಗಳು ರೈತರು ಬೆಳೆದ ಕಡಲೆ, ಶೇಂಗಾ, ಸೂರ್ಯಕಾಂತಿ ಬೆಳೆಗಳ ಮೇಲೆ ದಾಳಿ ಮಾಡುತ್ತಿರುವುದು ರೈತರ...

ಹೊಸ ಸೇರ್ಪಡೆ