ದೇಶದ ಪ್ರಗತಿ ಕಲ್ಪನೆ ಮೂಡಲಿ

Team Udayavani, Sep 16, 2019, 11:42 AM IST

ಗದಗ: ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಡೆದ ಹೆಚ್ಚುವರಿ ಕೊಠಡಿ ಹಾಗೂ ಪ್ರಯೋಗಾಲಯ ಕಟ್ಟಡ ನಿರ್ಮಾಣಕ್ಕೆ ಸಚಿವ ಸಿ.ಸಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

ಗದಗ: ರಾಜ್ಯದಲ್ಲಿ ಶೈಕ್ಷಣಿಕ ಪ್ರಗತಿಗಾಗಿ ಸರಕಾರದಿಂದ ಕೋಟ್ಯಂತರ ರೂ. ಅನುದಾನ ಖರ್ಚು ಮಾಡುತ್ತಿದೆ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ರಾಜ್ಯ ಸರಕಾರದಿಂದ ಅನೇಕ ರೀತಿಯ ಸೌಲಭ್ಯಗಳಿದ್ದು, ಅವುಗಳ ಸದ್ಬಳಕೆಯೊಂದಿಗೆ ಭವಿಷ್ಯದಲ್ಲಿ ದೇಶದ ಪ್ರಗತಿಗೆ ನಮ್ಮ ಪಾತ್ರ ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿಗಳು ಚಿಂತಿಸಬೇಕು ಎಂದು ರಾಜ್ಯ ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ ಹೇಳಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ರವಿವಾರ ನಡೆದ ಹೆಚ್ಚುವರಿ ಕೊಠಡಿ ಹಾಗೂ ಪ್ರಯೋಗಾಲಯ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಪ್ರಾಥಮಿಕ ಹಂತದ ಶಿಕ್ಷಣ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸರಕಾರಿ ಶಾಲೆಗಳಲ್ಲಿ ಪಠ್ಯ-ಪುಸ್ತಕಗಳೊಂದಿಗೆ ಮಧ್ಯಾಹ್ನದ ಬಿಸಿ ಯೂಟ, ಮಕ್ಕಳಿಗೆ ಸಮವಸ್ತ್ರ, ಶೂ- ಸಾಕ್ಸ್‌, ಕ್ಷೀರ ಭಾಗ್ಯವನ್ನೂ ಒದಗಿಸುತ್ತಿದೆ. ಅದರಂತೆ ಪ್ರೌಢ, ಪದವಿ ಹಂತದಲ್ಲೂ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾಲೇಜು ವಿದ್ಯಾರ್ಥಿಗಳು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಭವಿಷ್ಯದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿ, ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ. ಆದರೆ, ಇದು ಪದವಿ ಹಂತದಲ್ಲಿ ಕೊಂಚ ಹಿನ್ನಡೆ ಅನುಭವಿಸುತ್ತಿದ್ದು, ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸರಕಾರಿ ಶಾಲಾ- ಕಾಲೇಜುಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳೇ ಹೆಚ್ಚು. ಅವರು ಓದಿ, ಏನಾದರೂ ಸಾಸುವ ಛಲದಿಂದ ಕಾಲೇಜಿಗೆ ಬರುತ್ತಾರೆ. ಹೀಗಾಗಿ ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಹೆಚ್ಚಿನ ಸಾಧನೆ ತೋರಬೇಕು. ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕಸ್ತೂರಿ ರಂಗನ್‌ ವರದಿಯಂತೆ ಈಗಾಗಲೇ ಕೇಂದ್ರ ಸರಕಾರ ರಾಷ್ಟ್ರೀಯ ಶೈಕ್ಷಣಿಕ ನೀತಿ-2015 ರೂಪಿಸಿ ಸಾರ್ವಜನಿಕರ ಅವಗಾಹನೆಗಾಗಿ ಕರಡು ಪ್ರಕಟಿಸಿದೆ. ಈ ಬಗ್ಗೆ ಕಾಲೇಜು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಅಧ್ಯಯನ ನಡೆಸಿ, ಸಾಧಕ- ಭಾದಕಗಳನ್ನು ಪರಾಮರ್ಶಿಸಬೇಕು. ಅದರಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ಸಲಹೆ-ಸೂಚನೆ ನೀಡಬೇಕು ಎಂದು ಕೋರಿದರು.

ಜಿ.ಪಂ ಪ್ರಭಾರಿ ಅಧ್ಯಕ್ಷೆ ಶಕುಂತಲಾ ಮೂಲಿಮನಿ, ಸದಸ್ಯ ಸಿದ್ದು ಪಾಟೀಲ, ತಾ.ಪಂ ಅಧ್ಯಕ್ಷ ಎಸ್‌.ಎಸ್‌. ಪಾಟೀಲ, ಕಾಲೇಜಿನ ಪ್ರಾಚಾರ್ಯ ಡಾ| ಎಸ್‌.ಎಫ್‌. ಸಿದ್ನೇಕೊಪ್ಪ ಇತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ