ಪ್ರವಾಹಕ್ಕೆ ತತ್ತರಿಸಿದ ಕೊಣ್ಣೂರ ಗ್ರಂಥಾಲಯ!
Team Udayavani, Nov 25, 2019, 1:16 PM IST
ನರಗುಂದ: ಇತಿಹಾಸದಲ್ಲೇ ಭೀಕರವಾಗಿ ಅಪ್ಪಳಿಸಿದ ಮಲಪ್ರಭಾ ನದಿ ಪ್ರವಾಹಕ್ಕೆ ಸಂಪೂರ್ಣ ಜಲಾವೃತಗೊಂಡಿದ್ದ ತಾಲೂಕಿನ ಕೊಣ್ಣೂರ ಗ್ರಾಮ ಚೇತರಿಸಿಕೊಳ್ಳುತ್ತಿದೆ. ಈ ಮಧ್ಯೆ ಜಲಾವೃತಕ್ಕೆ ಅಲ್ಲಿನ ಗ್ರಾಮ
ಪಂಚಾಯತ್ ಗ್ರಂಥಾಲಯ ಕೂಡ ತತ್ತರಿಸಿದ್ದು ಸಾಕಷ್ಟು ಹಾನಿಗೊಳಗಾಗಿದೆ. ಇದರಿಂದ ಓದುಗರಿಗೆ ಪುಸ್ತಕ ಕೊರತೆ ಎದುರಾಗಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಗ್ರಾಮದ ವಿಎಸ್‌ಎಸ್ ಬ್ಯಾಂಕ್ ಪಕ್ಕದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯ ಪ್ರವಾಹ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದೆ. ಪರಿಣಾಮ ಓದುಗರು ಸ್ವತ್ಛತೆಗಾಗಿ ಪರದಾಡುವಂತಾಗಿದೆ.
5500 ಪುಸ್ತಕಗಳು: ಆ.8ರ ಬಳಿಕ 2 ಬಾರಿ ಪ್ರವಾಹಕ್ಕೆ ಕೊಣ್ಣೂರ ಜಲಾವೃತಗೊಂಡ ಸಂದರ್ಭದಲ್ಲಿ ಗ್ರಂಥಾಲಯ ಕಟ್ಟಡಕ್ಕೂ ಹಾನಿಯಾಗಿ ಚೇತರಿಸಿಕೊಳ್ಳುತ್ತಿದೆ. 5500 ಪುಸ್ತಕಗಳಿದ್ದು, 2 ಸಾವಿರಕ್ಕೂ ಹೆಚ್ಚು ಪುಸ್ತಕ ಪ್ರವಾಹಕ್ಕೆ ಹಾಳಾಗಿವೆ. ಇಡೀ ಕಟ್ಟಡವೇ ಜಲಾವೃತ ಪರಿಣಾಮ ಒಳಗಿನ ಸಾಮಗ್ರಿ, ಪುಸ್ತಕಗಳಿಗೆ ಬಹಳ ಧಕ್ಕೆಯಾಗಿದೆ. ಅಳಿದುಳಿದ 3500ಕ್ಕೂ ಹೆಚ್ಚು ಪುಸ್ತಕ ರಕ್ಷಿಸಲಾಗಿದೆ.
ಕಿರಿದಾದ ಕಟ್ಟಡ: ಹೆದ್ದಾರಿಗೆ ಹತ್ತಿರವಿರುವ ಗ್ರಂಥಾಲಯಕ್ಕೆ ಕಟ್ಟಡ ಕಿರಿದಾಗಿದೆ. ಹೀಗಾಗಿ ಹೆಚ್ಚುವರಿ ಸೌಲಭ್ಯಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾದರೂ ಸ್ಥಳ ಅಭಾವದಿಂದ ಇದ್ದುದರಲ್ಲೇ ಮುನ್ನಡೆಸಲಾಗಿದೆ.
ಸ್ವಚ್ಛತೆ ಕೊರತೆ: ಸ್ವತ್ಛತೆ ಕೊರತೆ ಗ್ರಂಥಾಲಯ ಮತ್ತು ಓದುಗರನ್ನು ಬಾಧಿಸುತ್ತಿದೆ. ಗ್ರಂಥಾಲಯ ಮುಂಭಾಗ ಬಲಕ್ಕೆ ಮೊಬೈಲ್ ನೆಟ್‌ವರ್ಕ್ ಟವರ್ ಇದ್ದು, ಜನರೇಟರ್ ಇರಿಸಿದ್ದರಿಂದ ಸುತ್ತಲೂ ಗಲೀಜು ವಾತಾವರಣ ಕಂಡು ಬಂದಿದೆ. ಮುಂಭಾಗದಲ್ಲೂ ಸ್ವಚ್ಛತೆ ಕೊರತೆ ಕಾಣಿಸಿದೆ. ಕಟ್ಟಡಕ್ಕೆ ಸುಣ್ಣ ಬಣ್ಣದ ಅಲಂಕಾರ ಅಗತ್ಯವಿದೆ. ತಾಲೂಕಿನಲ್ಲೇ ಬಹುದೊಡ್ಡ ಕೊಣ್ಣೂರ ಗ್ರಾಮದ ಗ್ರಾಮ ಪಂಚಾಯತ್ ಗ್ರಂಥಾಲಯ ಸುಧಾರಣೆಗೆ ಇಲಾಖೆ ಮುಂದಾಗಬೇಕಿದೆ. ಮುಖ್ಯವಾಗಿ ಕಟ್ಟಡಕ್ಕೆ ಬಣ್ಣ, ಹೆಚ್ಚುವರಿ ಪುಸ್ತಕಗಳ ಲಭ್ಯತೆಗೆ ನೆರವಾಗಬೇಕಿದೆ.
ಮ್ಯಾಗಜಿನ್‌ಗೆ ಗ್ರಾಪಂ ನೆರವು: ಗ್ರಂಥಾಲಯಕ್ಕೆ 3 ಕನ್ನಡ ದಿನಪತ್ರಿಕೆ ಪೂರೈಕೆಯಿದೆ. ಮ್ಯಾಗಜಿನ್‌ಗೆ ಅನುದಾನ ಲಭ್ಯವಿಲ್ಲ. ಗ್ರಂಥಾಲಯ ಮೇಲ್ವಿಚಾರಕ ಪ್ರವೀಣ ವಾಸನ ಮನವಿ ಮೇರೆಗೆ ನೆರವಿಗೆ ಮುಂದಾದ ಅಲ್ಲಿನ ಗ್ರಾಮ ಪಂಚಾಯತ್, ಒಂದು ಮ್ಯಾಗಜಿನ್, ಉದ್ಯೋಗ ವಾರ್ತೆ ವೆಚ್ಚ ಭರಿಸಿ ಓದುಗರಿಗೆ ನೆರವಾಗಿದೆ.
ನಿರ್ದೇಶಕರ ಭೇಟಿ : ಮಲಪ್ರಭಾ ಪ್ರವಾಹದಿಂದ ಧಕ್ಕೆಯಾದ ಕೊಣ್ಣೂರ ಗ್ರಂಥಾಲಯಕ್ಕೆ ಇತ್ತೀಚೆಗೆ ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ ಹೊಸಮನಿ ಭೇಟಿ ನೀಡಿದ್ದಾರೆ. ಧಕ್ಕೆಯಾದ ಸಾಮಗ್ರಿ, ಹೆಚ್ಚುವರಿ ಪುಸ್ತಕ ದಾಸ್ತಾನು ಬಗ್ಗೆ ಭರವಸೆ ನೀಡಿದ್ದಾರೆ.
ಪ್ರವಾಹಕ್ಕೆ ಧಕ್ಕೆಯಾಗಿದೆ: ಮಲಪ್ರಭಾ ಪ್ರವಾಹದಿಂದ ಕಟ್ಟಡ ಜಲಾವೃತವಾಗಿತ್ತು. ಸುಮಾರು 2 ಸಾವಿರದಷ್ಟು ಪುಸ್ತಕಗಳಿಗೆ ಧಕ್ಕೆಯಾಗಿದೆ. ಇಲಾಖೆ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ. –ಪ್ರವೀಣ ವಾಸನ. ಗ್ರಂಥಾಲಯ ಮೇಲ್ವಿಚಾರಕರು.
-ಸಿದ್ಧಲಿಂಗಯ್ಯ ಮಣ್ಣೂರಮಠ