ಬಹುಗ್ರಾಮ ಯೋಜನೆ ವರದಿಗೆ ಆದೇಶ

Team Udayavani, Nov 12, 2019, 12:40 PM IST

ಗದಗ: ಜಿಲ್ಲೆಯಲ್ಲಿ ಡಿಬಿಒಟಿ ಯೋಜನೆಯಡಿ ಎಲ್ಲ ಗ್ರಾಮಗಳಿಗೆ ನದಿ ನೀರು ಪೂರೈಕೆ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ ಎನ್ನುತ್ತಿದ್ದಿರಿ. ಆದರೆ, ಇನ್ನೂ 20 ಗ್ರಾಮಗಳಲ್ಲಿ ಬಹುಗ್ರಾಮ ಯೋಜನೆ ಕಾಮಗಾರಿ ಚಾಲ್ತಿಯಲ್ಲಿರುವುದು ಏನು ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್‌, ತಕ್ಷಣ ಈ ಕುರಿತು ಪರೀಶಿಲನಾ ಸಭೆ ಜರುಗಿಸಿ ವರದಿ ನೀಡಲು ಜಿ.ಪಂ. ಸಿಇಒ ಡಾ| ಆನಂದ ಕೆ. ಅವರಿಗೆ ಆದೇಶಿಸಿದರು.

ಜಿಲ್ಲಾಡಳಿತ ಭವನದ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 483 ಶುದ್ಧ ನೀರಿನ ಘಟಕಗಳಿದ್ದು, 448 ಘಟಕಗಳು ಕಾಯನಿರ್ವಹಿಸುತ್ತಿದ್ದು, 35 ಸ್ಥಗಿತಗೊಂಡಿರುವ ಕುರಿತು ಚರ್ಚೆಯಲ್ಲಿ ಭಾಗವಹಿಸಿದ ಶಾಸಕ ಎಚ್‌.ಕೆ. ಪಾಟೀಲ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಘಟಕಗಳ ಕುರಿತು ನಿಗದಿತವಾಗಿ ಪರಿಶೀಲಿಸಿ ನಿರ್ವಹಣೆ ನಡೆಯಾಗಬೇಕು ಎಂದರು. ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಘಟಕಗಳ ನಿರ್ವಹಣೆಯನ್ನು ಇಲಾಖೆ ಬದಲಾಗಿ ಅರ್ಹ ಏಜೆನ್ಸಿಗೆ ವಹಿಸಬೇಕು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ 34 ಕಾರ್ಯಕರ್ತೆ ಹಾಗೂ 76 ಸಹಾಯಕಿಯರ ಹುದ್ದೆ ಅಲ್ಲದೇ ಇನ್ನೂ ಹೆಚ್ಚಿಸಿ ಹುದ್ದೆ ಖಾಲಿ ಇವೆ. ಈ ಕುರಿತು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಜರುಗಿಸಬೇಕು ಎಂದು ಶಾಸಕ ಕಳಕಪ್ಪ ಬಂಡಿ ಒತ್ತಾಯಿಸಿದರು.

ಕೃಷಿ ಹೊಂಡ ನಿರ್ಮಾಣ ಕುರಿತಂತೆ ರೈತರಿಗೆ ಇನ್ನೂ 9 ಕೋಟಿ ರೂ. ಬಾಕಿ ಹಣ ಬಿಡುಗಡೆ ಆಗಬೇಕಿದೆ ಎಂದು ಕೃಷಿ ಜಂಟಿ ನಿರ್ದೇಶಕ ರುದ್ರೇಶ ತಿಳಿಸಿದರು. ಇದೇ ವೇಳೆ ಮಾತನಾಡಿದ ಸಚಿವರು, ನೆರೆ ಹಾಗೂ ಮಳೆ ಹಾನಿ ಪ್ರದೇಶದಲ್ಲಿ ಭೂಮಿ ಇರುವ ಎಲ್ಲ ರೈತ ಕುಟುಂಬಗಳಿಗೆ ತಾಡಪಾಲ ವಿತರಿಸಬೇಕು. ಪ್ರಧಾನ ಮಂತ್ರಿ ಫಸಲ್‌ ವಿಮಾ ಕುರಿತಂತೆ ನೋಡೆಲ್‌ ಅಧಿಕಾರಿಗಳ ಮೂಲಕ ಪ್ರತಿ ಗ್ರಾಮದಲ್ಲಿ ಪಿಡಿಒಗಳ ಮೂಲಕ ಎಲ್ಲ ರೈತರಿಗೆ ಮಾಹಿತಿ ಜಾಗೃತಿ ಮೂಡಿಸಬೇಕು. ಬೆಳೆ ವಿಮೆ ಹಣದ ಹೊರತಾಗಿ ಬೆಳೆ ಹಾನಿ, ಮನೆ ಹಾನಿ ಇತರೆ ಪರಿಹಾರ ಹಣವನ್ನು ಯಾವುದೇ ಬ್ಯಾಂಕ್‌ಗಳು ಫಲಾನುಭವಿಗಳ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು ಎಂದು ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಜಾರಿಯಾದ ಪಾಲಿ ಹೌಸ್‌ನ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಕಳಕಪ್ಪ ಬಂಡಿ ಸಭೆಗೆ ದೂರಿದರು. ಆ ಯೋಜನೆಗೆ ಫಲಾನುಭವಿಗಳ ಆಯ್ಕೆಯನ್ನೇ ತಡೆಯಬೇಕು ಎಂದರು. ಅದಕ್ಕೆ ಧ್ವನಿಗೂಡಿಸಿದ ಸಚಿವ ಸಿ.ಸಿ. ಪಾಟೀಲ, ಇದರುವರೆಗೆ ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಎಲ್ಲ ಪಾಲಿ ಹೌಸ್‌ಗಳ ಕುರಿತು ಮೂರನೇ ವ್ಯಕ್ತಿಗಳಿಂದ ಪರಿಶೀಲನೆ ನಡೆಸಬೇಕು. ಅರ್ಹ ರೈತರಿಗೆ ಪಾಲಿಹೌಸ್‌ ಅನುಕೂಲ ಕುರಿತು ಜಾಗೃತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಅದನ್ನು ಯಶಸ್ವಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯು ಶಾಲೆಯಿಂದ ಹೊರಗುಳಿದ 388 ಮಕ್ಕಳನ್ನು ಶಾಲೆಗೆ ಪುನಃ ಕರೆತರುವ, ಜಿಲ್ಲೆಯ 280 ಶಾಲೆಗಳ 770 ಶಾಲಾ ಕೊಠಡಿಗಳಿಗೆ ಹಾನಿಯಾಗಿದ್ದು, 5 ಕೋಟಿ ಅನುದಾನ ಬಿಡುಗಡೆ ಆಗಿದೆ. ರಾಜ್ಯ ಸರಕಾರದ ನಿರ್ದೇಶನದಂತೆ ಅವುಗಳ ದುರಸ್ತಿ ಕೈಗೊಳ್ಳಲು ಶಾಲಾ ಅಭಿವೃದ್ಧಿ ಸಮಿತಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಪಶುಸಂಗೋಪನೆ ಇಲಾಖೆ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆ ತುಂಬಲು ನಿವೃತ್ತ ಅಧಿಕಾರಿ ಸಿಬ್ಬಂದಿಯ ಪಟ್ಟಿ ತಯಾರಿಸಿ, ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಕ್ರಮ ಜರುಗಿಸಲು ಸಚಿವ ಸಿ.ಸಿ.ಪಾಟೀಲ ಸೂಚಿಸಿದರು. ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ 32 ಲಕ್ಷ ಮಾನವ ದಿನಗಳ ಗುರಿ ಪೈಕಿ ಈ ವರೆಗೆ 24.50 ಲಕ್ಷ ಮಾನವ ದಿನ ಸೃಜಿಸಲಾಗಿದೆ ಎಂದು ಜಿ.ಪಂ ಸಿಇಒ ತಿಳಿಸಿದರು. ಜಿಪಂ ಜಾರಿಗೊಳಿಸುವ ಗ್ರಾಮವಿಕಾಸ, ನಮ್ಮ ಹೊಲ ನಮ್ಮ ದಾರಿ, ಮುಂತಾದ ಜನಪರ ಯೋಜನೆಗಳ ಮಾಹಿತಿ ಈಗಿರುವ ವಿಧಾನದಲ್ಲಿ ಇಲ್ಲಿ ಗ್ರಾಮವಿಕಾಸ ಯೋಜನೆಯು ಗ್ರಾಮಗಳಲ್ಲಿ ಕೆಲಸ ನಿಂತಿರುವ ದೂರುಗಳಿವೆ ತಕ್ಷಣವೇ ಈ ಕುರಿತು ಪರಿಶೀಲನೆ ನಡೆಸಿ ವಾಸ್ತವ ವರದಿ ನೀಡಲು ಜಿ.ಪಂ. ಸಿಇಒ ಆನಂದ ಅವರಿಗೆ ಸೂಚಿಸಲಾಯಿತು.

ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಎಚ್‌. ಪಾಟೀಲ, ಶಾಸಕರ ರಾಮಣ್ಣ ಲಮಾಣಿ, ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ  ಹನುಮಂತಪ್ಪ ಪೂಜಾರ, ಈರಪ್ಪ ನಾಡಗೌಡ್ರ, ಶಿವಕುಮಾರ ನೀಲಗುಂದ ವೇದಿಕೆ ಮೇಲಿದ್ದರು. ವಿವಿಧ ಇಲಾಖೆಗಳ ಜಿಲ್ಲಾ ಮುಖ್ಯಸ್ಥರು, ಗದಗ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಸಭೆಯಲ್ಲಿ ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ