ಸರಕಾರದ ವಿರುದ್ಧ ಆಕ್ರೋಶ

•ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ವಿರೋಧ•ರಸ್ತೆ ತಡೆ ನಡೆಸಿ ಪ್ರತಿಭಟನೆ

Team Udayavani, Jun 11, 2019, 7:42 AM IST

ಗದಗ: ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ನಗರದ ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ರೈತರು ರಸ್ತೆ ತಡೆ ನಡೆಸಿದರು.

ಗದಗ: ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ರಾಜ್ಯ ಸಮ್ಮಿಶ್ರ ಸರಕಾರದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಇಲ್ಲಿನ ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ಮೂರೂವರೆ ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸಿ, ರಸ್ತೆಯಲ್ಲೇ ಊಟ ಮಾಡುವ ಮೂಲಕ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಮಧ್ಯಾಹ್ನ 12ರ ವೇಳೆಗೆ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮುಳಗುಂದ ನಾಕಾ ಮಾರ್ಗವಾಗಿ ಸಾಗಿತು. ಇದೇ ವೇಳೆ ಟಿಪ್ಪು ಸುಲ್ತಾನ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಬಳಿಕ ಮಾರ್ಗ ಮಧ್ಯೆ ಪ್ಲಾಸ್ಟಿಕ್‌ ಹಾಸಿಕೊಂಡು ಮಹಿಳೆಯರು ಮನೆಯಿಂದ ತಂದಿದ್ದ ರೊಟ್ಟಿ, ಪಲ್ಲೆಯೊಂದಿಗೆ ಊಟ ಸೇವಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿ, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಮರಣ ಶಾಸನ ಬರೆದಂತೆ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಬಸವರಾಜ ಸಾಬಳೆ, ಎಸ್‌ಇಝಡ್‌, ಕೈಗಾರಿಕೆ ಸ್ಥಾಪನೆ ಮತ್ತು ನಗರೀಕರಣದ ಹೆಸರಲ್ಲಿ ದೇಶದ್ಯಂತ ರೈತರ ಜಮೀನುಗಳನ್ನು ಬೇಕಾಬಿಟ್ಟಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿತ್ತು. ಅದಕ್ಕೆ ಕಡಿವಾಣ ಹಾಕಲು ಯುಪಿಎ ಸರಕಾರ ಏ. 1, 2014ರಲ್ಲಿ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದಿತ್ತು.

ರೈತರ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಪ್ರತಿಯಾಗಿ ರೈತರಿಗೆ ಗ್ರಾಮೀಣ ಭಾಗದಲ್ಲಿ ನಾಲ್ಕು ಪಟ್ಟು, ನಗರ ಪ್ರದೇಶದಲ್ಲಿ ಎರಡು ಪಟ್ಟು ಪರಿಹಾರ ನೀಡಬೇಕೆಂಬ ಷರತ್ತು ವಿಧಿಸಿದೆ. ಆದರೆ, ರಾಜ್ಯ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಈ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಮುಂದಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.

ಸರಕಾರದ ಈ ಕ್ರಮದಿಂದ ರೈತ ಕುಟುಂಬಗಳು ಬೀದಿಗೆ ಬರಬೇಕಾಗುತ್ತದೆ. ರೈತರ ಹಿತದೃಷ್ಟಿಯಿಂದ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿರುವ ಪರಿಹಾರ ತಾರತಮ್ಯ ಸರಿಪಡಿಸಬೇಕು. ಭೂಸ್ವಾಧೀನ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಬೇಕು. ಅಲ್ಲದೇ, ಜಿಂದಾಲ್ ಕಂಪನಿಗೆ 3667 ಎಕರೆ ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೀವು ಯಾವ ಸೀಮೆ ರೈತನ ಮಗ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.

ವಿಜಯಕುಮಾರ ಸುಂಕದ ಮಾತನಾಡಿ, ಏಳು ವರ್ಷಗಳಿಂದ ಸತತ ಬರಗಾಲ ಎದುರಿಸುತ್ತಿರುವ ಕಾರಣ ಆಹಾರ ಉತ್ಪಾದನೆ ಕಡಿಮೆಯಾಗುತ್ತಿದೆ. ಬಾಕಿ ಇರುವ ಬರಪರಿಹಾರ ಒದಗಿಸಬೇಕು. ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಕೈಬಿಟ್ಟು, ಜಿಂದಾಲ್ ಕಂಪನಿಗೆ ಭೂ ಮಾರಾಟ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾ ಜಾಧವ, ವಿಠಲ ಜಾಧವ, ವಿಜಯಕುಮಾರ ಸುಂಕದ, ಶರೀಫ್‌ ನಮಾಜಿ, ರಾಜು ಬಾಳಿಕಾಯಿ, ರವಿ ಒಡೆಯರ, ಗಂಗಾಧರ ಮೇಟಿ, ಮುತ್ತಪ್ಪ ಆರೇರ, ಶರಣಪ್ಪ ಇನಾಮತಿ, ಶಿವಕ್ಕ ಬಾವಿ, ಅನುಸೂಯಾ ಬಾವಿ, ಗಿರಿಜವ್ವ ಅಸೂಟಿ, ಯಲ್ಲವ್ವ ಕಾಕನೂರ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಬೇಡಿಕೆ:

ರೈತರಿಗೆ ಕೊಡುವ ಪರಿಹಾರ ನಗರ ಮತ್ತು ಗ್ರಾಮೀಣ ಭಾಗದ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಇರಬೇಕು. ಭೂಸ್ವಾಧೀನ ಸಂಪೂರ್ಣವಾಗಿ ಸಾರ್ವಜನಿಕ ಉದ್ದೇಶಗಳಿಗೆ ಸೀಮಿತವಾಗೊಳಿಸಬೇಕು. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಯಡಿ ನ್ಯಾಯಾಧಿಕರಣದಲ್ಲಿ 13.42 ಟಿಎಂಸಿ ನೀರು ಹಂಚಿಕೆಯಾಗಿದ್ದು, ಕೂಡಲೇ ಕೇಂದ್ರ ಸರಕಾರ ಗೆಜೆಟ್ ನೋಟಿಫಿಕೇಶನ್‌ ಹೊರಡಿಸಿ, ಯೋಜನೆ ಪೂರ್ಣಗೊಳಿಸಬೇಕು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅವ್ಯವಹಾರವನ್ನು ಸರಿಪಡಿಸಿ, ನೇರವಾಗಿ ರೈತರ ಖಾತೆಗಳಿಗೆ ಹಣ ಜಮಾ ಮಾಡಬೇಕು. ಮಹದಾಯಿ ಹೋರಾಟದಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರೋಣ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡಿದ ಕೆಲಸಕ್ಕೆ 15 ದಿನ ಕಳೆದರೂ ಇಲ್ಲಿಯವರೆಗೆ ಕೂಲಿ ನೀಡಿಲ್ಲ ಎಂದು ಆರೋಪಿಸಿ ತಾಲೂಕಿನ ಅಸೂಟಿ ಹಾಗೂ ಕರಮುಡಿ ಗ್ರಾಮಸ್ಥರು...

  • ಗದಗ: ಆಟೋಗಳಲ್ಲಿ ಆರಕ್ಕಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಕರೆದೊಯ್ಯುವಂತ್ತಿಲ್ಲ ಎಂಬ ಜಿಲ್ಲಾ ಪೊಲೀಸ್‌ ಇಲಾಖೆ ಆದೇಶವನ್ನು ಖಂಡಿಸಿ ಗದಗ-ಬೆಟಗೇರಿ ಅವಳಿ ನಗರದ...

  • ಗದಗ: ಸಾರ್ವಜನಿಕ ವಲಯದಲ್ಲಿ ಅಧಿಕ ಕಾರ್ಯಭಾರ ಹಾಗೂ ಒತ್ತಡದೊಂದಿಗೆ ಕೆಲಸ ಮಾಡುವ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಶಾಂತಿ, ಸಮಾಧಾನ ಅತ್ಯವಶ್ಯಕವಾಗಿ ಬೇಕು...

  • ಗದಗ: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ತುಂಗಭದ್ರಾ ನದಿಯ ಉದ್ದಕ್ಕೂ ಅಕ್ರಮ ಮರಳು ಗಣಿಗಾರಿಕೆ ನಡೆಸಿರುವ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ...

  • ಗದಗ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಮಾದರಿಯಲ್ಲಿ ನಗರ ಪ್ರದೇಶದ ಸ್ಲಂಗಳಲ್ಲಿ ವಾಸ್ತವ್ಯ ಹೂಡುವ ಮೂಲಕ ಕೊಳಚೆ ಪ್ರದೇಶದ ಜನರ ಸಮಸ್ಯೆ...

ಹೊಸ ಸೇರ್ಪಡೆ