ಮೊಹರಂ ಸಂಭ್ರಮಕ್ಕೆ ಜನರ ಕಾತರ

Team Udayavani, Sep 4, 2019, 10:20 AM IST

ನರೇಗಲ್ಲ: ಸಂಭ್ರಮದ ಹಿಂದೂ-ಮುಸ್ಲಿಂ ಭಾವೈಕ್ಯ ಸಂಗಮವಾದ ಮೊಹರಂ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ಉದ್ಯೋಗ ಹರಿಸಿ ದೂರುದೂರಿಗೆ ತೆರಳಿದ್ದ ಜನರು ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ.

ಉತ್ತರ ಕರ್ನಾಟಕದ ಭಾಗದಲ್ಲಿ ಮೊಹರಂ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಮೊಹರಂ ಆಚರಣೆಯಲ್ಲಿ ಹಿಂದೂ ಬಾಂಧವರು ಹೆಚ್ಚು ಪಾಲ್ಗೊಳ್ಳುವುದು ಈ ಹಬ್ಬದ ವಿಶೇಷ. ಜೀವನೋಪಾಯಕ್ಕಾಗಿ ನಗರದತ್ತ ಮುಖಮಾಡಿದವರೆಲ್ಲ ಮೊಹರಂಗೆ ಹಬ್ಬದಾಚರಣೆಗೆ ಆಗಮಿಸುತ್ತಾರೆ. ಹೀಗೆ ಸದ್ಯ ಮನೆ ಮಂದಿಯೊಂದಿಗೆ ಸೇರಿ ಮೊಹರಂ ತಯಾರಿ ನಡೆಸುತ್ತಿದ್ದಾರೆ.

ಹಿಂದೂಗಳ ಪಾಲ್ಗೊಳ್ಳುವಿಕೆ ಅಧಿಕ: ಹಿಂದೂಗಳೇ ಹೆಚ್ಚು ಪಾಲ್ಗೊಳ್ಳುವ ಮೊಹರಂ ಹಬ್ಬದಲ್ಲಿ ಅಲೈ ದೇವರನ್ನು ಭಕ್ತಿಯಿಂದ ಆರಾಧಿಸಿ, ದೇವರನ್ನು ಕೂಡಿಸುವುದರೊಂದಿಗೆ ಆರಂಭಿಸಿ ಹೊಳೆಗೆ (ದಫನ್‌) ಕಳುಹಿಸುವವರೆಗೂ ಒಂದಿಲ್ಲೊಂದು ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಪ್ರತಿ ಗ್ರಾಮದ ಮೂರ್‍ನಾಲ್ಕು ಕಡೆಗಳಲ್ಲಿ ಕೂಡಿಸಿಲಾಗಿರುವ ಅಲೈ ದೇವರುಗಳು ಬರುವ ಭಕ್ತರಿಗೆ ಆಶೀರ್ವದಿಸುತ್ತಿವೆ.

ವಿಶಿಷ್ಟ ನಿಯಮಗಳು: ಅಲೈ ದೇವರನ್ನು ಕೂರಿಸುವಾಗ ಗ್ರಾಮೀಣ ಭಾಗದ ಜನ ತಮ್ಮ ಮಕ್ಕಳ ಕೈಗೆ ವಿಶೇಷವಾದ ದಾರ ಕಟ್ಟಿಸುವ ಮೂಲಕ ಫಕೀರರನ್ನಾಗಿಸುತ್ತಾರೆ. ಹೀಗೆ ಫಕೀರರಾದವರು ಕಸ ಪೊರಕೆ, ಚಪ್ಪಲಿಯಂತಹ ವಸ್ತುಗಳನ್ನು ಸ್ಪರ್ಶಿಸುವಂತಿಲ್ಲ. ಬೈಗುಳ ಅಥವಾ ಅವಾಚ್ಯ ಶಬ್ದಗಳನ್ನು ಬಳಸಬಾರದೆಂಬ ನಿಯಮವಿದೆ. ದೇವರುಗಳು ಹೊಳೆಗೆ ಹೋಗುವ ದಿವಸ ಕೈಗೆ ಕಟ್ಟಲಾದ ವಿಶಿಷ್ಠ ದಾರವನ್ನು ಅಗ್ನಿ ಕುಂಡದಲ್ಲಿ ಹಾಕುವ ಮೂಲಕ ಅಲೈ ದೇವರಿಗೆ ಸಮರ್ಪಿಸಲಾಗುತ್ತದೆ.

ಅಚ್ಚೊಳ್ಳಿ, ಕಳ್ಳಳ್ಳಿ: ಮಕ್ಕಳು ಹಾಗೂ ಯುವಕರು ದೇಹಕ್ಕೆ ಹಾಗೂ ಮುಖಕ್ಕೆ ಕಪ್ಪು ಮಸಿ ಅಥವಾ ಬಣ್ಣ ಹಚ್ಚಿಕೊಂಡು ತಲೆಯ ಮೇಲೆ ವಿಶೇಷವಾಗಿ ತಯಾರಿಸಲಾದ ಬಣ್ಣದ ಹಾಳೆ ಅಂಟಿಸಿದ ಟೊಪ್ಪಿಗೆ ಧರಿಸಿ ಸಂಕೇತಗಳ ಮೂಲಕವೇ ಜನರಿಂದ ಹಣ ಕೇಳುವುದು ವಾಡಿಕೆ. ಹೀಗೆ ಕೇಳುವಾಗ ಯಾರಾದರೂ ಮಾತನಾಡಿಸಿದರೆ ತಲೆಯ ಮೇಲಿನ ಟೊಪ್ಪಿಗೆ ತೆಗೆದು ಮಾತನಾಡುತ್ತಾರೆ. ಜನರು ಅಚ್ಚೊಳ್ಳಿ ಅಥವಾ ಕಳ್ಳಳ್ಳಿ ವೇಷ ಧರಿಸಿದವರಿಗೆ ಇಲ್ಲ ಎನ್ನದೇ ತಮ್ಮ ಕೈಲಾದಷ್ಟು ಹಣ ನೀಡಿ ಕಳುಹಿಸುತ್ತಾರೆ. ಸದ್ಯ ಇಂತಹ ದೃಶ್ಯಗಳು ಕಂಡುಬರುತ್ತಿವೆ.

ಹೆಜ್ಜೆ ಕುಣಿತ: ಮೊಹರಂ ಸಂದರ್ಭದಲ್ಲಿ ಗ್ರಾಮೀಣ ಯುವಕರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಒಂದು ಕೈಯಲ್ಲಿ ಸಿಂಗರಿಸಿದ ಕೊಡೆ ಮತ್ತೂಂದು ಕೈಯಲ್ಲಿ ಕೋಲು ಹಿಡಿದು ಹೆಜ್ಜೆ ಕುಣಿತ ಪ್ರದರ್ಶಿಸುತ್ತಾರೆ. ಮನೆ ಮನೆಗೆ ತೆರಳಿ ಕುಣಿದು ಬರುವ ಇವರು, ಮನೆಯವರು ನೀಡುವ ದವಸ ಧಾನ್ಯ ಅಥವಾ ಹಣ ಪಡೆದು ಮುಂದೆ ಸಾಗುತ್ತಾರೆ.

ಗಮನ ಸೆಳೆಯುವ ವಿವಿಧ ವೇಷ: ಮಕ್ಕಳು ಹುಲಿ ವೇಷದೊಂದಿಗೆ ತೆರಳಿದರೆ ಯುವಕರು ಕರಡಿ, ಹೆಣ್ಣು ಗಂಡಿನ ವಿಚಿತ್ರ ವೇಷದೊಂದಿಗೆ ಕುಣಿಯುತ್ತಲೇ ಮನೆ ಮನೆಗೆಸ ತೆರಳುತ್ತಾರೆ. ಈ ಸಂದರ್ಭದಲ್ಲಿ ಹಲಗೆ, ಶಹನಾಯಿ ವಾದನ ಕುಣಿಯುವವರನ್ನು ಹುರಿದುಂಬಿಸುತ್ತವೆ.

ಗಂಧದ ರಾತ್ರಿ-ಕತಲ್ ರಾತ್‌: ಮೊಹರಂ ಗಂಧದ ರಾತ್ರಿ ಕತಲ್ ರಾತ್‌ ದಿನದ ಹಿಂದಿನ ರಾತ್ರಿ ಆಚರಿಸುವ ಕತಲ್ರಾತ್‌ದಂದು ಭಕ್ತರು ಮಸೀದಿಗಳಿಗೆ ತೆರಳಿ ಸಕ್ಕರೆ ತಗೆದುಕೊಂಡು ಪೂಜೆ ಸಲ್ಲಿಸುತ್ತಾರೆ. ಮರು ದಿನ ಬೆಳಗಿನ ಜಾವ ದೇವರುಗಳು ಅಗ್ನಿ ಹಾಯಲಾಗುತ್ತದೆ. ಸಂಜೆ ಹೊಳಗೆ ಕಳುಹಿಸುವುದರೊಂದಿಗೆ ಹಬ್ಬ ಕೊನೆಗೊಳ್ಳುತ್ತದೆ.

 

•ಸಿಕಂದರ್‌ ಎಂ. ಆರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ