ಕಡಲೆಗೆ ಕುಂಕುಮ ರೋಗ ಸಾಧ್ಯತೆ
Team Udayavani, Dec 12, 2019, 2:49 PM IST
ನರಗುಂದ: ತಾಲೂಕಿನಲ್ಲಿ ಕಡಲೆ ಬೆಳೆಗೆ ಕಾಯಿಕೊರಕ ಹುಳುವಿನ ಬಾಧೆ ಕಂಡು ಬಂದಿದ್ದು, ಮುಂದೆ ಕುಂಕುಮ ರೋಗ ಬರುವ ಸಾಧ್ಯತೆಯಿದೆ ಎಂದು ಕೃಷಿ ವಿಜ್ಞಾನಿ ಮತ್ತು ಕೀಟ ಶಾಸ್ತ್ರಜ್ಞ ಡಾ| ಸಿ.ಎಂ.ರಫಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕೃಷಿ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಅವರೊಂದಿಗೆ ತಾಲೂಕಿನ ಭೈರನಹಟ್ಟಿ ಗ್ರಾಮ ಮತ್ತು ಸುತ್ತಲಿನ ಕೃಷಿ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ, ಕಡಲೆ ಬೆಳೆಗಳನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಬೆಳೆಗಳ ಸ್ಥಿತಿ, ಕೀಟ ರೋಗ ಬಾಧೆಗಳನ್ನು ವೀಕ್ಷಿಸಿ ಹಲವು ಮುಂಜಾಗ್ರತೆ ಕ್ರಮಗಳಿಗೆ ಶಿಫಾರಸ್ಸು ಮಾಡಿದ್ದಾರೆ.
ಕಾಯಿಕೊರಕ ಬಾಧೆ: ಕಡಲೆ ಬೆಳೆಗೆಕಾಯಿಕೊರಕ ಹುಳುವಿನ ಬಾಧೆ ಮತ್ತು ಮುಂದೆ ಬರಲಿರುವ ಕುಂಕುಮ ರೋಗ ನಿಯಂತ್ರಣಕ್ಕೆ ಪ್ರತಿ ಟ್ಯಾಂಕ್ ನೀರಿಗೆ 5 ಗ್ರಾಂ ಇಮಾಮೆಕ್ಟಿನ್ ಬೆಂಜೋಯೆಟ್ ಮತ್ತು 15 ಮಿಲೀ.ಹೆಕ್ಸಾಕೊನಜೋಲ್ ಬೆರೆಸಿ ಸಿಂಪಡಿಸಬೇಕು. ಗೋಧಿಯಲ್ಲಿ ಕಾಂಡಕೊರಕ ಮತ್ತು ಭಂಡಾರ ರೋಗ ತಡೆಗಟ್ಟಲು ಪ್ರತಿ ಲೀಟರ್ ನೀರಿಗೆ 0.3 ಮಿಲೀ ಕೊರಾಜಿನ್ ಹಾಗೂ1 ಮಿಲೀ.ಹೆಕ್ಸಾಕೊನಜೋಲ್ ಹಾಕಿ ಸಿಂಪಡಿಸಬೇಕು.ಹಾಗೆಯೇ ಜೋಳದಲ್ಲಿ ಲದ್ದಿ ಹುಳು ಕಂಡು ಬಂದಲ್ಲಿ ಲೀಟರ್ ನೀರಿಗೆ 0.4 ಗ್ರಾಂ ಇಮಾಮೆಕ್ಟಿನ್ ಬೆಂಜೋಯೆಟ್ ಬಳಸಬೇಕು. ಶೇ.5ಕ್ಕಿಂತ ಕಡಿಮೆ ಕಾಂಡಕೊರಕ ಇದ್ದರೆ ಔಷಧಿಯ ಅವಶ್ಯಕತೆಯಿಲ್ಲ.
ಸೂರ್ಯಕಾಂತಿ ಬೆಳೆಯಲ್ಲಿ 1 ಗ್ರಾಂ ಎಸಿಫೇಟ್ 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು ಎಂದು ಕೃಷಿ ವಿಜ್ಞಾನಿ ಸೂಚನೆ ಮೇರೆಗೆ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ ರೈತರಿಗೆ ಮಾಹಿತಿ ನೀಡಿದರು.