ಖಾಸಗಿ ಆಸ್ಪತ್ರೆಗಳು ಬಂದ್‌

•ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿ ವೈದ್ಯರ ಪ್ರತಿಭಟನೆ-ರೋಗಿಗಳ ಪರದಾಟ

Team Udayavani, Jun 18, 2019, 7:53 AM IST

ಗದಗ: ವೈದ್ಯರ ಮೇಲಿನ ದಾಳಿ ಖಂಡಿಸಿ ಖಾಸಗಿ ಆಸ್ಪತ್ರೆಗಳನ್ನು ಬಂದ್‌ ಮಾಡಿ ಮುಷ್ಕರ ನಡೆಸಲಾಯಿತು.

ಗದಗ: ಕೋಲ್ಕತ್ತಾದಲ್ಲಿ ವೈದ್ಯರ ಮೇಲಿನ ದಾಳಿ ಖಂಡಿಸಿ ಐಎಂಎ ಕರೆ ಮೇರೆಗೆ ಜಿಲ್ಲೆಯಾದ್ಯಂತ ಸೋಮವಾರ ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿತು.

ವೈದ್ಯರು ಹಾಗೂ ಖಾಸಗಿ ಆಸ್ಪತ್ರೆಗಳ ಮುಷ್ಕರದಿಂದಾಗಿ ಇಲ್ಲಿನ ಕೆಸಿ ರಾಣಿ ರಸ್ತೆ ಸೇರಿದಂತೆ ಅವಳಿ ನಗರದಲ್ಲಿರುವ ನೂರಾರು ಕ್ಲಿನಿಕ್‌ಗಳು, ಹತ್ತಾರು ನರ್ಸಿಂಗ್‌ ಹೋಂ ಬಾಗಿಲು ಮುಚ್ಚಿದ್ದವು. ಅದರೊಂದಿಗೆ ನಗರದ ವಿವಿಧ ಲ್ಯಾಬರೇಟರಿಗಳು, ಎಕ್ಸ್‌-ರೇ, ಸ್ಕಾನಿಂಗ್‌ ಸೆಂಟರ್‌ಗಳನ್ನು ಬಂದ್‌ ಮಾಡಿ ವೈದ್ಯರ ಮುಷ್ಕರಕ್ಕೆ ಬೆಂಬಲ ಸೂಚಿಸಲಾಗಿತ್ತು.

ವೈದ್ಯರ ಮುಷ್ಕರದ ಬಗ್ಗೆ ಅರಿಯದೇ ಬಂದಿದ್ದ ರೋಗಿಗಳಿಗೆ ಕೆಲಕಾಲ ಪರದಾಡುವಂತಾಯಿತು. ಹೊರ ರೋಗಿ ವಿಭಾಗದಲ್ಲಿ ಸೇವೆ ಸ್ಥಗಿತಗೊಳಿಸಲಾಗಿದೆ, ರೋಗಿಗಳು ಸಹಕರಿಸಬೇಕು ಎಂದು ನಗರದ ಬಹುತೇಕ ಎಲ್ಲ ಆಸ್ಪತ್ರೆಗಳ ಮುಖ್ಯದ್ವಾರದಲ್ಲಿ ನೋಟಿಸ್‌ ಬೋರ್ಡ್‌ ಅಳವಡಿಸಲಾಗಿತ್ತು. ಆದರೂ ಕೆಲ ತುರ್ತು ಪ್ರಕರಣಗಳಿಗೆ ಸ್ಪಂದಿಸಿದ ವೈದ್ಯರು, ರೋಗಿಗಳಿಗೆ ಚಿಕಿತ್ಸೆ ನೀಡಿದರು.

ನಗರದಲ್ಲಿ ವೈದ್ಯರ ಪ್ರತಿಭಟನೆ: ಕೋಲ್ಕತ್ತಾದಲ್ಲಿ ಖಾಸಗಿ ಆಸ್ಪತ್ರೆಯ ಕಿರಿಯ ವೈದ್ಯರೊಬ್ಬರ ಮೇಲೆ ಮೃತ ರೋಗಿಯ ಸಂಬಂಧಿಕರು ದಾಳಿ ನಡೆಸಿರುವುದನ್ನು ಖಂಡಿಸಿ ಇಲ್ಲಿನ ಜಿಮ್ಸ್‌ ಆಸ್ಪತ್ರೆ ಎದುರು ವೈದ್ಯರು ಪ್ರತಿಭಟನೆ ನಡೆಸಿದರು.

ಬಳಿಕ ಐಎಂಎ ನೇತೃತ್ವದಲ್ಲಿ ಜಿಮ್ಸ್‌ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಜಿಮ್ಸ್‌ ಆಸ್ಪತ್ರೆಯಿಂದ ಮುಳಗುಂದ ನಾಕಾ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೈಕ್‌ ರ್ಯಾಲಿ ನಡೆಸಿದರು.

ಈ ಕುರಿತು ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿ, ಇತ್ತೀಚಿನ ದಿನಗಳಲ್ಲಿ ಖಾಸಗಿ ವೈದ್ಯರು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲಿನ ದಾಳಿಗಳು ಹೆಚ್ಚುತ್ತಿದ್ದು, ವೈದ್ಯರು ಭಯದ ವಾತಾವರಣದಲ್ಲೇ ಸೇವೆ ಸಲ್ಲಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇತ್ತೀಚೆಗೆ ಕೋಲ್ಕತ್ತಾದಲ್ಲಿ ಹಿರಿಯ ನಾಗರಿಕರೊಬ್ಬರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಆದರೆ, ರೋಗಿಯ ಸಂಬಂಧಿಕರು ವಿನಾಕಾರಣ ವೈದ್ಯರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಗಲಾಟೆ ಮಾಡಿದ್ದಾರೆ. ಅಲ್ಲದೇ, 200ಕ್ಕೂ ಹೆಚ್ಚು ಜನರ ಗುಂಪು ಕರೆತಂದು ಕಿರಿಯ ವೈದ್ಯ ಹಾಗೂ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿ ನಡೆಯುವ ಬಗ್ಗೆ ಪೊಲೀಸರಿಗೆ ಮುನ್ಸೂಚನೆ ನಿಡಿದ್ದರೂ ಅಗತ್ಯ ಭದ್ರತೆ ಕಲ್ಪಿಸದಿರುವುದೇ ಈ ಘಟನೆಗೆ ಕಾರಣ ಎಂದು ಆರೋಪಿಸಿದರು. ಐಎಂಎ ಕರ್ಣಾಟಕ ರಾಜ್ಯಾಧ್ಯಕ್ಷ ಡಾ| ಅನ್ನದಾನ ಮೇಟಿ, ಗದಗ ಐಎಂಎ ಅಧ್ಯಕ್ಷ ಡಾ| ಧನೇಶ್‌ ದೇಸಾಯಿ, ಕಾರ್ಯದರ್ಶಿ ಶರಣು ಆಲೂರು, ಮಾಜಿ ರಾಜ್ಯಾಧ್ಯಕ್ಷ ಡಾ|ಜಿ.ಬಿ. ಬಿಡ್ನಾಳ, ಡಾ| ರಾಜಶೇಖರ ಬಳ್ಳಾರಿ, ಡಾ| ಬಿ.ಎಂ. ಆಲೂರು, ಡಾ| ಆರ್‌.ಎನ್‌.ಪಾಟೀಲ, ಅಲೋಪತಿಕ್‌ ಹಾಗೂ ಆಯುಷ್‌ ವೈದ್ಯರು ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವೈದ್ಯರ ಮೇಲಿನ ದಾಳಿ ತಡೆಯಲು ಒತ್ತಾಯ:

ವೈದ್ಯರು ಮುಕ್ತ ಹಾಗೂ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ. 2009ರಲ್ಲಿ ಜಾರಿಗೆ ತಂದಿರುವ ಆಸ್ಪತೆಗಳು ಹಾಗೂ ವೈದ್ಯರ ಮೇಲಿನ ದಾಳಿ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳ ಮೇಲೆ ದಾಳಿ ನಡೆಸುವ ಕಿಡಿಗೇಡಿಗಳನ್ನು ಜಾಮೀನು ರಹಿತ ಬಂಧನಕ್ಕೆ ಆದೇಶಿಸಬೇಕು. ವೈದ್ಯರ ಮೇಲಿನ ದಾಳಿಗಳನ್ನು ತಡೆಯಲು ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚಾದ ರೋಗಿಗಳು

ಮುಂಡರಗಿ: ಪಟ್ಟಣದ ಖಾಸಗಿ ಆಸ್ಪತ್ರೆಗಳ ವೈದ್ಯರು ಆಸ್ಪತ್ರೆಗಳನ್ನು ಬಂದ್‌ ಮಾಡಿ ಮುಷ್ಕರಕ್ಕೆ ಬೆಂಬಲ ಸೂಚಿಸಿದರು. ವೈದ್ಯರ ಮುಷ್ಕರದಿಂದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿತ್ತು. ರೋಗಿಗಳ ಗದ್ದಲವಿದ್ದರೂ ವೈದ್ಯರು ಪ್ರತಿಯೊಬ್ಬರನ್ನು ಪರೀಕ್ಷಿಸಿ ಜೌಷಧ ನೀಡಿದರು. ಅಲ್ಲದೇ ಪಟ್ಟಣದಲ್ಲಿ ಆಯುರ್ವೇದಿಕ್‌ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಜೊತೆಗೆ ಜೌಷಧ ವ್ಯಾಪಾರಿಗಳು ಜೌಷಧದ ಮಳಿಗೆ ತೆಗೆದು ವ್ಯಾಪಾರ ವಹಿವಾಟು ನಡೆಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ