ಪ್ರವಾಹ: ಮಲಪ್ರಭೆ ಶಾಂತಿಗಾಗಿ ಉಡಿ ತುಂಬಿದ ಮಹಿಳೆಯರು
Team Udayavani, Aug 18, 2020, 4:05 PM IST
ಗದಗ: ಅಬ್ಬರಿಸುತ್ತಿರುವ ಮಲಪ್ರಭೆ ಶಾಂತಳಾಗುವಂತೆ ಪ್ರಾರ್ಥಿಸಿ ನರಗುಂದ ತಾಲೂಕಿನ ಕೊಣ್ಣೂರು ಹಾಗೂ ಕಲ್ಲಾಪುರದ ಜನರು ಹೊಳೆಗೆ ಉಡಿ ತುಂಬುವುದರೊಂದಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಕೊಣ್ಣೂರು ಗ್ರಾಮದ ಜಾಡರ ಓಣಿ ಹಾಗೂ ಕಲ್ಲಾಪುರದ ಹತ್ತಾರು ಮಹಿಳೆಯರು ತಂಡೋಪ ತಂಡವಾಗಿ ಬಂದು ಕೊಣ್ಣೂರು ಬ್ರಿಡ್ಜ್ ಬಳಿ ನದಿಗೆ ಪೂಜೆ ಸಲ್ಲಿಸಿದರು.
ಹಣ್ಣು, ಕಾಯಿ, ಸೀರೆ ಹಾಗೂ ದವಸ ಧಾನ್ಯಗಳನ್ನು ಉಡಿ ತುಂಬಿ ಶಾಂತಳಾಗುವಂತೆ ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿದರು.
ಕಳೆದ ವರ್ಷವಷ್ಟೇ ಅಬ್ಬರಿಸಿದ್ದ ಮಲಪ್ರಭೆ ಇದೀಗ ಮತ್ತೊಮ್ಮೆ ಬೋರ್ಗರೆಯುತ್ತಿದ್ದಾಳೆ. ನದಿ ಪಾತ್ರದ ಗ್ರಾಮಗಳು ಜಲಾವೃತಗೊಂಡಿದ್ದು, ಜಮೀನುಗಳಲ್ಲಿ ಬೆಳೆದಿದ್ದ ಫಸಲು ನೀರು ಪಾಲಾಗಿದೆ. ಮನೆಗಳಿಗೆ ನೀರು ನುಗ್ಗಿದ್ದು, ಬದುಕು ಬೀದಿಗೆ ಬಂದಿದೆ. ತಾಯಿ ಮಲಪ್ರಭೆ ಕೃಪೆ ತೋರಬೇಕು ಎಂದು ಬೇಡಿಕೊಂಡರು.
ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ್ದರಿಂದ ಜಿಲ್ಲೆಯ ಕೊಣ್ಣೂರು ಸಮೀಪದ ಸೇತುವೆ ಮುಳುಗಡೆಯಾಗಿದ್ದು, ಸೊಲ್ಲಾಪುರ – ಹುಬ್ಬಳ್ಳಿ ಸಂಪರ್ಕ ಸ್ಥಗಿತಗೊಂಡಿದೆ.