ಇಂದಿರಾ ಗಾಂಧಿ ಎಂದರೆ ಬರೀ ಎಮರ್ಜೆನ್ಸಿ ಅಲ್ಲ: ಲತಾ

Team Udayavani, Nov 1, 2019, 2:55 PM IST

ಹರಪನಹಳ್ಳಿ: ಇಂದಿರಾಗಾಂ ಧಿ ಅವರ ಜನಪರ ಕಾರ್ಯಗಳನ್ನು ಮರೆಮಾಚಿ ಕೇವಲ ತುರ್ತು ಪರಿಸ್ಥಿತಿಯನ್ನು ಮುಂದುಮಾಡಿ ಅವರ ಚರಿತ್ರೆಗೆ ಮಸಿ ಬಳಿಯುವ ಕೆಲಸ ಮುಂದುವರೆದಿದೆ. ಇದು ಇಂದಿರಾಗಾಂಧಿಯವರ ಜನಪರ ಚಿಂತನೆಗಳಿಗೆ ಮಾಡುವ ಮೋಸ ಎಂದು ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯ ಕಾಂಗ್ರೆಸ್‌ ಭವನದಲ್ಲಿ ಗುರುವಾರ ಆಯೋಜಿಸಿದ್ದ ಇಂದಿರಾಗಾಂಧಿ ಪುಣ್ಯಸ್ಮರಣೆ ಉದ್ದೇಶಿಸಿ ಮಾತನಾಡಿರುವ ಅವರು, ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರು ದೇಶದ ಸಾರ್ವಭೌಮತ್ವಕ್ಕಾಗಿ ದುಡಿದವರು. ಅದಕ್ಕಾಗಿಯೇ ದುಷ್ಕರ್ಮಿಗಳ ಗುಂಡಿನ ಮಳೆಗೆ ದಾರುಣವಾಗಿ ಹತ್ಯೆಗೀಡಾದವರು. ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿರುವ ಉಳುವವನೇ ಭೂಮಿಯ ಒಡೆಯ, ಬ್ಯಾಂಕುಗಳ ರಾಷ್ಟ್ರೀಕರಣ, ಸೇನಾ ಸುಧಾರಣೆ, ಔದ್ಯೋಗಿಕ ಕ್ರಾಂತಿ, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸ್ಥಾಪನೆಯಂಥ ಮಹತ್ವದ ಕಾರ್ಯ ಮಾಡಿದ್ದಾರೆ. ಇಂದಿರಾ ಗಾಂಧಿ ಎಂದರೆ ಬರೀ ಎಮರ್ಜೆನ್ಸಿ ಅಲ್ಲ. ಅವರಲ್ಲಿನ ಜನಪರ ಕಾಳಜಿಯನ್ನೂ ಕೂಡ ನಾವುಗಳು ಪರಿಗಣಿಸಬೇಕಾಗುತ್ತದೆ ಎಂದರು.

ಬಿಹಾರದ ಬೆಲಿc ಗ್ರಾಮದಲ್ಲಿ ನಡೆದ ದಲಿತರ ಮೇಲಿನ ಸಾಮೂಹಿಕ ಹತ್ಯಾಕಾಂಡದ ಭೀಕರತೆಯನ್ನು ಕಣ್ಣಾರೆ ಕಂಡು ಇಂಥ ದಾರುಣ ಘಟನೆಗಳು ಇನ್ನೆಂದೂ ಮರುಕಳಿಸಬಾರದು ಎಂಬ ಧ್ಯೇಯದೊಂದಿಗೆ ಕಠಿಣ ಕಾನೂನು ರೂಪಿಸಿ ಅದನ್ನು ದೇಶಾದ್ಯಂತ ಜಾರಿಗೆ ತಂದಿದ್ದು ಇಂದಿರಾ ಗಾಂಧಿ ಎಂಬುದನ್ನು ಯಾರೂ ಮರೆಯಬಾರದು. ಆಪರೇಶನ್‌ ಬ್ಲೂಸ್ಟಾರ್‌ ಕಾರ್ಯಾಚರಣೆ ನಡೆಸಿ ದೇಶದ ಆಂತರಿಕ ಭದ್ರತೆಗೆ ಸವಾಲು ಒಡ್ಡಿದ್ದ ಖಲಿಸ್ತಾನಿ ಉಗ್ರರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಿದ್ದ ಇಂದಿರಾ ಗಾಂಧಿ ಯವರು ನಿಜವಾದ ಜನನಾಯಕಿ ಎಂದು ಇತಿಹಾಸದ ಘಟನೆಗಳನ್ನು ಮೆಲುಕು ಹಾಕಿದರು.

ದೇಶದ ಇಂದಿನ ಒನ್‌ ಮ್ಯಾನ್‌ ಶೋ ರಾಜಕಾರಣ ಮತ್ತು ಅದರಿಂದ ಬರುವ ಲಾಭದ ಲೆಕ್ಕಾಚಾರದಂತೆ ಅಂದು ಇಂದಿರಾಗಾಂಧಿಯವರು ಮೈಮರೆತಿದ್ದಿದ್ದರೆ ದೇಶ ದಿವಾಳಿಯಾಗುತ್ತಿತ್ತು. ಇಂದಿರಾ ಗಾಂಧಿಯವರು ತಮ್ಮ ಅಧಿ ಕಾರವನ್ನು ಜನರ ಸಾಮಾಜಿಕ ಭದ್ರತೆಗಾಗಿ ಸಂಪೂರ್ಣವಾಗಿ ಬಳಸಿಕೊಂಡಿದ್ದರಿಂದ ದೇಶದಲ್ಲಿ ಸಾಮರಸ್ಯ ಮತ್ತು ಸರ್ವಧರ್ಮ ಸಹಿಷ್ಣುತೆ ಸಿದ್ಧಾಂತಗಳು ಗಟ್ಟಿಯಾಗಿ ಬೇರೂರಿದ್ದವು. ಹಿಂದುಳಿದ ವರ್ಗಗಳು ಹಾಗೂ ಶೋಷಿತ ಸಮುದಾಯಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಸುಭೀಕ್ಷವಾಗಿರುವಂತೆ ವಿಶೇಷ ಕಾನೂನುಗಳನ್ನು ರೂಪಿಸಿದರು. ಆದರೆ ಇಂದು ದೇಶಾದ್ಯಂತ ಅಲ್ಪ ಸಂಖ್ಯಾತ ಮತ್ತು ಹಿಂದುಳಿದ ಸಮುದಾಯಗಳ ಮೇಲೆ ಆಹಾರ ಹಾಗೂ ಧಾರ್ಮಿಕತೆಯ ಹೆಸರಿನಲ್ಲಿ ಗುಂಪು ದಾಳಿಗಳು ಜರುಗುತ್ತಿವೆ. ಆಹಾರ ಅಭದ್ರತೆ, ಆರ್ಥಿಕ ದಿವಾಳಿತನ, ಜನಾಂಗೀಯ ಹತ್ಯೆಗಳು ದೇಶವನ್ನು ತತ್ತರಿಸುವಂತೆ ಮಾಡಿವೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದವರು ತುಟಿ ಬಿಚ್ಚುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ, ಡಿ. ರೆಹಮಾನಸಾಬ್‌, ಎಸ್‌. ಜಾಕೀರ್‌ ಸರ್ಕಾವಸ್‌, ಚಿಕ್ಕೇರಿ ಬಸಪ್ಪ, ಅರುಣ್‌ ಪೂಜಾರ, ತಾಪಂ ಸದಸ್ಯ ಹುಲಿಕಟ್ಟೆ ಚಂದ್ರಪ್ಪ, ಮುಖಂಡರಾದ ಅಗ್ರಹಾರ ಅಶೋಕ, ಉಜಾಲಾ ಜಾಫರ, ತಿಮ್ಮಲಾಪುರ ಈಶ್ವರ, ಬಿ.ಡಿ. ಜಾವೀದ್‌, ಟಿ.ಗುರುವಪ್ಪ, ಇಜಾರಿ ಮಹಾವೀರ, ಅಡವಿಹಳ್ಳಿ ರಾಜು ಪೂಜಾರ, ಉಮಾಶಂಕರ, ಟಿ.ಮಂಜುನಾಥ ಮಂಜುನಾಥ, ಮಗಾನಹಳ್ಳಿ ಉದಯಶಂಕರ, ಮತ್ತೂರು ಬಸವರಾಜ, ಚಲವಾದಿ ಪರಶುರಾಮ, ಎನ್‌.ಶಂಕರ, ಎಸ್‌. ಕೆ.ಸಮಿಯುಲ್ಲ, ಜೀಷಾನ್‌ ಹ್ಯಾರಿಸ್‌, ಸಾದಿಕ್‌ ಸಾಲಮೂರಳ್ಳಿ, ಅಬೂಸಾಲೇಹ, ಎಲ್‌.ಮಂಜ್ಯಾನಾಯ್ಕ ಇತರರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ