ಜ್ಞಾನದೇಗುಲವೋ… ಭೂತ ಬಂಗಲೆಯೋ!

ಕುಸಿದು ಬೀಳುವ ಹಂತದಲ್ಲಿದೆ ಕಟ್ಟಡಸ್ವಚ್ಛತೆ ಮರೀಚಿಕೆ-ಸೌಲಭ್ಯ ಕೊರತೆ

Team Udayavani, Nov 4, 2019, 5:26 PM IST

ಹರಪನಹಳ್ಳಿ: ಒಡೆದುಹೋಗಿರುವ ಕಿಟಕಿ ಗಾಜು, ಬಿರುಕು ಬಿಟ್ಟಿರುವ ಗೋಡೆಗಳು.. ಈಗಲೋ, ಆಗಲೋ ಬೀಳುವ ಹಂತದಲ್ಲಿರುವ ಮೇಲ್ಛಾವಣಿ.. ಮುರುಕಲು ಚೇರುಗಳು.. ಫ್ಯಾನ್‌ಗಳು ಇದ್ದರೂ ತಿರುಗಲ್ಲ, ಎಲ್ಲೆಂದರಲ್ಲಿ ಹಂದಿಗಳ ಸುತ್ತಾಟ.. ಕೆಸರು ಗದ್ದೆಯಂತಾಗಿರುವ ಆವರಣ.. ಇದು ತಾಲೂಕು ಗ್ರಂಥಾಲಯದ ದುಸ್ಥಿತಿ.

ಹರಪನಹಳ್ಳಿ ಪಟ್ಟಣದ ಬಿಎಸ್‌ಎನ್‌ಎಲ್‌ ಕಚೇರಿ ಹಿಂಭಾಗದಲ್ಲಿರುವ ಗ್ರಂಥಾಲಯ ಜ್ಞಾನ ದೇಗುಲದ ಬದಲು ಭೂತ ಬಂಗಲೆಯಂತೆ ಕಾಣುತ್ತಿದೆ. ಕಳೆದ 20 ವರ್ಷಗಳ ಹಿಂದೆ ಖರೀದಿಸಿರುವ ಕುರ್ಚಿಗಳೆಲ್ಲ ಹಾಳಾಗಿವೆ. ಕಿಟಕಿ ಗಾಜು ಒಡೆದಿರುವುದರಿಂದ ಮಳೆ ಬಂದರೆ ಸಾಕು ನೀರು ಒಳಗೆ ಬರುತ್ತದೆ. ಇದರಿಂದ ಚೇರು, ದಿನಪತ್ರಿಕೆಗಳು, ಪುಸ್ತಕಗಳೆಲ್ಲಾ ಒದ್ದೆಯಾಗುತ್ತಿವೆ.

ಮತ್ತೂಂದೆಡೆ ಕಟ್ಟಡದ ಮೇಲ್ಛಾವಣಿ ದುರಸ್ತಿಗಾಗಿ ಬಾಯಿ ತೆರೆದಿದ್ದು, ಸಿಮೆಂಟ್‌ ಪದರುಗಳು ಕೂತಿರುವವರ ಮೇಲೆ ಬೀಳುತ್ತವೆ. ಯಾವಾಗ ಕಟ್ಟಡ ಕುಸಿದು ಬಿಳುತ್ತದೆಯೋ ಎಂಬ ಆತಂಕದಲ್ಲಿಯೇ ಓದುಗರು ಕಾಲ ಕಳೆಯುವಂತಾಗಿದೆ.

ಮಹಿಳೆಯರಿಗೆ ಆಸನ ಇಲ್ಲ: ಓದುಗರ ಸಂಖ್ಯೆಗೆ ಅನುಗುಣವಾಗಿ ಕುಳಿತುಕೊಳ್ಳುವ ಅಸನ ವ್ಯವಸ್ಥೆ ಇಲ್ಲ. ಕೇವಲ 25 ಮುರುಕಲು ಚೇರ್‌ಗಳಿವೆ. ಸಂಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ವೃದ್ಧರು ಆಗಮಿಸುವುದರಿಂದ ಕೂರಲು ಆಸನವಿಲ್ಲದೆ ಮನೆಗೆ ಮರಳುತ್ತಿದ್ದಾರೆ.

ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಇಲ್ಲದಿರುವುದರಿಂದ ಮಹಿಳೆಯರ ಸಂಖ್ಯೆ ಅಪರೂಪವಾಗಿದೆ. ಪ್ರತಿಯೊಂದು ದಿನಪತ್ರಿಕೆಗಳನ್ನು ಎರಡು ಪ್ರತಿ ತರಿಸಲಾಗುತ್ತಿದ್ದು, 16 ಸಾವಿರ ಪುಸ್ತಕಗಳಿವೆ. ಆದರೆ ಹೊಸ ಪುಸ್ತಕಗಳ ಕೊರತೆ ಕಾಡುತ್ತಿದೆ. ಹರಪನಹಳ್ಳಿ ಪಟ್ಟಣದಲ್ಲಿ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗ‌ಳು ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ತುಸು ಹೆಚ್ಚಿದೆ. ಆದರೆ ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಸಿಇಟಿ, ನಿಟ್‌ ಪರೀಕ್ಷೆಗಳ ಪುಸಕ್ತಗಳ ಕೊರತೆ ಕಾಡುತ್ತಿದೆ.

ಶೌಚಾಲಯ ಮರೀಚಿಕೆ: ಹೆಸರಿಗಷ್ಟೇ ತಾಲೂಕುಮಟ್ಟದ ಗ್ರಂಥಾಲಯ, ಆದರೆ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ. ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಮಹಿಳೆಯರು ಗ್ರಂಥಾಲಯಕ್ಕೆ ಬರುತ್ತಿಲ್ಲ. ಕಟ್ಟಡ ಹಿಂಭಾಗದಲ್ಲೇ ಮೂತ್ರ ವಿಸರ್ಜನೆ ಮಾಡಬೇಕಿದೆ. ಇದರಿಂದ ಗ್ರಂಥಾಲಯ ಸುತ್ತಮುತ್ತ ಗಬ್ಬು ವಾಸನೆ ಪಸರಿಸಿದೆ.

ಗ್ರಂಥಾಲಯ ಸುತ್ತಮುತ್ತ ಆಳೆತ್ತರದ ಗಿಡಗಂಟೆಗಳು ಬೆಳೆದು ನಿಂತಿವೆ. ಗ್ರಂಥಾಲಯ ಹಿಂಭಾಗ ಬಯಲು ಜಾಗವಿರುವುದರಿಂದ ಕಸವನ್ನು ತಂದು ಹಾಕಲಾಗುತ್ತಿದ್ದು, ಇದರಿಂದ ದುರ್ನಾತ ಬೀರುತ್ತಿದೆ. ಗುಮಾಸ್ತರು, ಅಟೆಂಡರ್‌ ಕೊರತೆಯಿದ್ದು ಕೇವಲ ಶಾಖಾ ಅಧಿಕಾರಿ ಮಾತ್ರ  ರ್ಯನಿರ್ವಹಿಸುತ್ತಿದ್ದಾರೆ.

ಹಂದಿಗಳ ಹಾವಳಿ: ಗ್ರಂಥಾಲಯಕ್ಕೆ ಸರಿಯಾದ ಕಾಂಪೌಂಡ್‌ ಮತ್ತು ಗೇಟ್‌ ವ್ಯವಸ್ಥೆ ಇಲ್ಲ. ಹೀಗಾಗಿ ಹಂದಿಗಳು ನೇರವಾಗಿ ಗ್ರಂಥಾಲಯದ ಆವರಣದಲ್ಲಿ ಸುತ್ತಾಡುತ್ತಿವೆ. ಕೆಲವೊಮ್ಮೆ ಹಿಂಡುಹಿಂಡಾಗಿ ಆಗಮಿಸುವ ಹಂದಿಗಳು ಗ್ರಂಥಾಲಯ ಒಳಗೂ ನುಗ್ಗುತ್ತಿವೆ. ಇದೊಂಥರ ಹಂದಿಗಳ ಗೂಡಾಗಿ ಪರಿವರ್ತನೆ ಹೊಂದುತ್ತಿದೆ. ಗ್ರಂಥಾಲಯದ ಹಳೇ ಕಟ್ಟಡಕ್ಕೆ ಅಂಟಿಕೊಂಡಂತೆ 19.50ಲಕ್ಷರೂ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಇದು ಸುಸಜ್ಜಿತವಾಗಿಲ್ಲ. ಕಟ್ಟಡ ಪೂರ್ಣಗೊಂಡು 1 ವರ್ಷ ಕಳೆದಿದ್ದರೂ ಬಿಡ್ಡಿಂಗ್‌ ಉದ್ಘಾಟನೆಯಾಗಿಲ್ಲ. ಚಿಕ್ಕ ಕೊಠಡಿ ಆಗಿರುವುದರಿಂದ ಅಲ್ಲಿ ಪುಸ್ತಕದ ಅಲ್ಮೇರಾ ಮತ್ತು ರ್ಯಾಕ್‌ರ್‌ಗಳನ್ನು ಇಡಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಹೊಡೆದು ಹಾಕಿದ್ದ ಕೌಂಪೌಂಡ್‌ ಮರು ನಿರ್ಮಾಣವಾಗಿಲ್ಲ.

ಎಲ್ಲೆಂದರಲ್ಲಿ ಕೊಚ್ಚೆ ನೀರು: ಗ್ರಂಥಾಲಯ ತೆಗ್ಗಿನ ಪ್ರದೇಶದಲ್ಲಿರುವುದರಿಂದ ಸ್ವಲ್ಪ ಪ್ರಮಾಣದ ಮಳೆ ಬಂದರೂ ಸಾಕು ಇಲ್ಲಿಗೆ ಮಳೆ ನೀರು ಬಂದು ನಿಲ್ಲುತ್ತದೆ.

ಗ್ರಂಥಾಲಯದ ಪಕ್ಕದಲ್ಲಿರುವ ದೂರದರ್ಶನ ಮರು ಪ್ರಸಾರ ಕೇಂದ್ರ ಮತ್ತು ಡಿವೈಎಸ್ಪಿ ಕಚೇರಿವರೆಗೆ ಮಾತ್ರ ಕಾಂಕ್ರಿಟ್‌ ರಸ್ತೆ ನಿರ್ಮಾಣವಾಗಿದ್ದು, ಗ್ರಂಥಾಲಯಕ್ಕೆ ಈ ಭಾಗ್ಯವಿಲ್ಲ. ಹೀಗಾಗಿ ಕೊಚ್ಚೆ ನೀರಿನಲ್ಲಿಯೇ ಗ್ರಂಥಾಲಯದ ಒಳಗೆ ಪ್ರವೇಶ ಮಾಡಬೇಕು.

ಹೀಗಾಗಿ ವೃದ್ಧರು, ಅಂಗವಿಕಲರು ಹರಸಾಹಸ ಮಾಡಬೇಕು. ಕೊಚ್ಚೆ ನೀರು ನಿಲ್ಲುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಂಜೆ ವೇಳೆ ಗ್ರಂಥಾಲಯಕ್ಕೆ ಆಗಮಿಸಲು ಭಯಪಡುವಂಥ ಪರಿಸ್ಥಿತಿಯಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಜ್ಞಾನದೇಗುಲದ ಸಮಸ್ಯೆಗೆ ಅಂತ್ಯ ಹಾಡಬೇಕಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ