ಸ್ಥಳೀಯರಿಗೆ ಉದ್ಯೋಗ ಕೊಡಿ

2ಜಿ ಎಥೆನಾಲ್ ಘಟಕ ಸ್ಥಾಪನೆ• ಸ್ಥಳೀಯರೊಂದಿಗೆ ಪ್ರಾಥಮಿಕ ಸಭೆ

Team Udayavani, Jul 10, 2019, 10:16 AM IST

ಹರಿಹರ: ತಾಲೂಕಿನ ಹನಗವಾಡಿ ಗ್ರಾಮದ ಹೊರವಲಯದಲ್ಲಿ 2ಜಿ ಎಥೆನಾಲ್ ತಯಾರಿಕೆ ಕಂಪನಿ ಪ್ರಾರಂಭದ ಹಿನ್ನೆಲೆಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ಗ್ರಾ.ಪಂ ಅಧ್ಯಕ್ಷ ಪ್ರಮೋದ್‌ ಬಣಕಾರ್‌ ಮಾತನಾಡಿದರು.

ಹರಿಹರ: ತಾಲೂಕಿನ ಹನಗವಾಡಿ ಬಳಿ 966 ಕೋಟಿ ವೆಚ್ಚದಲ್ಲಿ 2ಜಿ ಎಥೆನಾಲ್ ಘಟಕ ಸ್ಥಾಪಿಸುವ ಕೇಂದ್ರ ಸರ್ಕಾರದ ಪ್ರಕ್ರಿಯೆ ಆರಂಭವಾಗಿದ್ದು, ಸೋಮವಾರ ಗ್ರಾಮದ ಹೊರವಲಯದ ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಡಿಸಿ ಜಿ.ಎನ್‌.ಶಿವಮೂರ್ತಿ ಸ್ಥಳೀಯ ನಿವಾಸಿಗಳೊಂದಿಗೆ ಸಭೆ ನಡೆಸಿದರು.

ನೂತನ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು, ಕಂಪನಿಯ ಸುತ್ತಲಿನ ಗ್ರಾಮಗಳ ಜನಜೀವನ ಹಾಗೂ ಕೃಷಿಗೆ ಹಾನಿಯಾಗದ ರೀತಿಯಲ್ಲಿ ಪರಿಸರ ಕಾಳಜಿ ಮೆರೆಯಬೇಕು ಎಂದು ಸಭೆಯಲ್ಲಿ ಸ್ಥಳೀಯ ರೈತರು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್‌ ಬಣಕಾರ್‌ ಮಾತನಾಡಿ, ತಾಲೂಕಿನಲ್ಲಿ ದೊಡ್ಡ ದೊಡ್ಡ ಕಂಪನಿಗಳು ಪ್ರಾರಂಭವಾಗಿದ್ದರೂ ಸ್ಥಳಿಯರಿಗೆ ಉದ್ಯೋಗಗಳು ಲಭ್ಯವಾಗುತ್ತಿಲ್ಲ. ಎಥೆನಾಲ್ ಘಟಕ ಸರ್ಕಾರದಿಂದಲೇ ಆರಂಭವಾಗುವುದರಿಂದ ತಪ್ಪದೆ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು.

ಶಿವ ಸೈನ್ಯ ಸಂಘದ ಅಧ್ಯಕ್ಷ ಪ್ರವೀಣ್‌ ಆರ್‌.ಬಿ ಹನಗವಾಡಿ ಮಾತನಾಡಿ, ತಾಲೂಕಿನಲ್ಲಿ ಸಾವಿರಾರು ನಿರುದ್ಯೋಗಿಗಳು ಕೆಲಸವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸುತ್ತಮುತ್ತ ಅನೇಕ‌ ಕಂಪನಿಗಳಿದ್ದರೂ ಸ್ಥಳೀಯರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಸ್ಥಳೀಯ ಯುವಕರು ಕೂಲಿ ಕೆಲಸ ಮಾಡುತ್ತಿದ್ದಾರೆ. ಇನ್ನಾದರೂ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದರು.

ಕಂಪನಿಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಯು.ವಿ ಐತಾಳ್‌ ಮಾತನಾಡಿ, ಈ ಕಂಪನಿಯು ರೈತರ ಕೃಷಿ ತ್ಯಾಜ್ಯಗಳಿಂದ ಇಥೆನಾಲ್ ತಯಾರಿಸುವ ಘಟಕವಾಗಿದೆ. ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಕೃಷಿ ತ್ಯಾಜ್ಯಗಳಾದ ಮೆಕ್ಕೆಜೋಳದ ದಂಟು, ಬೆಂಡು, ಭತ್ತದ ಹುಲ್ಲು, ಹತ್ತಿ ಕಡ್ಡಿ ಗಳಿಂದ ಮಂಗಳೂರು ರಿಫೈನರಿ ಮತ್ತು ಪೆಟ್ರೋಲಿಯಂ ಲಿಮಿಟೆಡ್‌ ಕಂಪನಿ ಇಥೆನಾಲ್ ತಯಾರಿಸಲು ಮುಂದಾಗಿದೆ ಎಂದು ಕಂಪನಿಯ ಬಗ್ಗೆ ಮಾಹಿತಿ ನೀಡಿದರು.

ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಕೊಟ್ರೇಶ್‌ ಹಾಗೂ ಕಂಪನಿಯ ಮುಖ್ಯಸ್ಥರು ಮತ್ತು ಹನಗವಾಡಿ ಗ್ರಾಮದ ಮುಖಂಡರು, ಯುವಕರು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ