ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಆರೋಪ: ಪರಿಶೀಲನೆ

Team Udayavani, Nov 10, 2019, 3:00 AM IST

ಹೊಳೆನರಸೀಪುರ: ಪಟ್ಟಣದ 4ನೇ ವಾರ್ಡಿನಲ್ಲಿ ನ.12 ರಂದು ನಡೆಯಲಿರುವ ಪುರಸಭೆ ಉಪಚುನಾವಣೆಯಲ್ಲಿ ಪಕ್ಕದ ವಾರ್ಡಿನಿಂದ ಮತದಾರರನ್ನು ಸೇರ್ಪಡೆ ಮಾಡಿದ್ದಾರೆಂದು ಬಿಜೆಪಿ ಅಭ್ಯರ್ಥಿ ನೀಡಿದ ದೂರಿನ ಮೇಲೆ ಶನಿವಾರ ಜಿಲ್ಲಾ ಮಟ್ಟದ ಹತ್ತು ಮಂದಿ ಅಧಿಕಾರಿಗಳ ತಂಡ ಆಗಮಿಸಿ ವಾರ್ಡ್‌ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿತು.

ಉಪವಿಭಾಗಾಧಿಕಾರಿ ನವೀನ್‌ಭಟ್‌, ಹಾಸನದ ತಹಶೀಲ್ದಾರ್‌ ಮೇಘನಾ ಮತ್ತು ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಟು ಮಂದಿ ಗ್ರಾಮ ಲೆಕ್ಕಿಗರು ಶನಿವಾರ ಬೆಳಗ್ಗೆ ಪಟ್ಟಣದ ನಾಲ್ಕನೇ ವಾರ್ಡಿಗೆ ಆಗಮಿಸಿ ಹೆಚ್ಚುವರಿ ಸೇರ್ಪಡೆ ಹೊಂದಿರುವ ಮತದಾರರ ಮನೆ ಮನೆ ಬಾಗಿಲಿಗೆ ತೆರಳಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಉಪವಿಭಾಗಾಧಿಕಾರಿ ನವೀನ್‌ಭಟ್‌ ಅವರು ಮನೆ ಮನೆಗೆ ಭೇಟಿ ನೀಡಿ ಮತದಾರರ ಸೇರ್ಪಡೆ ಆಗಿರುವ ಮತದಾರರನ್ನು ಖುದ್ದು ಭೇಟಿ ಮಾಡಿ ಅವರಿಂದ ಮಾಹಿತಿ ಪಡೆದರು.

ಮಂಗಳವಾರ ಚುನಾವಣೆ: ನಾಲ್ಕನೇ ವಾರ್ಡಿನ ಚುನಾವಣೆ ನ.12ಕ್ಕೆ ನಿಗದಿಯಾಗಿದ್ದು, ಉಳಿದ ಮೂರು ದಿನಗಳಲ್ಲಿ ಮತದಾನ ನಡೆಯಬೇಕಿದೆ. ಆದರೆ ಚುನಾವಣೆ ದಿನಾಂಕ ಗೊತ್ತುಪಡಿಸುತ್ತಿದ್ದಂತೆ ನಾಲ್ಕನೇ ವಾರ್ಡಿನ ಕರಡು ಮತಪಟ್ಟಿಗೆ 42 ಮಂದಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಉಳಿದಂತೆ 4 ನೇ ವಾರ್ಡಿನಲ್ಲಿ ಮೃತಪಟ್ಟ 25 ಮಂದಿ ಮತದಾರರು ಕರಡುಪಟ್ಟಿಯಲ್ಲಿದೆ.

ಉಳಿದಂತೆ 2 ಮತ್ತು 5 ನೇ ವಾರ್ಡಿನ ಮತದಾರರನ್ನು ಸೇರ್ಪಡೆ ಮಾಡಿರುವುದು ಉಪವಿಭಾಗಾಧಿಕಾರಿಗಳ ಗಮನಕ್ಕೆ ಬಂದು ಸ್ಥಳದಲ್ಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಉಪವಿಭಾಗಾಧಿಕಾರಿ ನವೀನ್‌ಭಟ್‌ ಅವರ ತನಿಖೆಗೆ ತಹಶೀಲ್ದಾರ್‌ ಮತ್ತು ತಂಡ ಸಹಕರಿಸಿತು. ಅದೇ ವೇಳೆ ತಹಶೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ಅವರು ಉಪವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಿ ಹೆಚ್ಚುವರಿ ಮತಗಳು ಸೇರ್ಪಡೆ ಅಗಿದೆ ಎಂಬ ಅರ್ಜಿದಾರರ ಹೇಳಿಕೆಗೆ ಪುಷ್ಟಿ ನೀಡುವಂತಿದೆ ಎಂದು ಹೇಳಿದರು.

ಮೃತ ಪುರಸಭೆ ಸದಸ್ಯನ ಹೆಸರೂ ಪಟ್ಟಿಯಲ್ಲಿ: ಪ್ರಸ್ತುತ 4ನೇ ವಾರ್ಡಿನ ಸದಸ್ಯ ಸುದರ್ಶನ್‌ ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ. ಆದರೆ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆಯಲಾಗಿಲ್ಲ. 2 ನೇವಾರ್ಡಿನಿಂದ ಆಯ್ಕೆಗೊಂಡಿರುವ ಜ್ಯೋತಿ ಮಂಜುನಾಥ್‌ ಅವರು ಇರುವುದು ಎರಡನೇ ವಾರ್ಡಿನಲ್ಲಿ ಆದರೆ ಇದೀಗ ಹೆಚ್ಚುವರಿ ಮತಸೇರ್ಪಡೆಯಲ್ಲಿ ಜ್ಯೋತಿ ಮಂಜುನಾಥ್‌ ಅವರ ಹೆಸರೂ ಮತಪಟ್ಟಿಯಲ್ಲಿ ಇರುವುದು ಮತ್ತೂಂದು ಅಭಾಸದ ಸಂಗತಿ.

4ನೇ ವಾರ್ಡಿನಿಂದ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಅಭ್ಯರ್ಥಿ ಎಚ್‌.ಆರ್‌.ಮಧು ಕುಟುಂಬ ಹಲವಾರು ವರ್ಷಗಳಿಂದ 4ನೇ ವಾರ್ಡಿನಿಂದ ಮತ ಚಲಾವಣೆ ಮಾಡುತ್ತಿದ್ದಾರೆ. ಆದರೆ ಮತಪಟ್ಟಿಯಲ್ಲಿ ಮಧುಕುಟುಂಬವನ್ನೇ ಕೈಬಿಟ್ಟು ಕರಡು ಮತಪಟ್ಟಿ ಸಿದ್ಧವಾಗಿರುವುದು ಚುನಾವಣೆಯಲ್ಲಿ ಅಕ್ರಮ ಮತ ಸೇರ್ಪಡೆ ಮತ್ತು ಮೃತಪಟ್ಟವರ ಹೆಸರುಗಳೂ ಇರುವುದು ಗೊಂದಲಕ್ಕೆ ಕಾರಣವಾಗಿದೆ.

ಸ್ಥಳ ಪರಿಶೀಲನೆ ನಂತರ ತಾಲೂಕು ಕಚೇರಿಗೆ ಉಪವಿಭಾಗಧಿಕಾರಿ ನವೀನ್‌ಭಟ್‌ ತೆರಳುವ ಮುನ್ನ ಇದ್ದ ಉತ್ಸಾಹ ಅವರಲ್ಲಿ ಮಯಾವಾಗಿತ್ತು. ಮೊದಮೊದಲು ಉಪಚುನಾವಣೆ ಮತಪಟ್ಟಿಯಲ್ಲಿ ಭಾರೀ ಅವ್ಯವಹಾರ ಆಗಿದೆ ಎಂಬ ಅನಿಸಿಕೆ ವ್ಯಕ್ತ ಪಡಿಸಿದ್ದವರು. ಏಕಾಏಕಿ ತಮ್ಮ ಮಾತಿನ ದಿಕ್ಕು ಬದಲಿಸಿದ್ದು, ಘಟನೆಯಲ್ಲಿ ಸಾಕಷ್ಟು ಗೊಂದಲಗಳು ಇದೆ ಎಂಬುದಕ್ಕೆ ಸಾಕ್ಷಿಯಾಯಿತು.

ದಾಖಲೆ ಪರಿಶೀಲಿಸಿದ ಎಸಿ: ತಾಲೂಕು ಕಚೇರಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ದಾಖಲೆ ಪರಿಶೀಲಿಸಿದ ಉಪವಿಭಾಗಾಧಿಕಾರಿ ನವೀನ್‌ಭಟ್‌ ತಮ್ಮ ಹೇಳಿಕೆ ಪಡೆಯಲು ಕಚೇರಿ ಭಾಗಿಲಲ್ಲಿ ಒಂದು ಗಂಟೆಯಿಂದ ಕಾಯುತ್ತಿದ್ದ ಮಾಧ್ಯಮದವರಿಗೆ ಮಾಹಿತಿ ನೀಡಲು ಆಗುವುದಿಲ್ಲ. ಇದೀಗ ತನಿಖೆ ನಡೆಸಿ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುತ್ತೇವೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಆಗಿರುವ ಆರ್‌.ಗಿರೀಶ್‌ ಅವರು ಮಾಹಿತಿ ನೀಡುವರೆಂದು ಹೇಳಿಕೆ ನೀಡಿ ತೆರಳಲು ಮುಂದಾದರು.

ಮಾಹಿತಿ ನೀಡದ ಅಧಿಕಾರಿಗಳು: ಮಾಧ್ಯಮದವರು ಮತದಾರರ ಪಟ್ಟಿ ಅಕ್ರಮದ ಬಗ್ಗೆ ಮಾಹಿತಿ ನೀಡುವಂತೆ ಉಪವಿಭಾಗಾಧಿಕಾರಿ ನವೀನ್‌ಭಟ್‌ ಮತ್ತು ಹಾಸನದ ತಹಶೀಲ್ದಾರ್‌ ಮೇಘನಾ ಅವರನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾವು ಜಿಲ್ಲಾಧಿಕಾರಿ ಸೂಚನೆ ಮೇಲೆ ತನಿಖೆಗೆ ಬಂದಿದ್ದೇವೆ. ಇಲ್ಲಿಂದ ತನಿಖಾ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದಾಗಿ ತಿಳಿಸಿ ಏಕಾಏಕಿ ತಮ್ಮ ವಾಹನ ಹತ್ತಿ ತೆರಳಿದರು.

ಬಿಜೆಪಿ ಅಭ್ಯರ್ಥಿ ಆರೋಪ: ಹೆಚ್ಚುವರಿ ಮತ ಸೇರ್ಪಡೆ ಬಗ್ಗೆ ತಮ್ಮ ಆಕ್ಷೇಪಣೆ ವ್ಯಕ್ತ ಪಡಿಸಿ ಅರ್ಜಿಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಎಚ್‌.ಜೆ.ನಾಗರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಸ್ತುತ ಈ ಉಪಚುನಾವಣೆಯಲ್ಲಿ ತಮ್ಮ ಗೆಲುವು ಖಚಿತ ಎಂದು ಪರಿಗಣಿಸಿ ಜೆಡಿಎಸ್‌ ಮುಖಂಡರು ಈ ಹೆಚ್ಚುವರಿ ಸೇರ್ಪಡೆ ಮತದಾರರನ್ನು ಅಕ್ಕಪಕ್ಕದ ವಾರ್ಡಿನಿಂದ ತಂದು ಸೇರಿಸಿದ್ದಾರೆ ಎಂದು ಆರೋಪಿಸಿದರು. ಈ ವಾರ್ಡಿನಲ್ಲಿ ಇದೀಗ ಹೆಚ್ಚುವರಿ ಸೇರ್ಪಡೆ ಕರಡು ಮತಪಟ್ಟಿಯಲ್ಲಿ ಮುಸ್ಲಿಂ ಮತದಾರರು ಸೇರ್ಪಡೆಯಾಗಿದ್ದಾರೆ. ಈ ಹಿಂದಿನ ವರ್ಷಗಳ ಚುನಾವಣೆಯಲ್ಲಿ ಈ ವಾರ್ಡಿನಲ್ಲಿ ಮುಸ್ಲಿಂ ಮತದಾರರು ಇರಲಿಲ್ಲ ಎಂಬುದನ್ನು ಅಂಕಿ ಅಂಶಗಳ ಮೂಲಕ ಪ್ರದರ್ಶಿಸಿದರು.

ಶಿಸ್ತು ಕ್ರಮಕೈಗೊಳ್ಳುವ ಭರವಸೆ: ಉಪವಿಭಾಗಾಧಿಕಾರಿ ತೆರಳುತ್ತಿದ್ದಂತೆ ಇತ್ತ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಕೆ.ಆರ್‌.ಶ್ರೀನಿವಾಸ್‌ ಅವರನ್ನು ಮಾಧ್ಯಮ ಪ್ರತಿನಿಧಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಿರಾ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ತಹಶೀಲ್ದಾರ್‌ ಈ ಪ್ರಕರಣಕ್ಕೆ ಕಾರಣರಾದವರ ಬಗ್ಗೆ ಶಿಸ್ತು ಕಮಕೈಗೊಳ್ಳುವ ಭರವಸೆ ನೀಡಿದರು.

ತಾಲೂಕು ಕಚೇರಿಗೆ ಸಂಸದ ಪ್ರಜ್ವಲ್‌ ಭೇಟಿ: ಬಿಜೆಪಿ ಮುಖಂಡರಾದ ಮಾಯಗೋಡನಹಳ್ಳಿ ಮಾಯಣ್ಣ ಮತ್ತು ವಕೀಲ ಕೆ.ಆರ್‌.ಸುನೀಲ್‌ಕುಮಾರ್‌ ಮಾತನಾಡಿ, ಬೆಳಗ್ಗೆ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ನಡೆಯುತ್ತಿದ್ದರೆ ಇತ್ತ ತಾಲೂಕು ಕಚೇರಿಗೆ ಸಂಸದ ಪ್ರಜ್ವಲ್‌ ರೇವಣ್ಣ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದಕ್ಕೆ ತಾವು ತಾಲೂಕು ಆಡಳಿತಕ್ಕೆ ಲಿಖೀತ ಪತ್ರ ನೀಡಿ ಕಾರಣ ಕೇಳುವುದಾಗಿ ತಿಳಿಸಿದ್ದಾರೆ.

ಜೆಡಿಎಸ್‌-ಬಿಜೆಪಿ ಪ್ರತ್ಯೇಕ ದೂರು: ತನಿಖೆಗೆ ಆಗಮಿಸಿದ್ದ ಉಪವಿಭಾಗಾಧಿಕಾರಿಗೆ ಜೆಡಿಎಸ್‌, ಬಿಜೆಪಿ ಮುಖಂಡರುಗಳು ಪ್ರತ್ಯೇಕವಾಗಿ ಲಿಖೀತ ದೂರುಗಳನ್ನು ನೀಡಿದರು. ಬಿಜೆಪಿ ಮುಖಂಡರು ಈಗ ಆಗಿರುವ ಗೊಂದಲಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ: ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೆಚ್ಚುವರಿ ಮತದಾರರ ಸೇರ್ಪಡೆಯಾಗಿರುವುದನ್ನು ಗಮನಿಸಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಆಗಿರುವ ಹೆಚ್ಚುವರಿ ಮತ ಸೇರ್ಪಡೆಗೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳುವುದಾಗಿ ಉಪವಿಭಾಗಾಧಿಕಾರಿ ನವೀನ್‌ಭಟ್‌ ತಿಳಿಸಿದರು.

ವೃದ್ಧಾಪ್ಯ ವೇತನದ ವಿಚಾರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆಯಲು ತಾಲೂಕು ಕಚೇರಿಗೆ ಬಂದಿದ್ದೇನೆ ಹೊರತು ಮತ್ಯಾವ ವಿಚಾರವೂ ಇಲ್ಲ .
-ಪ್ರಜ್ವಲ್‌ ರೇವಣ್ಣ, ಸಂಸದ 

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ