ಮೆಕ್ಕೆಜೋಳಕ್ಕೆ ಹುಳು ಬಾಧೆ: ಶುಂಠಿ ಬೆಳೆಯತ್ತ ರೈತರ ಚಿತ್ತ

ಒಂದು ವರ್ಷ ಶುಂಠಿಯನ್ನು ಜೋಪಾನವಾಗಿಟ್ಟುಕೊಂಡರೆ ಎಕರೆಗೆ ಕನಿಷ್ಠ 3 ಲಕ್ಷ ರೂ. ಲಾಭ ಖಚಿತ

Team Udayavani, Jul 10, 2019, 12:27 PM IST

ಚನ್ನರಾಯಪಟ್ಟಣ: ಕಳೆದ ಸಾಲಿನಲ್ಲಿ ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ ಹೆಚ್ಚಿದ ಪರಿಣಾಮವಾಗಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಯಿತು ಇದರಿಂದ ಈ ಬಾರಿ ಎಚ್ಚೆತ್ತುಕೊಂಡಿರುವ ರೈತರು ಶುಂಠಿ ಬೆಳೆಯ ಮೊರೆಹೋಗಿದ್ದಾರೆ.

ಪ್ರಸಕ್ತ ವರ್ಷ ಪೂರ್ವ ಮುಂಗಾರು ಕೈಕೊಟ್ಟಿದೆ. ಮುಂಗಾರು ಮಳೆಯೂ ಆಗುತ್ತಿಲ್ಲ, ನೀರಾವರಿ ಪ್ರದೇಶದವರು ಹಾಗೂ ಕೊಳವೆ ಬಾವಿ ಹೊಂದಿರುವ ರೈತರು ಮಳೆಯನ್ನು ನೆಚ್ಚಿಕೊಳ್ಳದೇ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆಲೂಗಡ್ಡೆ ಹಾಗೂ ಮೆಕ್ಕೆಜೋಳವನ್ನು ಹೆಚ್ಚು ಬೆಳೆಯುತ್ತಿದ್ದ ಪ್ರದೇಶಗಳಲ್ಲಿ ಪ್ರಸಕ್ತ ವರ್ಷ ಶುಂಠಿ ಬೆಳೆಯಲು ಮುಂದಾಗಿದ್ದಾರೆ.

ಅನ್ಯ ಮಾರ್ಗವಿಲ್ಲ: ಶುಂಠಿ ಬೆಳೆಗೆ ಹೋಲಿಸಿದರೆ ಮೆಕ್ಕೆ ಜೋಳ ಬೆಳೆಯಲು ರೈತ ಅಷ್ಟಾಗಿ ಶ್ರಮ ವಹಿಸ ಬೇಕಿರಲಿಲ್ಲ. ಕಳೆದ ಒಂದು ದಶಕದಿಂದ ರೈತರು ಮೆಕ್ಕಜೋಳ ಬೆಳೆಯುತ್ತಿದ್ದು, ಒಂದು ವರ್ಷದ ಹಿಂದೆ ಮೆಕ್ಕೆಜೋಳಕ್ಕೆ ಕಾಣಿಸಿ ಕೊಂಡ ಸೈನಿಕ ಹುಳು ಬಾಧೆ ಯಿಂದ ರೈತ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುವಂತಾಯಿತು. ಆರ್ಥಿಕ ಸಂಕಷ್ಟ ದಿಂದ ಹೊರಬರಬೇಕೆಂಬ ಪಣತೊಟ್ಟಿರುವ ರೈತರು ಶುಂಠಿ ಬೆಳೆಗೆ ಮಾರು ಹೋಗಿದ್ದಾರೆ.

ಇರುಗೋಡು ಶುಂಠಿ ಹೆಚ್ಚು ಬಿತ್ತನೆ: ಶುಂಠಿಯಲ್ಲಿ ಇರುಗೋಡು, ನೀಲಿ ಇರುಗೋಡು, ಮಾರನ್‌ ಇನ್ನಿತರ ತಳಿಗಳಿದ್ದು, ಸದ್ಯ ತಾಲೂಕಿನಲ್ಲಿ ಇರುಗೋಡು ಶುಂಠಿಯನ್ನು ರೈತರು ಹೆಚ್ಚಾಗಿ ಬಿತ್ತನೆ ಮಾಡಿದ್ದಾರೆ. ಮಿತ ನೀರಿನ ಜತೆಗೆ, ವಾತಾವರಣದಲ್ಲಿ ಸ್ವಲ್ಪ ವ್ಯತ್ಯಾಸ ವಾದರೂ ಇರುಗೋಡು ಶುಂಠಿ ನಿರೀಕ್ಷೆಯ ಫ‌ಸಲು ಹೊಂದಲು ಅನು ಕೂಲವಾಗಲಿದೆ. ಮಾರನ್‌ ತಳಿಯ ಶುಂಠಿ ಇಳು ವರಿಯಲ್ಲಿ ಕಡಿಮೆ ಇದ್ದರೂ ಹೆಚ್ಚು ಬೆಲೆಗೆ ಮಾರಬಹುದು. ವಾತಾವರಣದಲ್ಲಿ ಏರು ಪೇರಾದರೆ ಈ ತಳಿಯ ಬೆಳೆಗೆ ರೋಗಬಾಧೆ ಹೆಚ್ಚು ಕಾಡಲಿದೆ. ಸದ್ಯ ಶುಂಠಿ ಈ ಬಾರಿ ಔಷಧಗಳ ತಯಾರಿ ಕೆಗೆ ಹೆಚ್ಚು ರವಾನೆಯಾಗುತ್ತಿರುವುದರಿಂದ ಬೆಲೆ ತಕ್ಕ ಮಟ್ಟಿಗೆ ಇದ್ದೇ ಇರಲಿದೆ ಎಂಬ ಆಶಾದಾಯ ದಲ್ಲಿ ರೈತನಿದ್ದಾನೆ.

ತೆಂಗು ಬೆಳೆಗೆ ಕುತ್ತು: ತೆಂಗಿನ ತೋಟದಲ್ಲಿ ಜಾನು ವಾರುಗಳ ಮೇವಿಗೆಂದು ಜೋಳವನ್ನು ಮಾತ್ರ ಬೆಳೆ ಯಲಾಗುತ್ತಿತ್ತು. ಆಗ ಸಾಕಷ್ಟು ಕೊಟ್ಟಿಗೆ ಗೊಬ್ಬರ ಹಾಕುತ್ತಿದ್ದರಿಂದ ತೋಟದ ಮಣ್ಣಿನಲ್ಲಿ ಫ‌ಲವತ್ತತೆ ಸದಾ ಇರುತಿತ್ತು. ಆದರೆ, ಈಗ ತೆಂಗಿನ ತೋಟದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಅದಕ್ಕಾಗಿ ಅತಿ ಹೆಚ್ಚು ರಾಸಾಯನಿಕ ಗೊಬ್ಬರ, ಔಷಧ ಸಿಂಪಡಣೆ ಮಾಡು ವುದರಿಂದ ತೆಂಗಿನ ಮರಗಳ ಮೇಲೆ ಅಡ್ಡಪರಿಣಾಮ ಬೀರಲಿದೆ.

ಪ್ರಸ್ತುತ ದರ: ಕಳೆದ ವರ್ಷ ಶುಂಠಿಗೆ ನಿರೀಕ್ಷೆಗೂ ಮೀರಿದ ಬೆಲೆ ದೊರೆತಿತ್ತು. ಬಿತ್ತನೆಗೆ ಯೋಗ್ಯವಾದ ಹಳೇ ಶುಂಠಿ 60 ಕೇಜಿ ಚೀಲಕ್ಕೆ 9,500 ರೂ. ನಿಂದ 10 ಸಾವಿರ ರೂ. ವರೆಗೆ ಮಾರಾಟವಾಗುತ್ತಿದೆ. ಹೊಸ ಶುಂಠಿ 60 ಕೇಜಿ ಚೀಲ 5,500 ರೂ.ನಿಂದ 6 ಸಾವಿರ ರೂ. ಇದೆ, ಸದ್ಯ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ನಂಬಿರುವ ರೈತರು ಲಾಭ ನಿರೀಕ್ಷೆಯಿಂದ ಹೆಚ್ಚು ಪ್ರದೇಶದಲ್ಲಿ ಶುಂಠಿ ಬಿತ್ತನೆ ಮಾಡಿದ್ದಾರೆ.

ಫ‌ಸಲು ಬರುವ ವೇಳೆಗೆ ಹೇರಳವಾಗಿ ಶುಂಠಿ ಉತ್ಪಾದನೆಯಾಗುವ ಸಾಧ್ಯತೆಯಿದ್ದು ಬೆಲೆ ಕುಸಿತ ವಾದರೂ 60 ಕೇಜಿ ಚೀಲದ ಶುಂಠಿ ಕನಿಷ್ಠ 4 ರಿಂದ 5 ಸಾವಿರ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ರೈತರಿ ದ್ದಾರೆ. ಈ ಬೆಲೆ ದೊರೆತರೂ ರೈತರಿಗೆ ನಷ್ಟವಾಗುವುದಿಲ್ಲ ಎಂಬ ಲೆಕ್ಕಾಚಾರವನ್ನು ಹಾಕಿಕೊಂಡಿದ್ದು ಶುಂಠಿ ಬೆಳೆಯನ್ನು ಮಾಡುವಲ್ಲಿ ರೈತರು ನಿರತರಾಗಿದ್ದಾರೆ.

ರೈತರ ಲೆಕ್ಕಾಚಾರ: ಒಂದು ಎಕರೆಯಲ್ಲಿ ಶುಂಠಿ ಬೆಳೆ ಯಲು ಉಳುಮೆ, ಬಿತ್ತನೆ, ಗೊಬ್ಬರ, ತುಂತುರು ನೀರಾವರಿ ಸೇರಿದಂತೆ ಪ್ರಾರಂಭದಲ್ಲಿ 2 ಲಕ್ಷ ರೂ ಗಳಿಗೂ ಅಧಿಕ ಹಣ ಖರ್ಚಾಗಲಿದೆ, ಒಂದೆರಡು ತಿಂಗಳ ನಂತರ ಕಳೆ ತೆಗೆಯುವುದು, ಔಷಧಿ ಸಿಂಪಡಣೆ, ಗೊಬ್ಬರ ನೀಡುವುದು ಹೀಗೆ ನಿರ್ವಹಣೆಗೆ ಪ್ರತ್ಯೇಕ ವೆಚ್ಚವಾಗಲಿದೆ.

ಹದಗೊಳಿಸಿದ ಜಮೀನಿನಲ್ಲಿ ಶುಂಠಿ ಬಿತ್ತನೆ ಮಾಡಿದ ದಿನದಿಂದ ಮೊಳಕೆಯೊಡೆದು ಎಲೆಗಳು ಮೇಲೆ ಬರುವವರೆಗೂ ಅಂದರೆ, ಬಿತ್ತನೆ ದಿನದಿಂದ ಸುಮಾರು ಒಂದೂವರೆ ತಿಂಗಳ ಕಾಲ ಪ್ರತಿ ದಿನವೂ ತಪ್ಪಿಸದಂತೆ ದಿನದಲ್ಲಿ ಅರ್ಧಗಂಟೆ ಕಾಲ ತುಂತುರು ನೀರಾವರಿ ವ್ಯವಸ್ಥೆ ಮೂಲಕ ನೀರು ಹಾಯಿಸಲೇ ಬೇಕಿದೆ. ನಂತರದ ದಿನಗಳಲ್ಲಿ ದಿನ ಬಿಟ್ಟು ದಿನ ಒಂದು ಗಂಟೆ ಕಾಲ ನೀರು ಹಾಯಿಸಬೇಕಿದೆ.

ಶುಂಠಿ ಎಲೆಗಳು ಅಗಲವಾಗಿ ಹರಡಿಕೊಳ್ಳುವ ತನಕ ಕಳೆ ತೆಗೆಯಬೇಕಿದ್ದು, ಕಳೆ ತೆಗೆಯದಿದ್ದಲ್ಲಿ ಬೆಳವಣಿಗೆ ಉತ್ತಮವಾಗಿ ಬದುವುದಲ್ಲದೆ ಫ‌ಸಲು ಕುಂಠಿತಗೊಳ್ಳುತ್ತದೆ. ಒಂದು ಎಕರೆ ಪ್ರದೇಶದಲ್ಲಿ ಕೂಲಿ ಕಾರ್ಮಿಕರಿಂದ ಒಮ್ಮೆ ಕಳೆ ತೆಗೆಸಲು 5 ಸಾವಿರ ರೂ. ಖರ್ಚಾಗಲಿದೆ. ಶುಂಠಿ ಬೆಳೆದು ಎಲೆ ಉತ್ತಮ ವಾಗಿ ಬಂದು ಸಂಪೂರ್ಣವಾಗಿ ಕೂಡಿಕೊಳ್ಳುವ ವೇಳೆಗೆ ನಾಲ್ಕು ಬಾರಿ ಕಳೆ ತೆಗೆಯಬೇಕಿದೆ.

ಲಾಭ ನಿರೀಕ್ಷೆ: ಒಂದು ಎಕರೆ ಪ್ರದೇಶದಲ್ಲಿ ಉತ್ತಮ ವಾಗಿ ಬೆಳೆ ಬಂದರೆ 60 ಕೇಜಿ ತೂಕದ 35 ರಿಂದ 40 ಚೀಲ ಫ‌ಸಲು ದೊರೆಯುತ್ತದೆ. ಇದರಿಂದ ಅಷ್ಟಾಗಿ ಲಾಭ ನಿರೀಕ್ಷೆ ಮಾಡಲು ಸಾಧ್ಯವಾಗದಿದ್ದರೂ ಶ್ರಮಕ್ಕೆ ತಕ್ಕ ಪ್ರತಿಫ‌ಲ ದೊರೆಯಲಿದೆ. ಒಂದು ವರ್ಷ ಶುಂಠಿ ಯನ್ನು ಜೋಪಾನವಾಗಿ ಇಟ್ಟು ಕೊಂಡರೆ, ಎಕರೆಗೆ ಕನಿಷ್ಠ 3ಲಕ್ಷ ರೂ. ಲಾಭ ನಿರೀಕ್ಷೆ ಮಾಡಬಹುದು. ಹಾಗಾಗಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ರೈತರು ಶುಂಠಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಬೆಳೆ ಹಾಳಾದರೆ ಸಂಕಷ್ಟ: ಶುಂಠಿ 7 ರಿಂದ 10 ತಿಂಗಳ ಬೆಳೆಯಾಗಿದ್ದು, ಒಂದು ಚೀಲ ಬಿತ್ತನೆಗೆ ಸುಮಾರು 20 ಚೀಲ ಇಳುವರಿ ದೊರೆತರೆ ಮಾತ್ರ ಲಾಭ ಕಾಣ ಬಹುದು. ಈಗಾಗಲೆ ಶುಂಠಿ ಬಿತ್ತನೆ ಮಾಡಿರುವ ಕಡೆ ಬೆಳೆ ಉತ್ತಮವಾಗಿ ಜಡಿ ಮಳೆ ಹಿಡಿದುಕೊಂಡರೆ ರೋಗಬಾಧೆಗೆ ತುತ್ತಾಗಲಿದೆ. ವಾಡಿಕೆಯಂತೆ ಮಳೆ ಬಾರದೆ ಭೂಮಿಯಲ್ಲಿ ತಾವಾಂಶ ಕಡಿಮೆಯಾಗಿ ಕೊಳವೆ ಬಾವಿಯಲ್ಲಿನ ನೀರು ನಿಂತು ಹೋದರೆ ಶುಂಠಿ ಬೆಳೆಗೆ ಲಕ್ಷಾಂತರ ರೂ. ವೆಚ್ಚ ಮಾಡಿರುವ ರೈತ ಸಂಕಷ್ಟಕ್ಕೊಳಗಾಗಬೇಕಾಗುತ್ತದೆ.

 

● ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ