ವಿಶ್ವಕ್ಕೆ ಅಹಿಂಸಾ ಸಂದೇಶ ಸಾರುತ್ತಿರುವ ಚಾರು ಕೀರ್ತಿ ಭಟ್ಟಾರಕರು
Team Udayavani, Dec 9, 2019, 3:00 AM IST
ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಜೈನ ಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕರು ಭಗವಾನ್ ಬಾಹು ಬಲಿ ಸ್ವಾಮಿಯ 4 ಮಹಾ ಮಸ್ತಕಾಭಿಷೇಕವನ್ನು ವಿಜೃಂಭಣೆಯಿಂದ ನೆರವೇರಿಸುವ ಮೂಲ ವಿಶ್ವಕ್ಕೆ ಅಹಂಸಾ ಸಂದೇಶವನ್ನು ಸಾಗುತ್ತಿದ್ದಾರೆ ಎಂದು ತಮಿಳುನಾಡಿದ ಜೈನ ಮಠದ ಧವಲಕೀರ್ತಿ ಭಟ್ಟಾರಕರು ಬಣ್ಣಿಸಿದರು.
ಚಾರುಕೀರ್ತಿ ಭಟ್ಟಾರಕರು ಪಟ್ಟಾಭಿಷಕ್ತರಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶ್ರವಣ ಬೆಳಗೊಳ ಜೈನ ಮಠದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಧವಲಕೀರ್ತಿ ಭಟ್ಟಾರಕರು, ಚಾರು ಕೀರ್ತಿ ಶ್ರೀಗಳು ಉತ್ತರ ಭಾರತ ಹಾಗೂ ದಕ್ಷಿಣ ಭಾರತವನ್ನು ಒಗ್ಗೂಡಿಸಿದ್ದಾರೆ. ಪ್ರಾಕೃತ ಭಾಷೆಯಲ್ಲಿದ್ದ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಸಮಾನ್ಯರಿಗೆ ದವಲ ಗ್ರಂಥ ಓದುವ ಅಕಾಶ ಕಲ್ಪಿಸಿದ್ದಾರೆ ಎಂದರು.
ಜೈನ ಶಾಖಾ ಮಠಗಳ ಸ್ಥಾಪನೆ: ಚಾರುಕೀರ್ತಿ ಭಟ್ಟಾರಕರು ತಮಿಳುನಾಡಿನಲ್ಲಿ ಎರಡು ಶಾಖಾ ಮಠ ತೆರೆದು ಅಲ್ಲಿಗೆ ಶ್ರೀಗಳ ನೇಮಕ ಮಾಡಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಹನ್ನೊಂದು ಶಾಖಾ ಮಠಗಳನ್ನು ತೆರೆದು ಅಲ್ಲಿಗೆ ಶ್ರೀಗಳ ನೇಮಕಕ್ಕಾಗಿ ತಮ್ಮ ಶಿಷ್ಯರಿಗೆ ದೀಕ್ಷೆ ನೀಡಿದ್ದಾರೆ ಎಂದರು.
ಜೈನ ಸಮುದಾಯದ ಶಾಖಾ ಮಠಗಳು ಶಾಲೆಗಳಿದ್ದಂತೆ ಅಲ್ಲಿನ ಸ್ವಾಮೀಜಿಗಳು ಉಪನ್ಯಾಸಕರಿದ್ದಂತೆ ಭಕ್ತರು ವಿದ್ಯಾರ್ಥಿಗಳಿದ್ದಂತೆ ಆದರೆ ಶ್ರವಣಬೆಳಗೊಳದ ಜೈನ ಮಠದ ಸರ್ಕಾರವಿದ್ದಂತೆ ಸರ್ಕಾರಕ್ಕೆ 50 ವರ್ಷ ತುಂಬಿದೆ ನಾವುಗಳು ಸಂಭ್ರಮಾಚರಣೆ ಮಾಡಬೇಕು ಎಂದರು.
ಜೈನ ಸಮಾಜದ ಕಣ್ಣುಗಳು: ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಜೈನ ಸಮಾಜಕ್ಕೆ ಎರಡು ಕಣ್ಣುಗಳಿದ್ದಂತೆ. ಇವರ ಮಾತು ಮೀರಿ ಜೈನ ಸಮುದಾಯದ ಭಕ್ತರು ಒಂದು ಹೆಜ್ಜೆ ಮುಂದೆ ಇಡಬಾರದು. ಒಗ್ಗಟ್ಟು ಒಡೆಯುವ ಶಕ್ತಿಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯದಲ್ಲಿ ಹನ್ನೊಂದು ಮಠಾಧೀಶರಿದ್ದೇವೆ. ಎಲ್ಲರೂ ಒಟ್ಟಿಗೆ ಇರಬೇಕು. ಧರ್ಮ ಉಳಿಸುವುದು ಹಾಗೂ ಕಾಪಾಡುವುದು ನಮ್ಮ ಗುರಿ ಎಂದು ತಮಿಳುನಾಡಿದ ಜೈನ ಮಠದ ಧವಲಕೀರ್ತಿ ಭಟ್ಟಾರಕರು ಹೇಳಿದರು.
ಶ್ರವಣಬೆಳಗೊಳ ಅಭಿವೃದ್ಧಿಗೆ ಕ್ರಮ: ಶ್ರವಣಬೆಳಗೊಳ ಕುಗ್ರಾಮವಾಗಿತ್ತು. ಅಲ್ಲಿನ ಜನರು ಬದುಕಲು ಹರಸಾಹಸ ಪಡುತ್ತಿದ್ದರು. ಇದನ್ನು ಅರಿತ ಚಾರುಶ್ರೀಗಳು ಅಭಿವೃದ್ಧಿ ಮಾಡಲೇ ಬೇಕೆಂಬ ಪಣತೊಟ್ಟು ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಿದ್ದಾರೆ. ಹಣ ಉಳಿಯುವುದಿಲ್ಲ ನಾವು ಮಾಡುವ ಸಮಾಜ ಕೆಲಸ ಶಾಶ್ವತವಾಗಿ ಉಳಿಯುತ್ತದೆ ಇದನ್ನು ಮನಗಂಡು ಭಕ್ತರು ಆರ್ಥಿಕವಾಗಿ ಮಠವನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ಕನಕಗಿರಿ ಭುವನಕೀರ್ತಿ ಭಟ್ಟಾರಕ ಶ್ರೀಗಳು ತಿಳಿಸಿದರು.
ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದರೆ ಚಾರುಕೀರ್ತಿ ಭಟ್ಟಾರಕರು, ಹೊಂಬುಜದ ದೇವೇಂದ್ರಕೀರ್ತಿ ಭಟ್ಟಾರಕರು, ಮಹಾರಾಷ್ಟ್ರದ ಸೋಂದಾ ಕ್ಷೇತ್ರದ ಭಟ್ಟಾಕಲಂಕ ಭಟ್ಟಾರಕರು, ಎನ್‌ಆರ್‌ಪುರ ಲಕ್ಷ್ಮೀಸೇನ ಭಟ್ಟಾರಕರು, ಅರತಿಪುರದ ಸಿದ್ಧಾಂತಕೀರ್ತಿಭಟ್ಟಾರಕರು, ನಾಂದಣಿ ಜಿನಸೇನ ಭಟ್ಟಾರಕರು, ಲಕ್ಕವಳ್ಳಿ ವೃಷಭಸೇನ ಭಟ್ಟಾರಕರು, ಆದಿಚುಂನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕಬ್ಬಳಿ ಶಿವಪುತ್ರ ಸ್ವಾಮೀಜಿ ಶ್ರೀಗಳಿಗೆ ಗೌರವ ಅರ್ಪಿಸಿದರು.
ಧರ್ಮಸ್ಥಳದ ಸುರೇಂದ್ರಕುಮಾರ, ಶಾಸಕರಾದ ಸಂಜಯಪಾಟೀಲ, ಅಭಯಪಾಟೀಲ, ಗೋ.ಮಧುಸೂದನ್, ಸಿ.ಎನ್.ಬಾಲಕೃಷ್ಣ, ಎಂ.ಎ.ಗೋಪಾಲಸ್ವಾಮಿ, ಮಾಜಿ ಶಾಸಕ ಅಭಯಚಂದ್ರಜೈನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ ಮೊದಲಾದವರು ಉಪಸ್ಥಿತರಿದ್ದರು.