ಕೃಪೆ ತೋರಿದ ವರುಣ: ಕೃಷಿ ಚಟುವಟಿಕೆ ಆರಂಭ

ತಾಲೂಕಿನಲ್ಲಿ ವಾಡಿಕೆಗಿಂತ ಶೇ.30 ಕಡಿಮೆ ಮಳೆ

Team Udayavani, Jul 8, 2019, 12:03 PM IST

ಸಕಲೇಶಪುರದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಬಿತ್ತನೆಗೆ ರೈತರು ಭೂಮಿ ಹದ ಮಾಡುತ್ತಿದ್ದಾರೆ.

ಸಕಲೇಶಪುರ: ಕಳೆದ 2 ದಿನಗಳಿಂದ ತಾಲೂಕಿನಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು ಇದರಿಂದ ಭತ್ತದ ನಾಟಿ ಕಾರ್ಯ ವೇಗಗೊಂಡಿದೆ.

ಜೂನ್‌ ತಿಂಗಳು ಮುಗಿದು ಜುಲೈ ತಿಂಗಳು ಆರಂಭವಾಗಿದ್ದರೂ ಸಹ ತಾಲೂಕಿನಲ್ಲಿ ಉತ್ತಮ ಮಳೆ ಬಿದ್ದಿರದ ಕಾರಣ ಭತ್ತದ ನಾಟಿ ಕಾರ್ಯವನ್ನು ಹಲವಡೆ ಆರಂಭಿಸಲು ಸಾಧ್ಯವಾಗಿರಲಿಲ್ಲ. ಜೂನ್‌ ಅಂತ್ಯಕ್ಕೆ ವಾಡಿಕೆಯಂತೆ 1,882 ಮಿ.ಮೀ. ಮಳೆಯಾಗಬೇಕಾಗಿದ್ದು ಆದರೆ 1,318 ಮಿ.ಮೀ. ಮಳೆಯಾಗಿದೆ. ಇದರಿಂದ ತಾಲೂಕಿನಲ್ಲಿ ಜೂನ್‌ ಮಾಹೆಯಲ್ಲಿ ಶೇ.30 ಕಡಿಮೆ ಮಳೆಯಾಗಿದೆ. ಕಳೆದ ವರ್ಷದ ಜೂನ್‌ ಅಂತ್ಯಕ್ಕೆ 2,344 ಮಿ.ಮೀ ಮಳೆ ಬಿದ್ದದ್ದರಿಂದ ಅತಿವೃಷ್ಟಿ ಉಂಟಾಗಿ ವ್ಯಾಪಕ ಬೆಳೆ ನಾಶವಾಗಲು ಕಾರಣವಾಗಿತ್ತು.

1,350 ಕ್ವಿಂಟಲ್ ಭತ್ತ ವಿತರಣೆ: ಕಳೆದ ಸಾಲಿನಲ್ಲಿ 9ರಿಂದ 12 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ನಾಟಿ ತಾಲೂಕಿ ನಲ್ಲಿ ಮಾಡಲಾಗಿತ್ತು. ಈ ಬಾರಿ ಮಳೆಯ ಕೊರತೆ ಕಾರಣ ಜೂನ್‌ ಮಾಹೆಯಲ್ಲಿ ಕೇವಲ 8ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ನಾಟಿ ಮಾಡಲಾಗಿದೆ. ಆನೆ ಹಾವಳಿಯಿಂದ ಶೇ.5 ರಷ್ಟು ಭತ್ತದ ನಾಟಿ ಕಡಿಮೆ ಯಾಗಿದೆ. ಕೃಷಿ ಇಲಾಖೆ ವತಿಯಿಂದ 1,350 ಕ್ವಿಂಟಲ್ ಭತ್ತ ವಿತರಣೆಯನ್ನು ರೈತರಿಗೆ ಮಾಡಲಾಗಿದೆ. ಮಳೆ ಕೊರತೆ ಕಾರಣ ಕಳೆದ ಜೂನ್‌ನಲ್ಲಿ ಭತ್ತದ ನಾಟಿ ಮಾಡದ ರೈತರು ಇದೀಗ ನಾಟಿಯನ್ನು ಆರಂಭಿಸಿದ್ದಾರೆ.

ಮಳೆ ಪ್ರಮಾಣ ಇಳಿಮುಖ: ಕಳೆದ ಜೂನ್‌ನಲ್ಲಿ ತಾಲೂಕಿನ ಜೀವನದಿ ಹೇಮಾವತಿಯಲ್ಲಿ ಒಳಹರಿವಿನ ಪ್ರಮಾಣ ಕಡಿಮೆಯಿದ್ದು ಆದರೆ ಕಳೆದ 2ದಿನಗಳಿಂದ ಸುರಿದ ಉತ್ತಮ ಮಳೆಗೆ ಹೇಮಾವತಿ ನದಿಯಲ್ಲಿ ನೀರಿನ ಒಳಹರಿವಿನ ಮಟ್ಟ ನಿಧಾನವಾಗಿ ಏರುತ್ತಿದೆ. ಅತಿ ಹೆಚ್ಚು ಮಳೆ ಬೀಳುವ ಹೆತ್ತೂರು, ಯಸಳೂರು, ಕಾಡುಮನೆ ಮುಂತಾದ ಕಡೆ 2000 ಮಿ.ಮೀ ಈ ಸಮಯಕ್ಕೆ ಬೀಳಬೇಕಾಗಿತ್ತು. ಆದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕಳೆದ ಬಾರಿ ಈ ಸಮಯಕ್ಕೆ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ವ್ಯಾಪಕ ಅನಾಹುತಗಳು ಸಂಭವಿಸಿದ್ದವು. ಆದರೆ ಅದೃಷ್ಟವಷಾತ್‌ ಈ ಬಾರಿ ಯಾವುದೇ ಅನಾಹುತ ಸಂಭವಿಸಿಲ್ಲ. ಮಳೆಗಾಳಿಯಿಂದಾಗಿ ಹಲವು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಹಲವು ಗ್ರಾಮಗಳು ಕತ್ತಲೆಯಲ್ಲಿ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತುಂಬದ ಹಿನ್ನೀರು: ಪ್ರತಿವರ್ಷ ಈ ಸಮಯದಲ್ಲಿ ಹೇಮಾವತಿ ಹಿನ್ನೀರು ಪ್ರದೇಶಗಳಲ್ಲಿ ವ್ಯಾಪಕ ನೀರು ತುಂಬಿ ನೋಡುಗರ ಮನ ಸೆಳೆಯುತ್ತಿತ್ತು. ಸುಮಾರು 12ರಿಂದ 14 ರಷ್ಟು ಅಡಿ ನೀರು ಹೇಮಾವತಿ ಸೇತುವೆ ಯಲ್ಲಿ ಕಂಡು ಬರುತ್ತಿತ್ತು. ಮಳೆಯ ಪ್ರಮಾಣ ನಿಧಾನವಾಗಿ ಏರುತ್ತಿದ್ದರೂ ಸಹ ಹೇಮಾವತಿ ಸೇತುವೆ ಯಲ್ಲಿ ಕೇವಲ 3ರಿಂದ 4 ಅಡಿಗಳಷ್ಟು ನೀರು ದಾಖ ಲಾಗಿದೆ. ಹೇಮಾವತಿ ಸೇತುವೆ ಸಮೀಪದಲ್ಲೇ ಇರುವ ಹೊಳೆಮಲ್ಲೇಶ್ವರ ದೇಗುಲದ ಒಳಗೆ ನೀರು ಹರಿದು ಜನಪ್ರತಿನಿಧಿಗಳು ಹಾಗೂ ಸಂಘಟನೆಗಳು ತುಂಬಿದ ಹೇಮೆಗೆ ಬಾಗಿನ ಕೊಡುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಹೇಮೆಗೆ ಬಾಗಿನ ಕೊಡುವುದು ಕನಸಾಗಿಯೇ ಉಳಿಯುವ ಸಾಧ್ಯತೆಗಳಿವೆ.

 

● ಸುಧೀರ್‌ ಎಸ್‌.ಎಲ್


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ