ಪ್ರಚಾರಕ್ಕೆ ಹೆಲಿಕಾಪ್ಟರ್‌ ಪಡೆಯಲು ಕೇಂದ್ರದ ಅಡ್ಡಗಾಲು

Team Udayavani, Apr 4, 2019, 3:00 AM IST

ಚನ್ನರಾಯಪಟ್ಟಣ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಉತ್ತಮ ಫ‌ಲಿತಾಂಶ ಬರುವುದನ್ನು ತಡೆಯಲು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರಿಗೆ ಹೆಲಿಕಾಪ್ಟರ್‌ ದೊರೆಯದಂತೆ ಕುತಂತ್ರ ಮಾಡಿದೆ ಎಂದು ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಶಿವಮೊಗ್ಗದ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ನಾಮಪತ್ರ ಸಲ್ಲಿಕೆಯಲ್ಲಿ ಪಾಲ್ಗೊಳ್ಳಲು ತೆರಳುವಾಗ ಪಟ್ಟಣದಲ್ಲಿನ ಶಾಸಕ ಸಿ.ಎನ್‌.ಬಾಲಕೃಷ್ಣ ಅವರ ಮನೆಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ರಾಜ್ಯದ ಮುಖ್ಯ ಮಂತ್ರಿಗೆ ಹೆಲಿಕಾಪ್ಟರ್‌ ದೊರೆತರೆ ರಾಜ್ಯದಲ್ಲ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ ಇದರಿಂದ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗುತ್ತದೆ ಎಂಬ ಉದ್ದೇಶದಿಂದ ಬಿಜೆಪಿ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.

ಜಾತಿ ನೋಡಿ ಜಾಯಮಾನ ನನ್ನದಲ್ಲ: ಜಾತಿ ರಾಜಕಾರಣ ಮಾಡುವ ವ್ಯಕ್ತಿ ನಾನಲ್ಲ, ಸಮಸ್ಯೆ ಹೇಳಿಕೊಂಡು ನನ್ನ ಬಳಿ ಬರುವವರಿಗೆ ಜಾತಿಕೇಳಿ ಸಹಾಯ ಮಾಡುವುದಿಲ್ಲ. ರಾಜ್ಯದ 6 ಕೋಟಿ ಜನರ ಸೇವಕನಾಗಿ ಅಧಿಕಾರ ನಡೆಸುತ್ತಿರುವಾಗ ಮಂಡ್ಯ ಕ್ಷೇತ್ರದಲ್ಲಿ ಏಕೆ ಜಾತಿ ರಾಜಕಾರಣ ಮಾಡಲಿ ಅಂತಹ ಜಾಯಮಾನ ನನ್ನದಲ್ಲ ಎಂದು ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ತಿರುಗೇಟು ನೀಡಿದರು.

ಮಂಡ್ಯ ಜಿಲ್ಲೆ 8 ಸಾವಿರ ಕೋಟಿ ನೀಡಿದ್ದೇನೆ: ಮಂಡ್ಯ ಜಿಲ್ಲೆ ಅಭಿವೃದ್ಧಿಗಾಗಿ ನಾನು ಎಂಟು ಸಾವಿರ ಕೋಟಿ ಅನುದಾನ ನೀಡಿದ್ದೇನೆ. ಹಾಸನ ಮತ್ತು ರಾಮನಗರ ಜಿಲ್ಲೆಗೆ ಬಜೆಟಿನಲ್ಲಿ ಕೋಟ್ಯಂತರ ಅನುದಾನ ನೀಡಿದಾಗ ಬಿಜೆಪಿ ಶಾಸಕರು ವಿಧಾನ ಸೌಧದ ಬಾವಿಗೆ ಇಳಿದು ಪ್ರತಿಭಟನೆ ಮಾಡಿ ಕುಮಾರಸ್ವಾಮಿ ಸರ್ಕಾರ ಹಾಸನ, ಮಂಡ್ಯ ಮತ್ತು ರಾಮನಗರ ಸರ್ಕಾರ ಎಂದು ವ್ಯಂಗ್ಯವಾಡಿದರು. ಇದನ್ನು ಮನದಲ್ಲಿ ಇಟ್ಟುಕೊಂಡು ಹಾಸನ ಜನತೆ ಬಿಜೆಪಿ ಅಭ್ಯರ್ಥಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಚಿತ್ರ ನಟರು ಛತ್ರಿಯಿಂದ ಹೊರಬರಲಿ: ನಟ ಯಶ್‌ ಮತ್ತು ದರ್ಶನ್‌ ಸಿನಿಮಾ ಚಿತ್ರೀಕರಣ ವೇಳೆ ಛತ್ರಿಯಲ್ಲಿ ಇದ್ದು ಅನುಭವವಾಗಿದೆ. ಅವರಿಗೆ ರೈತರು ಅನುಭವಿಸುವ ಕಷ್ಟಗೊತ್ತಿಲ್ಲ ಈಗಲಾದರು ಛತ್ರಿಯಿಂದ ಹೊರ ಬಂದು ಬಿಸಿಲ ತಾಪಮಾನ ನೋಡಲಿ ಆಗಲಾದರು ನಾಡಿನ ಜನರು ಅನುಭವಿಸುವ ಕಷ್ಟಗಳು ತಿಳಿಯುತ್ತದೆ ಎಂದರು. ನನಗೆ ಮಂಡ್ಯ ಜನರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಯಾರುನ್ನು ಒಂದೂವರೆ ತಿಂಗಳಲ್ಲಿ ಮನೆಗೆ ಕಳುಹಿಸುತ್ತಾರೆ ನೋಡೋಣ ಎಂದು ಟಾಂಗ್‌ ನೀಡಿದರು.

ಜಿಲ್ಲೆ ಅಭಿವೃದ್ಧಿ ಬೇಕಿಲ್ಲ ವೈಯಕ್ತಿಕ ಅಭಿವೃದ್ಧಿ ಬೇಕು: ಜಿಲ್ಲೆ ಅಭಿವೃದ್ಧಿಗಾಗಿ ಜನತೆ ಪ್ರಜ್ವಲ್‌ಗೆ ಮತನೀಡಬೇಕು, ಹಾಸನ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗೆ ಜಿಲ್ಲೆಯ ಅಭಿವೃದ್ಧಿ ಬೇಕಿಲ್ಲ ತನ್ನ ವೈಯಕ್ತಿಕ ಅಭಿವೃದ್ಧಿಗಾಗಿ ದೇವೇಗೌಡ ಕುಟುಂಬದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಹಾಸನಕ್ಕೆ ನೀಡಿರುವ ಅನುದಾನ ಅವರು ಮಂತ್ರಿಯಾಗಿದ್ದಾಗ ಏಕೆ ತರಲು ಸಾಧ್ಯವಾಗಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಅವರು ಜಿಲ್ಲೆಗೆ ಮಾಡುವುದಾದರು ಏನು ಎಂದು ಪ್ರಶ್ನಿಸಿದರು.

ದೇವೇಗೌಡ ಕುಟುಂಬದವರು ಜಿಲ್ಲೆಯ ಭಷ್ಯದ ಆಲೋಚನೆ ಮಾಡುತ್ತೇವೆ. ಅಧಿಕಾರ ಸಿಕ್ಕ 10 ತಿಂಗಳಲ್ಲಿ ಸಾವಿರಾರು ಕೋಟಿ ಅಭಿವೃದ್ಧಿ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿವೆ. ಆದರೆ ಬಿಜೆಪಿ ಮುಖಂಡರು ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ ಹೊರತು ಜಿಲ್ಲೆಯ ಬಗ್ಗೆ ಚಿಂತನೆ ಮಾಡುತ್ತಿಲ್ಲ ಎಂದು ಟೀಕಿಸಿದರು.

ಐಟಿ ದಾಳಿಗೆ ವಿರೋಧವಿಲ್ಲ: ಆದಾಯ ತೆರಿಗೆ ಅಧಿಕಾರಿಗಳು ಗುತ್ತಿಗೆದಾರರ ಮನೆ ಮೇಲೆ ದಾಳಿ ಮಾಡಿದಕ್ಕೆ ನನ್ನ ವಿರೋಧವಿಲ್ಲ ಆದರೆ ರಾಮನಗರ, ಹಾಸನ, ಮಂಡ್ಯ ಜಿಲ್ಲೆಯ ಗುತ್ತಿಗೆದಾರರ ಮನೆ ಮೇಲೆ ಮಾತ್ರ ಏಕೆ ದಾಳಿ ಮಾಡಿದರು ಎಂದು ಪ್ರಶ್ನಿಸಿದ್ದೇನೆ ಹೊರತು ಐಟಿ ದಾಳಿಯನ್ನು ನಾನು ಎಂದಿಗೂ ವಿರೋಧಿಸುವುದಿಲ್ಲ. ರಾಜ್ಯದ ಇತರ ಜಿಲ್ಲೆಯಲ್ಲಿ ಗುತ್ತಿಗೆದಾರರಿಲ್ಲವೇ? ಅವರ ಕಡತ ಪರಿಶೀಲನೆ ಏಕೆ ಮಾಡಿಲ್ಲ, ಐಟಿ ಇಲಾಖೆ ಬಳಸಿ ಚುನಾವಣೆ ಗೆಲ್ಲಬಹುದು ಎಂದು ಕೊಂಡಿದ್ದರೆ ಅದು ಅವರ ಭ್ರಮೆ ಎಂದು ಮೋದಿ ವಿರುದ್ಧ ಕಿಡಿಕಾರಿದರು.

ಸೇನೆ ಹೆಸರಲ್ಲಿ ರಾಜಕೀಯ: ಸೇನೆಯ ಹೆಸರಿನಲ್ಲಿ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ, ಭಾರತೀಯ ಸೇನೆ 130 ಕೋಟಿ ಜನರ ಸೇನೆ ಹೊರತು ಮೋದಿಯ ಸೇನೆಯಲ್ಲ. ಸೇನೆಯ ಜಪಮಾಡಿ ಹತ್ತಾರು ಕುಟುಂಬಗಳನ್ನು ತಬ್ಬಲಿ ಮಾಡಿದ್ದರೆ ದೇಶದ ಸೇನೆ ಮೋದಿಯನ್ನು ಮಾತ್ರ ಕಾಯುತ್ತಿಲ್ಲ, ಇಡೀ ಭಾರತದಲ್ಲಿ ವಾಸವಾಗಿರುವ ಕೋಟ್ಯಂತರ ಮಂದಿ ಜನರನ್ನು ಕಾಯುತ್ತಿದ್ದಾರೆ. ಮೋದಿ ಅಧಿಕಾರಕ್ಕೆ ಬರುವುದಕ್ಕಿಂದ ಮೊದಲು ಯೋಧರು ಇರಲಿಲ್ಲವೇ. ಇಂದಿರಾ ಗಾಂಧಿ ಆಡಳಿತದಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧಮಾಡಿಲ್ಲವೇ? ಸ್ವಾರ್ಥಕ್ಕಾಗಿ ಸೇನೆಯನ್ನು ಬಳಸಿಕೊಳ್ಳಬಾರದು ಎಂದರು.

ದೃಶ್ಯ ಮಾಧ್ಯಮದ ವಿರುದ್ಧ ಕಿಡಿಕಾರಿದ ಸಿಎಂ: ರಾಜ್ಯದಲ್ಲಿ 28 ಕ್ಷೇತ್ರದಲ್ಲಿ ಲೋಕಸಭೆ ಚುನಾಣೆ ನಡೆಯುತ್ತಿದೆ. ಆದರೆ ದೃಶ್ಯ ಮಾಧ್ಯಮಗಳು ಮಾತ್ರ ಮಂಡ್ಯ ಜಿಲ್ಲೆ ಬಗ್ಗೆ ಇಲ್ಲ ಸಲ್ಲದ ಸುದ್ದಿಯನ್ನು ಪ್ರಚಾರ ಮಾಡುತ್ತಿದ್ದಾರೆ. ದೃಶ್ಯ ಮಾಧ್ಯಮದಲ್ಲಿ ತೋರಿಸುವ ರೀತಿ ಅಲ್ಲಿ ಅಂತಹದ್ದೇನೂ ಇಲ್ಲ, ಒಂದೂ ವರೆ ತಿಂಗಳಲ್ಲಿ ಜನತೆ ನೀಡುವ ತೀರ್ಮಾನ ತಿಳಿಯುತ್ತದೆ ಆಗ ಅವರು ಮಾಡಿದ ಪ್ರಚಾರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ಪತ್ರಿಕೆಗಳ ನೋಡಿ ಕಲಿಯಲಿ: ದೃಶ್ಯ ಮಾಧ್ಯಮದ ಮಾಲೀಕರು ದಿನ ಪತ್ರಿಕೆಯನ್ನು ನೋಡಿ ಕಲಿಯಬೇಕು. ಎಲ್ಲಾ ಕ್ಷೇತ್ರದ ಸುದ್ದಿಯನ್ನು ಸಮಾನಾಗಿ ಬಿತ್ತರ ಮಡುವಲ್ಲಿ ರಾಜ್ಯದ ಪತ್ರಿಕೆಗಳು ಉತ್ತಮವಾಗಿ ಸೇವೆ ಸಲ್ಲಿಸುತ್ತಿವೆ. ದೃಶ್ಯ ಮಾಧ್ಯಮಗಳು ನನಗೆ ಗಾಬರಿ ಮಾಡಲು ಮುಂದಾಗುತ್ತಿವೆ. ಲೋಕಸಭೆ ಫ‌ಲಿತಾಂಶದ ಬಳಿಕೆ ದೃಶ್ಯ ಮಾದ್ಯಮದ ಮಾಲೀಕರಿಗೆ ನಿರಾಸೆಯಾಗಲಿದೆ ಎಂದು ಟೀಕಿಸಿದರು.

ಶಾಸಕ ಸಿ.ಎನ್‌.ಬಾಲಕೃಷ್ಣ, ಎಪಿಎಂಸಿ ನಿರ್ದೇಶಕ ಎಂ.ಶಂಕರ್‌, ಜಿಪಂ ಸದಸ್ಯ ಸಿ.ಎನ್‌.ಪುಟ್ಟಸ್ವಾಮಿಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಶ್ರೀಕಂಠಪ್ಪ, ದೇವರಾಜೇಗೌಡ ಮುಂತಾದವರು ಉಪಸ್ಥಿತರಿದ್ದರು.

22 ಸ್ಥಾನ ಗೆಲ್ಲುತ್ತೇವೆ: ರಾಜ್ಯದ 28 ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಉದ್ದೇಶವಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ, ದೇವೇಗೌಡರು ಮತ್ತು ನಾನು ಪ್ರಚಾರ ಮಾಡುತ್ತೇವೆ. ಆದರೆ 22 ಸ್ಥಾನದಲ್ಲಿ ಗೆಲ್ಲುವ ಲಕ್ಷಣಗಳು ಗೋಚರವಾಗುತ್ತಿವೆ. ದೃಶ್ಯ ಮಾಧ್ಯಮಗಳು ಮಾತ್ರ ಮೈತ್ರಿ ಅಭ್ಯರ್ಥಿ ಬಗ್ಗೆ ಅನುಮಾನ ವ್ಯಕ್ತ ಪಡಿಸುತ್ತಿವೆ ಎಂದು ಟೀಕಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ