ಜೈನ ಮಠದಲ್ಲಿ ದಸರಾ ವಿಶೇಷ ಪೂಜೆ ಸಂಪನ್ನ

Team Udayavani, Oct 10, 2019, 3:00 AM IST

ಚನ್ನರಾಯಪಟ್ಟಣ/ಶ್ರವಣಬೆಳಗೊಳ: ತಾಲೂಕಿನ ಶ್ರವಣಬೆಳಗೊಳದಲ್ಲಿನ ಜೈನಮಠದಲ್ಲಿ ಕ್ಷೇತ್ರದ ಧಾರ್ಮಿಕ ಸಂಪ್ರದಾಯದಂತೆ ನಡೆಯುತ್ತಿದ್ದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ವಿಜಯದಶಮಿಯಂದು ಸಂಪನ್ನಗೊಂಡಿತು.

ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದ ದಸರಾ ಧಾರ್ಮಿಕ ಕಾರ್ಯಕ್ರಮಗಳು ಅಂತ್ಯಗೊಂಡವು. ವಿಜಯದಶಮಿ ನಿಮಿತ್ತ ಮಂಗಳವಾರ ಪಟ್ಟಣದ ಹೊರವಲಯದಲ್ಲಿದ್ದ ಬನ್ನಿ ಮರಕ್ಕೆ ಮಂಗಳ ವಾದ್ಯ ಉತ್ಸವದೊಂದಿಗೆ ತೆರಳಿ ಧಾರ್ಮಿಕ ವಿಧಿಯನ್ನು ನೆರವೇರಿಸಲಾಯಿತು. ನಂತರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಬನ್ನಿಯನ್ನು ಭಕ್ತರಿಗೆ ವಿತರಿಸಲಾಯಿತು.

ವಿವಿಧ ಕಾರ್ಯಕ್ರಮ: ಜಿನವಾಣಿ ಸರಸ್ವತಿ ದೇವಿ, ಮರುದೇವಿ, ಬ್ರಹ್ಮದೇವ, ಚಕ್ರೇಶ್ವರಿ, ಜ್ವಾಲಾಮಾಲಿನಿ, ಕೂಷ್ಮಾಂಡಿನಿ, ಪದ್ಮಾವತಿ ಯಕ್ಷಿಯರಿಗೆ ಪ್ರತ್ಯೇಕವಾಗಿ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫ‌ಲ, ಅರ್ಘ್ಯ ಮತ್ತು ಶೋಡ ಶೋಪಚಾರ ನಡೆಸಲಾಯಿತು, ತತ್ವಾರ್ಥಸೂತ್ರ ಪಠಣ, ಸಂಗೀತ, ನೃತ್ಯ, ಶಂಖವಾದ್ಯ, ಮುಖವೀಣೆ, ಚಕ್ರವಾದ್ಯ ಸೇವೆ ಮಾಡಿ ಜಿನವಾಣಿ ಸ್ತುತಿ ಹಾಡಲಾಯಿತು.

ಮಠದಲ್ಲಿ ಇದ್ದ ಸಮಗ್ರ ಆಯಧಗಳನ್ನು ಜೈನ ಪರಂಪರೆಯಂತೆ ಪೂಜೆ ಮಾಡಲಾಯಿತು. ನಂತರ 24 ತೀರ್ಥಂಕರರು ಮತ್ತು 48 ಯಕ್ಷ -ಯಕ್ಷಿಣಿಯರನ್ನು ಮಂಗಳವಾದ್ಯದೊಂದಿಗೆ ಮಠದ ಬಸದಿಯಿಂದ ಭಂಡಾರ ಬಸದಿ ಸುತ್ತ ಭವ್ಯ ಮೆರವಣಿಗೆ ನಡೆಸಿ ಚಾವುಂಡರಾಯ ಸಭಾ ಮಂಟಪಕ್ಕೆ ತಂದು ಪೂಜೆ ಮಾಡಲಾಯಿತು.

ಪ್ರಭಾವಳಿ ರಚನೆ: ಸಭಾ ಮಂಟಪದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಪೀಠದಲ್ಲಿ 24 ತೀರ್ಥಂಕರರು ಪದ್ಮಾಸನದಲ್ಲಿ ರಜತ ಛತ್ರಯಗಳಿಂದ ವಿರಾಜಮಾನರಾಗಿದ್ದರು. ತೀರ್ಥಂಕರರ ಎಡ-ಬಲ ಭಾಗಗಳಲ್ಲಿ ಸಿಂಹ ರಚನೆ ಪ್ರಭಾವಳಿ ಇದ್ದು, ಅಷ್ಟಮಂಗಲಗಳ ನಡುವೆ ಖಡ್ಗಾಸನದ 24 ಯಕ್ಷ-ಯಕ್ಷಿಣಿಯರು ಕಂಗೊಳಿಸುವ ದೃಶ್ಯ ನಯನ ಮನೋಹರವಾಗಿತ್ತು. ವೇದಿಕೆಯಲ್ಲಿ ಸಮವಸರಣ ಮಂಟಪ ರಚನೆಯಾಗಿದ್ದು, ಚತುರ್ಮುಖ ಜಿನ ಮೂರ್ತಿಗಳು, ಬಾಹುಬಲಿ ಸ್ವಾಮಿ, ಜಿನವಾಣಿ ಸರಸ್ವತಿ ಹಾಗೂ ಮರುದೇವಿಯನ್ನು ಪ್ರತಿಷ್ಟಾಪಿಸಲಾಗಿತ್ತು.

ಕ್ಷೇತ್ರದಲ್ಲಿ ವರ್ಷಾಯೋಗ ಚಾತುರ್ಮಾಸ್ಯ ಆಚರಿಸುತ್ತಿರುವ ಪುಣ್ಯಸಾಗರ ಮಹಾರಾಜರು ಮತ್ತು ಕ್ಷುಲ್ಲಿಕಾ ವಿಶುದ್ಧಮತಿ ಮಾತಾಜಿ ಸಾನ್ನಿಧ್ಯದಲ್ಲಿ ಭಂಡಾರ ಬಸದಿಯಲ್ಲಿ ನಿತ್ಯವೂ ಆರಾಧನೆ ಮತ್ತು ಪ್ರತಿನಿತ್ಯ ಸಂಜೆ ಶ್ರಾವಕ ಶ್ರಾವಕಿ ಧರ್ಮಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಮುನಿಶ್ರೀಗಳವರಲ್ಲಿ ಕೇಳಿ ಉತ್ತರ ಪಡೆಯುವ ಶಂಕಾ ಸಮಾಧಾನ ಕಾರ್ಯಕ್ರಮ ನಡೆದವು.

ಸೌಭಾಗ್ಯ: ಪುಣ್ಯಸಾಗರ ಮುನಿ ಮಹಾರಾಜರು ಆಶೀರ್ವಚನ ನೀಡಿ, ಕ್ಷೇತ್ರದ ಚಾರುಕೀರ್ತಿ ಶ್ರೀಗಳು 48 ದಿನಗಳ ಮೌನವ್ರತ ಕೈಗೊಂಡು ನಿರಂತರವಾಗಿ ಮಹಾಮಂತ್ರ ಜಪಿಸಿದರು. ದಸರಾ ನವರಾತ್ರಿಯ ಸಮಯದಲ್ಲಿ ಚಾವುಂಡರಾಯ ಸಭಾ ಮಂಟಪದಲ್ಲಿ 24 ತೀರ್ಥಂಕರರ ಸಮವಸರಣವನ್ನು ಏಕ ಕಾಲದಲ್ಲಿ ಕಾಣುವ ಸೌಭಾಗ್ಯ ಭಕ್ತರಿಗೆ ಒಲಿದು ಬಂದಿತು.

10 ದಿನ ಸಂಗೀತದ ಮೂಲಕ ಪೂಜಾಷ್ಟಕ ಮತ್ತು ಸರಸ್ವತಿ ಸ್ತೋತ್ರವಾದ ಚಂದ್ರಾರ್ಕ ಕೋಟಿ ಘಟಿತೋಜ್ವಲ ದಿವ್ಯ ಮೂರ್ತೆ ಸ್ತೋತ್ರವನ್ನು ಸಾಂಗ್ಲಿಯ ಕುಬೇರ್‌ ಚೌಗಲೆ ನಡೆಸಿಕೊಟ್ಟರು. ಮಂಗಳವಾದ್ಯ ಸಂಗೀತ ಸೇವೆಯನ್ನು ತುಕಾರಾಂ ಮಣಿಕಂಠ ತಂಡ, ಸ್ಯಾಕ್ಸೋ ಫೋನ್‌ ಸೇವೆಯನ್ನು ಗುರುಮೂರ್ತಿ ಮತ್ತು ತಂಡದಿಂದ ನಡೆಯಿತು.

ಅಷ್ಟಾವಧಾನದ ಪೂಜೆಯನ್ನು ಪ್ರತಿಷ್ಟಾಚಾರ್ಯರಾದ ಎಸ್‌.ಪಿ.ಉದಯಕುಮಾರ್‌ ಶಾಸ್ತ್ರಿ, ಎಸ್‌.ಡಿ.ನಂದಕುಮಾರ, ಕಿರಣ್‌, 10 ದಿನ ತತ್ವಾರ್ಥಸೂತ್ರ ಪಠಣವನ್ನು ರಾಜೇಶ್‌ ಶಾಸ್ತ್ರಿ ಮತ್ತು ವೃಷಭಾಸ್‌ ಶಾಸ್ತ್ರಿ ನಡೆಸಿಕೊಟ್ಟರು. ಪ್ರೊ.ಜೀವಂಧರ ಹೋತಪೇಟೆ, ಆಡಳಿತ ಮಂಡಳಿ ಸದಸ್ಯರಾದ ಎಚ್‌.ಪಿ.ಅಶೋಕ್‌ಕುಮಾರ, ದೇವೇಂದ್ರ ಕುಮಾರ, ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಮತ್ತಿತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ