ತಾಲೂಕಾದ್ಯಂತ ದಸರಾ ಬೊಂಬೆ ದರ್ಬಾರ್‌

Team Udayavani, Oct 4, 2019, 4:54 PM IST

ಚನ್ನರಾಯಪಟ್ಟಣ: ತಾಲೂಕಿನ ವಿವಿಧ ಹೋಬಳಿಯಲ್ಲಿರುವ ಮಹಾಲಕ್ಷ್ಮೀ ಹಾಗೂ ದುರ್ಗಿ ದೇವಾಲಯ ಸೇರಿದಂತೆ ಪಟ್ಟಣದಲ್ಲಿ ನೂರಾರು ಮನೆಗಳಲ್ಲಿ ದಸರಾ ಬೊಂಬೆಯನ್ನು ಕೂರಿಸುವ ಮೂಲಕ ಸನಾತನ ಸಂಪ್ರದಾಯವನ್ನು ಪಾಲಿಸಲಾಗುತ್ತಿದೆ. ಮೈಸೂರು ದಸರಾ ಉತ್ಸವಕ್ಕೆ ಚಾಲನೆ ದೊರೆತ ಬೆನ್ನಲ್ಲೇ ಚನ್ನರಾಯಪಟ್ಟಣದ ನೂರಾರು ಮನೆಗಳಲ್ಲಿ ದಸರಾ ಬೊಂಬೆಯ ದರ್ಬಾರ್‌ ಆರಂಭಗೊಂಡಿದೆ.

ಪ್ರತಿದಿನ ಸಂಜೆಯಾಗುತ್ತಿದ್ದಂತೆ ಬೊಂಬೆ ಕೂರಿಸಿರುವ ಮನೆಗಳಿಗೆ ಚಿಣ್ಣರು ತೆರಳಿ ಬೊಂಬೆ ಸಂಭ್ರಮ ಕಣ್ತುಂಬಿಕೊಳ್ಳುತ್ತಿರುವುದು ನಗರದಲ್ಲಿ ಮಾಮೂಲಾಗಿದೆ. ಶತಮಾನದ ಹಿಂದೆ ಮೇಲ್ವರ್ಗದ ಮನೆಯವರು ಮಾತ್ರ ದಸರಾ ಬೊಂಬೆ ಕೂರಿಸುತ್ತಿದ್ದಾರೆ. ಆಧುನಿಕತೆ ಬಳೆದಂತೆ ಸನಾತ ಸಂಪ್ರದಾಯವೂ ಬೃಹದಾಕಾರವಾಗಿ ಬೆಳೆಯುತ್ತಿದೆ. ನವರಾತ್ರಿ ಹಬ್ಬದಲ್ಲಿ ಎಲ್ಲಾ ವರ್ಗದವರ ಮನೆಯಲ್ಲಿ ಬೊಂಬೆ ಕೂರಿಸುವುದು ಎಂದರೆ ತಪ್ಪಾಗಲಾರದು.

ನಿಯಮವೇನಿಲ್ಲ: ನವರಾತ್ರಿಗೆ ಬೊಂಬೆಯನ್ನು ಹೀಗೆ ಕೂರಿಸಬೇಕೆಂಬ ನಿಯಮಗಳೇನು ಇಲ್ಲ. ಆದರೆ ಬೊಂಬೆಗಳನ್ನು ಕೂರಿಸುವಾಗ ಒಂದು ಥೀಮ ಇಟ್ಟುಕೊಂಡು ಕೂರಿಸುವುದು ವಾಡಿಕೆ. ಬೊಂಬೆಯನ್ನು ಕೂರಿಸಲು ಹಂತ-ಹಂತವಾಗಿ ಹಲಗೆಯನ್ನು ಮೆಟ್ಟಿಲಿನ ರೀತಿಯಲ್ಲಿ ಜೋಡಿಸಿ ಅವುಗಳಲ್ಲಿ ಬೊಂಬೆ ಕೂರಿಸಲಾಗುವುದು. ಒಂದೊಂದೇ ಮೆಟ್ಟಿಲಿನಲ್ಲಿ ಕೂರಿಸುವ ಬೊಂಬೆಗಳು ಒಂದೊಂದು ಕಥೆಯನ್ನು ಆಧರಿಸಿರುತ್ತವೆ.

ಸಾಮಾನ್ಯವಾಗಿ ಬೊಂಬೆ ಕೂರಿಸುವಾಗ ಮೇಲಿನ ಮೂರು ಮೆಟ್ಟಿಲುಗಳಲ್ಲಿ ದೇವ-ದೇವತೆಯನ್ನು ಕೂರಿಸಲಾಗುವುದು. ನಂತರ ಮೂರು ಮೆಟ್ಟಿಲುಗಳನ್ನು ನರದೇವತೆ, ಋಷಿ ಮುನಿಗಳು, ಸಾಧು ಸಂತರು ಹಾಗೂ ರಾಜ-ರಾಣಿಯರಿಗೆ ಮೀಸಲಿಡುತ್ತಾರೆ. ಮೈಸೂರು ರಾಜ-ರಾಣಿಯರ ಬೊಂಬೆಯನ್ನು ಕೂರಿಸಲಾಗುವುದು. 7ನೇ ಮೆಟ್ಟಿಲಿನಲ್ಲಿ ಹಬ್ಬದ ಸಡಗರವನ್ನು ಬಿಂಬಿಸುವ ಬೊಂಬೆಗಳನ್ನು ಇಡಲಾಗುವುದು. 8ನೇ ಮೆಟ್ಟಿಲಿನಲ್ಲಿ ನಾವು ನೋಡೋ ಸನ್ನಿವೇಶ, ನಡೆದ ಘಟನೆಗಳು, ದಿನ ನಿತ್ಯ ಜೀವನವನ್ನು ಬಿಂಬಿಸುವ ಬೊಂಬೆ ಇಟ್ಟಿರುತ್ತಾರೆ, 9ನೇ ಮೆಟ್ಟಿಲಿನಲ್ಲಿ ಪ್ರಾಣಿ-ಪಕ್ಷಿಗಳ ಬೊಂಬೆಯನ್ನು ಇಡಲಾಗುವುದು. ಈ ರೀತಿಯಾಗಿ ನವರಾತ್ರಿಗೆ ಗೊಂಬೆಯನ್ನು ಕೂರಿಸುವ ಕ್ರಮವನ್ನು ರೂಡಿಸಿಕೊಂಡು ಬರಲಾಗಿದೆ.

ಹಲವು ದಿವಸ ಆಚರಣೆ ಹಬ್ಬ: ನವರಾತ್ರಿಯು ಹಿಂದೂ ಹಬ್ಬವಾಗಿದ್ದು ಅದು 9 ರಾತ್ರಿ ಮತ್ತು ವಿಜಯ ದಶಮಿ ಸೇರಿಂದಂತೆ ಹತ್ತು ದಿನ ವಿಶೇಷ ಕಾರ್ಯಕ್ರಮ ನಡೆಯುತ್ತದೆ. ಇದನ್ನು ವಿಭಿನ್ನ ಕಾರಣಕ್ಕಾಗಿ ಆಚರಿಸಲಾಗುವುದು ಮತ್ತು ಭಾರತೀಯ ಉಪಖಂಡದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ದುರ್ಗಾ ಪೂಜೆಯು ನವರಾತ್ರಿಯ ಸಮಾನಾರ್ಥಕವಾಗಿದೆ. ದುರ್ಗಾದೇವಿ ರಾಕ್ಷಸರ ವಿರುದ್ಧ ಸಾಧಿಸಿದ ವಿಜಯವನ್ನು ವಿಜಯದಶಮಿ ಆಚರಣೆ ಮಾಡುವ ಮೂಲಕ ನವರಾತ್ರಿ ಹಬ್ಬವನ್ನು ಮುಕ್ತಾಯ ಮಾಡಲಾಗುತ್ತದೆ.

ಶತಮಾನಗಳಿಂದಲೂ ಜಾರಿಯಲ್ಲಿದೆ: ಬೊಂಬೆ ಕೂರಿಸುವುದು ಇಂದು ನೆನ್ನೆಯದಲ್ಲ ಹಲವು ಮನೆಗಳಲ್ಲಿ ತಲೆ ತಲಾತರದಿಂದ ಬೊಂಬೆ ಕೂರಿಸಲಾಗುತ್ತಿದೆ. ಕೆಲವು ಮನೆಯವರು ಹತ್ತಾರು ವರ್ಷದಿಂದ ಬೊಂಬೆ ಕೂರಿಸುವುದನ್ನು ರೂಡಿಸಿಕೊಂಡಿದ್ದಾರೆ. ಇತ್ತೀಚಿನ ದಿವಸಗಳಲ್ಲಿ ಕೆಲವು ಮಹಿಳೆಯರು ತಾವು ಪ್ರವಾಸಕ್ಕೆ ಹೋದಾಗ ತಂದ ಬೊಂಬೆಗಳನ್ನು ಪ್ರದರ್ಶನ ಮಾಡಲಿಕ್ಕಾಗಿ ನವರಾತ್ರಿಯ ಬೊಂಬೆ ಹಬ್ಬದ ದಿವಸ ಅದ್ಧೂರಿಯಾಗಿ ಅಲಂಕಾರ ಮಾಡಿದ ಮಂಟಪದಲ್ಲಿ ಬೊಂಬೆ ಕೂರಿಸುತ್ತಿದ್ದಾರೆ. ಸಂಪ್ರದಾಯದ ಬೊಂಬೆಗಳೊಂದಿಗೆ ಕ್ರಿಕೆಟ್‌, ಕಬಡ್ಡಿ , ಶಾಲೆಯಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ಸೇರಿದಂತೆ ಆಧುನಿಕತೆಯ ಬೊಂಬೆಗಳನ್ನೂ ಕೂರಿಸಲಾಗುತ್ತಿದೆ.

ಬೊಂಬೆ ಹಬ್ಬದ ಹಿನ್ನೆಲೆ : ಮೈಸೂರು ದಸರಾ ಹಾಗೂ ಬೊಂಬೆ ಹಬ್ಬಕ್ಕೂ ಐತಿಹಾಸಿಕ ನಂಟಿದೆ. ಬೊಂಬೆಗಳ ಸಂಪ್ರದಾಯ ಹಿಂದೂ ನಾಗರಿಕತೆಯ ಅರಂಭದಿಂದ ಬಂದುದಾದರೂ ನವರಾತ್ರಿ ಬೊಂಬೆ ಉತ್ಸವ ಮಾತ್ರ ರಾಜವಂಶಸ್ಥರಿಂದ ಆರಂಭವಾಗಿ ನಂತರ ಅದು ಅವರ ನಿಕಟವರ್ತಿಗಳಿಂದ ಆಚರಿಸಲ್ಪಟ್ಟು ಸಾರ್ವತ್ರಿಕವಾಗಿದೆ. ಹೆಣ್ಣು ಮಕ್ಕಳು ರಾಜ ಮಂತ್ರಿ ಆಸ್ಥಾನದವರ ಪ್ರತೀಕವಾಗಿ ಬೊಂಬೆ ಕೂರಿಸಿ ಅದಕ್ಕೆ ಕಲಾತ್ಮಕ ಅಲಂಕಾರ ಮಾಡುತ್ತಿದ್ದರು. ರಾಜ ಪರಿವಾರದವರ ವೈಭವದ ಆಟಿಕೆಗಳ ಪ್ರದರ್ಶ ಮಕ್ಕಳಿಗೆ ಮನರಂಜನೆ ನೀಡುವ ಸಲುವಾಗಿ ಆರಂಭಗೊಂಡ ಬೊಂಬೆ ಕೂರಿಸುವುದು ನಂತರದ ದಿವಸಗಳಲ್ಲಿ ಸಂಪ್ರದಾಯವಾಗಿ ರೂಪ ಪಡೆಯಿತು.

 

-ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ