ನೀರಿನ ತೊಟ್ಟಿಯಲ್ಲಿ ಮುಳುಗಿ ಮಗು ಸಾವು
Team Udayavani, Feb 12, 2021, 5:01 PM IST
ಚನ್ನರಾಯಪಟ್ಟಣ/ಹಿರೀಸಾವೆ: ತಾಲೂಕಿನ ಹಿರೀಸಾವೆ ಹೋಬಳಿ ಬಿಳಿಕೆರೆ ಗ್ರಾಮದಲ್ಲಿ ತೆಂಗಿನ ಚಿಪ್ಪು ಹಿಡಿದು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ಆಕಸ್ಮಿಕವಾಗಿ ಬಚ್ಚಲು ಮನೆಯ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ.
ತಾಲೂಕಿನ ಬಿಳಿಕೆರೆ ಗ್ರಾಮ ವಾಸಿ ಧರಣೇಶ್ ಹಾಗೂ ಕುಮಾರಿ ದಂಪತಿಯ ಪುತ್ರಿ ಶ್ರೇಯಾ(4) ಮೃತ ಮಗು. ಮನೆಯ ಮುಂಭಾಗದ ಅಂಗಳದಲ್ಲಿ ಬೆಳಗ 10 ಗಂಟೆಯಲ್ಲಿ ಕೊಬ್ಬರಿ ಒಡೆದ ಚಿಪ್ಪು ಹಿಡಿದು ಆಟವಾಡುತ್ತಿತ್ತು. ಮಗು ಆಟವಾಡುತ್ತಿದೆ ಎಂದು ಮನೆಯವರು ತಮ್ಮ ಕೆಲಸದಲ್ಲಿ ತಲ್ಲೀನರಾಗಿದ್ದರು,
ಮಧ್ಯಾಹ್ನ 12 ಗಂಟೆಯಲ್ಲಿ ಮಗುವಿನ ನೆನಪು ಬಂದಾಗ ಮನೆ ಮುಂಭಾಗ ಹಾಗೂ ಸುತ್ತ ಹುಡುಕಿದರೂ ಪತ್ತೆಯಾಗಿಲ್ಲ. ನಂತರ ಮನೆಯ ಹಿತ್ತಲಿನ ಸ್ನಾನದ ಮನೆಯಲ್ಲಿ ಹುಡುಕಿದಾಗ ಅಲ್ಲಿ ನೀರು ಸಂಗ್ರಹಕ್ಕೆ ನಿರ್ಮಿಸಿರುವ ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿರುವುದು ಕಂಡುಬಂದಿದೆ.
ಆಟವಾಡುತ್ತಿದ್ದ ಮಗು ಚಿಪ್ಪಿನಲ್ಲಿ ನೀರು ತರಲು ಹೋಗಿರುವ ಸಂದರ್ಭ ನೀರಿನ ತೊಟ್ಟಿಗೆ ಬಿದ್ದು, ನೀರಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಹೇಳಲಾಗಿದೆ.