ವರ್ಷದಿಂದ ಪುರಸಭೆ ಆಡಳಿತಕ್ಕೆ ಗ್ರಹಣ

Team Udayavani, Sep 4, 2019, 11:33 AM IST

ಚನ್ನರಾಯಪಟ್ಟಣ: ಸ್ಥಳೀಯ ಸಂಸ್ಥೆಗಳ ಚುನಾವಣೆ ಫ‌ಲಿತಾಂಶ ಹೊರಬಿದ್ದು ಸೆ.3ಕ್ಕೆ ಒಂದು ವರ್ಷ ಕಳೆದರೂ ಸಹ ಈವರೆವಿಗೂ ಚುನಾಯಿತ ಪ್ರತಿನಿಧಿ ಗಳಿಗೆ ಅಧಿಕಾರ ಭಾಗ್ಯ ದೊರೆಯದೇ ಆಡಳಿತಕ್ಕೆ ಗ್ರಹಣ ಹಿಡಿದಂತಾಗಿದ್ದು, ಪುರಸಭೆ ಅಧಿಕಾರಿಗಳ ದರ್ಬಾರ್‌ ತುಸು ಜೋರಾಗಿದೆ.

ಚನ್ನರಾಯಪಟ್ಟಣದಲ್ಲಿ 23ವಾರ್ಡ್‌ಗಳ ಚುನಾ ವಣೆ ನಡೆದು ಬರೋಬ್ಬರಿ ಹನ್ನೆರಡು ತಿಂಗಳು ಕಳೆದಿದೆ. ಆದರೆ ಪುರಸಭಾ ಸದಸ್ಯರಿಗೆ ಇನ್ನೂ ಪುರ ಸಭೆಯ ಬಾಗಿಲು ತೆರೆದಿಲ್ಲ. ಇದರಿಂದಾಗಿ ಪುರಸಭೆಗೆ ಆಯ್ಕೆಯಾದ ಸದಸ್ಯರು ತೀವ್ರ ನಿರಾಶರಾಗಿದ್ದಾರೆ.

ಚನ್ನರಾಯಪಟ್ಟಣ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯಲ್ಲಿ ಯಾವುದೇ ಗೊಂದಲವಿಲ್ಲ. ರಾಜ್ಯದ ಕೆಲ ಪುರಸಭೆಗಳು ಮೀಸಲಾತಿಯನ್ನು ಪ್ರಶ್ನಿಸಿ ಉಚ್ಚನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಇದನ್ನೇ ಕುಂಟು ನೆಪಮಾಡಿಕೊಂಡ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಬ್ರೇಕ್‌ ಹಾಕಿದೆ.

ಮೀಸಲಾತಿ ಯಾವಾಗ? ಸೆ.3 2018ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಫ‌ಲಿತಾಂಶ ಪ್ರಕಟ ವಾದ ದಿವಸವೇ ಸರ್ಕಾರ ಮೀಸಲಾತಿ ಪ್ರಕಟಿಸಿತ್ತು, ಇದರಲ್ಲಿ ಗೊಂದಲ ಇದೆ ಎಂದು ಮತ್ತೆ ಮರು ಪರಿಶೀಲನೆ ಮಾಡಿ ಎರಡನೇ ಬಾರಿಗೆ ಮೀಸಲಾತಿ ಪ್ರಕಟಣೆ ಮಾಡಿತು. ಪುನಃ ಮೀಸಲಾತಿಯನ್ನು ಪ್ರಶ್ನಿಸಿ ಸಾರ್ವಜನಿಕರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ 2018ರ ಅ.9 ರಂದು ನ್ಯಾಯಾಲಯ ತೀರ್ಪು ನೀಡುವ ಮುನ್ನವೇ ಸರ್ಕಾರ ತನ್ನ ಅರ್ಜಿ ಯನ್ನು ಹಿಂಪಡೆದು ಮೊದಲ ಮೀಸಲಾತಿ ಪಟ್ಟಿಯನ್ನು ಮುಂದುವರಿಸಲಾಗು ವುದು ಎಂದು ಹೇಳಿತ್ತು.

ಇದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದ ಮಟ್ಟಿಲೇರಿದ ಪರಿಣಾಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಬ್ರೇಕ್‌ ಬಿದ್ದಂತಾಗಿದೆ. ಪುರಸಭೆ ಚುನಾವಣೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಇಷ್ಟೊಂದು ವಿಳಂಬ ನೀತಿ ಅನುರಿಸುತ್ತಿರುವುದರಿಂದ ಪುರಸಭೆಗೆ ಪ್ರಥಮ ಬಾರಿಗೆ ಆಯ್ಕೆಯಾದ ಪ್ರತಿನಿಧಿಗಳು ಪುರಸಭೆ ಪ್ರವೇಶಿಸಲು ಹವಣಿಸುತ್ತಿದ್ದಾರೆ.

ಸಮಸ್ಯೆಗಳ ಸರಮಾಲೆ: ಕಳೆದ ಒಂದು ವರ್ಷದಿಂದ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಾರದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ತೀವ್ರಗತಿಯಲ್ಲಿ ನಡೆಸುವಲ್ಲಿ ಅಧಿಕಾರಿ ಗಳು ವಿಫ‌ಲರಾಗಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಾರ್ಡ್‌ಗಳಲ್ಲಿ ಸಕಾಲಕ್ಕೆ ನೀರಿನ ವ್ಯವಸ್ಥೆ ನೀಡುತ್ತಿಲ್ಲ. ರಸ್ತೆ ಬದಿಯಲ್ಲಿ ಕಸ ಬಿದ್ದಿರುವುದು. ರಾತ್ರಿಯಾದರೂ ಬೀದಿ ದೀಪಗಳು ಉರಿಯುತ್ತಿಲ್ಲ ಹೀಗೆ ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುವಂತಾಗಿದೆ.

ಅಧಿಕಾರಿಗಳ ದರ್ಬಾರ್‌: ರಾಜ್ಯದ ಕೆಲಸ ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿ ಹೈಕೋರ್ಟ್‌ನಲ್ಲಿ ಇತ್ಯರ್ಥ ಆಗಬೇಕಿರುವುದರಿಂದ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಚುನಾಯಿತ ಜನ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದ ಕಾರಣ ಸದ್ಯ ಪುರಸಭೆಯಲ್ಲಿ ಅಧಿಕಾರಿಗಳದ್ದೇ ದರ್ಬಾರ್‌ ನಡೆಯುತ್ತಿದೆ. ಇದು ಆಡಳಿತ ವ್ಯವಸ್ಥೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಮೇಲೆ ಪರಿಣಾಮ ಬೀರುತ್ತಿದೆ.

ಬಜೆಟ್ ಮಂಡನೆ ಆಗಿಲ್ಲ: ಪುರಸಭೆಯಲ್ಲಿ ಸದಸ್ಯರು ಇಲ್ಲದೇ ಇರುವುದರಿಂದ ಪ್ರಸಕ್ತ ವರ್ಷದ ಬಜೆಟ್ ಮಂಡನೆಯಾಗಿಲ್ಲ. ಅಧಿಕಾರಿಗಳೇ ಪುರಸಭೆ ಆಯವ್ಯಯ ಮಂಡನೆ ಮಾಡಬೇಕಿತ್ತು. ಆದರೆ ಇವರನ್ನು ಪ್ರಶ್ನೆ ಮಾಡುವವರಿಲ್ಲದೇ ಇರುವುದರಿಂದ ಪುರಸಭೆಗೆ ತೆರಿಗೆ ರೂಪದಲ್ಲಿ ಹಾಗೂ ಸರ್ಕಾರದ ವಿವಿಧ ಯೋಜನೆಯಲ್ಲಿ ಹರಿದು ಬಂದಿರುವ ಅನುದಾನ ಹಾಗೂ ಆದಾಯವೆಷ್ಟು? ಇದನ್ನು ಸರಿಯಾಗಿ ವೆಚ್ಚ ಮಾಡಲಾಗಿದೆಯೇ ಎಂಬುದನ್ನು ಸಾರ್ವಜನಿಕವಾಗಿ ಮಂಡನೆ ಮಾಡುವಲ್ಲಿ ಅಧಿಕಾರಿಗಳು ವಿಫ‌ಲರಾಗಿದ್ದಾರೆ.

ಜೆಡಿಎಸ್‌ ಅಧಿಕಾರ: ಪುರಸಭೆ 23 ವಾರ್ಡ್‌ಗಳಲ್ಲಿ ಜೆಡಿಎಸ್‌ 15 ಸ್ಥಾನ, ಕಾಂಗ್ರೆಸ್‌ 8 ಸ್ಥಾನ ಪಡೆದಿದೆ. ಸರ್ಕಾರ ಯಾವುದೇ ಮೀಸಲಾತಿ ಘೋಷಣೆ ಮಾಡಿದರೂ ಜೆಡಿಎಸ್‌ ಪಕ್ಷ ಅಧಿಕಾರ ಹಿಡಿಯು ವುದು ಶತಸಿದ್ಧ. ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಮೀಸಲಾಗಿದೆ. ಉಪಾಧ್ಯಕ್ಷ ಸ್ಥಾನ ಬಿಸಿಎಂ(ಬಿ)ಗೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮೂರು ಮಂದಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 2 ಮಂದಿ ಪೈಪೋಟಿಯಲ್ಲಿದ್ದಾರೆ.

 

● ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ