ಬಿತ್ತನೆ ಆಲೂಗಡ್ಡೆ ಖರೀದಿಗೆ ರೈತರ ಹಿಂದೇಟು

ಮಳೆ ಕೊರತೆ, ಅಂಗಮಾರಿ ರೋಗದ ಭಯ: ಈ ವರ್ಷ ಬಿತ್ತನೆ ಪ್ರಮಾಣ ಶೇ.50ರಷ್ಟು ಕಡಿಮೆಯಾಗುವ ಸಂಭವ

Team Udayavani, May 27, 2019, 8:42 AM IST

ಹಾಸನದ ಎಪಿಎಂಸಿ ಪ್ರಾಂಗಣದಲ್ಲಿ ಆಲೂಗಡ್ಡೆ ಮಾರಾಟ ಭಾನುವಾರ ನೀರಸವಾಗಿತ್ತು.

ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆ ವ್ಯಾಪಾರ ಆರಂಭವಾಗಿ ಎರಡು ವಾರ ಗಳಾಗುತ್ತಾ ಬಂದರೂ ಆಲೂಗಡ್ಡೆ ಖರೀದಿಗೆ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದಿನ ವರ್ಷಗಳಂತೆ ಆಲೂಗಡ್ಡೆ ಖರೀದಿಗೆ ರೈತರು ಬಾರದಿದ್ದರಿಂದ ಆಲೂಗಡ್ಡೆ ವಹಿವಾಟಿನ ಮೇಲೆ ಮಂಕು ಕವಿದಿದೆ.

ಮೇ 16 ರಂದು ಆಲೂಗಡ್ಡೆ ಮಾರುಕಟ್ಟೆ ಆರಂಭ ವಾದಾಗ ಕ್ವಿಂಟಲ್ ಆಲೂಗಡ್ಡೆ ದರ 1,450 ರಿಂದ 1,600 ರೂ. ಇದ್ದದ್ದು, ಈಗ 1,250 ರಿಂದ 1,350 ರೂ.ಗೆ ಕುಸಿದಿದೆ. ಆದರೂ ರೈತರು ಆಲೂಗಡ್ಡೆ ಖರೀ ದಿಗೆ ಮುಂದಾಗುತ್ತಿಲ್ಲ. ಇದರ ಪರಿಣಾಮ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.

ಇನ್ನು ಎರಡು ವಾರಗಳಲ್ಲಿ ಆಲೂಗಡ್ಡೆ ಬಿತ್ತನೆ ಮುಗಿಯಬೇಕು. ಆದಕ್ಕೂ ಮೊದಲು ರೈತರು ಆಲೂಗಡ್ಡೆ ಖರೀದಿಸಿ ನಾಲ್ಕೈದು ದಿನ ನೆಲದಲ್ಲಿ ಹರಡಿ ಮೊಳಕೆ ಬರುವುದನ್ನು ಖಾತರಿಪಡಿಸಿಕೊಂಡು ಆನಂತರ ಬೀಜೋಪಚಾರ ಮಾಡಿ ಬಿತ್ತನೆ ಮಾಡ ಬೇಕು. ಇಲ್ಲದಿದ್ದರೆ ಶೀತಲಗೃಹದಲ್ಲಿರಿಸಿದ ಆಲೂಗಡ್ಡೆ ಯನ್ನು ಮಾರುಕಟ್ಟೆಯಲ್ಲಿ ಖರೀದಿಸಿದ ಮರುದಿನವೇ ಬಿತ್ತನೆ ಮಾಡಿದರೆ ಕೊಳೆತು ಹೋಗುತ್ತದೆ. ಹಾಗಾಗಿ ಆಲೂಗಡ್ಡೆ ಬಿತ್ತನೆ ಮಾಡುವ ರೈತರು ಈ ಸಮಯಕ್ಕಾಗಲೇ ಆಲೂಗಡ್ಡೆ ಖರೀದಿಸಬೇಕಾಗಿತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ.25 ರಷ್ಟೂ ಆಲೂಗಡ್ಡೆ ವಹಿವಾಟು ನಡೆದಿಲ್ಲ ಎಂದು ವರ್ತಕರು ಬೇಸರ ವ್ಯಕ್ತಪಡಿಸುತ್ತಾರೆ. ಹಿಂದಿನ ವರ್ಷಕ್ಕೆ ಹೋಲಿಸಿ ದರೆ ಈ ಬಾರಿ ಆಲೂಗಡ್ಡೆ ಬಿತ್ತನೆ ಶೇ.50 ರಷ್ಟು ಕಡಿಮೆಯಾಗಲಿದೆ ಎಂದೂ ಅಭಿಪ್ರಾಯಪಡುತ್ತಾರೆ.

ಕೈಕೊಟ್ಟ ಪೂರ್ವ ಮುಂಗಾರು: ಈ ಬಾರಿ ಪೂರ್ವ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ. ಅತಿ ಹೆಚ್ಚು ಆಲೂಗಡ್ಡೆ ಬಿತ್ತನೆ ಮಾಡುತ್ತಿದ್ದ ಅರಸೀಕೆರೆ ತಾಲೂಕು ಗಂಡಸಿ, ಬಾಗೇಶಪುರ ಭಾಗದಲ್ಲಿ ಪೂರ್ವ ಮುಂಗಾರು ಮಳೆ ಕುಂಠಿತವಾಗಿದ್ದರಿಂದ ಆ ಭಾಗದ ರೈತರು ಆಲೂಗಡ್ಡೆ ಬಿತ್ತನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮುಂದಾಗಿಲ್ಲ. ಹಾಸನ ತಾಲೂಕು ದುದ್ದ, ಸಾಲ ಗಾಮೆ, ಕಸಬಾ ಹೋಬಳಿಯಲ್ಲೂ ಈ ಬಾರಿ ಮಳೆ ಕೊರತೆ ಎದುರಾಗಿದ್ದರಿಂದ ಆಲೂಗಡ್ಡೆ ಬಿತ್ತನೆಗೆ ರೈತರು ಮನಸ್ಸು ಮಾಡುತ್ತಿಲ್ಲ.

ಆಲೂ ಬದಲು ಶುಂಠಿ ಬೆಳೆಯಲು ಚಿಂತನೆ: ಬೋರ್‌ವೆಲ್ಗಳಿರುವ ರೈತರು ಆಲೂಗಡ್ಡೆ ಬದಲು ಶುಂಠಿ ಬೆಳೆಯಲು ಮುಂದಾಗಿದ್ದಾರೆ. ಶುಂಠಿಗೆ ಈಗ ಉತ್ತಮ ಧಾರಣೆ ಇದೆ. 60 ಕೇಜಿ ಶುಂಠಿಗೆ ಈಗ 5ರಿಂದ 6ಸಾವಿರ ರೂ. ಬೆಲೆ ಇದೆ. ಹಾಗಾಗಿ ಆಲೂ ಗಡ್ಡೆ ಬದಲು ಶುಂಠಿ ಬೆಳೆಯಲು ಮುಂದಾಗಿದ್ದಾರೆ.

ಕಳೆದ ವರ್ಷ ಜಿಲ್ಲೆಯ 11ಸಾವಿರ ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆಯಾಗಿತ್ತು. ಈ ವರ್ಷ 13ಸಾವಿರ ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆಯಾಗಬಹದೆಂದು ತೋಟಗಾರಿಕೆ ಇಲಾಖೆ ನಿರೀಕ್ಷಿಸಿತ್ತು. ಆದರೆ ನಿರೀಕ್ಷೆಯ ಶೇ.50 ರಷ್ಟೂ ಪ್ರಮಾಣದಲ್ಲೂ ಆಲೂಗಡ್ಡೆ ಬಿತ್ತನೆ ಯಾಗುವುದು ಕಷ್ಟ ಎಂಬ ಪರಿಸ್ಥಿತಿ ಇದೆ.

ಜಿಲ್ಲಾಡಳಿತದಿಂದ ವ್ಯವಸ್ಥೆ: ಜಿಲ್ಲಾಡಳಿತವೇನೋ ಆಲೂಗಡ್ಡೆ ವಹಿವಾಹಿಟಿಗೆ ಉತ್ತಮ ವ್ಯವಸ್ಥೆ ಮಾಡಿತ್ತು. ಸರ್ಕಾರ ಶೇ.50ರಷ್ಟು ಸಹಾಯಧನವನ್ನೂ ನೀಡುತ್ತಿದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿಯೇ ತೋಟ ಗಾರಿಕೆ ಮತ್ತು ಕಂದಾಯ ಇಲಾಖೆಯ ಮೂಲಕ ಸಕಲ ವ್ಯವಸ್ಥೆಯನ್ನೂ ಮಾಡಿದೆ. ಆಲೂಗಡ್ಡೆ ಬೀಜೋ ಪಾಚಾರಕ್ಕೆ ಹಾಗೂ ಔಷಧಿಗೆ ಶೇ.50ರಷ್ಟು ಸಹಾಯ ಧನವನ್ನೂ ತೋಟಗಾರಿಕೆ ನೀಡಲು ಮುಂದಾಗಿದೆ. ಸಹಾಯಧನ ನೀಡುವ ಬಗ್ಗೆ ವ್ಯಾಪಕ ಪ್ರಚಾರವನ್ನೂ ಕೈಗೊಳ್ಳಲಾಗುತ್ತಿದೆ. ಆದರೂ ರೈತರು ಮಾತ್ರ ಆಲೂ ಗಡ್ಡೆ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ರೈತರಿಗೆ ಸಲಹೆ ಹಾಗೂ ಸಬ್ಸಿಡಿ ದರದಲ್ಲಿ ಔಷಧಿ ನೀಡಲು ತೋಟಗಾರಿಕೆ ಇಲಾಖೆ ಮಾರುಕಟ್ಟೆಯಲ್ಲಿ ತೆರೆದಿರುವ ಮಳಿಗೆಗಳತ್ತ ರೈತರು ಮುಖ ಮಾಡುತ್ತಿಲ್ಲ. ಹಾಗಾಗಿ ಇಲಾಖೆಯ ಅಧಿಕಾರಿಗಳು, ನೌಕರರು ಮಳಿಗೆಯಲ್ಲಿ ಕಾಲ ಕಳೆಯುತ್ತಾ ಕೂತಿದ್ದಾರೆ.

ಕಳೆದ ವರ್ಷ ಪೂರ್ವ ಮುಂಗಾರು ಆಶಾದಾಯಕ ವಾಗಿದ್ದು, ಆಲೂಗಡ್ಡೆ ಬಿತ್ತನೆಗೆ ಆಶಾದಾಯಕ ವಾತಾವರಣವಿತ್ತು. ಆದರೆ ಮಲೆನಾಡು ಮತ್ತು ಆರೆ ಮಲೆನಾಡು ಪ್ರದೇಶಗಳಲ್ಲಿ ಮುಂಗಾರು ಮಳೆ ನಿರೀಕ್ಷೆ ಮೀರಿ ಸುರಿದಿದ್ದರಿಂದ ಬಿತ್ತನೆ ಮಾಡಿದ್ದ ಆಲೂಗಡ್ಡೆ ಹೊಲದಲ್ಲಿಯೇ ಕೊಳೆತು ಹೋಗಿ ರೈತರು ನಷ್ಟ ಅನುಭವಿಸಿದರು. ಬಯಲು ಸೀಮೆಯಲ್ಲೂ ಅಂಗಮಾರಿ ರೋಗ ಬೆಳೆಗೆ ಬಾಧಿಸಿತು. ಬೆಳೆ ನಷ್ಟವಾದರೂ ರೈತರಿಗೆ ಬೆಳೆ ವಿಮೆ ಬರಲಿಲ್ಲ. ಸತತ ನಷ್ಟ ಅನುಭವಿಸುತ್ತಾ ಬಂದಿರುವ ಹಾಸನ ಜಿಲ್ಲೆಯ ಆಲೂಗಡ್ಡೆ ಬೆಳೆಗಾರರು ಈಗ ಆಲೂಗಡ್ಡೆ ಬೆಳೆಯ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಬಂದಂತಿದೆ.

ಶೀತಲಗೃಹದ ಬಳಿಯೇ ವಹಿವಾಟು: ಹಾಸನ ಎಪಿಎಂಸಿ ಪ್ರಾಂಗಣದಲ್ಲಿ ಬಿತ್ತನೆ ಆಲೂಗಡ್ಡೆ ವಹಿವಾಟು ಕುಂಠಿತವಾಗಲು ವರ್ತಕರು ಶೀತಲಗೃಹದ ಬಳಿಯೇ ರೈತರಿಗೆ ನೇರವಾಗಿ ಆಲೂಗಡ್ಡೆ ಮಾರಾಟ ಮಾಡುತ್ತಿರುವುದೂ ಕಾರಣ ಎಂದು ಹೇಳಲಾಗುತ್ತಿದೆ. ಶೀತಲಗೃಹದಿಂದ ಎಪಿಎಂಸಿ ಪ್ರಾಂಗಣಕ್ಕೆ ಆಲೂಗಡ್ಡೆ ತರಲು ಒಂದು ಚೀಲಕ್ಕೆ (50 ಕೇಜಿ) ಅಂದರೆ ಲಾರಿ ಬಾಡಿಗೆ 8 ರೂ. ಒಂದು ಕ್ವಿಂಟಲ್ಗೆ 16 ರೂ. ಎಪಿಎಂಸಿ ಸೆಸ್‌ 14 ರೂ. ಹಾಗೂ ಅನ್‌ಲೋಡ್‌ಗೆ ಹಮಾಲಿಗಳಿಗೆ ಒಂದು ಚೀಲಕ್ಕೆ 5 ರೂ. ಕೊಡಬೇಕು. ಶೀತಲಗೃಹದ ಬಳಿಯೇ ರೈತರಿಗೆ ಮಾರಾಟ ಮಾಡಿದರೆ ಒಂದು ಕ್ವಿಂಟಲ್ಗೆ 40 ರೂ. ಉಳಿಯುತ್ತದೆ. ಹಾಗಾಗಿ ಬಹಳಷ್ಟು ವರ್ತಕರು ಶೀತಲಗೃಹದ ಬಳಿಯೇ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಎಷ್ಟು ಪ್ರಮಾಣದ ಆಲೂಗಡ್ಡೆ ಮಾರಾಟವಾಯಿತು ಎಂಬ ಲೆಕ್ಕ ಸಿಗುವುದಿಲ್ಲ. ಎಪಿಎಂಸಿಗೂ ನಷ್ಟವಾಗುತ್ತಿದೆ.

● ಎನ್‌. ನಂಜುಂಡೇಗೌಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನದ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಅ. 17 ರಿಂದ 29 ರವರೆಗೆ ಒಟ್ಟು 13 ದಿನಗಳ ಕಾಲ ನಡೆಯಲಿದೆ. ಜಾತ್ರಾ...

  • ಅರಸೀಕೆರೆ: ನಗರದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ರಸ್ತೆಗಳಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಭಯಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ...

  • ಹಾಸನ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಗಿರಿಜನರ ಉಪ ಯೋಜನೆ (ಎಸ್‌ಸಿಪಿ - ಟಿಎಸ್‌ಪಿ) ಗೆ ಮೀಸಲಿರಿಸಿರುವ 39,444 ಕೋಟಿ ರೂ. ಮೊತ್ತದಲ್ಲಿ ಒಂದು ಸಾವಿರ ಕೋಟಿ ರೂ. ಹೆಚ್ಚು...

  • ಹಾಸನ: ಒಂದು ಸಮಾಜದ ಅಧಿಕಾರಿಗಳನ್ನೇ ಗುರಿಯಾಗಿಟ್ಟುಕೊಂಡು ರಾಜ್ಯ ಸರ್ಕಾರ ವರ್ಗಾವಣೆ ಮಾಡುತ್ತಿದೆ. ಅತಿವೃಷ್ಟಿ, ಪ್ರವಾಹ ಸಂತ್ರಸ್ತರಿಗೆ ನೆರವು ನೀಡುವುದನ್ನು...

  • ಸಕಲೇಶಪುರ: ಪಟ್ಟದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಇದರಿಂದ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳು...

ಹೊಸ ಸೇರ್ಪಡೆ