ಹಾಸನಾಂಬ ಜಾತ್ರಾ ಮಹೋತ್ಸವ ಸಂಪನ್ನ

Team Udayavani, Oct 30, 2019, 3:00 AM IST

ಹಾಸನ: ಕಳೆದ 12 ದಿನಗಳಿಂದ ನಡೆದ ಹಾಸನದ ಅಧಿ ದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಮಂಗಳವಾರ ಸಂಪನ್ನಗೊಂಡಿತು. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ 1.16ಗಂಟೆಗೆ ದೇವಾಲಯದ ಬಾಗಿಲನ್ನು ಮುಚ್ಚಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಆರ್‌.ಗಿರೀಶ್‌, ದೇವಾಲಯದ ಆಡಳಿತಾಧಿಕಾರಿ ಎಚ್‌.ಎಲ್‌.ನಾಗರಾಜ್‌ ಅವರ ಸಮ್ಮುಖದಲ್ಲಿ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು, ದೇವಾಲಯದ ಬಾಗಿಲು ಮುಚ್ಚುವ ಧಾರ್ಮಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ನಂತರ ದೇವಾಲಯದ ಬಾಗಿಲು ಮುಚ್ಚಿ ಬೀಗ ಮುದ್ರೆ ಹಾಕಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸ್ಥಳೀಯ ಶಾಸಕ ಪ್ರೀತಂ ಜೆ.ಗೌಡ, ವಿಧಾನ ಪರಿಷತ್‌ ಸದಸ್ಯ ಎಂ.ಎ.ಗೋಪಾಲಸ್ವಾಮಿ, ತಿಪಟೂರು ಶಾಸಕ ನಾಗೇಶ್‌, ಜಿಲ್ಲಾಧಿಕಾರಿ ಆರ್‌. ಗಿರೀಶ್‌, ಜಿಲ್ಲಾ ರಕ್ಷಣಾಧಿಕಾರಿ ರಾಮ್‌ ನಿವಾಸ್‌ ಸೆಪಟ್‌, ಎಎಸ್ಪಿ ಬಿ.ಎನ್‌. ನಂದಿನಿ, ಜಿಪಂ ಸಿಇಒ ಬಿ.ಎ.ಪರಮೇಶ್‌, ಹಾಸನ ಉಪ ವಿಭಾಗಾಧಿಕಾರಿ ನವೀನ್‌ ಭಟ್‌, ತಹಶೀಲ್ದಾರ್‌ ಮೇಘನಾ ಮತ್ತಿತರರು ಹಾಜರಿದ್ದರು.

ಅ.17ರಿಂದ ದರ್ಶನ ಆರಂಭ: ಅ.17ರಿಂದ ಹಾಸನಾಂಬೆ ದೇಗುಲದ ಬಾಗಿಲು ತೆರೆದು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಾಗಿಲು ತೆರೆದ ಪ್ರಥಮ ದಿನ ಅಧಿಕೃತವಾಗಿ ಸಾರ್ವಜನಿಕರಿಗೆ ದೇವಿಯ ದರ್ಶನವಿಲ್ಲವೆಂದು ಜಿಲ್ಲಾಡಳಿತ ಘೋಷಣೆ ಮಾಡಿದ್ದರೂ ಅಂದಿನಿಂದಲೇ ಭಕ್ತರು ದೇವಿಯ ದರ್ಶನ ಪಡೆದು. ಹಾಗೆಯೇ ಕೊನೆಯ ದಿನವೂ ಕೆಲವು ಭಕ್ತರು ದೇವಿಯ ದರ್ಶನಕ್ಕೆ ಕಾದು ನಿಂತಿದ್ದರು. ದರ್ಶನಕ್ಕೆ ಬಿಡುವುದಿಲ್ಲ ಎಂಬ ಸೂಚನೆ ಅರಿತ ಭಕ್ತರು ಘೋಷಣೆ ಕೂಗಲಾರಂಭಿಸಿದರು.

ಆನಂತರ ಬಾಗಿಲು ಮಚ್ಚುವ ಎರಡು ಗಂಟೆಗಳಿರುವವರೆಗೂ ಅಂದರೆ 11 ಗಂಟೆವರೆಗೂ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಆನಂತರ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ಅರಂಭಿಸಲಾಯಿತು. ಮೊದಲಿಗೆ ದೇವಿಯ ಆಭರಣಗಳನ್ನು ತೆಗೆದು ಅವುಗಳನ್ನು ಜಿಲ್ಲಾ ಖಜಾನೆಗೆ ರವಾನಿಸಲಾಯಿತು, ದೇವಿಯ ಅಭರಣಗಳನ್ನು ಸಾಗಿಸುವಾಗ ಅಭರಣಗಳ ಗಂಟಿನ ಮೇಲೆ ಎರಚಿದ ಕಾಳು ಮೆಣಸುಗಳನ್ನು ಭಕ್ತರು ಪ್ರಸಾದವೆಂದು ಭಾವಿಸಿ ಸಂಗ್ರಹಿಸಿದರು.

ಹಾಸನಾಂಬೆ ದರ್ಶನೋತ್ಸವ ಯಶಸ್ವಿ: ದೇವಾಲಯದ ಬಾಗಿಲು ಮಚ್ಚಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಯಾವುದೇ ಅಡಚಣೆಗಳಿಲ್ಲದೆ ಹಾಸನಾಂಬೆಯ ದರ್ಶನೋತ್ಸವ ಸುಸೂತ್ರವಾಗಿ ಪೂರ್ಣಗೊಂಡಿದೆ. ಒಟ್ಟು 11 ದಿನಗಳ ಕಾಲ ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಾರೆ. ಹಾಸನಾಂಬ ಜಾತ್ರಾ ಮಹೋತ್ಸವ ಯಶಸ್ವಿಯಾಗಿದೆ.

ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು ಮುಂದಿನ ವರ್ಷವೂ ಇದೇ ರೀತಿ ಉತ್ತಮ ಮಳೆ, ಬೆಳೆಯಾಗಲಿ, ಹಾಸನಾಂಬೆಯು ಸರ್ವರಿಗೂ ಒಳಿತು ಮಾಡಲಿ ಪ್ರಾರ್ಥಿಸಿದರು. ಭಕ್ತಾದಿಗಳು ಸುಲಲಿತವಾಗಿ ಹಾಸನಾಂಬ ದೇವಿಯ ದರ್ಶನ ಮಾಡಲು ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆಗಳನ್ನು ಮಾಡಿ ಸಹಕರಿಸಿದ ಜಿಲ್ಲಾಡಳಿತಕ್ಕೆ, ಪೊಲೀಸ್‌ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ಸಾವಧಾನವಾಗಿ ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದ ಭಕ್ತರನ್ನು ಸಚಿವರ ಅಭಿನಂದಿಸಿದರು.

ಈ ವರೆಗೆ 1.6 ಕೋಟಿ ರೂ. ಆದಾಯ: ಜಿಲ್ಲಾಧಿಕಾರಿ ಆರ್‌ ಗಿರೀಶ್‌ ಮಾತನಾಡಿ, ಹಾಸನಾಂಬೆಯ ದರ್ಶನ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವವು ಸಚಿವರ ಮಾರ್ಗದರ್ಶನದಂತೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ದೇವಿಯ ನೇರ ದರ್ಶನಕ್ಕೆ ನಿಗದಿಪಡಿಸಿದ್ದ 300 ರೂ. ಹಾಗೂ 1000 ರೂ. ಟಿಕೆಟ್‌ ಮಾರಾಟ ಹಾಗೂ ಪ್ರಸಾದದ ಲಾಡು ಮಾರಾಟದಿಂದ ಸುಮಾರು 1.6 ಕೋಟಿ ರೂ. ಸಂಗ್ರಹವಾಗಿದೆ. ಈ ವರ್ಷ 3 ರಿಂದ 4 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿರುವ ಅಂದಾಜಿದೆ ಎಂದು ಹೇಳಿದರು.

ಇಂದು ಹುಂಡಿ ಎಣಿಕೆ: ದೇವಸ್ಥಾನದ ಹುಂಡಿಗಳನ್ನು ಬುಧವಾರ(ಅ.30) ಎಣಿಕೆ ಮಾಡಲಾಗುವುದು. ಆನಂತರವಷ್ಟೇ ಈ ವರ್ಷ ಹಾಸನಾಂಬ ದೇಗುಲಕ್ಕೆ ಬಂದಿರುವ ಆದಾಯದ ಮಾಹಿತಿ ಸಿಗಲಿದೆ ಎಂದ ಅವರು, ಹಾಸನಾಂಬ ದೇಗುಲದ ಬಾಗಿಲು ತೆರೆದ ದಿನದಿಂದ ದೇವಾಲಯದ ಬಾಗಿಲು ಮಚ್ಚುವ ದಿನದವರೆಗೂ ಭಕ್ತರು, ಅಧಿಕಾರಿಗಳು, ಸಿಬ್ಬಂದಿ ಸಹಕಾರ ನೀಡಿದ್ದಾರೆ. ವಿಶೇಷವಾಗಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳು ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ಶ್ರೀ ಸಿದ್ದೇಶ್ವರ ಸ್ವಾಮಿ ರಥೋತ್ಸವ: ಹಾಸನಾಂಬ ದೇವಾಲಯದ ಬಾಗಿಲು ಮಚ್ಚುವ ಮುನ್ನಾದಿನ ಸೋಮವಾರ ರಾತ್ರಿ ಶ್ರೀ ಸಿದ್ದೇಶ್ವರ ಸ್ವಾಮಿ ಚಂದ್ರಮಂಡಲ ರಥೋತ್ಸವ ನೆರವೇರಿತು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ರಥೋತ್ಸವು ಮಂಗಳವಾರ ಮುಂಜಾನೆ ಹಾಸನಾಂಬಾ ದೇವಾಲಯದ ಆವರಣಕ್ಕೆ ಆಗಮಿಸಿತು. ಆ ಸಂದರ್ಭಲ್ಲಿ ನಡೆದ ಕೆಂಡೋತ್ಸವದದಲ್ಲಿ ಭಕ್ತರು ಕೆಂಡೋತ್ಸವ ಹಾದು ಭಕ್ತಭಾವ ಮೆರೆದರು. ಸಪ್ತ ಮಾತೃಕೆಯರ ಪ್ರತಿ ರೂಪವಾದ ಹಾಸನಾಂಬೆಯು ಸಹೋದರ ಸಿದ್ದೇಶ್ವರ ಸ್ವಾಮಿಯನ್ನು ವರ್ಷಕ್ಕೊಮ್ಮೆ ಭೇಟಿಯಾಗುವ ಸಂದರ್ಭವೇ ಕೆಂಡೋತ್ಸವ ಎಂಬ ನಂಬಿಕೆ ಇದೆ. ಭಕ್ತರು ಕೆಂಡೋತ್ಸವದಲ್ಲಿ ಭಕ್ತಿ ಪರವಶರಾಗಿ ಪಾಲ್ಗೊಳ್ಳುತ್ತಾರೆ.

2020 ರ ನವೆಂಬರ್‌ 5 ರಿಂದ ದರ್ಶನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆಯ ದರ್ಶನಕ್ಕೆ ಭಕ್ತರು ಮುಂದಿನ ವರ್ಷ ನವೆಂಬರ್‌ 5 ರ ವರೆಗೂ ಕಾಯಬೇಕು. 2010ರ ನವೆಂಬರ್‌ 5 ರಿಂದ 17 ರ ವರೆಗೆ ಅಂದರೆ ಮುಂದಿನ ವರ್ಷ 14 ದಿನ ಹಾಸನಾಂಬೆಯ ದರ್ಶನ ಭಕ್ತರಿಗೆ ಸಿಗಲಿದೆ. ಮುಂದಿನ ವರ್ಷ ಬಲಿಪಾಡ್ಯಮಿ ಮತ್ತು ಅಮಾವಾಸ್ಯೆ ನ.16 ರಂದು ಬರಲಿದ್ದು, ನ.17 ರಂದು ಹಾಸನಾಂಬೆಯ ಬಾಗಿಲು ಮುಚ್ಚಲಾಗುವುದು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • „ಡಿ.ಎಸ್‌. ಕೊಪ್ಪದ ಸವದತ್ತಿ: ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಹಾಕಲು ಏಕಮುಖೀ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ ಸಾರಿಗೆ ಬಸ್‌ಗಳು...

  • ಜಮಖಂಡಿ: ನಗರದಲ್ಲಿ ಮಾವಾ ಮಾರಾಟ ದಂಧೆ ಜೋರಾಗಿದೆ. ತಂಬಾಕು, ಅಡಿಕೆ ಉಪಯೋಗಿಸಿ ಮನೆಯಲ್ಲಿ ಮಾವಾ ಸಿದ್ಧಗೊಳಿಸಿ ಮಾರಾಟ ಮಾಡುವ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು,...

  • ಬಸವರಾಜ ಹೊಂಗಲ್‌ ಧಾರವಾಡ: ಈ ಜಿಲ್ಲೆ ಸಹಕಾರಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ದೇಶವಷ್ಟೇ ಅಲ್ಲ ಏಷಿಯಾ ಖಂಡವೇ ಸ್ಮರಿಸುತ್ತದೆ. ಇಲ್ಲಿ ಸರ್ಕಾರಕ್ಕೂ ಮೊದಲೇ...

  • ಇಂಧೋರ್: ಭಾರತದ ವೇಗಿಗಳ ಬಿಗು ದಾಳಿಗೆ ನಲುಗಿದ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಮುಶ್ಫಿಕರ್...

  • ಚಿಕ್ಕಮಗಳೂರು: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಸಾಂತ್ವನ ಹೇಳುವುದರೊಂದಿಗೆ ಅವರಿಗೆ ಅಗತ್ಯ ಕಾನೂನಡಿ ನೆರವು, ಚಿಕಿತ್ಸೆ ಹಾಗೂ ಪರಿಹಾರ ಕಲ್ಪಿಸಲು...