4 ವರ್ಷದ ಬಳಿಕ ಕೃಷಿಗೆ ಹರಿದ ಹೇಮೆ ನೀರು
Team Udayavani, Oct 10, 2019, 3:00 AM IST
ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ, ಕಸಬಾ ಹಾಗೂ ದಂಡಿಗನಹಳ್ಳಿ ಹೋಬಳಿಯ ಹೊಲ, ಗದ್ದೆಗೆ ಹೇಮಾವತಿ ನೀರು ಹರಿಯುತ್ತಿರುವುದರಿಂದ ರೈತರು ಲಾಭದ ಸಂಭ್ರಮದಲ್ಲಿದ್ದಾರೆ. ಕಳೆದ 4 ವರ್ಷದಿಂದ ಬರಗಾಲವಿದ್ದು ಹೇಮಾವತಿ ಅಣೆಕಟ್ಟೆ ನೀರನ್ನು ಕೃಷಿಗೆ ಬಳಸದಂತೆ ನೀರಾವರಿ ಇಲಾಖೆ ಕಟ್ಟು ನಿಟ್ಟಿನ ಆದೇಶ ಜಾರಿಗೆ ಮಾಡಿತ್ತು. ಅಲ್ಲದೇ, ಕೇವಲ ಜನ ಹಾಗೂ ಜಾನುವಾರುಗಳಿಗೆ ಕುಡಿಯಲು ಮಾತ್ರ ಬಳಸಬೇಕಿತ್ತು.
ಆದರೆ ಪ್ರಸಕ್ತ ವರ್ಷ ವರುಣ ತಡವಾಗಿ ಆಗಮಿಸಿದರೂ ಒಂದು ವಾರದಲ್ಲಿ ಹೇಮಾವತಿ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿ ಒಂದು ಲಕ್ಷ ಕ್ಯುಸೆಕ್ ನೀರನ್ನು ಅಣೆಕಟ್ಟೆಯಿಂದ ನದಿಗೆ ಹರಿದು ಬಿಡಲಾಗಿದೆ. ಪರಿಣಾಮ ನದಿ ತೀರದ ಊರುಗಳು ಹಾಗೂ ಕೃಷಿ ಭೂಮಿ ನೆರೆಗೆ ತುತ್ತಾಗುವಂತಾಯಿತು.
ಪೂರ್ವ ಮುಂಗಾರು ಕೈ ಕೊಟ್ಟಾಗ ತಾಲೂಕಿನಲ್ಲಿ ಬರಗಾಲ ಆವರಿಸಲಿದೆ ಎಂದುಕೊಂಡಿದ್ದ ಜನರೀಗ ಹರ್ಷಚಿತ್ತರಾಗಿದ್ದಾರೆ. ಉತ್ತಮ ಮಳೆಯಿಂದ ಹೇಮಾವತಿ ಅಣೆಕಟ್ಟೆ ತುಂಬಿರುವುದರಿಂದ ಎಡದಂಡೆ ನಾಲೆ ಭಾಗದಲ್ಲಿ ಕೃಷಿ ಚಟುವಟಿಕೆಗೆ ಬಳಸಲು ನೀರಾವರಿ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಮುಖ್ಯ ನಾಲೆಯಿಂದ ಗ್ರಾಮೀಣ ಭಾಗದಲ್ಲಿನ ಸಣ್ಣ ನಾಲೆಗಳಲ್ಲಿ ಝುಳು ಝುಳು ನಿನಾದ ಕೇಳಿ ಬರುತ್ತಿದ್ದು ಮಲೆನಾಡನ್ನು ನಾಚಿಸುವ ಮಟ್ಟಿಗೆ ಅರೆ ಮಲೆನಾಡಿನಲ್ಲಿ ಹಸಿರು ಕಂಗೊಳಿಸುತ್ತಿದೆ.
ನೀರಾವರಿ ಕೃಷಿ ಭೂಮಿ: ಹೇಮಾವತಿ ಎಡದಂಡೆ ನಾಲೆ ಹಾದುಹೋಗುವ ಪ್ರದೇಶದಲ್ಲಿ ಶ್ರವಣಬೆಳಗೊಳ, ದಂಡಿಗನಹಳ್ಳಿ ಹಾಗೂ ಕಸಬಾ ಹೋಬಳಿಯಿಂದ ಸುಮಾರು 19400 ಎಕರೆ ಅಚ್ಚುಕಟ್ಟು ಪ್ರದೇಶವಿದ್ದರೆ, ಶ್ರೀರಾಮದೇವರ ನಾಲೆ ಹಾದು ಹೋಗಿರುವ ದಂಡಿಗನಹಳ್ಳಿ ಹೋಬಳಿ ಹಾಗೂ ಮಂಡ್ಯ ಜಿಲ್ಲೆ ಕಿಕ್ಕೇರಿ ಹೋಬಳಿ ಭಾಗದಲ್ಲಿ 6700 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರಸಕ್ತ ವರ್ಷ ರೈತರು ಭತ್ತ ನಾಟಿ ಮಾಡಿದ್ದಾರೆ.
ಏತನೀರಾವರಿ ಭಾಗದಲ್ಲಿಯೂ ಕೃಷಿ ಆರಂಭ: ಹೇಮಾವತಿ ನಾಲೆಯಿುಂದ ಬಾಗೂರು ಹಾಗೂ ಓಬಳಾಪುರ ಏತನೀರಾವರಿ ಯೋಜನೆಯಿಂದ 58 ಕ್ಯೂಸೆಕ್ ನೀರು ಹರಿದು ಸುಮಾರು 5 ಸಾವಿರ ಎಕರೆ ಕೃಷಿಭೂಮಿಗೆ ಅನುಕೂಲವಾಗಿದೆ. ಕಾರೇಹಳ್ಳಿ ಏತನೀರಾವರಿಯಿಂದ 58 ಕ್ಯೂಸೆಕ್ ನೀರು ಹರಿದು 5 ಸಾವಿರ ಕೃಷಿ ಭೂಮಿಗೆ ನೀರು ಒದಗಿಸಲಾಗುತ್ತಿದ್ದು ಆ ಭಾಗದ ರೈತರು ನಾಲ್ಕು ವರ್ಷದ ನಂತರ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.
ನುಗ್ಗೇಹಳ್ಳಿ ಏತನೀರಾವರಿಗೆ ಚಾಲನೆ: ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅಂದಿನ ಶಾಸಕ ಸಿ.ಎಸ್.ಪುಟ್ಟೇಗೌಡರ ಶ್ರಮದಿಂದ ನುಗ್ಗೇಹಳ್ಳಿ ಏತನೀರಾವರಿ ಚಾಲನೆ ನೀಡಲಾಯಿತು. ಹಲವು ಎಡರು ತೊಡರುಗಳ ನಡುವೆ ಕುಟುಂತಾ ಸಾಗಿದ್ದ ಕಾಮಗಾರಿ ಯಡಿಯೂರಪ್ಪ ಮುಖ್ಯ ಮಂತ್ರಿಯಾದಾಗ ಪೂರ್ಣಗೊಂಡಿದ್ದು ನುಗ್ಗೇಹಳ್ಳಿ ಏತನೀರಾವರಿಯಿಂದ 33 ಕ್ಯೂಸೆಕ್ ನೀರು ಹೇಮಾವತಿ ನಾಲೆಯಿಂದ ನುಗ್ಗೇಹಳ್ಳಿ ಹೋಬಳಿ 36 ಕೆರೆಗಳಿಗೆ ಹರಿಯಲು ಈಗಾಗಲೇ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ.
ತುಮಕೂರು-ಮಂಡ್ಯ ಜಿಲ್ಲೆಗೆ ಹೇಮಾವತಿ: ಹೇಮಾವತಿ ಅಣೆಕಟ್ಟೆ ಹೊಂದಿರುವ ಹಾಸನ ಜಿಲ್ಲೆಗೆ ಹೋಲಿಸಿದರೆ ತುಮಕೂರು ಹಾಗೂ ಮಂಡ್ಯ ಜಿಲ್ಲೆಗೆ ಹೆಚ್ಚು ಉಪಯೋಗವಾಗುತ್ತಿದೆ. ಆ. 9 ರಿಂದ ಹೇಮಾವತಿ ಎಡದಂಡೆ ನಾಲೆಯಲ್ಲಿ ನಿತ್ಯ ನೀರು ಹರಿಯುತ್ತಿದ್ದು ತುಮಕೂರಿಗೆ 2069 ಕ್ಯೂಸೆಕ್, ಮಂಡ್ಯಕ್ಕೆ 1041 ನೀರು ನಿರಂತರವಾಗಿ ಹರಿಯುತ್ತಿದೆ. ಡಿಸೆಂಬರ್ ಅಂತ್ಯದವರೆಗೆ ನಿತ್ಯವೂ 3110 ಕ್ಯೂಸೆಕ್ ನೀರು ಈ ಎರಡು ಜಿಲ್ಲೆಗೆ ಹರಿಯುವ ಮೂಲಕ ಹಾಸನಕ್ಕಿಂತ ಮಂಡ್ಯ -ತುಮಕೂರು ಜಿಲ್ಲೆಗೆ ಹೆಚ್ಚು ಹೇಮಾವತಿ ಹರಿಯಲಿದ್ದಾಳೆ.
ತೆಂಗಿನ ತೋಟಗಳಲ್ಲಿ ನಿಂತ ನೀರು: 4 ವರ್ಷದಿಂದ ಸೂರ್ಯನ ತಾಪಕ್ಕೆ ಕಾದ ಕಾವಲಿಯಂತಾಗಿದ್ದ ಗದ್ದೆಗಳು ಈತ ತಂಪಾಗಿವೆ. ಬಾಗೂರು ಹೋಬಳಿಯಲ್ಲಿ ಕಾರೇಹಳ್ಳಿ, ಓಬಳಾಪುರ ಗ್ರಾಮದಲ್ಲಿ ಹೇಮಾವತಿ ನಾಲೆಯಿಂದ ಏತನೀರಾವರಿ ಯಂತ್ರಗಳು ಹಗಲಿರುಳು ಚಾಲನೆಯಲ್ಲಿವೆ. ಆ ಭಾಗದ ಕೆರೆ ಕಟ್ಟೆ ತುಂಬಿದ್ದು ಅಂತರ್ಜಲ ವೃದ್ಧಿಯಾಗಿದೆ. ಇನ್ನು ಬಾಗೂರು ಕೆರೆ ಸಂಪೂರ್ಣ ಭರ್ತಿಯಾಗಿದ್ದು ಕೆರೆ ಕೋಡಿಯಲ್ಲಿ ನೀರು ಹೊರಕ್ಕೆ ಹರಿಯುತ್ತಿದೆ. ಇದರಿಂದ ಕುರುವಂಕ ಗ್ರಾಮದ ಕೆರೆಯೂ ಭರ್ತಿಯಾಗುವ ಲಕ್ಷಣ ಕಾಣುತ್ತಿವೆ.
ಹಲವು ವರ್ಷದಿಂದ ಸ್ಥಗಿತವಾಗಿದ್ದ ಅನೇಕ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿರುವುದರಿಂದ ರೈತರು ಹರ್ಷರಾಗಿದ್ದಾರೆ. ಕೆಳೆದ ಒಂದು ತಿಂಗಳಿನಿಂದ ವಿಪರೀತ ಮಳೆಯಿಂದ ತೆಂಗಿನ ತೋಟದಲ್ಲಿ ನೀರು ನಿಂತಿರುವ ಪರಿಣಾಮ ರೈತರು ಕೊಳವೆ ಬಾವಿಯ ನೀರನ್ನು ಬಳಕೆ ಮಾಡುತ್ತಿಲ್ಲ, ನಾಲೆ ಭಾಗ ಹೊರತು ಪಡಿಸಿ ಕೊಳವೆ ಬಾವಿ ನೀರನ್ನು ನಂಬಿ ಬಾಳೆ, ತರಕಾರಿ, ಮೆಕ್ಕೆಜೋಳ, ರಾಗಿ ಪೈರು ಮಾಡಿದ್ದಾರೆ. ಏತನೀರಾವರಿ ಭಾಗದ ಗ್ರಾಮಗಳಲ್ಲಿ ಈ ಭಾರಿ ಉತ್ತಮ ಬೆಳೆ ರೈತರ ಕೈ ಸೇರುವ ಲಕ್ಷಣಗಳು ಕಾಣುತ್ತಿವೆ.
4 ವರ್ಷದಿಂದ ಬೇಸಾಯ ಮಾಡಲು ನೀರು ನೀಡಿರಲಿಲ್ಲ. ಪ್ರಸಕ್ತ ವರ್ಷ ಉತ್ತಮವಾಗಿ ಮಳೆ ಆಗಿರುವುದರಿಂದ ಕೃಷಿ ಚಟುವಟಿಕೆಗೆ ಹೇಮಾವತಿ ಅಣೆಕಟ್ಟೆ ನೀರು ನೀಡಲಾಗುತ್ತಿದೆ.
-ರಂಗೇಗೌಡ ತಾಂತ್ರಿಕ ವಿಭಾಗ, ಕಾವೇರಿ ನೀರಾವರಿ ನಿಗಮ
4 ವರ್ಷದ ನಂತರ ವ್ಯವಸಾಯ ಮಾಡಲು ಹೇಮಾವತಿ ನಾಲೆಯಿಂದ ನೀರು ನೀಡಿರುವುದು ಬಹಳ ಸಂತೋಷ ತಂದಿದೆ. ಈ ಬಾರಿ ಬಿಡುವಿಲ್ಲದೆ ಕಳೆದ 3 ತಿಂಗಳಿನಿಂದ ಶ್ರಮವಹಿಸಿ ವ್ಯವಸಾಯ ಕಾರ್ಯದಲ್ಲಿ ತೊಡಗಿದ್ದೇವೆ.
-ಪುನೀತ್, ಚಿಕ್ಕಬಿಳತಿ ಗ್ರಾಮ ರೈತ
* ಶಾಮಸುಂದರ್ ಕೆ.ಅಣ್ಣೇನಹಳ್ಳಿ