ಮಲೆನಾಡಲ್ಲಿ ಕೈಕೊಟ್ಟ ಮುಂಗಾರು: ಬಿತ್ತನೆಗೆ ತೀವ್ರ ಹಿನ್ನಡೆ

ಜೂನ್‌ನಲ್ಲಿ ವಾಡಿಕೆ ಮಳೆಯಾದರೂ ವ್ಯಾಪಕವಾಗಿ ಆಗಲಿಲ್ಲ; ಈವರೆಗೆ ಒಟ್ಟು ಶೇ. 21 ಮಳೆಯ ಕೊರತೆಯಿಂದ ರೈತರು ಕಂಗಾಲು

Team Udayavani, Jun 26, 2019, 12:04 PM IST

ಮಳೆ ಕೊರತೆಯಿಂದಾಗಿ ಹೇಮಾವತಿ ಡ್ಯಾಂನಲ್ಲಿ ಬಹುತೇಕ ಖಾಲಿಯಾಗಿದೆ.

ಹಾಸನ: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟದಿಂದ ಪ್ರವಾಹ ಸೃಷ್ಟಿಯಾಗಿದ್ದರೆ, ಇತ್ತ ಹಾಸನ ಸೇರಿದಂತೆ ಮಲೆನಾಡು ಪ್ರದೇಶದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು, ಬರದ ಛಾಯೆ ಆವರಿಸಿದೆ. ಆರಿದ್ರಾ ಮಳೆ ವ್ಯಾಪಕವಾಗಿ ಸುರಿಯಬೇಕಾಗಿತ್ತು. ಆದರೆ ಬಿಸಿಲಿನ ವಾತಾವರಣದಿಂದ ರೈತರು ಕಂಗೆಟ್ಟಿದ್ದಾರೆ.

ಪೂರ್ವ ಮುಂಗಾರು ಶೇ. 45 ಕೊರತೆ: ಪೂರ್ವ ಮುಂಗಾರು ಮಳೆ ಶೇ.45 ರಷ್ಟು ಕೊರತೆಯಾಗಿದ್ದು, ಬಿತ್ತನೆ ಚಟುವಟಿಕೆಗಳು ಆರಂಭವಾಗಲೇ ಇಲ್ಲ. ಮುಂಗಾರು ಮಳೆ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಮಳೆಯ ಕೊರತೆ ನೀಗಿಲ್ಲ. ಈ ವೇಳೆಗಾಗಲೇ ಜಡಿಮಳೆ, ಚುಮು,ಚುಮು ಚಳಿಯ ವಾತಾವರಣ ಸೃಷ್ಟಿಯಾಗ ಬೇಕಾಗಿತ್ತು. ಆದರೆ ಈಗಲೂ ಬೇಸಿಗೆ ಯಂತಹ ಬಿರು ಬಿಸಿಲಿನ ವಾತಾವರಣ ಕಂಡು ಬರುತ್ತಿದ್ದು, ಬೆಳೆ ಇರಲಿ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಬಹು ದೇನೋ ಎಂಬ ಆತಂಕ ಎದುರಾಗಿದೆ.

ಕೃಷಿ ಚಟುವಟಿಕೆ ಸ್ಥಗಿತ: ಜೂನ್‌ ತಿಂಗಳಲ್ಲಿ ವಾಡಿಕೆಯಷ್ಟು ಜಿಲ್ಲೆಯಲ್ಲಿ ಮಳೆಯಾಗಿ ದ್ದರೂ ಅಲ್ಲಲ್ಲಿ ಚದುರಿದಂತೆ ಮಳೆಯಾಗಿ ರುವುದರಿಂದ ಬಿತ್ತನೆ ಚಟುವಟಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ಆರಂಭವಾಗಿಲ್ಲ. ಮಲೆನಾಡಿನಲ್ಲಂತೂ ಮಳೆಯ ಕೊರತೆ ಯಿಂದ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತ ಗೊಂಡಿದ್ದು, ಬಿತ್ತನೆ ಶೂನ್ಯವಾಗಿದೆ. ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಯ ಕೊರತೆಯಿಂದಾಗಿ ಬೆಳೆಗಳ ಬಿತ್ತನೆ ಕೇವಲ ಶೇ.21 ರಷ್ಟಾಗಿದೆ.

 

ಮಲೆನಾಡು ಪ್ರದೇಶ ಸಕಲೇಶಪುರ ತಾಲೂಕಿನಲ್ಲಿ ಜೂನ್‌ ಕೊನೆಯ ವಾರದವರೆಗೂ ಮಳೆಯ ಕೊರತೆ ಶೇ.45 ರಷ್ಟಿದ್ದರೆ, ಅರೆ ಮಲೆನಾಡು ಪ್ರದೇಶಗಳಾದ ಆಳೂರು ತಾಲೂಕಿನಲ್ಲಿ ಶೇ. 28 ರಷ್ಟು, ಬೇಲೂರು ತಾಲೂಕಿನಲ್ಲಿ ಶೇ.29 ಅರಕಲಗೂಡು ತಾಲೂಕಿನಲ್ಲಿ ಶೇ.18ರಷ್ಟು ಮಳೆಯ ಕೊರತೆ ಉಂಟಾಗಿದೆ.

ವಾಡಿಕೆಗಿಂತ ಕಡಿಮೆ ಬಿತ್ತನೆ: ಜಿಲ್ಲೆಯಲ್ಲಿ ಈವರೆಗೆ 2,50,955 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆಯಾಗಬೇಕಾಗಿತ್ತು. ಆದರೆ ಕೇವಲ 52,923 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಯಾಗಿ ಶೇ. 21ರಷ್ಟು ಮಾತ್ರ ಸಾಧನೆ ಯಾಗಿದೆ. ಮಳೆಯಾಶ್ರಿತ ಬೆಳೆಗಳು 2,18,405 ಹೆಕ್ಟೇರ್‌ ಬಿತ್ತನೆ ಗುರಿಗೆ 50,913 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದರೆ, ನಿರಾವರಿ ಆಶ್ರಿತ ಬೆಳೆಗಳು 32,550 ಹೆಕ್ಟೇರ್‌ಗೆ ಬದ ಲಾಗಿ ಕೇವಲ 2,010 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿವೆ.

ಏಕದಳ ಧಾನ್ಯಗಳ ಬಿತ್ತನೆ ಗುರಿ 1,95,450 ಹೆಕ್ಟೇರ್‌ ಬಿತ್ತನೆ ಗುರಿಯಿದ್ದರೂ ಸಾಧನೆಯಾಗಿರುವುದು 35,621 ಹೆಕ್ಟೇರ್‌ ಮಾತ್ರ. ದ್ವಿದಳ ಧಾನ್ಯಗಳ ಬಿತ್ತನೆ ಗುರಿ 35,005 ಹೆಕ್ಟೇರ್‌ಗೆ ಬದಲಾಗಿ 58084 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿವೆ. ಎಣ್ಣೆಕಾಳುಗಳು ಬಿತ್ತನೆ ಗುರಿ 5950 ಹೆಕ್ಟೇರ್‌ಗೆ ಬದಲಾಗಿ ಕೇವಲ 458 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಗುರಿ ಮೀರಿ ಬಿತ್ತನೆ ಯಾಗುತ್ತಿದ್ದ ಮೆಕ್ಕೆ ಜೋಳವೂ ಈ ವರ್ಷ 79,900 ಹೆಕ್ಟೇರ್‌ ಗುರಿಗೆ ಬದಲಾಗಿ 34,195 ಹೆಕ್ಟೇರ್‌ನಲ್ಲಿ ಮಾತ್ರ ಅಂದರೆ ಶೇ.33 ಕ್ಕಿಂತ ಕಡಿಮೆ ಬಿತ್ತನೆಯಾಗಿದೆ.

 

● ಎನ್‌. ನಂಜುಂಡೇಗೌಡ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ