ಮಹಿಳಾ ಆರೋಗ್ಯ ಸಹಾಯಕಿಯರ ಮೇಲೆ ಒತ್ತಡ ಹೆಚ್ಚಳ: ವಿಷಾದ

Team Udayavani, Jul 6, 2019, 3:00 AM IST

ಹೊಳೆನರಸೀಪುರ: ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಕೆಲಸಗಳ ಒತ್ತಡ ಜಾಸ್ತಿಯಾಗಿದೆ ಎಂದು ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಸಂಘದ ರಾಜ್ಯಾಧ್ಯಕ್ಷೆ ಸುಧಾಬಾಯಿ ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕು ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಹಾಗೂ ನಿವೃತ್ತರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಆಯುಕ್ತರಿಗೆ ಮನವಿ: ಸಾಂಕ್ರಾಮಿಕ ರೋಗಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪುರುಷ ಆರೋಗ್ಯ ಕಾರ್ಯಕರ್ತರಿಗೂ ಹಾಗೂ ತಾಯಿ ಮತ್ತು ಮಕ್ಕಳ ಆರೋಗ್ಯ ಹಾಗೂ ಆರ್‌.ಸಿ.ಎಚ್‌. ಕಾರ್ಯಕ್ರಮಗಳನ್ನು ಮಹಿಳಾ ಆರೋಗ್ಯ ಕಾರ್ಯಕರ್ತರಿಗೂ ವಹಿಸುವುದರೊಂದಿಗೆ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿಮಾಡಬೇಕು.

ಮಹಿಳಾ ನೌಕರರ ಕೆಲಸದ ಒತ್ತಡ ಕಡಿಮೆ ಮಾಡಲು ಕೇಂದ್ರ ಸಂಘದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಮತ್ತು ಆಯುಕ್ತರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಇಲಾಖೆಯ ಮೇಲ್ಮಟ್ಟದ ಅಧಿಕಾರಿಗಳು ಸ್ಪಂದಿಸಿದ್ದಾರೆಂದು ತಿಳಿಸಿದರು.

ಸಕಾಲಕ್ಕೆ ವೇತನ ವಿಳಂಬ, ಬಡ್ತಿ, ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮತ್ತು ಇನ್ನಿತರೆ ಬೇಡಿಕೆಗಳ ಬಗ್ಗೆ ಚರ್ಚಿಸಲಾಗಿದ್ದು, ನೌಕರರ ವರ್ಗಾವಣೆ ನಂತರ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ಸಹಾಯಕಿ ಎಸ್‌.ಪ್ರೇಮಾ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್‌ ಮಾತನಾಡಿ, ನಮ್ಮ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪ್ರೇಮಾ ಇಲಾಖೆಯಲ್ಲಿನ ಎಲ್ಲಾ ನೌಕರರ ಜೊತೆ ಉತ್ತಮ ಬಾಂಧವ್ಯವನ್ನಿಟ್ಟುಕೊಂಡಿದ್ದರು ಎಂದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಹಿರಿಯ ಆರೋಗ್ಯ ಸಹಾಯಕಿ ಎಸ್‌.ಪ್ರೇಮಾ ಮಾತನಾಡಿ, ಸಹೋದ್ಯೋಗಿಗಳ ಸಹಕಾರದಿಂದಾಗಿ ತಾವು ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾಗಿ ತಿಳಿಸಿದರು.

ಸಂಘದ ಉತ್ತಮ ಕಾರ್ಯ: ಅಧ್ಯಕ್ಷತೆ ವಹಿಸಿದ್ದ ತಾಲೂಕು ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಅಧ್ಯಕ್ಷ ಆರ್‌.ಬಿ.ಪುಟ್ಟೇಗೌಡ ಮಾತನಾಡಿ, ಸಂಘವು ಪಾರದರ್ಶಕವಾಗಿ ನಡೆದುಕೊಂಡು ಹೋಗುತ್ತಿದ್ದು ಇಲಾಖೆಗೆ ಸಂಬಂಧಿಸಿದ ನೌಕರರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸಂಘವು ಸದಾ ಸಿದ್ಧವಿದೆ ಎಂದರು.

ಪ್ರತಿಭಾ ಪುರಸ್ಕಾರ: 2018-19ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಪಟ್ಟಣ ಎಸ್‌ಎಲ್‌ಎನ್‌ ವಿದ್ಯಾ ಮಂದಿರದ ವಿದ್ಯಾರ್ಥಿನಿ ಕುಸುಮಾ ಶೇ. 87.37 ಹಾಗೂ ಆದರ್ಶಶಾಲೆಯ ವಿದ್ಯಾರ್ಥಿನಿ ಕೆ.ಕುಸುಮಾ ಶೇ. 96.64 ಗಳಿಸಿದ್ದು ಇವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸ್ಲಂಬೋರ್ಡ್‌ ಅಂಗನವಾಡಿ ಕಾರ್ಯಕರ್ತೆ ವಿಜಯಕುಮಾರಿ ಅವರನ್ನು ಸಂಘದಿಂದ ಗೌರವಿಸಲಾಯಿತು.

ಸಮಾರಂಭದಲ್ಲಿ ರಾಜ್ಯ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಖಜಾಂಚಿ ಮಾಲಿಂಗಯ್ಯ, ಬೆಂಗಳೂರು ನಗರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಆನಂದ, ಮಂಜು, ತಾಲೂಕು ಸಂಘದ ಗೌರವಾಧ್ಯಕ್ಷ ಎಂ.ಎಸ್‌.ಅನಂತರಾಮು, ಉಪಾಧ್ಯಕ್ಷೆ ಎಚ್‌.ಎಸ್‌.ಪಾರ್ವತಮ್ಮ, ಕಾರ್ಯದರ್ಶಿ ಉಷಾ, ಖಜಾಂಚಿ ಜಿ.ವಿ.ಸ್ವಾಮಿ, ಜಿಲ್ಲಾ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಸಂಘದ ಅಧ್ಯಕ್ಷ ಕೃಷ್ಣಪ್ಪ ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ