ಮಳೆಯಿಂದ ಹಾಳಾದ ಬೆಳೆ: ರೈತರಿಗೆ ಸಂಕಷ್ಟ

Team Udayavani, Nov 17, 2019, 3:00 AM IST

ಸಕಲೇಶಪುರ/ ಆಲೂರು: ಆಲೂರು ತಾಲೂಕಾದ್ಯಂತ ಸುರಿದ ಮಳೆಯಿಂದಾಗಿ ಮೆಕ್ಕೆ ಜೋಳ, ಕಾಫಿ, ಏಲಕ್ಕಿ, ಮೆಣಸು, ಅಡಿಕೆ ಬೆಳೆಗಳು ನಾಶವಾಗುವ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬಾರ ದಂತಾಗಿದ್ದು ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ರೈತರು ಬಹಳಷ್ಟು ತೊಂದರೆ ಅನುಭವಿಸಿದ್ದರು. ಇದರಿಂದ ಚೇತರಿಸಿಕೊಳ್ಳುತ್ತಿದ್ದ ರೈತರಿಗೆ ಅಲ್ಪ ಸ್ವಲ್ಪ ಬೆಳೆ ಕೈಗೆ ಸಿಗುವಂತಿತ್ತು. ಇನ್ನೇನು ಬೆಳೆದ ಬೆಳೆಯನ್ನು ಕಟಾವು ಮಾಡಬೇಕು ಎಂದುಕೊಂಡಿದ್ದಾಗಲೇ ಕಳೆದ ಅಕ್ಟೋಬರ್‌ನಲ್ಲಿ ದಿನನಿತ್ಯ ಸುರಿದ ಅಪಾರ ಮಳೆಯಿಂದಾಗಿ ಬೆಳೆಗಳಿಗೆ ಕಂಟಕ ಎದುರಾಗಿದೆ.

ಮೆಕ್ಕೆ ಜೋಳ ಬೆಳೆಗೆ ಕಾಯಿಲೆ: ಜೋಳಕ್ಕೆ ಕಾಯಿಲೆ ಬಾಧಿಸಿದೆ. ಇದರಿಂದಾಗಿ ಕೈಗೆ ಸಿಗುತ್ತಿದ್ದ ಸ್ವಲ ಬೆಳೆಯೂ ನಾಶವಾಗುವ ಮೂಲಕ ರೈತ ಸಮುದಾಯ ಕಂಗಾಲಾಗಿದೆ.ಜೋಳಕ್ಕೆ ಕಾಯಿಲೆ ಬಾಧಿಸಿದ್ದ ಅಳಿದುಳಿದ ಜೋಳವನ್ನು ಕೀಳಲಾಗಿದೆ. ಆದರೆ ಮಳೆ ಬೀಳುತ್ತಿರುವುದರಿಂದ ಜೋಳವನ್ನು ಒಣಗಿಸಲು ಸಹ ಕಷ್ಟಕರವಾಗಿದೆ. ಮಲೆನಾಡು ಭಾಗಗಳಲ್ಲಂತೂ ಒಂದು ಕಡೆ ಅತಿಯಾದ ಮಳೆ ಮತ್ತೂಂದೆಡೆ ಕಾಡಾನೆಗಳ ಸಮಸ್ಯೆಯಿಂದ ರೈತರು ಕಣ್ಣೀರು ಸುರಿಸುತ್ತಿದ್ದಾರೆ.

ಕಾಫಿ, ಏಲಕ್ಕಿ, ಅಡಿಕೆಗೆ ಮಾರಕವಾದ ಮಳೆ: ಇನ್ನೇನು ಕೈಗೆ ಬರಬೇಕಿದ್ದ ಕಾಫಿ,ಏಲಕ್ಕಿ,ಮೆಣಸು ಬೆಳೆಗಳು ನೆಲಕಚ್ಚಿವೆ. ಕಾಫಿ ಹಣ್ಣುಗಳು, ಏಲಕ್ಕಿ ಬೀಜ, ಅಡಿಕೆ ಕಾಯಿಗಳು ಉದುರುತ್ತಿದ್ದು, ಏನು ಮಾಡಬೇಕು ಎಂದು ತೋಚದೇ ರೈತರು ತಲೆ ಕೈ ಹೊತ್ತು ಕುಳಿತಿದ್ದಾರೆ.

ರೈತರಿಗೆ ಬೆಳೆ ಸಾಲದ ಹೊರೆ: ಒಂದು ಎಕರೆ, ಅರ್ಧ ಎಕರೆ ಮತ್ತು ಅದಕ್ಕಿಂತ ಕೆಳ ಮಟ್ಟದ ಬಡ ರೈತರು ಸಾಲ ಮಾಡಿ ಜೋಳದ ಜೊತೆಗೆ ಸಣ್ಣಪುಟ್ಟ ಬೆಳೆಗಳನ್ನು ಬೆಳೆದಿದ್ದರು. ಈಗ ಆ ಬೆಳೆಗಳು ಕೂಡ ನೆಲಕಚ್ಚುತ್ತಿದ್ದು ಮುಂದೇನೆಂಬ ಆತಂಕ ಆವರಿಸಿದೆ. ಬೆಳೆ ಬೆಳೆಯಲು ತೆಗೆದುಕೊಂಡಿದ್ದ ಸಾಲವನ್ನು ಹೇಗೆ ತೀರಿಸುವುದು ಎಂದು ಚಿಂತಾ ಕ್ರಾಂತರಾಗಿದ್ದಾರೆ. ಒಟ್ಟಾರೆಯಾಗಿ ಈ ವರ್ಷದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಹಳಷ್ಟು ಅವಾಂತರಗಳಾಗಿದ್ದು ಮುಂದೇನು ಗತಿ ಎಂದು ರೈತರು ಚಿಂತಿಸುವಂತಾಗಿದೆ.

ಕಳೆದ ಒಂದು ವಾರದಿಂದ ಮಳೆ ಸ್ವಲ್ಪ ಬಿಟ್ಟಿದ್ದ ಮಳೆ ಇದೀಗ ಕಳೆದ 2 ದಿನಗಳಿಂದ ಮತ್ತೆ ಸುರಿದಿರುವುದು ರೈತರನ್ನು ಆತಂಕಕ್ಕೆ ತಳ್ಳಿದೆ. ಇನ್ನಾದರೂ ಮಳೆ ನಿಂತಲ್ಲಿ ಮಾತ್ರ ಶೇ.30 ರಿಂದ 40 ರಷ್ಟಾದರೂ ಬೆಳೆ ಉಳಿಯುತ್ತದೆ. ಇಲ್ಲದಿದ್ದರೆ ರೈತರು ಸಂಪೂರ್ಣವಾಗಿ ನಷ್ಟ ಅನುಭವಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯವಾಗಿದೆ.

ಆಲೂರು ತಾಲೂಕಿನಲ್ಲಿ ಭತ್ತ, ಜೋಳ, ಕಾಫಿ, ಶುಂಠಿ ಸೇರಿದಂತೆ ಬಹುತೇಕ ಬೆಳೆಗಳಿಗೆ ಅತಿವೃಷ್ಠಿಯಿಂದ ನೇರ ಹಾನಿಯಾಗಿದೆ. ಸರ್ಕಾರ ಕೂಡಲೇ ಇತ್ತ ಗಮನವರಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.
-ಎಚ್‌.ಕೆ. ಕುಮಾರಸ್ವಾಮಿ, ಶಾಸಕ

ಸುರಿದ ಮಳೆಯಿಂದಾಗಿ ಜೋಳ ಬಹುತೇಕ ಉದುರಿ ಹೋಗಿದೆ. ಮುಂದೇನು ಮಾಡುವುದು ಎಂದು ತೋಚುತ್ತಿಲ್ಲ. ಜೋಳ ಬೆಳೆಯಲು ಹಾಕಿದ್ದ ಬಂಡವಾಳ ಹಿಂತಿರುಗುವುದು ಅನುಮಾನವಾಗಿದೆ.
-ಪರಮೇಶ್‌, ರೈತರು

* ಸುಧೀರ್‌ ಎಸ್‌.ಎಲ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ