ಆರ್‌ಸಿಇಪಿ ಒಪ್ಪಂದ: ಲಾಭಕ್ಕಿಂತ ನಷ್ಟವೇ ಹೆಚ್ಚು

Team Udayavani, Nov 5, 2019, 3:00 AM IST

ಅರಸೀಕೆರೆ: ದೇಶದ ಕೃಷಿ, ಹೈನುಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿರುವ ಆರ್‌ಸಿಇಪಿ(ಮುಕ್ತ ವ್ಯಾಪಾರ ) ಒಪ್ಪಂದ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಲಾಭಕ್ಕಿಂತ ಹೆಚ್ಚಿನ ನಷ್ಟಕ್ಕೆ ಕಾರಣವಾಗಲಿದ್ದು, ಕೃಷಿಕರು ತೀವ್ರ ಸಂಕಷ್ಟಗಳಿಗೆ ಒಳಗಾಗುತ್ತಾರೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಕಣಕಟ್ಟೆ ಹೋಬಳಿಯ ಹೊಳಲಕೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಶೇ.70ಕ್ಕೂ ಹೆಚ್ಚಿನ ಜನತೆ ಕೃಷಿ ಮತ್ತು ಅದಕ್ಕೆ ಪೂರಕವಾದ ಹೈನುಗಾರಿಕೆಯ ಮೇಲೆ ಅವಲಂಬಿತರಾಗಿದ್ದಾರೆ. ತಾಲೂಕಿನಲ್ಲಿ ಶೇ.43 ಮಂದಿ ಹೈನುಗಾರಿಕೆ ಮತ್ತು ಪಶು ಸಂಗೋಪನೆ ಮೂಲಕ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕೇಂದ್ರ ಸರಕಾರ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಿದರೆ ದೇಶದ ಅರ್ಧಕ್ಕೂ ಹೆಚ್ಚಿನ ಜನ ಜೀವನದ ಮೇಲೆ ದುಷ್ಪರಿಣಾಮ ಬೀರಲಿದೆ. ಬಡವರ್ಗ ರೈತರು ಹಾಗೂ ಶ್ರಮಿಕ ವರ್ಗಕ್ಕೆ ಕಂಟಕ ಪ್ರಾಯವಾದ ಈ ನೀತಿಗೆ ತಾವು ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದರು.

ರೈತರ ಹಿತ ಕಾಪಾಡಲು ಕ್ರಮ: ತಾಲೂಕಿನ ರೈತರ ಹಿತದೃಷ್ಟಿಯಿಂದ ಕ್ಷೇತ್ರದ ಆಯ್ದ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳನ್ನ ಸ್ಥಾಪಿಸಿ ರೈತರ ಹಿತ ಕಾಯಲಾಗುತ್ತಿದೆ ಎಂದ ಅವರು, ಹಾಲು ಉತ್ಪಾದಕರ ಸಹಕಾರದ ಸಂಘ ಮತ್ತು ಡೇರಿಗಳನ್ನ ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಮಾಡೋಣ ಎಂದು ಕರೆ ನೀಡಿದರು.

ರೈತರಿಗೆ ಸೌಲಭ್ಯ ಕಲ್ಪಿಸಿದ ಶಾಸಕರು: ಜಿಲ್ಲಾ ಪಂಚಾಯಿತಿ ಸದಸ್ಯ ಮಾಡಾಳು ಸ್ವಾಮಿ ಮಾತನಾಡಿ, ರೈತ ಪರ ಚಿಂತಕರಾಗಿರುವ ಶಾಸಕ ಶಿವಲಿಂಗೇಗೌಡರು ಸರಕಾರದ ನಾನಾ ಇಲಾಖೆಗಳ ಮೂಲಕ ರೈತರಿಗೆ ದೊರೆಯುವ ಪ್ರತಿಯೊಂದು ಯೋಜನೆಯನ್ನು ಕ್ಷೇತ್ರಕ್ಕೆ ತಂದು ಆ ಮೂಲಕ ರೈತರ ಹಿತ ಕಾಯಲು ಶ್ರಮಿಸುತ್ತಿರುವುದು ಸಂತಸದ ವಿಷಯ ಎಂದರು. ಶಾಸಕರ ವಿಶೇಷ ಆಸಕ್ತಿಯ ಫ‌ಲದಿಂದಾಗಿ ಕ್ಷೇತ್ರಾದ್ಯಂತ ನಿರ್ಮಾಣಗೊಳ್ಳುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಡೈರಿಗಳು ಲಕ್ಷಾಂತರ ಜನರ ಆರ್ಥಿಕ ಪರಿಸ್ಥಿತಿಯ ಸುದಾರಣೆಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಎಚ್‌.ಎಚ್‌. ಪುಷ್ಪಾ, ತಾಲೂಕು ಪಂಚಾಯಿತಿ ಸದಸ್ಯ ಸೋಮಶೇಖರ್‌ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನಿರ್ದೇಶಕ ಶಶಿಧರ್‌, ರಾಂಪುರ ಗ್ರಾಪಂ ಅಧ್ಯಕ್ಷೆ ಹೇಮಾವತಿ, ಉಪಾಧ್ಯಕ್ಷೆ ಗಂಗಮ್ಮ, ತಾಪಂ ಮಾಜಿ ಅಧ್ಯಕ್ಷ ನಂಜುಂಡಪ್ಪ, ತಾಲೂಕು ಭಗೀರಥ ಸಮಾಜದ ಅಧ್ಯಕ್ಷ ಮೈಲಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಬಯಲು ಸೀಮೆಗೆ ಹೈನುಗಾರಿಕೆ ವರದಾನ: ನೀರಾವರಿ ಸೌಲಭ್ಯದಿಂದ ವಂಚಿತವಾಗಿರುವ ಬಯಲು ಸೀಮೆ ತಾಲೂಕಿನ ಜನತೆಯ ಪಾಲಿಗೆ ಪಶು ಸಂಗೋಪನೆ ಮತ್ತು ಹೈನುಗಾರಿಕೆ ವರವಾಗಿದೆ. ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆ ಸಾಧ್ಯವಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತ ಕುಟುಂಬಗಳು ಎರಡು ಹಸುಗಳನ್ನ ಸಾಕಿಕೊಂಡು ಹಾಲನ್ನ ಡೇರಿಗೆ ಹಾಕುವ ಮೂಲಕ ಸದ್ಯದ ಸಂಕಷ್ಟ ದಿನಗಳನ್ನ ದೂಡುತ್ತಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ