ವಿದ್ಯಾರ್ಥಿಗಳು ಭವಿಷ್ಯದ ಪರಿಸರ ಸಂರಕ್ಷಕರು

Team Udayavani, Nov 14, 2019, 3:00 AM IST

ಹಾಸನ: ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಭವಿಷ್ಯದ ಪೋಷಕರಾಗಬೇಕೆಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಅನುಪಮಾ ಹೇಳಿದರು.

ಅರಣ್ಯ ಇಲಾಖೆಯ ಹಾಸನ ವಿಭಾಗದ ಸಾಮಾಜಿಕ ಅರಣ್ಯ ವಿಭಾಗ ಹಾಗೂ ಜಿಲ್ಲಾ ರೆಡ್‌ ಕ್ರಾಸ್‌ ಸಂಸ್ಥೆ ಸಂಯುಕ್ತಾಶ್ರಯದಲ್ಲಿ, ಹಾಸನ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ತಾಲೂಕಿಗೆ ಒಂದರಂತೆ ಗ್ರಾಮೀಣ ಭಾಗದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಪರಿಸರ ಸಂರಕ್ಷಣೆ ಹಾಗೂ ಅರಣ್ಯಗಳ ಪರಿಚಯದ ಕಾರ್ಯಕ್ರಮದಡಿ ಹಾಸನ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ 50 ವಿದ್ಯಾರ್ಥಿಗಳನ್ನು ಹಾಸನದ ಗೆಂಡೆಕಟ್ಟೆ ಅರಣ್ಯಕ್ಕೆ ಭೇಟಿ ನೀಡಿದ್ದಾಗ ಮಾತನಾಡಿದರು.

ಎಲ್ಲರಿಗೂ ಪ್ರೇರಣೆ: ಸಾಮಾಜಿಕ ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರನ್ನು ಒಳಗೊಂಡಂತೆ ಎಲ್ಲರಿಗೂ ಈ ಕಾರ್ಯಕ್ರಮವು ಒಂದು ಪ್ರೇರಣೆಯಾಗಲಿದೆ ಇಲಾಖೆಯು ಬಹಳ ಜವಾಬ್ದಾರಿಯಿಂದ ಈ ಕಾರ್ಯಕ್ರಮವನ್ನು ನಿರ್ವಹಿಸಲಿದ್ದು, ಈ ಕಾರ್ಯಕ್ರಮವು ಕೇವಲ ಸಾಂಕೇತಿಕ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು.

ನಿಸರ್ಗದ ಮಾಹಿತಿ ನೀಡಿ: ಸಂಪನ್ಮೂಲ ವ್ಯಕ್ತಿಯಾಗಿದ್ದ ಜಿಲ್ಲಾ ರೆಡ್‌ ಕ್ರಾಸ್‌ ಅಧ್ಯಕ್ಷ ಎಚ್‌.ಪಿ. ಮೋಹನ್‌ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ನಿಸರ್ಗದ ಹುಟ್ಟು, ಸಮಸ್ಯೆ, ಕಾಡುನಾಶ, ವಿವಿಧ ಜೀವಿಗಳ ಪರಿಚಯವಿರಬೇಕು. ಹಾಗಾಗಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಅರಣ್ಯಗಳ ಪರಿಚಯ, ಕಾಡಿನೊಳಗೆ ಚಾರಣ, ರಸಪ್ರಶ್ನೆ ಹಾಗೂ ಕಾಡು ಜೀವಿಗಳು ಸೇರಿ ಪ್ರಾಕೃತಿಕ ಸಂಪತ್ತಿನ ಪರಿಚಯ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿ ಮಾತನಾಡಿ, ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯೀಕರಣ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ರೆಡ್‌ ಕ್ರಾಸ್‌ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಅವರು ರೆಡ್‌ ಕ್ರಾಸ್‌ ಸಂಸ್ಥೆಯ ಧ್ಯೇಯೊದ್ದೇಶಗಳನ್ನು ತಿಳಿಸಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿಯ ನಿವೃತ್ತ ಅಧಿಕಾರಿ ಎಸ್‌.ಎಸ್‌.ಪಾಷಾ ಅವರು ರಸ್ತೆ ಸುರಕ್ಷತೆ ಹಾಗೂ ಕಾನೂನಿನ ಬಗ್ಗೆ ಅರಿವನ್ನು ಮೂಡಿಸಿದರು.

ಹಾಗೂ ನಿವೃತ್ತ ಪ್ರಾಂಶುಪಾಲ ಎಚ್‌.ಆರ್‌. ಮಂಜಪ್ಪಗೌಡ ಅವರು ಜೂನಿಯರ್‌ ರೆಡ್‌ ಕ್ರಾಸ್‌ ಬಗ್ಗೆ ಮಾತನಾಡಿದರು. ಹಾಗೂ ಚಿತ್ರ ಕಲಾವಿದ ಬಿ.ಎಸ್‌. ದೇಸಾಯಿ ಅವರು ಪರಿಸರದ ಬಗ್ಗೆ ಕೆಲವು ಹಿತನುಡಿಗಳನ್ನು ನೀಡಿದರು. ಸುರೇಶ್‌ ಗುರೂಜಿ ಅವರು ಅವರು ಯೋಗದ ಪ್ರಾಮುಖ್ಯತೆ ತಿಳಿಸಿಕೊಟ್ಟರು.

ಸಹ ಸಂಪನ್ಮೂಲ ವ್ಯಕ್ತಿ ಹೇಮಾ ಅನಂತ್‌, ವಲಯ ಅರಣ್ಯ ಅಧಿಕಾರಿ ಜ್ಯೋತಿಶೇಖರ್‌ ಡಾ.ವೀರಭದ್ರಪ್ಪ ಅಮ್ಜದ್‌ ಖಾನ್‌, ಸದಾಶಿವು, ಕೆ.ಟಿ.ಜಯಶ್ರೀ, ನಿರ್ಮಲ ಹಾಗೂ ಜಿ.ಟಿ. ರಂಗೇಗೌಡರು ಮತ್ತಿತರರು ಉಪಸ್ಥಿತರಿದ್ದರು. ಸ್ಥಳದಲ್ಲಿಯೇ ನಡೆದ ರಸಪ್ರಶ್ನೆ ಹಾಗೂ ಚಿತ್ರ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಅವರು ವಿತರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ