ಕೇಂದ್ರ, ರಾಜ್ಯ ಸರ್ಕಾರಗಳು ಕಾಫಿ ಬೆಳೆಗಾರರ ಹಿತ ಕಾಪಾಡಬೇಕು

Team Udayavani, Oct 2, 2019, 3:00 AM IST

ಬೇಲೂರು: ಕಾಫಿ ಉತ್ಪಾದನೆಯಲ್ಲಿ 6 ನೇ ಸ್ಥಾನ ಪಡೆದಿರುವ ಭಾರತದಲ್ಲಿ ಬೆಳೆ ಸ್ಥಿರತೆ ಮತ್ತು ಬೆಳೆಗಾರರ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಶ್ರೀಕಂಠೇಗೌಡ ಒತ್ತಾಯಿಸಿದರು.

ಪಟ್ಟಣದ ಚನ್ನಕೇಶವ ದೇವಾಲಯದ ಮುಂಭಾಗ ಕರ್ನಾಟಕ ಬೆಳೆಗಾರರ ಸಂಘ ಮತ್ತು ಜಿಲ್ಲಾ ಪ್ಲಾಂಟರ್ ಸಂಘದಿಂದ ನಡೆದ 5ನೇ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. 9ನೇ ಶತಮಾನದಿಂದ ಕಾಫಿ ಬೆಳೆಯನ್ನು ಕಾಣಬಹುದಾಗಿದೆ. ಕಾಫಿ ಮನುಷ್ಯನ ಒತ್ತಡ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇಂತಹ ಉದ್ದಿಮೆಯನ್ನು ಸರ್ಕಾರ ಪ್ರೋತ್ಸಾಹಿಸುವುದು ಅವಶ್ಯಕ ಎಂದರು.

4 ಲಕ್ಷ ಟನ್‌ ಕಾಫಿ ಬೆಳೆ:  ದೇಶದಲ್ಲಿ ಪ್ರತಿವರ್ಷ 4 ಲಕ್ಷ ಟನ್‌ ಬೆಳೆ ಉತ್ಪಾದನೆ ಯಾಗುತ್ತಿದೆ. ಇದಕ್ಕೆ ಸರಿಯಾದ ಸ್ಥಿರವಾದ ಬೆಲೆ ಇಲ್ಲ. ಅಲ್ಲದೇ ಇಂದಿನ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರರು ಶ್ರೀಮಂತರು ಎಂಬ ಭಾವನೆ ಸಮಾಜದಲ್ಲಿದೆ. ಅದರೆ ನಿಜವಾಗಿ ಅಧ್ಯಯನ ನೆಡೆಸಿದಾಗ ಬೆಳೆಗಾರರ ಪರಿಸ್ಥಿತಿ ಚಿಂತಜನಕವಾಗಿದೆ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆಗಾರರ ಹಿತ ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನಕಾರ್ಯದರ್ಶಿ ಮುರಳೀಧರ್‌ ಮಾತನಾಡಿ, ಕರ್ನಾಟಕ ಬೆಳೆಗಾರರ ಒಕ್ಕೂಟ ಸೇರಿದಂತೆ ರಾಜ್ಯದಲ್ಲಿ 23 ಸಂಘಗಳು ಅಸ್ತಿತ್ವದಲ್ಲಿವೆ. ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ 60 ಸಾವಿರ ಬೆಳೆಗಾರರಿದ್ದಾರೆ. 15 ಲಕ್ಷ ಜನರು ಉದ್ಯೋಗ ಮಾಡುತ್ತಿದ್ದು 5 ಸಾವಿರ ಕೋಟಿ ರೂ. ವಿದೇಶಿ ವಿನಿಮಯಗಳಿಸುವ ಉದ್ದಿಮೆ ಇಂದು ಸಂಕಷ್ಟದಲ್ಲಿದ್ದು ಸರ್ಕಾರಗಳು ಕಾಫಿ ಉದ್ದಿಮೆಯನ್ನು ಉಳಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಜಿಯೋಗ್ರಾಫಿಕಲ್‌ ಸರ್ವೇ ನಡೆಸಿ: ಕಾಫಿ ಬೆಳೆಗಾರರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದು ಬಹುಮುಖ್ಯವಾಗಿ ಸರ್ಕಾರ ಕಾಫಿ ಪ್ರದೇಶವನ್ನು ಜಿಯೋಗ್ರಾಫಿಕಲ್‌ ಸರ್ವೆ ನಡೆಸಬೇಕು. ಕಾಫಿ ಬೆಳೆಗಾರರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕಾಫಿ ತೋಟಗಳಲ್ಲಿ ಹಾನಿಯಾಗುವ ಗಿಡಗಳನ್ನು ಪುನ: ನೆಡಲು ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಕೃತಿವಿಕೋಪದಿಂದ ಬೆಳೆ, ಯಂತ್ರೋ ಪಕರಣ ಹಾನಿಯಾದರೆ ಪರಿಹಾರ ನೀಡಬೇಕು. ಕಾಫಿ ಬೆಳಗೆ ಬೆಲೆ ನಿಗದಿಗೊಳಿಸಬೇಕು. ಅತಿವೃಷ್ಟಿಯಿಂದ ಕಾಫಿ ತೋಟ ನಾಶವಾದರೆ ಏಕರೆಗೆ 18 ಲಕ್ಷ ರೂ. ಭೂ ಪರಿಹಾರ ನೀಡಬೇಕು. ಮೆಣಸು ರಪ್ತಿನಲ್ಲಿ ಅಗುತ್ತಿರುವ ಆಕ್ರಮವನ್ನು ತಡೆಯಬೇಕು. ಕಾಡಾನೆ ಸಮಸ್ಯೆಯನ್ನು ಎದುರಿಸುತ್ತಿರುವ ಬೆಳೆಗಾರರಿಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂದು ಸರ್ಕಾರಕ್ಕೆ ತಹಶೀಲ್ದಾರ್‌ ಮೂಲಕ ಮನವಿ ಸಲ್ಲಿಸಿದರು.

ಸಮಾರಂಭದಲ್ಲಿ ಶಾಸಕ ಕೆ.ಎಸ್‌.ಲಿಂಗೇಶ್‌, ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ತೀರ್ಥ ಮಲ್ಲೇಶ್‌, ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ತೊ.ಚ.ಅನಂತಸುಬ್ಟಾರಾಯ ತಾಲೂಕು ಅಧ್ಯಕ್ಷ ಗೋವಿಂದಶೆಟ್ಟಿ ಇತರರು ಇದ್ದರು.

ಬೆಳೆ ನಷ್ಟಕ್ಕೆ ಪರಿಹಾರ ಕೊಡಿ: ಹಾಸನ ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಕಾಫಿ ಬೆಳೆ ಮತ್ತು ಇನ್ನೀತರೆ ಬೆಳೆಗಳು ನಾಶ ವಾಗಿದ್ದು ಕೇಂದ್ರ ಸರ್ಕಾರ ಪ್ರಕೃತಿಕೋಪದಡಿ ಸಿಲುಕಿರುವ ಬೆಳೆಗಾರರ ಸಂಕಷ್ಟಕ್ಕೆ ಮುಂದಾಗಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಗೋಪಾಲಸ್ವಾಮಿ ಒತ್ತಾಯಿಸಿದರು. ಬೆಳೆಗಾರರ ಸಂಘದ ಗ್ರಂಥಾಲಯಕ್ಕೆ ವಿಧಾನ ಪರಿಷತ್‌ ಸದಸ್ಯರ ನಿಧಿಯಿಂದ 3 ಲಕ್ಷ ರೂ. ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.

ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರಗಳು ಸ್ಪಂದಿಸುವಂತೆ ವಿಧಾನ ಪರಿಷತ್‌ನಲ್ಲಿ ಒತ್ತಾಯಿಸುತ್ತೇನೆ. ಬೆಳೆಗಾರರ ಅನುಕೂಲಕ್ಕಾಗಿ ಮಣ್ಣು ಪರೀಕ್ಷೆ ಮಾಡುವ ಮೋಬೈಲ್‌ ವಾಹನವನ್ನು ವಿಧಾನ ಪರಿಷತ್‌ ಸದಸ್ಯರ ಅನುದಾನದಲ್ಲಿ ನೀಡುತ್ತೇನೆ.
-ಶ್ರೀಕಂಠೇಗೌಡ, ವಿಧಾನ ಪರಿಷತ್‌ ಸದಸ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ