ರಾಷ್ಟ್ರೀಯ ಹೆದ್ದಾರಿಯ ಬದಿ ಚರಂಡಿ ಅವ್ಯವಸ್ಥೆ

Team Udayavani, Nov 12, 2019, 3:00 AM IST

ಅರಸೀಕೆರೆ: ನಗರದ ಮಧ್ಯಭಾಗ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬಿ.ಎಚ್‌.ರಸ್ತೆ ಅಗಲೀಕರಣದ ವೇಳೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯು ವೈಜ್ಞಾನಿಕವಾಗಿ ರಸ್ತೆಯ ಎರಡು ಬದಿ ಚರಂಡಿಗಳನ್ನು ನಿರ್ಮಿಸಿದ ಪರಿಣಾಮ ಪೌರ ಕಾರ್ಮಿಕರು ಪ್ರತಿನಿತ್ಯ ಶ್ರಮದಾನ ಮಾಡುವಂತಾಗಿದೆ.

ನಗರದ ಮಧ್ಯಭಾಗದ ವ್ಯಾಪ್ತಿಯಲ್ಲಿ 3.5 ಕಿ.ಮೀ. ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬಿ.ಎಚ್‌.ರಸ್ತೆಯನ್ನು ಕಳೆದ ದಶಕಗಳ ಹಿಂದೆ ಚತುಷ್ಪಥ ರಸ್ತೆಯನ್ನಾಗಿ ವಿಸ್ತರಿಸಲು ಮುಂದಾದ ರಾಷ್ಟ್ರೀಯ ಹೆದ್ದಾರಿ ಇಲಾಖೆ ರಸ್ತೆ ಅಭಿವೃದ್ಧಿಗೆ ನೀಡಿದ ಪ್ರಾಮುಖ್ಯತೆಯನ್ನು ರಸ್ತೆ ಎರಡೂ ಬದಿ ಚರಂಡಿಗಳ ನಿರ್ಮಾಣಕ್ಕೆ ತೋರದ ಪರಿಣಾಮ ಈ ಚರಂಡಿಗಳಲ್ಲಿ ಮಳೆಯ ನೀರು ಸರಾಗವಾಗಿ ಮುಂದೆ ಸಾಗದೇ ಕಸಕಡ್ಡಿಗಳ ತ್ಯಾಜ್ಯಗಳು ಚರಂಡಿಯಲ್ಲಿ ಸಂಗ್ರಹಣೆ ಗೊಂಡು ಅವ್ಯವಸ್ಥೆಯ ಆಗರವಾಗಿ ಸಾರ್ವಜನಿಕರಿಗೆ ಅಲ್ಲದೇ ನಗರಸಭೆ ಆಡಳಿತಕ್ಕೂ ಭಾರೀ ತಲೆನೋವಾಗಿ ಪರಿಣಮಿಸಿದೆ.

ಸೆಂಟ್ರಿಂಗ್‌ ಶೀಟ್‌ ತೆರವುಗೊಳಿಸಿಲ್ಲ: ರಸ್ತೆಯ ಎರಡೂ ಬದಿಯ ಚರಂಡಿಗಳ ಮೇಲೆ ಕಾಂಕ್ರಿಟ್‌ ಹಾಸು ಹಾಕಿ ಪಾದಚಾರಿಗಳು ಸಂಚರಿಸಲು ಅನುವು ಮಾಡಿಕೊಡಬೇಕೆಂಬ ಉದ್ದೇಶದಿಂದ ಚರಂಡಿಯ ಉದ್ದಕ್ಕೂ ಕಾಂಕ್ರೀಟ್‌ ಹಾಸುಗಳನ್ನ ಹಾಕುವ ವೇಳೆ ಒಳಭಾಗದಲ್ಲಿ ಕೊಡುವ ಸೆಟ್ರಿಂಗ್‌ ಶೀಟ್‌ಗಳನ್ನು ಕಾಮಗಾರಿ ಪೂರ್ಣಗೊಂಡ ಬಳಿಕ ಗುತ್ತಿಗೆದಾರರು ತೆರವು ಗೊಳಿಸದೇ ಇರುವುದರಿಂದ ಚರಂಡಿಯಲ್ಲಿ ನೀರು ಸರಾಗವಾಗಿ ಸಾಗದೇ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ.

ನಗರಸಭೆ- ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ: ಚರಂಡಿಗಳ ನಿರ್ವಹಣೆಗಳ ಜವಾಬ್ದಾರಿ ನಗರಸಭೆ ಆಡಳಿತಕ್ಕೆ ಒಳಪಟ್ಟಿದ್ದು, ಪೌರ ಕಾರ್ಮಿಕರು ತಮ್ಮ ಸೇವಾ ಅವಧಿಯ ಬಹುತೇಕ ಸಮಯವನ್ನು ಚರಂಡಿಗಳ ಹೂಳು ತೆಗೆಯುವುದರಲ್ಲೇ ಕಳೆಯುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ನಗರಸಭೆ ಆಡಳಿವಾಗಲೀ ಅಥವಾ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಾಗಲಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗದಿರುವುದು ಸಾರ್ವಜನಿಕರ ಅಸಮಾಧಾನ ಹಾಗೂ ಪೌರಕಾರ್ಮಿಕರ ಶ್ರಮದಾನಕ್ಕೆ ಬೆಲೆ ಸಿಗದಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಗಮನ ಹರಿಸಿ ಚರಂಡಿಗಳ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಬದಿಗಳ ಚರಂಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಪೌರಕಾರ್ಮಿಕರು ನಿರಂತರವಾಗಿ ತೆರವುಗೊಳಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸಲಾಗುವುದು.
-ಕಾಂತರಾಜ್‌, ಪೌರಾಯುಕ್ತ

ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಗಳು ಸಮರ್ಪಕ ನಿರ್ವಹಣೆ ಇಲ್ಲದೇ ಕೊಳಚೆ ನೀರುಗಳ ಸಂಗ್ರಹ ತಾಣವಾಗಿದೆ. ಅಲ್ಲದೇ ಈ ಕಲುಷಿತ ನೀರಿನ ದುರ್ವಾಸನೆಯಿಂದ ಹೆದ್ದಾರಿಯಲ್ಲಿ ಸಂಚರಿಸುವ ಜನರು ಮೂಗು ಮುಚ್ಚಿಕೊಂಡು ಓಡಾಡುವುದು ಅನಿವಾರ್ಯ ವಾಗಿದೆ.
-ಜಗದೀಶ್‌ ನಗರದ ನಿವಾಸಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ