ಬಡ್ಡಿ ದಂಧೆಕೋರರ ಕಿರುಕುಳ : ತರಕಾರಿ ವ್ಯಾಪಾರಿ ಆತ್ಮಹತ್ಯೆ ಯತ್ನ
Team Udayavani, Apr 3, 2021, 6:21 PM IST
ಹಾಸನ: ಮೀಟರ್ ಬಡ್ಡಿ ದಂಧೆಯವರ ಕಾಟ ಸಹಿಸಲಾರದೆ ತರಕಾರಿ ವ್ಯಾಪಾರಿ ಯೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ನಗರದಲ್ಲಿ ನಡೆದಿದೆ.
ನಗರದ ಸಾಲಗಾಮೆ ರಸ್ತೆಗೆ ಹೊಂದಿಕೊಂಡಂತಿರುವ ರಿಂಗ್ ರಸ್ತೆಯ ಮಳಿಗೆಯೊಂದರಲ್ಲಿ ತರಕಾರಿ ಅಂಗಡಿಯನ್ನಿಟ್ಟುಕೊಂಡಿದ್ದ ರಾಜು (33) ಎಂಬವರು ಒಂದು ವರ್ಷದ ಹಿಂದೆ ದುದ್ದ ಮಂಜು ಎಂಬುವವರ ಬಳಿ 3 ಲಕ್ಷ ರೂ.ಗಳನ್ನು ಮಾಸಿಕ ಶೇ.4 ರೂ.ಗಳ ಬಡ್ಡಿ ದರದಲ್ಲಿ ಸಾಲ ಪಡೆದಿದ್ದರು. ಸಾಲ ಪಡೆಯುವಾಗ ತನ್ನ 5 ಬ್ಯಾಂಕ್ ಚೆಕ್ ಗಳು, ತನ್ನ ಹೆಂಡತಿಯ 3 ಚೆಕ್‌ಗಳನ್ನು ಹಾಗೂ ಪ್ರೊನೋಟ್ ಬರೆದುಕೊಟ್ಟಿದ್ದರು ಎನ್ನಲಾಗಿದೆ. ಕೆಲದಿನಗಳ ಹಿಂದೆ ಮತ್ತೆ 2 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದಿದ್ದರು. ಇಲ್ಲಿಯವರೆಗೂ ರಾಜು ಅವರು 9 ಲಕ್ಷ ರೂ. ಪಾವತಿಸಿದ್ದರೂ ಸಾಲ ತೀರಿಲ್ಲ ಎಂದು ಹೇಳಿ ಸಾಲಗಾರರು ಪೀಡಿಸುತ್ತಿದ್ದುದರಿಂದ ನನ್ನ ಸಾವಿಗೆ ದುದ್ದ ಮಂಜು ಮತ್ತಿತರ ಬಡ್ಡಿ ದಂಧೆಯವರು ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ತೀವ್ರವಾಗಿ ಅಸ್ವಸ್ಥನಾಗಿ ರುವ ರಾಜು ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿದೆ. ಈ ಸಂಬಂಧ ಪೆನ್‌ಷನ್‌ಮೊಹಲ್ಲಾ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.