ಬಿಎಸ್‌ವೈ ದ್ವೇಷದ ರಾಜಕಾರಣಕ್ಕೆ ನಾವು ಜಗ್ಗಲ್ಲ: ರೇವಣ್ಣ

Team Udayavani, Sep 1, 2019, 3:00 AM IST

ಹಾಸನ: ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಯಡಿಯೂರಪ್ಪ ಅವರಿಂದಾಗಲೀ, ಬಿಜೆಪಿಯವರಿಂದಾಗಲಿ ಸಾಧ್ಯವಿಲ್ಲ. ಎಷ್ಟು ದಿನ ದ್ವೇಷದ ರಾಜಕಾರಣ ಮಾಡುತ್ತಾರೋ ಮಾಡಿ ನೋಡುತ್ತೇವೆ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಮತ್ತು ದೇವರ ಆಶೀರ್ವಾದ ಇರುವರೆಗೂ ದೇವೇಗೌಡರ ಕುಟುಂಬದವರಿಗೆ ಯಾರಿಂದಲೂ ಏನನ್ನೂ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ವೇಳೆ ಯಾರ ಮೇಲೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದರು. ಆದರೆ ಮುಖಯಮಂತ್ರಿಯಾದ ಕ್ಷಣದಿಂದಲೇ ದೇವೆಗೌಡರ ಕುಟುಂಬದವರ ಮೇಲೆ ರಾಜಕೀಯ ದ್ವೇಷ ಸಾಧನೆ ಆರಂಭಿಸಿದ್ದಾರೆ ಮಾಡಲಿ. ಎಷ್ಟು ದಿನ ಮಾಡುತ್ತಾರೋ ಮಾಡಲಿ ನೋಡೋಣ ಎಂದರು.

ಉದ್ದೇಶಪೂರ್ವಕವಾಗಿ ಕೆಎಂಎಫ್ ಚುನಾವಣೆ ಮುಂದೂಡಿಕೆ: ಮುಖ್ಯಮಂತ್ರಿಯೊಬ್ಬರು ಸಂಜೆ 6.30ಕ್ಕೆ ಪ್ರಮಾಣ ವಚನ ಸ್ವೀಕರಿಸಿದ ನಂತರ 7.30 ಕ್ಕೆ ಅಧಿಕಾರಿಗಳೊಂದಿಗೆ ಚರ್ಚಿಸಿ ರೇವಣ್ಣ ಕೆಎಂಎಫ್ ಅಧ್ಯಕ್ಷನಾಗಲೇ ಕೂಡದು. ಅದಕ್ಕೇನೇನು ಮಾಡಬೇಕೆಂದು ಚರ್ಚಿಸಿ ಅಂತಿಮವಾಗಿ ಚುನಾವಣೆ ಮುಂದೂಡಿದರು. ಯಡಿಯೂರಪ್ಪ ಅವರು ದೇವೇಗೌಡರ ಕುಟಂಬದ ಮೇಲೆ ದ್ವೇಷ ಸಾಧಿಸುವುದು ಹೊಸದೇನೂ ಅಲ್ಲ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗಲೂ ನಮ್ಮ ವಿರುದ್ಧ ಸಿಒಡಿ, ಲೋಕಾಯುಕ್ತ ತನಿಖೆ ಮಾಡಿಸಿದ್ದರು. ಏನೂ ಸಿಗಲಿಲ್ಲ. ಹಾಗಾಗಿ ದೇವೇಗೌಡರ ಕುಟುಂಬವನ್ನು ಟಾರ್ಗೆಟ್‌ ಮಾಡಿ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನೆರೆ ಪೀಡಿತ ರೈತರ ಸಾಲ ಮನ್ನಾ ಮಾಡಿ: ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ರೈತರ 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು. ಈಗ ಯಡಿಯೂರಪ್ಪ ಅವರು ನೆರೆ ಪೀಡಿತ 12 ಜಿಲ್ಲೆಗಳ ರೈತರ ಸಾಲವನ್ನಾದರೂ ಮಾಡಿ ರೈತರ ಬಗ್ಗೆ ಇರುವ ಬದ್ಧತೆಯನ್ನು ಪ್ರದರ್ಶಿಸಲಿ ಎಂದೂ ಹೇಳಿದರು.

ಸಿದ್ದು ಬಗ್ಗೆ ಮಾತಾಡಲ್ಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವೇಗೌಡರ ಕುಟುಂಬದ ಬಗ್ಗೆ ಮಾಡಿದ ಆರೋಪಕೆಕ ನಾನು ಪ್ರತಿಕ್ರಿಯಿಸಲ್ಲ ಸಮ್ಮಿಶ್ರ ಸರ್ಕಾರ ಬಿದ್ದುಹೋಗಿದೆ. ಈಗ ಮರಣೋತ್ತರ ಪರೀಕ್ಷೆ ಮಾಡಿದರೇನು ಪ್ರಯೋಜನ ಎಂದ ಅವರು, ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿದ್ದವರು. ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ಚಿಕ್ಕಮಗಳೂರಿನಲ್ಲಿ ಒಕ್ಕೂಟ ಮಾಡಿಕೊಳ್ಳಲಿ: ಹಾಸನ ಹಾಲು ಒಕ್ಕೂಟದಲ್ಲಿರುವ ಚಿಕ್ಕಮಗಳೂರು ಜಿಲ್ಲೆಯನ್ನು ಬೇರ್ಪಡಿಸಿ ಹೊಸದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸ ಹಾಲು ಒಕ್ಕೂಟ ಮಾಡುವುದಿದ್ದರೆ ಮಾಡಿಕೊಳ್ಳಲಿ. ಇದರಿಂದ ಹಾಸನ ಹಾಲು ಒಕ್ಕೂಟಕ್ಕೇನೂ ನಷ್ಟವಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ ರೇವಣ್ಣ ಹೇಳಿದರು.

ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿ ಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗಿರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ರೇವಣ್ಣ, ಹಾಸನ ಹಾಲು ಒಕ್ಕೂಟಕ್ಕೆ ಪ್ರತಿದಿನ 11 ಲಕ್ಷ ಲೀ. ಹಾಲು ಬರುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯಿಂದ ಸುಮಾರು ಒಂದು ಲಕ್ಷ ಲೀಟರ್‌ ಮಾತ್ರ ಬರುತ್ತಿದೆ. ಹೊಸದಾಗಿ ಒಕ್ಕೂಟ ಮಾಡುವುದಾದರೆ ಕನಿಷ್ಠ 300 ಕೋಟಿ ರೂ. ಬೇಕಾಗುತ್ತದೆ. ಒಂದು ಲಕ್ಷ ಲೀಟರ್‌ಗೆ ಒಂದು ಒಕ್ಕೂಟ, ಪ್ರತ್ಯೇಕ ಡೇರಿ ಮಾಡಿದರೆ ನೌಕರರಿಗೆ ಸಂಬಳ ಕೊಡಲೂ ಆಗಲ್ಲ.

ಸರ್ಕಾರ ಹಣ ಕೊಡುವುದಾದರೆ ಚಿಕ್ಕಮಗಳೂರಿನಲ್ಲಿ ಹೊಸ ಹಾಲು ಒಕ್ಕೂಟ ಮಾಡಲಿ ಸಂತೋಷ ಎಂದರು. ರಾಜಕೀಯ ಮೇಲಾಟದಿಂದ ರಾಜ್ಯದ ಹಾಲು ಉತ್ಪಾದಕರಿಗೆ ತೊಂದರೆಯಾಗಬಾರದೆಂಬ ಒಂದೇ ಉದ್ದೇಶದಿಂದ ನಾನು ಚುನಾವಣೆಯಿಂದ ಹೊರಗುಳಿದಿದ್ದೇನೆ ಎಂದು ಸ್ಪಷ್ಟಪಡಿಸಿದರು. 8 – 10 ವರ್ಷ ಕೆಎಂಎಫ್ ಅಧ್ಯಕ್ಷನಾಗಿ ರಾಜ್ಯದಲ್ಲಿ ಡೇರಿ ಅಭಿವೃದ್ದಿಗೆ ನನ್ನ ಕೈಲಾದಷ್ಟು ಶ್ರಮಿಸಿದ್ದೇನೆ. ಈಗ ಜಾರಕಿಹೊಳಿ ಅವರೂ ಅಭಿವೃದ್ಧಿ ಮಾಡಲಿ ಎಂದರು.

ಗೌಡರು, ಕುರಿಯನ್‌ ಕೊಡುಗೆ ಅಪಾರ: ರಾಜ್ಯದಲ್ಲಿ ಡೇರಿ ಅಭಿವೃದ್ಧಿಗೆ ಮುಖ್ಯ ಕಾರಣಕರ್ತರೆಂದರೆ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಪಿ.ಜೆ.ಕುರಿಯನ್‌ ಅವರು ಮಾತ್ರ. ಆನಂತರ ಎನ್‌ಡಿಡಿಬಿ ಅಧ್ಯಕ್ಷರಾಗಿದ್ದ ಅಮೃತಾಪಟೇಲ್‌ ಅವರೂ ಸಹಕಾರ ನೀಡಿದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಗುಜರಾತ್‌ನಲ್ಲಿ ಮೆಗಾಡೇರಿ ಉದ್ಘಾಟನೆಗೆ ಹೋಗಿದ್ದಾಗ ಕರ್ನಾಟಕದಲ್ಲೂ ಮಾಡಿ ಎಂದು ಕುರಿಯನ್‌ ಅವರಿಗೆ ಮನವಿ ಮಾಡಿದ್ದರು.

ಆದರೆ ವಿಶ್ವದಲ್ಲಿ ಒಂದೇ ತಾಜ್‌ಮಹಲ್‌ ಇರಲು ಸಾಧ್ಯ ಎಂದು ಕುರಿಯನ್‌ ಮತ್ತೂಂದು ಮೆಗಾಡೇರಿ ಮಾಡಲು ನಿರಾಕರಿಸಿದ್ದರು. ಆದರೆ ಕುರಿಯನ್‌ ಮೇಲೆ ಅಂದು ದೇಶದ ಪಶುಸಂಗೋಪನಾ ಸಚಿವರಾಗಿದ್ದಾಗ ವಿನಾಕಾರಣ ತನಿಖೆಗೆ ಆದೇಶಿದ್ದರು. ಆಗ ಪ್ರಧಾನಿ ದೇವೇಗೌಡರಿಗೆ ನಾನು ಮಾಹಿತಿ ನೀಡಿದ್ದರಿಂದ ತನಿಖೆ ಕೈ ಬಿಡಲಾಯಿತು. ಆ ಕೃತಜ್ಞತೆಗಾಗಿ ಕುರಿಯನ್‌ ಅವರು ಅಂದು ಕೆಎಂಎಫ್ ಅಧ್ಯಕ್ಷನಾಗಿದ್ದ ನನನ್ನು ಭೇಟಿಯಾಗಿ ಬೆಂಗಳೂರಿನಲ್ಲಿ ಮೆಗಾಡೇರಿ ಆರಂಭಕ್ಕೆ ಸಮ್ಮತಿಸಿ ಸಹಕರಿಸಿದ್ದರು ಎಂದು ರೇವಣ್ಣ ಅವರು ವಿವರ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ