ಅಭಿವೃದ್ಧಿ ಯೋಜನೆಗಳ ಮೇಲೆ ಆತಂಕದ ಕರಿನೆರಳು

ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಸ್ಥಿರ • ರೇವಣ್ಣರ ಕನಸಿನ ಸಾವಿರಾರು ಕೋಟಿ ರೂ. ಯೋಜನೆಗಳಿಗೆ ಅರ್ಧಚಂದ್ರ?

Team Udayavani, Jul 12, 2019, 11:33 AM IST

ಹಾಸನದ ಗಂಧದ ಕೋಠಿಯಲ್ಲಿ ನಿರ್ಮಾಣವಾಗುತ್ತಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ಅಪೂರ್ಣ ಕಾಮಗಾರಿಯನ್ನು ಸಚಿವ ರೇವಣ್ಣ ಪರಿಶೀಲಿಸಿದರು (ಕಡತ ಚಿತ್ರ)

ಹಾಸನ: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನದ ಹಾದಿಯತ್ತ ಸಾಗುತ್ತಿರುವುದರಿಂದ ಹಾಸನ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಮೇಲೆ ಆತಂಕದ ಕರಿನೆರಳು ಆವರಿಸಿದೆ.

ಎಚ್.ಡಿ.ಕುಮಾರಸ್ವಾಮಿ ಅವರ ಸಚಿವ ಸಂಪುಟದ ಹಿರಿಯ ಸದಸ್ಯರಲ್ಲೊಬ್ಬ, ಮುಖ್ಯಮಂತ್ರಿಯವರ ಸಹೋದರ ಎಚ್.ಡಿ.ರೇವಣ್ಣ ಅವರು ಪ್ರಭಾವ ಬಳಸಿ ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ರೂ. ಯೋಜನೆಗಳನ್ನು ಕಳೆದೊಂದು ವರ್ಷದಲ್ಲಿ ಸುಮಾರು 5 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಅಂದಾಜಿನ ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡಿಸಿದ್ದಾರೆ. ಅವುಗಳ ಪೈಕಿ ಕೆಲವು ಕಾಮಗಾರಿಗಳು ಆರಂಭವಾಗಿವೆ. ಇನ್ನೂ ಕೆಲವು ಅಭಿವೃದ್ಧಿ ಯೋಜನೆಗಳ ಕಾಮಗಾರಿಗಳು ಇನ್ನಷ್ಟೇ ಆರಂಭವಾಗಬೇಕಾಗಿದೆ. ಸರ್ಕಾರ ಉರುಳಿದರೆ ಈ ಎಲ್ಲಾ ಅಭಿವೃದ್ದಿ ಯೋಜನೆಗಳ ಭವಿಷ್ಯ ಏನು ಎಂಬ ಆತಂಕ ಜಿಲ್ಲೆಯ ಜನರದ್ದು.

ಜಿಲ್ಲೆಯ ಅಭಿವೃದ್ಧಿ ಪರ್ವ: ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿತ್ತು. ಪ್ರತಿ ಸಚಿವ ಸಂಪುಟ ಸಭೆಯಲ್ಲೂ ಹಾಸನ ಜಿಲ್ಲೆಗೆ ಸಂಬಂಧಿಸಿದ ಒಂದಿಲ್ಲೊಂದು ಅಭಿವೃದ್ಧಿ ಯೋಜನೆಗೆ ಅನುಮೋದನೆ ಸಿಗುತ್ತಿತ್ತು. ಇದರ ಹಿಂದೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಪ್ರಭಾವ ಇರುತ್ತಿತ್ತು. ರೇವಣ್ಣ ಆವರ ಹಾಸನ ಜಿಲ್ಲೆಯ ಅಭಿವೃದ್ಧಿಯ ಪ್ರೀತಿ ಬೇರೆ ಜಿಲ್ಲೆಯ ರಾಜಕಾರಣಿಗಳಲ್ಲಿ ಅಸೂಯೆಯನ್ನೂ ಉಂಟು ಮಾಡಿತ್ತು. ಆದರೆ ಹಾಸನ ಜಿಲ್ಲೆಗೆ ಯೋಜನೆಗಳೇನೋ ಮಂಜೂರಾಗಿವೆ. ಆದರೆ ಅವುಗಳ ಅನುಷ್ಠಾನವಾಗುವ ಹೊತ್ತಿಗೆ ಸರ್ಕಾರ ಅಸ್ಥಿರವಾಗಿದೆ. ಯಾವ ಕ್ಷಣದಲ್ಲಾದರೂ ಸರ್ಕಾರ ಉರುಳಬಹುದಾದ ಸನ್ನಿವೇಶದಿಂದಾಗಿ ಹಾಸನ ಜಿಲ್ಲೆಯ ಅಭಿವೃದ್ಧಿ ಯೋಜನೆಗಳು ಹಾಳು ಹಂಪಿಯ ರೂಪ ಪಡೆದಿವೆ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಮನೆ ಮಾಡಿದೆ.

ಹೆದ್ದಾರಿ ಕಾಮಗಾರಿ: ರಾಜ್ಯ ಹೆದ್ದಾರಿ ಹಾಸನ – ದುದ್ದ ರಸ್ತೆ ಕಾಮಗಾರಿ ಈಗಷ್ಟೇ ಆರಂಭವಾಗಿದೆ. ಹೊಳೆನರಸೀಪುರ ವಿಧಾನಸಭಾ ವ್ಯಾಪ್ತಿಗೆ ಬರುವ ದೊಡ್ಡಪುರ ಸಮೀಪದ ಚೀರನಹಳ್ಳಿ ಹಳ್ಳದಿಂದ ದುದ್ದವರೆಗೆ ಸಿಮೆಂಟ್ ರಸ್ತೆ ನಿರ್ಮಾಣ ಕಳೆದೊಂದು ವರ್ಷದಲ್ಲಿ ಬಹುತೇಕ ಪೂರ್ಣಗೊಂಡಿದ್ದು, ವಾಹನಗಳು ಸಂಚರಿಸುತ್ತಿವೆ. ಆದರೆ ಈ ರಸ್ತೆ ಕಿರಿದಾಗಿರುವುದರಿಂದ ರಸ್ತೆ ಅಗಲೀಕರಣಕ್ಕೆ ಸಚಿವ ಎಚ್.ಡಿ.ರೇವಣ್ಣ ಅವರು 35 ಕೋಟಿ ರೂ. ಮಂಜೂರು ಮಾಡಿಸಿದ್ದರು. ಆದರೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇದೇ ರಸ್ತೆಯ ಹಾಸನ ಡೇರಿ ಸರ್ಕಲ್ನಿಂದ ದೊಡ್ಡಪುರದ ವರೆಗೆ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣದ 10 ಕಿ.ಮೀ.ಕಾಮಗಾರಿಗೆ 46 ಕೋಟಿ ರೂ. ಮಂಜೂರಾಗಿದ್ದು, ರಸ್ತೆ ಬದಿಯ ಮರಗಳ ತೆರವು, ಚರಂಡಿ ನಿರ್ಮಾಣ ಸೇರಿದಂತೆ ಮಣ್ಣಿನ ಕಾಮಗಾರಿ ನಡೆದಿದೆ. ಇನ್ನು ಕಾಂಕ್ರೀಟ್ ರಸ್ತೆ ಕಾಮಗಾರಿ ಆರಂಭವಾಗಬೇಕಾಗಿದೆ. ಸರ್ಕಾರ ಪತನವಾದರೆ ಮುಂಬರುವ ಸರ್ಕಾರ ಈ ಕಾಮಗಾರಿಗಳಿಗೆ ಅನುದಾನ ನೀಡಲಾರದು ಎಂಬ ಅನುಮಾನ ಮೂಡಿದೆ. ಹಾಸನ – ಹೊಳೆನರಸೀಪುರ ನಡುವೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆ ನಿರ್ಮಾಣದ ಕಾಮಗಾರಿ ಪ್ರಾರಂಭದಲ್ಲಿ ಬಿರುಸಾಗಿ ನಡೆಯಿತು. ಆದರೆ ಲೋಕಸಭಾ ಚುನಾವಣೆಯ ಫ‌ಲಿತಾಂಶ ಪ್ರಕಟಣೆಯ ನಂತರ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿಯ ಮೇಲೂ ರಾಜಕಾರಣದ ಕರಿನೆರಳು ಆವರಿಸಿದಂತಿದೆ.

ಹಾಸನ – ಬೇಲೂರು – ಚಿಕ್ಕಮಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿತ್ತು. ಆದರೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಬಹು ನಿರೀಕ್ಷಿತ ಮಾಗಡಿ – ಸಾಲಿಗ್ರಾಮ- ರಾಮನಾಥಪುರ – ಸೋಮವಾರ ಪೇಟೆ ರಸ್ತೆ ಅಭಿವೃದ್ಧಿಗೆ ಲೋಕಸಭಾ ಚುನಾವಣೆ ಪೂರ್ವದಲ್ಲಿ ಚಾಲನೆ ನೀಡಿದರೂ ಇನ್ನೂ ಕಾಮಗಾರಿ ಆರಂಭವಾಗಿಲ್ಲ.

ಉದ್ಯಾನ ನಿರ್ಮಾಣ ವಿಳಂಬ: ಹಾಸನದ ಸೆಂಟ್ರಲ್ ಬಸ್‌ ನಿಲ್ದಾಣದ ಸನಿಹ ಚನ್ನಪಟ್ಟಣ ಕೆರೆಯ ಅಂಗಳದಲ್ಲಿ ಸರೋವರ, ಹೋಟೆಲ್, ಮನರಂಜನಾ ವ್ಯವಸ್ಥೆ, ಉದ್ಯಾನವನದ ಕಾಮಗಾರಿಗೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲಿಯೇ ಅನುಮೋದನೆ ದೊರೆತು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಹಾಗೆಯೇ ಬಸ್‌ ನಿಲ್ದಾಣ ಸಮೀಪದ ರೈಲ್ವೆ ಮೇಲ್ಸೆತುವೆ ಕಾಮಗಾರಿಯೂ ಆಮೆ ವೇಗದಲ್ಲಿ ಸಾಗಿದೆ. ಎನ್‌.ಆರ್‌.ವೃತ್ತದಿಂದ ಬಸ್‌ ನಿಲ್ದಾಣದವರೆಗೆ ರಸ್ತೆ ಗುಂಡಿಮಯವಾಗಿದೆ. ಸರ್ಕಾರ ಪತನವಾದರೆ ಈ ಎಲ್ಲಾ ಕಾಮಗಾರಿಗಳಿಗೂ ಕಂಟಕ ಎದುರಾಗಬಹುದು.

ಕಾಮಗಾರಿ ವೇಗಕ್ಕೆ ಬ್ರೇಕ್‌? ಸಚಿವ ಎಚ್.ಡಿ.ರೇವಣ್ಣ ಅವರು ಕನಸಿನ ಹಾಸನ ವೈದ್ಯಕೀಯ ಕಾಲೇಜು ಅಭಿವೃದ್ಧಿ ಯೋಜನೆಗಳು ಆರಂಭವಾಗಿ ವಿದ್ಯಾರ್ಥಿ ನಿಲ ಯಗಳು, ಸಿಬ್ಬಂದಿ ವಸತಿಗೃಹ ಕಾಮಗಾರಿಗಳು ಪ್ರಗತಿಯಲ್ಲಿವೆ. 450 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣದ ಅಡಿಪಾಯ ಆರಂಭವಾಗಿದ್ದು, 99 ಕೋಟಿ ರೂ. ಮಂಜೂರಾಗಿದೆ. ಹಾಗೆಯೇ ಗಂಧದ ಕೋಠಿ ಆವರಣದಲ್ಲಿ ಬಾಲಕಿಯರ ಎರಡು ಪದವಿಪೂರ್ವ ಕಾಲೇಜುಗಳ ಎರಡು ಹೆಚ್ಚ್ಚುವರಿ ಕಟ್ಟಡಗಳು, ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ, ಸೂಪರ್‌ ಸ್ಪೆಷಾಲಿಟಿ ಕಟ್ಟಡದ ಕಾಮಗಾರಿಗಳು ಆರಂಭವಾಗಿವೆ.

ಪ್ರವಾಸಿ ಮಂದಿರದಲ್ಲಿ ಹೊಸ ಮೂರು ಕಟ್ಟಡಗಳ ನಿರ್ಮಾಣ ಆರಂಭವಾಗಿದೆ. ಆದರೆ ಇವುಗಳು ಪೂರ್ಣಗೊಳ್ಳುವ ಮೊದಲೇ ಸರ್ಕಾರ ಪತನವಾದರೆ ಈ ಕಾಮಗಾರಿಗಳ ವೇಗಕ್ಕೆ ಬ್ರೇಕ್‌ ಬೀಳಬಹುದೆಂಬ ಆತಂಕ ಕಾಡುತ್ತಿದೆ.

ನಾಲೆ ಆಧುನೀಕರಣಕ್ಕೂ ಅಡ್ಡಿ? ಮೊಸಳೆ ಹೊಸಹಳ್ಳಿಯಲ್ಲಿ ಈ ವರ್ಷದಿಂದ ಪ್ರಾರಂಭವಾಗುತ್ತಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು, ಪಾಲಿಟೆಕ್ನಿಕ್‌, ಹೊಳೆನರಸೀಪುರದ ಮಹಿಳಾ ಪಾಲಿಟೆಕ್ನಿಕ್‌ ಕಟ್ಟಡಗಳ ನಿರ್ಮಾಣಕ್ಕೂ ಸರ್ಕಾರ ಬದಲಾದರೆ ಅನುದಾನ ಸಿಗದೇ ಹೋಗಬಹುದು. ಹಾಗೆಯೇ ಹತ್ತು ಹಲವು ಏತ ನೀರಾವರಿ ಯೋಜನೆಗಳು, ಹೇಮಾವತಿ ಬಲದಂಡೆ ನಾಲೆ ಅಧುನೀಕರಣ ಕಾಮಗಾರಿಯ ಆರಂಭಕ್ಕೂ ಅಡ್ಡಿ ಎದುರಾಗಬಹುದು ಎಂಬ ಭಾವನೆ ಜನರಲ್ಲಿ ಮೂಡಿದೆ.

ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಬೂವನಹಳ್ಳಿ, ಕೆಂಚಟ್ಟಹಳ್ಳಿ, ಗೇಕರವಳ್ಳಿ, ಸಮುದ್ರವಳ್ಳಿ ಬಳಿ 1,200 ಎಕರೆಯಲ್ಲಿ 15ಸಾವಿರ ನಿವೇಶನಗಳ ನಿರ್ಮಾಣದ ಬಡಾವಣೆ ನಿರ್ಮಾಣದ ಯೋಜನೆ ರೂಪಿಸಿತ್ತು. ಚಿಕ್ಕಹೊನ್ನೇನಹಳ್ಳಿ, ಯಡೆಯೂರು , ಚಿಟ್ಟನಹಳ್ಳಿ, ದೊಡಡಕೊಂಡಗೊಳ ಬಳಿ ಕರ್ನಾಟಕ ಗೃಹಮಂಡಳಿ ಹೊಸ ಬಡಾವಣೆ ನಿರ್ಮಾಣದ ಪ್ರಸ್ತಾವನೆ ಸಿದ್ಧಪಡಿಸಿತ್ತು. ಹೊರ ವರ್ತುಲ ರಸ್ತೆ ನಿರ್ಮಾಣದ 159 ಕೋಟಿ ರೂ. ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ಸರ್ಕಾರ ಪತನವಾದರೆ ಈ ಯೋಜನೆಗಳು ನೆನಗುದಿಗೆ ಬೀಳಬಹುದು.

ಬಹುನಿರೀಕ್ಷಿತ ಹಾಸನ ವಿಮಾನ ನಿಲ್ದಾಣ ನಿರ್ಮಾಣ ಇನ್ನೇನು ಆರಂಭವಾಗಬೇಕಾಗಿತ್ತು. ಅಷ್ಟರಲ್ಲಿ ರಾಜಕೀಯ ಅಸ್ಥಿರತೆ ಯೋಜನೆಯನ್ನು ಆವರಿಸಿದೆ. ಬಜೆಟ್‌ನಲ್ಲಿ ಹಾಸನಕ್ಕೆ ತಾಂತ್ರಿಕ ವಿ.ವಿ. ಮಂಜೂರಾಗಿತ್ತು. ಆದರೆ ಇದುವರೆಗೂ ಅದರ ಅನುಷ್ಠಾನದ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗೆ ಹಾಸನ ಜಿಲ್ಲೆಯ ನೂರಾರು ಅಭಿವೃದ್ಧಿ ಯೋಜನೆಗಳ ಮೇಲೆ ಸರ್ಕಾರದ ಅಸ್ಥಿರತೆಯ ಕರಿ ನೆರಳು ಆವರಿಸಿದೆ.

 

● ಎನ್‌. ನಂಜುಂಡೇಗೌಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ