ಏಲಕ್ಕಿ ಉದ್ಯಮಕ್ಕೆ ಪ್ರವಾಹದ ಪ್ರಹಾರ

ಸಂಕಷ್ಟದಲ್ಲಿ ಏಲಕ್ಕಿಮಾಲೆ ಉದ್ಯಮಿದಾರರು

Team Udayavani, Sep 30, 2019, 1:26 PM IST

ಹಾವೇರಿ: ವಿಶ್ವ ಪ್ರಸಿದ್ಧಿ ಪಡೆದಿರುವ ಹಾವೇರಿಯ ಏಲಕ್ಕಿ ಮಾಲೆಗೆ ಏಲಕ್ಕಿ ಕೊರತೆ ಉಂಟಾಗಿದ್ದು, ಮಾಲೆ ತಯಾರಿಕೆ ಉದ್ಯಮದ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ.

ಮಾಲೆ ತಯಾರಿಸಲು ಅಗತ್ಯವಿರುವ ಒಂದೇ ಗಾತ್ರದ ಮೊಗ್ಗು ಮಾದರಿಯ ಏಲಕ್ಕಿಯನ್ನು ಮಡಿಕೇರಿ, ತಮಿಳುನಾಡಿನ ಗುಂಡಿನಾಯಕನೂರು ಹಾಗೂ ಕೇರಳ ರಾಜ್ಯಗಳಿಂದ ತರಿಸಿ ಏಲಕ್ಕಿಮಾಲೆ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಕೇರಳ, ಮಡಿಕೇರಿಗಳಲ್ಲಿ ಉಂಟಾದ ಪ್ರವಾಹದ ಪರಿಣಾಮ ಏಲಕ್ಕಿ ಬೆಳೆ ಹಾಳಾಗಿರುವುದರಿಂದ ವಿಶಿಷ್ಟ ಗಾತ್ರದ ಏಲಕ್ಕಿ ಸಿಗದೆ ಮಾಲೆ ತಯಾರಕರು ಪರಿತಪಿಸುವಂತಾಗಿದೆ.

ಮಾಲೆ ತಯಾರಿಗೆ ಯೋಗ್ಯ ಏಲಕ್ಕಿ ಹೆರಳವಾಗಿ ಸಿಗುತ್ತಿದ್ದ ಕೇರಳ, ಮಡಿಕೇರಿ ಪ್ರದೇಶಗಳಲ್ಲಿ ಏಲಕ್ಕಿ ಬೆಳೆ ಹಾಳಾಗಿದ್ದರಿಂದ ಅದರ ಬೆಲೆ ದುಪ್ಪಟ್ಟಾಗಿದೆ. ಹೆಚ್ಚು ಹಣ ಕೊಟ್ಟರೂ ಮಾಲೆ ತಯಾರಿಕೆಗೆ ಯೋಗ್ಯವಿರುವಂಥ ಏಲಕ್ಕಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಇನ್ನು ಆಮದು ಪ್ರಮಾಣವೂ ಕಡಿಮೆಯಾಗಿದ್ದು, ಅದರ ಬೆಲೆ ಗಗನಮುಖೀಯಾಗಿ ಏರಿಕೆಯಾಗುತ್ತಲೇ ಇದೆ.

ಇನ್ನು ಏಲಕ್ಕಿ ಸಿಗದೆ ಇರುವುದರಿಂದ ಹಾಗೂ ದುಬಾರಿ ದರ ಕೊಟ್ಟು ಮಾಲೆ ತಯಾರಿಸಿದರೆ ಮಾಲೆ ದರವೂ ಅಧಿಕವಾಗಿದೆ. ಹೀಗಾಗಿ ವ್ಯಾಪಾರವೂ ಕುಸಿದು ಮಾಲೆ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಲಕ್ಕಿ ಮಾಲೆ ತಯಾರಿಕೆಗಾಗಿ ಇಲ್ಲಿಯ ಮಾಲೆ ತಯಾರಕರು 30ರಿಂದ 50ಕೆಜಿ ವರೆಗೂ ಏಲಕ್ಕಿ ಖರೀದಿಸುತ್ತಿದ್ದರು. ಈಗ ಏಲಕ್ಕಿ ಮಾಲೆ ತಯಾರಿಕೆಗೆ ಯೋಗ್ಯವಾದ ಏಲಕ್ಕಿ ಐದಾರು ಕೆಜಿ ಕೂಡ ಸಿಗುತ್ತಿಲ್ಲ. ಹೀಗಾಗಿ ಏಲಕ್ಕಿ ಮಾಲೆ ಉತ್ಪಾದನೆ ಗಣನೀಯವಾಗಿ ಕುಸಿತ ಕಂಡಿದೆ. ಕೆಜಿಗೆ 1800ರೂ.ಗೆ ಸಿಗುತ್ತಿದ್ದ ಏಲಕ್ಕಿ ಈಗ ಐದರಿಂದ ಐದೂವರೆ ಸಾವಿರ ರೂ.ಗಳಿಗೆ ಏರಿದೆ.

ಬೆಲೆ ಗಗನಮುಖೀ: ಮಾಲೆ ತಯಾರಿಕೆಗೆ ಬೇಕಾಗುವ ಏಲಕ್ಕಿ ಬೆಲೆ ಪ್ರತಿ ಕೆಜಿಗೆ 1800 ರೂ. ಇತ್ತು. ಈಗ ಕೆಜಿಗೆ 5000-5500 ರೂ. ಆಗಿದೆ. ಕಳೆದೆರಡು ವರ್ಷಗಳಿಂದ ಕೇರಳ, ಮಡಿಕೇರಿಯಲ್ಲಿ ಪ್ರವಾಹ ಮತ್ತು ಭೂ ಕುಸಿತದಿಂದ ಬೆಳೆ ಹಾಳಾಗಿ ಬೆಲೆ ಹೆಚ್ಚಾಗಿದೆ. ಭವಿಷ್ಯದಲ್ಲಿ ಏಲಕ್ಕಿ ಬೆಲೆ ಇನ್ನೂ ಹೆಚ್ಚಾಗಲಿದ್ದು ಮಾಲೆಗಳ ದರವೂ ಅಧಿ ಕವಾಗಿ ವ್ಯಾಪಾರದ ಮೇಲೆ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ. ಏಲಕ್ಕಿ ಕೊರತೆ, ದರ ಹೆಚ್ಚಳ, ವ್ಯಾಪಾರ ಕುಸಿತದ ಪರಿಣಾಮ ಏಲಕ್ಕಿ ಮಾಲೆ ತಯಾರಿಸುವ ಕಾರ್ಮಿಕರಿಗೂ ಕೈತುಂಬ ಕೆಲಸ ಇಲ್ಲದಂತಾಗಿದ್ದು, ಬೇರೆ ಕೆಲಸ ಅರಸಿ ಹೋಗುವಂತಾಗಿದೆ. ಒಟ್ಟಾರೆ ಏಲಕ್ಕಿ ಮಾಲೆ ತಯಾರಿಕೆ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ.

ಏಲಕ್ಕಿ ಮಾಲೆ ಖ್ಯಾತಿ: ಏಲಕ್ಕಿ ಮಾಲೆ ತನ್ನದೇ ಆದ ವಿಶೇಷ ಅಲಂಕಾರ, ಸುವಾಸನೆಯಿಂದ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಹಾವೇರಿಯ “ಏಲಕ್ಕಿ ಮಾಲೆ’ ದೇಶದ ಪ್ರಧಾನಿಯಿಂದ ಹಿಡಿದು ಎಲ್ಲ ಗಣ್ಯರ ಕೊರಳನ್ನು ಅಲಂಕರಿಸಿ, ಅಭಿನಂದಿಸಿದ ಕೀರ್ತಿ ಹೊಂದಿದೆ. ಅಷ್ಟೇ ಅಲ್ಲ ಅಮೇರಿಕ, ಲಂಡನ್‌, ಜಪಾನ್‌, ದಕ್ಷಿಣ ಆಫ್ರಿಕಾ, ಉತ್ತರ ಕೋರಿಯಾ, ನೇಪಾಳ, ಸೌದಿ ಅರಬಿಯಾ ಸೇರಿದಂತೆ ವಿವಿಧ ದೇಶಗಳಲ್ಲಿಯೂ ಹಾವೇರಿಯ ಏಲಕ್ಕಿ ಮಾಲೆಗೆ ಖ್ಯಾತಿ ಪಡೆದಿದ್ದು, ಈಗಲೂ ಏಲಕ್ಕಿ ಮಾಲೆಗೆ ಭಾರಿ ಬೇಡಿಕೆ ಇದೆ. ಆದರೆ, ಪ್ರಸ್ತುತ ಏಲಕ್ಕಿಮಾಲೆ ಏಲಕ್ಕಿ ಕೊರತೆ ಎದುರಿಸುತ್ತಿದೆ.

ಏಲಕ್ಕಿ ಮಾಲೆ ತಯಾರಿಕೆ ಒಂದು ವಿಶಿಷ್ಟ ಕಲೆ. ಅತ್ಯುತ್ತಮ ದರ್ಜೆಯ ಮತ್ತು ದುಂಡಗಿನ ಏಲಕ್ಕಿಗಳನ್ನು ಕೇರಳ, ಮಡಿಕೇರಿ, ಸಕಲೇಶಪುರದಿಂದ ತಂದು ಒಂದು ವಾರದವರೆಗೆ ಬ್ಲೀಚಿಂಗ್‌ ಪೌಡರ್‌ ಬೆರೆಸಿದ ಲವಣಯುಕ್ತ ನೀರಿನಲ್ಲಿ ತೊಳೆಯಲಾಗುತ್ತದೆ. ನಂತರ ಒಣಗಿಸಿದಾಗ ಅದು ಬಿಳಿಯಾಗಿ ಹೊಳೆಯುತ್ತದೆ. ಏಲಕ್ಕಿ ಜತೆಗೆ ಅಲಂಕಾರಿಕ ವಸ್ತುಗಳಾದ ರೇಷ್ಮೆ ಎಳೆಗಳು, ಮಣಿಗಳು ಮತ್ತು ಉಣ್ಣೆ ದಾರದಿಂದ ಹೂಮಾಲೆಗಳನ್ನು ಅಲಂಕರಿಸುವ ಮೂಲಕ ಆಕರ್ಷಣೀಯಗೊಳಿಸಲಾಗುತ್ತದೆ. ಈ ವಿಶಿಷ್ಟ ಏಲಕ್ಕಿಮಾಲೆ ಉದ್ಯಮ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರವಾಹದಿಂದ ಮಾಲೆ ತಯಾರಿಕೆ ಬೇಕಾದ ಏಲಕ್ಕಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಕೊರತೆಯಾಗಿರುವುದರಿಂದ ಏಲಕ್ಕಿ ದರವೂ ಅತಿ ಹೆಚ್ಚಾಗಿದೆ. ಅದರ ಪರಿಣಾಮ ಏಲಕ್ಕಿ ಮಾಲೆ ದರವೂ ಹೆಚ್ಚಾಗಿದ್ದು ಜನರು ಹೆಚ್ಚು ಹಣ ಕೊಟ್ಟು ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮಾಲೆ ತಯಾರಿಕೆ ಉದ್ಯಮ ನಷ್ಟ ಅನುಭವಿಸುವಂತಾಗಿದೆ. –ಹಜಿಉಸ್ಮಾನ್ಸಾಬ ಪಟವೆಗಾರ, ಏಲಕ್ಕಿ ಮಾಲೆ ತಯಾರಕರು ಹಾವೇರಿ.

 

-ಎಚ್‌.ಕೆ. ನಟರಾಜ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹಾವೇರಿ: ಮುಂದಿನ ಬಜೆಟ್‌ನಲ್ಲಿ ಪೊಲೀಸರಿಗೆ ವಸತಿಗೃಹ ನಿರ್ಮಾಣಕ್ಕೆ ದೊಡ್ಡ ಪ್ರಮಾಣದ ಅನುದಾನ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ತಾಲೂಕಿನ...

  • ರಾಣಿಬೆನ್ನೂರ: ನಗರದ ಮೇಡ್ಲೆರಿ ರಸ್ತೆಯ ಲಯನ್ಸ್‌ ಶಾಲಾ ಭವನದಲ್ಲಿ ಸ್ವಾಕರವೇ, ಲಯನ್ಸ್‌, ಲಿಯೋ ಸಂಸ್ಥೆ, ಶಂಕರ್‌ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ...

  • ಹಾವೇರಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಕ್ತ ವಿದಳನ ಘಟಕ ಜಿಲ್ಲಾಸ್ಪತ್ರೆಯಲ್ಲಿ ಆರಂಭಗೊಂಡಿದ್ದು ಜಿಲ್ಲೆಯ ಜನರಿಗೆ ಹೆಚ್ಚು ಅನುಕೂಲವಾದಂತಾಗಿದೆ. ಜಿಲ್ಲೆಯಲ್ಲಿ...

  • ಬಂಕಾಪುರ: ಪಟ್ಟಣದ ಜನತೆಗೆ ವರದಾ ನದಿಯ ನೀರು ತಲುಪಿಸುವ ಉದ್ದೇಶದಿಂದ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಾಕವೆಲ್‌ಗೆ ಪುರಸಭೆ ಆಡಳಿತ ಬೀಗ ಜಡೆದಿರುವುದರಿಂದ...

  • ಹಾವೇರಿ: ಜಿಲ್ಲೆಯ ಎರಡು ದಶಕಗಳ ಬೇಡಿಕೆ ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೊದಲ ಬಡಾವಣೆ ಅಭಿವೃದ್ಧಿ...

ಹೊಸ ಸೇರ್ಪಡೆ