ಕೆರೆ ಹೂಳೆತ್ತಲು ಡಿಸಿ-ಸಿಇಒ ಶ್ರಮದಾನ!

•ಪಿಕಾಸಿ ಹಿಡಿದು ಮಣ್ಣು ಅಗೆದ ಜಿಪಂ ಅಧ್ಯಕ್ಷ ಕರಿಯಣ್ಣನವರ •ಅಂತರ್ಜಲ ಹೆಚ್ಚಳಕ್ಕೆ ಹೆಚ್ಚಿನ ಆದ್ಯತೆ

Team Udayavani, Jun 16, 2019, 12:26 PM IST

ಹಾವೇರಿ: ಜಿಪಂ ಅಧ್ಯಕ್ಷರು, ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಶ್ರಮದಾನ ಮಾಡಿದರು.

ಹಾವೇರಿ: ಜಿಪಂ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹಾಗೂ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಲೀಲಾವತಿ ಅವರು ಸ್ವತಃ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಶ್ರಮದಾನ ಮಾಡುವ ಮೂಲಕ ಜಲಜಾಗೃತಿ ಮೂಡಿಸಿದರು.

ಬ್ಯಾಡಗಿ ತಾಲೂಕು ಹೆಡಿಗ್ಗೊಂಡ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿ ಕಾರ್ಯದಲ್ಲಿ ಅವರು ಶ್ರಮದಾನ ಮಾಡಿದರು.

ಹೆಡಿಗ್ಗೊಂಡ ಗ್ರಾಮದ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಕೆರೆಯ ಹೂಳೆತ್ತುವ ಕೆಲಸದಲ್ಲಿ ತೊಡಗಿರುವ ಉದ್ಯೋಗ ಖಾತ್ರಿ ಕೂಲಿಕಾರರೊಂದಿಗೆ ಪಿಕಾಸಿ ಹಿಡಿದು ಮಣ್ಣು ಅಗೆದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಬುಟ್ಟಿಗೆ ಮಣ್ಣು ತುಂಬಿ ಕೂಲಿಕಾರರ ತಲೆಮೇಲೆ ಎತ್ತಿ ಇರಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಕೆ.ಲೀಲಾವತಿ ಅವರು ಸಹ ಮಹಿಳಾ ಕೂಲಿಕಾರರೊಂದಿಗೆ ತಲೆಯ ಮೇಲೆ ಮಣ್ಣಿನ ಬುಟ್ಟಿ ಹೊತ್ತು ಮಹಿಳೆಯರೊಂದಿಗೆ ಹೆಜ್ಜೆಹಾಕಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಕೆ. ಕರಿಯಣ್ಣನವರ ಮಾತನಾಡಿ, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅಂತರ್ಜಲ ಹೆಚ್ಚಳಕ್ಕಾಗಿ ಜಿಲ್ಲೆಯಾದ್ಯಂತ ಕೆರೆಗಳ ಹೂಳೆತ್ತುವ ಕಾಮಗಾರಿಯನ್ನು ಉದ್ಯೋಗಖಾತ್ರಿಯಡಿ ಕೈಗೊಳ್ಳಲಾಗಿದೆ. ಹೆಡಿಗ್ಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10ಕ್ಕೂ ಅಧಿಕ ಕೆರೆಗಳ ಹೂಳು ತೆಗೆಯುವ ಕಾಮಗಾರಿ ಕೈಗೊಳ್ಳಲಾಗಿದೆ. ಚೆಕ್‌ ಡ್ಯಾಂ ನಿರ್ಮಾಣ, ನೀರು ಇಂಗಿಸುವ ಗುಂಡಿ ಹಾಗೂ ನೀರು ಸಂಗ್ರಹಣಗಳ ಪುನಶ್ಚೇತನ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದರು. ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮಾತನಾಡಿ, ಕೆರೆ ಹೂಳೆತ್ತುವುದರಿಂದ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಬೇಸಿಗೆಯ ಏಳೆಂಟು ತಿಂಗಳವರೆಗೆ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ಹೆಡಿಗ್ಗೊಂಡ ಕೆರೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ನಾಲ್ಕು ತಿಂಗಳೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಮಾತನಾಡಿ, 2019ರ ವರ್ಷವನ್ನು ಜಲವರ್ಷ ಎಂದು ಆಚರಿಸಲಾಗುತ್ತಿದೆ. ಈ ವರ್ಷ ಪ್ರತಿ ಗ್ರಾಮ ಪಂಚಾಯತಿಗೆ 500 ಸಸಿಗಳನ್ನು ನೆಡುವುದರ ಮೂಲಕ ಹಸಿರೀಕರಣಕ್ಕೆ ಚಾಲನೆ ನೀಡಲಾಗುವುದು. ಜಲಸಂಗ್ರಹ, ಜಲಮೂಲಗಳ ಪುನಶ್ಚೇತನ ಹಾಗೂ ನೀರಿನ ಮಿತ ಬಳಕೆ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ‘ಸ್ವಚ್ಛ ಮೇವ ಜಯತೆ’ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಲ್ಲಿ ಗ್ರಾಮಗಳ ಸ್ವಚ್ಛತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟು 17 ಗ್ರಾಮ ಪಂಚಾಯತಿಯಲ್ಲಿ ಮೊದಲ ಹಂತವಾಗಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದೆ. ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ಒಣ ಕಸವನ್ನು ಗ್ರಾಮಸ್ಥರಿಂದ ಸಂಗ್ರಹಿಸಿ ವ್ಯವಸ್ಥಿತವಾಗಿ ವಿಲೇವಾರಿ ಮಾಡಲಾಗುತ್ತಿದೆ. ಜಲಾಮೃತ ಹಾಗೂ ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಅಂಗವಾಗಿ ಶ್ರಮದಾನದ ಮೂಲಕ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಉದ್ಯೋಗ ಖಾತ್ರಿ ಕೂಲಿಕಾರರೊಂದಿಗೆ ಸಂವಾದ ನಡೆಸಿ, ಸಕಾಲಕ್ಕೆ ಕೂಲಿ ಹಣ ಪಾವತಿಯಾಗುತ್ತಿರುವ ಬಗ್ಗೆ ಹಾಗೂ ಕೂಲಿ ಕೆಲಸ ದೊರೆಯುತ್ತಿರುವ ಕುರಿತಂತೆ ಮಾಹಿತಿ ಪಡೆದರು.

ಶ್ರಮದಾನದಲ್ಲಿ ಜಿಪಂ ಸದಸ್ಯ ಮುನಾಫಸಾಬ್‌ ಯಲಿಗಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ಜಿಪಂ ಸಹಾಯಕ ಕಾರ್ಯದರ್ಶಿ ಜಾಫರ್‌ ಸುತಾರ, ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿ, ಸಮಾಜ ಕಲ್ಯಾಣಾಧಿಕಾರಿ ಚೈತ್ರಾ, ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಅಂದಾನೆಪ್ಪ ವಡಗೇರಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಮೇಶ ಒಳಗೊಂಡಂತೆ ವಿವಿಧ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ