ಕೌರವನ ಕ್ಷೇತ್ರದಲ್ಲಿ ಅನರ್ಹತೆ ಕಲರವ

•ಬಿ.ಸಿ. ಪಾಟೀಲ ಅಭಿಮಾನಿಗಳಲ್ಲಿ ಆತಂಕ •ಕ್ಷೇತ್ರ ರಾಜಕೀಯದಲ್ಲಿ ಸಂಚಲನ •ಮುಂದಿನ ನಡೆ ಬಗ್ಗೆ ಕುತೂಹಲ

Team Udayavani, Jul 29, 2019, 9:07 AM IST

ಹಾವೇರಿ: ಜಿಲ್ಲೆಯ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ವಿಧಾನಸಭೆ ಸ್ಪೀಕರ್‌ ಅವರಿಂದ ಅನರ್ಹತೆಗೊಳಗಾಗುತ್ತಿದ್ದಂತೆ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಪಾಟೀಲ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಶಾಸಕ ಸ್ಥಾನದ ಅನರ್ಹತೆ ಪ್ರಶ್ನಿಸಿ ಬಿ.ಸಿ. ಪಾಟೀಲ ಸೇರಿದಂತೆ ಅನರ್ಹತೆಗೊಳಗಾದ ಶಾಸಕರು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದ್ದು ಅನರ್ಹತೆಯನ್ನು ನ್ಯಾಯಾಲಯ ಎತ್ತಿ ಹಿಡಿದರೆ ಕ್ಷೇತ್ರ ರಾಜಕೀಯದಲ್ಲಿ ಏನಾಗಬಹುದು? ಅನರ್ಹತೆಯನ್ನು ನ್ಯಾಯಾಲಯ ಅಸಿಂಧುಗೊಳಿಸಿದರೆ ಮುಂದೆ ಏನಾಗಬಹುದು ಎಂಬ ವಿಶ್ಲೇಷಣೆ ಜೋರಾಗಿದೆ.

ಸಚಿವ ಸ್ಥಾನ ನೀಡದೆ ಕಾಂಗ್ರೆಸ್‌ ತಮಗೆ ಅನ್ಯಾಯ ಮಾಡಿದೆ ಎಂದು ಆಗಾಗ ಆಕ್ರೋಶ ಹೊರಹಾಕುತ್ತಲೇ ಬಂದಿದ್ದ ಶಾಸಕ ಬಿ.ಸಿ. ಪಾಟೀಲ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅತೃಪ್ತ ಶಾಸಕರ ಗುಂಪಿನಲ್ಲಿ ಸೇರಿಕೊಂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರೆನಿಸಿದ್ದ ಬಿ.ಸಿ. ಪಾಟೀಲ, ಕೊನೆಯ ಗಳಿಗೆಯಲ್ಲಾದರೂ ಮಾತೃಪಕ್ಷಕ್ಕೆ ಮರಳಿ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಕೊನೆಯ ಗಳಿಗೆಯಲ್ಲೂ ಬಾರದೆ ಈಗ ಸ್ಪೀಕರ್‌ ಅವರಿಂದ ಅನರ್ಹತೆಗೊಳಗಾಗಿದ್ದು ಕ್ಷೇತ್ರದಲ್ಲಿ ಬಿರುಸಿನ ಚರ್ಚೆಗೆ ಇಂಬು ನೀಡಿದೆ.

ಒಂದು ವೇಳೆ ಬಿ.ಸಿ. ಪಾಟೀಲರ ಶಾಸಕ ಸ್ಥಾನ ಅನರ್ಹತೆಗೆ ಒಳಗಾಗದಿದ್ದರೆ ಸ್ವತಃ ಅವರೇ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆಯಿಂದ ನಡೆಯಬಹುದಾಗಿದ್ದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ಸಿ. ಪಾಟೀಲರೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿತ್ತು. ಕ್ಷೇತ್ರದ ಬಿಜೆಪಿ ಮುಖಂಡ, ಮಾಜಿ ಶಾಸಕ ಯು.ಬಿ. ಬಣಕಾರ ಅವರಿಗೆ ವಿಪ ಸದಸ್ಯತ್ವ ನೀಡುವ ಬಗ್ಗೆಯೂ ಚರ್ಚೆ ನಡೆದಿತ್ತು. ಶಾಸಕ ಸ್ಥಾನ ಅನರ್ಹತೆ ಕಾರಣದಿಂದ ಈ ಎಲ್ಲ ಲೆಕ್ಕಾಚಾರ ಈಗ ತಲೆಕೆಳಗಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿಂಧುವಾದರೆ?: ಸ್ಪೀಕರ್‌ ನೀಡಿರುವ ಅನರ್ಹತೆಯನ್ನು ನ್ಯಾಯಾಲಯ ಎತ್ತಿಹಿಡಿದರೆ ಬಿ.ಸಿ. ಪಾಟೀಲರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಆಗದು. ಆಗ ಬಿಜೆಪಿ ಮೊದಲ ಆದ್ಯತೆಯಾಗಿ ಅವರ ಕುಟುಂಬದವರಿಗೇ ಟಿಕೆಟ್ ನೀಡಲು ಮುಂದಾಗಬಹುದು. ಆಗ ಬಿ.ಸಿ. ಪಾಟೀಲರ ಮಗಳು ಸೃಷ್ಟಿ ಪಾಟೀಲ ಹೆಸರು ಮುಂಚೂಣಿಗೆ ಬರುತ್ತದೆ. ಸೃಷ್ಟಿ ಪಾಟೀಲ ಈಗಾಗಲೇ ರಾಜಕಾರಣದಲ್ಲಿ ಗುರುತಿಸಿಕೊಂಡವರು. ಹಿರೇಕೆರೂರು ತಾಲೂಕು ಕಾಂಗ್ರೆಸ್‌ ಮಹಿಳಾ ಘಟಕದಲ್ಲಿ ಪದಾಧಿಕಾರಿಯಾಗಿ ತೊಡಗಿಸಿಕೊಂಡಿದ್ದಾರೆ. ಬಿ.ಸಿ. ಪಾಟೀಲ ಭಾಗಿಯಾಗುವ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಭಾಗವಹಿಸುತ್ತ ಬಂದಿದ್ದು ಕ್ಷೇತ್ರದಲ್ಲಿ ಚಿರಪರಿಚಿತರೂ ಆಗಿದ್ದಾರೆ. ರಾಜಕಾರಣದ ಜತೆಗೆ ತಮ್ಮದೇ ಆದ ಶಿಕ್ಷಣ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿಯೂ ಕೆಲಸ ಮಾಡಿದ ಅನುಭವ ಹೊಂದಿರುವ ಸೃಷ್ಟಿ ಪಾಟೀಲ, ಬದಲಾದ ರಾಜಕಾರಣಕ್ಕೆ ತಕ್ಕಂತೆ ಅವರೂ ಪಕ್ಷ ಬದಲಾಯಿಸಿ ಬಿಜೆಪಿಯಿಂದ ಚುನಾವಣೆ ಎದುರಿಸಲು ಮುಂದಾಗಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.

ಇನ್ನೊಂದು ದೃಷ್ಟಿಕೋನದಲ್ಲಿ ಸೃಷ್ಟಿ ಪಾಟೀಲ ಅವರಿಗೆ ಟಿಕೆಟ್ ನೀಡುವುದಕ್ಕಿಂತ ಬಿಜೆಪಿ ತನ್ನದೇ ಪಕ್ಷದ ಪ್ರಭಾವಿ ಮುಖಂಡ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿ.ಸಿ. ಪಾಟೀಲ ವಿರುದ್ಧ ಕೇವಲ 555 ಮತಗಳ ಅಂತರದಲ್ಲಿ ಪರಾಭವಗೊಂಡ ಮಾಜಿ ಶಾಸಕ ಯು.ಬಿ. ಬಣಕಾರ ಅವರಿಗೇ ಟಿಕೆಟ್ ನೀಡುವ ಬಗ್ಗೆಯೂ ಆಲೋಚಿಸಬಹುದು. ಇದರಿಂದ ಮೂಲ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಾಗುತ್ತದೆ. ಪಕ್ಷಕ್ಕೆ ವಲಸೆ ಬಂದವರಿಗೆ ಟಿಕೆಟ್ ನೀಡುವುದರಿಂದ ಸ್ಥಳೀಯ ಬಿಜೆಪಿಯಲ್ಲುಂಟಾಗಬಹುದಾದ ಅಸಮಾಧಾನ- ಭಿನ್ನಮತ ತಡೆಯಬಹುದು ಎಂಬ ಲೆಕ್ಕಾಚಾರವೂ ಇದೆ. ಈ ಲೆಕ್ಕಾಚಾರ ಪಕ್ಕಾ ಆದರೆ ಪಕ್ಷಕ್ಕೆ ವಲಸೆ ಬರಬಹುದಾದ ಬಿ.ಸಿ. ಪಾಟೀಲರಿಗೆ ಕಾನೂನಿನ ಸಾಧ್ಯಾಸಾಧ್ಯತೆ ನೋಡಿಕೊಂಡು ವಿಪ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬಹುದು ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ನಡೆದಿದೆ.

ಅಸಿಂಧುವಾದರೆ?: ಒಂದು ವೇಳೆ ಅನರ್ಹತೆ ಪ್ರಕರಣ ನ್ಯಾಯಾಲಯದಲ್ಲಿ ಅಸಿಂಧುವಾಗಿ ಹಾಗೂ ಈಗಾಗಲೇ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಸ್ವೀಕಾರವಾದರೆ ನಡೆಯಬಹುದಾದ ಉಪಚುನಾವಣೆಯಲ್ಲಿ ಒಮ್ಮೆ ಮಾತ್ರ ಬಿ.ಸಿ. ಪಾಟೀಲ ಅವರಿಗೆ ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅವಕಾಶ ನೀಡಬಹುದು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿ.ಸಿ. ಪಾಟೀಲ ಕ್ಷೇತ್ರವನ್ನು ಯು.ಬಿ. ಬಣಕಾರ ಅವರಿಗೆ ಬಿಟ್ಟುಕೊಡಬೇಕು ಎಂಬ ಒಪ್ಪಂದ ಮಾಡಿಕೊಳ್ಳಬಹುದು. ಬಿ.ಸಿ. ಪಾಟೀಲರಿಗೆ ಮುಂದಿನ ಚುನಾವಣೆಯಲ್ಲಿ ಪಕ್ಕದ ರಾಣಿಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಬಹುದು. ಯು.ಬಿ. ಬಣಕಾರ ಅವರಿಗೆ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಬಹುದು ಇಲ್ಲವೇ ಉಪಚುನಾವಣೆಯಲ್ಲಿ ಯು.ಬಿ.ಬಣಕಾರ ಅವರಿಗೇ ಟಿಕೆಟ್ ಕೊಟ್ಟು ಬಿ.ಸಿ. ಪಾಟೀಲರಿಗೆ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಬಹುದು ಎಂಬ ಚರ್ಚೆಯೂ ಬಿಜೆಪಿಯಲ್ಲಿ ನಡೆದಿದೆ.

 

•ಎಚ್.ಕೆ. ನಟರಾಜ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಬಂಕಾಪುರ: ಪಟ್ಟಣದ ಜನತೆಗೆ ವರದಾ ನದಿಯ ನೀರು ತಲುಪಿಸುವ ಉದ್ದೇಶದಿಂದ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಜಾಕವೆಲ್‌ಗೆ ಪುರಸಭೆ ಆಡಳಿತ ಬೀಗ ಜಡೆದಿರುವುದರಿಂದ...

  • ಹಾವೇರಿ: ಜಿಲ್ಲೆಯ ಎರಡು ದಶಕಗಳ ಬೇಡಿಕೆ ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೊದಲ ಬಡಾವಣೆ ಅಭಿವೃದ್ಧಿ...

  • ಹಿರೇಕೆರೂರ: ರಾಮಾಯಣವು ಸರ್ವಕಾಲಕ್ಕೂ ಪ್ರಸ್ತುತವಾದ ಮಹಾಗ್ರಂಥ ವಾಗಿದ್ದು, ನಮ್ಮ ಬದುಕು ತಿದ್ದಿಕೊಳ್ಳುವ ಸರಳ ಹಾಗೂ ಸುಂದರ ಸಾಧನವಾಗಿದೆ. ನಾವು ಮಹಾಪುರುಷರ...

  • ಹಾವೇರಿ: ನೆನೆಗುದಿಗೆ ಬಿದ್ದಿರುವ ನಗರದಲ್ಲಿನ ವಾಲ್ಮೀಕಿ ಸಭಾಭವನ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಗೃಹ ಸಚಿವ ಮತ್ತು ಜಿಲ್ಲಾ ಉಸ್ತುವಾರಿ...

  • ಹಿರೇಕೆರೂರ: ರಟ್ಟಿಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದ ಆರಾಧ್ಯ ದೇವತೆ ಶ್ರೀದ್ಯಾಮಮ್ಮನ ದೇವಸ್ಥಾನದಲ್ಲಿ 9 ದಿನ ನಡೆದ ದೇವಿ ಪುರಾಣ ಸಂಪನ್ನಗೊಂಡಿತು. ದ್ಯಾಮಮ್ಮನ...

ಹೊಸ ಸೇರ್ಪಡೆ