ರಕ್ತದಾನ ಮಾಡಿ ಜೀವ ಉಳಿಸಿ

•ರಕ್ತಕ್ಕೆ ಪರ್ಯಾಯ ಇಲ್ಲ, ದಾನವೊಂದೇ ಪರಿಹಾರ•ರಕ್ತದಾನ ರಥಕ್ಕೆ ಚಾಲನೆ

Team Udayavani, Jun 15, 2019, 10:55 AM IST

ಹಾನಗಲ್ಲ: ರಕ್ತದಾನ ರಥ ಎಳೆಯುವ ಮೂಲಕ 'ವಿಶ್ವ ರಕ್ತದಾನ ದಿನಾಚರಣೆ'ಗೆ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಚಾಲನೆ ನೀಡಿದರು.

ಹಾನಗಲ್ಲ: ರಕ್ತಕ್ಕೆ ಪರ್ಯಾಯ ಇಲ್ಲ, ಕೃತಕವಾಗಿ ಉತ್ಪಾದಿಸಲೂ ಸಾಧ್ಯವಿಲ್ಲ, ಮನುಷ್ಯರ ದಾನದಿಂದಲೇ ಪಡೆಯಬೇಕಾಗಿದ್ದು, ರಕ್ತದಾನ ಮಾಡಿ ಜೀವ ಉಳಿಸಿ ಎಂದು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಕರೆ ನೀಡಿದರು.

ಶುಕ್ರವಾರ ಪಟ್ಟಣದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನಿಲ್ದಾಣದಲ್ಲಿ ಕನ್ನಡ ಕ್ರಿಯಾ ಸಮಿತಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಜಿಲ್ಲಾ ರಕ್ತನಿಧಿ ಕೇಂದ್ರದ ಆಶ್ರಯದಲ್ಲಿ ಅಕ್ಕಿಆಲೂರಿನ ಸ್ನೇಹ ಮೈತ್ರಿ ರಕ್ತದಾನಿಗಳ ಬಳಗದ ಸಹಯೋಗದಲ್ಲಿ ‘ವಿಶ್ವ ರಕ್ತದಾನ ದಿನಾಚರಣೆ’ ಅಂಗವಾಗಿ ಆಯೋಜಿಸಿದ ಬೃಹತ್‌ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನದ ಬಗ್ಗೆ ಈಗ ಜಾಗೃತಿ ಮೂಡಿಸುವ ಅಗತ್ಯವಿದೆ. ರಕ್ತದಾನ ಮಾಡಿದರೆ ಅಪಾಯ ಎಂಬ ಮೂಢನಂಬಿಕೆಯನ್ನು ತೊಡೆದು ಹಾಕಬೇಕಾಗಿದೆ. ರಕ್ತದಾನದಿಂದ ಕೆಲವೇ ಗಂಟೆಗಳಲ್ಲಿ ರಕ್ತದ ಉತ್ಪಾದನೆ ಸಹಜವಾಗಿಯೇ ಆಗುವುದಲ್ಲದೇ, ರಕ್ತದಾನ ಆರೋಗ್ಯಕ್ಕೂ ಒಳ್ಳೆಯದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾನಗಲ್ಲ ಘಟಕದ ವ್ಯವಸ್ಥಾಪಕ ಆರ್‌.ಸರ್ವೇಶ್‌, ರಕ್ತ ಮನುಷ್ಯನ ಜೀವಕ್ಕೆ ಅತ್ಯವಶ್ಯಕ. ವಿಜ್ಞಾನ ಎಷ್ಟೇ ಬೆಳೆದಿದ್ದರೂ ರಕ್ತ ತಯಾರಿಸಲಾಗಿಲ್ಲ. ರಕ್ತವನ್ನು ಹಂಚಿಕೊಳ್ಳುವ ಮೂಲಕ ಅಗತ್ಯವಿರುವವರಿಗೆ ರಕ್ತದಾನ ಮಾಡಬೇಕು. ಇಡೀ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಹಾನಗಲ್ಲ ಬಸ್‌ಡಿಪೋ ಮೂಲಕ ಬಸ್ಸಿನಲ್ಲಿ ರಕ್ತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿ ಇಡೀ ಬಸ್ಸನ್ನು ಅಲಂಕರಿಸಿ ಜನಜಾಗೃತಿಗೆ ಅವಕಾಶ ಮಾಡಿಕೊಟ್ಟಿದೆ. ಇದು ನಮಗೂ ಹೆಮ್ಮೆಯ ವಿಷಯ ಎಂದರು.

ಬೆಂಗಳೂರಿನ ರಕ್ತದಾನಿ ಆದಿಕೇಶವ ಪ್ರಕಾಶ್‌ ತಾನೂ 138 ಬಾರಿ ರಕ್ತದಾನ ಮಾಡಿದ್ದೇನೆ. ಒಬ್ಬ ಹೆರಿಗೆ ನೋವು ಅನುಭವಿಸುತ್ತಿರುವ ಮಹಿಳೆಗೆ ರಕ್ತ ಸಿಗದ ಕಾರಣದಿಂದ ಇಡೀ ಕುಟುಂಬ ಪರದಾಡುತ್ತಿರುವುದನ್ನು ಕಂಡು ನನಗೆ ರಕ್ತದಾನ ಮಾಡಬೇಕೆನಿಸಿತು. ಅಲ್ಲಿಂದ ಈ ವರೆಗೆ 138 ಬಾರಿ ರಕ್ತದಾನ ಮಾಡಿದ್ದೇನೆ. ನನ್ನ ಆರೋಗ್ಯದಲ್ಲಿ ಏನೂ ಅಡ್ಡ ಪರಿಣಾಮಗಳಾಗಿಲ್ಲ. ನಾನು ರಕ್ತ ನೀಡುವ ಮೂಲಕ ಅತಿ ಚಿಕ್ಕ 75ಕ್ಕೂ ಅಧಿಕ ಮಕ್ಕಳಿಗೆ ಜೀವದಾನ ನೀಡಿದ್ದೇನೆ ಎಂಬ ಸಂತೃಪ್ತಿ ಇದೆ. ಈಗ ರಕ್ತ ದಾನಕ್ಕಾಗಿ ಲೈಫ್‌ಲೈನ್‌ ಸಂಸ್ಥೆ ಪ್ರಾರಂಭಿಸಿದ್ದು, ಈಗ ಈ ಸಂಸ್ಥೆಗೆ 3 ಸಾವಿರ ಸದಸ್ಯರಿದ್ದಾರೆ. ರಕ್ತದಾನಲ್ಲಿ ಗಿನ್ನಿಸ್‌ ದಾಖಲೆ ಮಾಡುವ ಹಂಬಲವೂ ನನ್ನದಾಗಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಸ್ನೇಹ ಮೈತ್ರಿ ರಕ್ತದಾನಿಗಳ ಬಳಗದ ಸದಸ್ಯ ಕರಬಸಪ್ಪ ಗೊಂದಿ, ರಕ್ತದಾನವನ್ನು ಗ್ರಾಮೀಣ ಪ್ರದೇಶದಲ್ಲಿ ಜಾಗೃತಗೊಳಿಸುವ ಅಗತ್ಯವಿದೆ. ತಪ್ಪು ತಿಳುವಳಿಕೆಗಳನ್ನು ದೂರ ಮಾಡಿ, ರಕ್ತದಾನದ ವಾಸ್ತವತೆ ಹಾಗೂ ಅಗತ್ಯವನ್ನು ಸಮಾಜಕ್ಕೆ ತಿಳಿಸಬೇಕಾಗಿದೆ. ಕೆಎಸ್‌ಆರ್‌ಟಿಸಿ ನಮ್ಮ ಈ ಕಾರ್ಯಕ್ರಮಕ್ಕೆ ಸಕಾರಾತ್ಮಕವಾಗಿ ಬೆಂಬಲನೀಡಿ ರಕ್ತದಾನಕ್ಕೆ ಪ್ರೋತ್ಸಾಹಿಸಿರುವುದು ಸಂತೃಪ್ತಿಯ ಕಾರ್ಯವಾಗಿದೆ ಎಂದರು.

ಸನ್ಮಾನ: 138 ಬಾರಿ ರಕ್ತದಾನ ಮಾಡಿದ ಬೆಂಗಳೂರಿನ ಆದಿಕೇಶವ ಪ್ರಕಾಶ, ರಾಗವೇಂದ್ರ ರೇಣಕೆ (87 ಬಾರಿ), ಸುಚಿತ ಅಂಗಡಿ(47 ಬಾರಿ), ರಾಜೀವ ತಿಳವಳ್ಳಿ(36 ಬಾರಿ) ತಾನಾಜಿ ಘೋರ್ಪಡೆ(31 ಬಾರಿ), ಸಂತೋಷಕುಮಾರ ಕಮತಗಿಮಠ(32 ಬಾರಿ), ಪ್ರದೀಪ ಮಳ್ಳೂರ(28 ಬಾರಿ) ರಕ್ತದಾನ ಮಾಡಿದ ಮಹನೀಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಜಿಲ್ಲಾ ರಕ್ತನಿಧಿ ಕೇಂದ್ರದ ಡಾ| ಬಸವರಾಜ ತಳವಾರ, ಬಸವರಾಜ ಕಮತದ, ಆರ್‌.ಡಿ.ಹೊಸಮನಿ, ಜೆ.ರತ್ನಾಕರ, ಪದ್ಮಾ ಪೂಜಾರ, ಕೃಷ್ಣ ಮುದಗೋಳ, ಶ್ರೀನಿವಾಸ, ಸಂತೋಷ ಕಲಾಲ, ಶಶಿಧರ, ಸೌಭಾಗ್ಯ, ಮಂಜುನಾಥ ಕಮ್ಮಾರ ಮೊದಲಾದವರು ರಕ್ತದಾನ ಶಿಬಿರಕ್ಕೆ ಸಹಕರಿಸಿದರು.

ಬೆಳಗಿನ 12 ಗಂಟೆಯಿಂದ ಸಂಜೆ 4 ಗಂಟೆ ವರೆಗೆ 52ಕ್ಕೂ ಅಧಿಕ ರಕ್ತದಾನಿಗಳು ರಕ್ತದಾನ ಮಾಡಿದರು. ಹಾನಗಲ್ಲ ಬಸ್‌ನಿಲ್ದಾಣದಲ್ಲಿ ಈ ಶಿಬಿರ ನಡೆದಿದ್ದರಿಂದ ಪ್ರಯಾಣಿಕರಿಗೂ ಇದು ಕುತುಹಲಕಾರಿಯಾಗಿ ಕಂಡಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ