ಬೇಡಿಕೆ ಈಡೇರಿಕೆಗೆ ರೈತ ಸಂಘ ಒತ್ತಾಯ

Team Udayavani, Sep 10, 2019, 12:23 PM IST

ಹಾನಗಲ್ಲ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ಹಾನಗಲ್ಲ: ಸ್ಥಳೀಯ ನೂರು ಹಾಸಿಗೆಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಖಾಲಿ ಇರುವ ಸಿಬ್ಬಂದಿ ನೇಮಕ ಮಾಡುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಾಲೂಕು ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಸೋಮವಾರ ರೈತ ಸಂಘಟನೆ ಸದಸ್ಯರು ಮಿನಿ ವಿಧಾನಸೌಧಕ್ಕೆ ತೆರಳಿ ತಾಲೂಕು ತಹಶೀಲ್ದಾರ್‌ ಮೂಲಕ ಮನವಿ ಸಲ್ಲಿಸಿದರು. ಹಾನಗಲ್ಲ ತಾಲೂಕು ಆಸ್ಪತ್ರೆಗೆ ಖಾಲಿ ಇರುವ ಅಗತ್ಯ ಸಿಬ್ಬಂದಿಯನ್ನು ಕೂಡಲೇ ಭರ್ತಿ ಮಾಡಬೇಕು. ಇದರೊಂದಿಗೆ ಕೃಷಿ ಇಲಾಖೆ, ಕಂದಾಯ, ಪಶು ಸಂಗೋಪನಾ ಇಲಾಖೆಗಳಲ್ಲೂ ಕೂಡ ಸಿಬ್ಬಂದಿ ಖಾಲಿ ಇದ್ದು, ಕೂಡಲೇ ನೇಮಕಾತಿ ಮಾಡಿಕೊಳ್ಳಬೇಕು. ತಾಲೂಕಿಗೆ ಅತ್ಯವಶ್ಯಕವಾಗಿರುವ ಬಾಳಂಬೀಡ, ಶಿರಗೋಡ, ಹಿರೇಕಾಂಶಿ ಏತ ನೀರಾವರಿ ಯೋಜನೆಗಳನ್ನು ಕೂಡಲೆ ಕೈಗೆತ್ತಿಕೊಂಡು ಯೋಜನೆ ಪೂರ್ಣಗೊಳಿಸಬೇಕು. ತಾಲೂಕಿನಲ್ಲಿ ಬೆಳೆಸಾಲ ಪಡೆದ ರೈತರ ಸಾಲಮನ್ನಾ ವ್ಯಾಪ್ತಿಯಲ್ಲಿ ಬರುವಂತೆ ಇದ್ದರೂ ಕೂಡ ಈ ವರೆಗೂ ಕೆಲವು ರೈತರ ಖಾತೆಗೆ ಸಾಲಮನ್ನಾ ಹಣ ಜಮೆ ಆಗಿರುವುದಿಲ್ಲ. ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. 2018-19 ನೇ ಸಾಲಿನ ಮುಂಗಾರು ಬೆಳೆವಿಮೆ ಮಂಜೂರಾದ 15092 ರೈತರಲ್ಲಿ ಕೇವಲ 5200 ರೈತರಿಗೆ ಮಾತ್ರ ಬೆಳೆವಿಮೆ ಪಾವತಿಸಲಾಗಿದೆ. ಇನ್ನುಳಿದ ರೈತರಿಗೆ ಕೂಡಲೆ ಬೆಳೆವಿಮೆ ಹಣ ಸಂದಾಯ ಮಾಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

ರೈತ ಸಂಘದ ಹಾವೇರಿ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ಗೌರವಾಧ್ಯಕ್ಷ ಮಾಲತೇಶ ಪರಪ್ಪನವರ, ಕಾರ್ಯಾಧ್ಯಕ್ಷ ಶ್ರೀಕಾಂತ ದುಂಡಣ್ಣನವರ, ಕಾರ್ಯದರ್ಶಿ ರಾಜೀವ ದಾನಪ್ಪನವರ, ರುದ್ರಪ್ಪ ಹಣ್ಣಿ, ಗಂಗಾಧರ ಕೊಪ್ಪದ, ಬಸನಗೌಡ ಪಾಟೀಲ, ಸೋಮಣ್ಣ ಜಡೆಗೊಂಡರ, ಮರ್ದಾನಸಾಬ ಬಡಗಿ, ಮಹಲಿಂಗಪ್ಪ ಅಕ್ಕಿವಳ್ಳಿ, ಮಲ್ಲನಗೌಡ ಪಾಟೀಲ, ಸಂಜೀವ ಮಣಕಟ್ಟಿ, ರಾಮಣ್ಣ ಕೋಟಿ, ಎಸ್‌.ಎಸ್‌.ಇನಾಮದಾರ, ಉಮೇಶ ಮೂಡಿ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ