ಗೊಬ್ಬರ ದರ ಏರಿಕೆಗೆ ರೈತಸಂಘ ಆಕ್ರೋಶ
ಹಿಂದಿನ ದರದಲ್ಲಿ ಮಾರಾಟ ಮಾಡುವಂತೆ ವ್ಯಾಪಾರಸ್ಥರಿಗೆ ಸೂಚಿಸಲು ಮುಖಂಡರ ಒತ್ತಾಯ
Team Udayavani, May 1, 2021, 5:47 PM IST
ಬ್ಯಾಡಗಿ: ಕಳೆದ ವರ್ಷ ಲಾಕ್‌ಡೌನ್ ಸಮಯಲ್ಲಿದ್ದ ಗೊಬ್ಬರ ದರಕ್ಕಿಂತ ಪ್ರಸಕ್ತ ವರ್ಷ 100 ರಿಂದ 500 ರೂ.ನಷ್ಟು ಪ್ರತಿ ಚೀಲಕ್ಕೆ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಇದನ್ನು ಕೂಡಲೇ ಸ್ಥಗಿತಗೊಳಿಸಿ ಹಿಂದಿನ ದರದಲ್ಲಿ ಮಾರಾಟ ಮಾಡುವಂತೆ ವ್ಯಾಪಾರಸ್ಥರಿಗೆ ಸೂಚಿಸಬೇಕೆಂದು ಆಗ್ರಹಿಸಿ, ರಾಜ್ಯ ರೈತ ಸಂಘದ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಮಾತನಾಡಿ, ಕಳೆದ ವರ್ಷ ಲಾಕ್‌ಡೌನ್ ಸೇರಿದಂತೆ ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಇಂತಹದ್ದರಲ್ಲಿ ಗೊಬ್ಬರ ದರಗಳನ್ನು ಏರಿಕೆ ಮಾಡಿರುವುದು ರೈತ ಸಮುದಾಯಕ್ಕೆ ನುಂಗಲಾರದ ತುತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 100 ರಿಂದ 500 ರೂ. ಹೆಚ್ಚಳ: ಕಳೆದ ವರ್ಷದ ಲಾಕ್‌ಡೌನ್ ಸಮಯದಲ್ಲಿ 1150 ರೂ.ಗೆ ಮಾರಾಟವಾಗುತ್ತಿದ್ದ ಡಿಎಪಿ ಗೊಬ್ಬರ ಇಂದು 1700ರೂ. ಗೆ ಮಾರಾಟವಾಗುತ್ತಿದೆ. 900 ರೂ.ಗೆ ಮಾರಾಟವಾಗುತ್ತಿದ್ದ 20:20;13 ಗೊಬ್ಬರ ಪ್ರಸಕ್ತ ವರ್ಷ 1150 ರೂ., 1050ರೂ. ಇದ್ದ 10:26 ಗೊಬ್ಬರ ಪ್ರಸಕ್ತ 1200 ರೂ.ಗೆ, 270ರೂ.ಇದ್ದ (ಎಂಆರ್‌ಪಿ) ಯೂರಿಯಾ ಪ್ರಸಕ್ತ ವರ್ಷ 350 ರೂ.ಗೆ ಕೊಡುತ್ತಿದ್ದಾರೆ. 850ರೂ.ಇದ್ದ ಪೊಟ್ಯಾಷ್ 1100ರೂ.ಗೆ ಮಾರಾಟವಾಗುತ್ತಿದೆ ಎಂದು ಆರೋಪಿಸಿದರು.
ಮಂತ್ರಿಗಳ ಹೇಳಿಕೆ ನಂಬೋದು ಹೇಗೆ?: ಕೆಲ ದಿನಗಳ ಹಿಂದಷ್ಟೇ ಜಿಲ್ಲೆಯವರೇ ಆದ ಕೃಷಿ ಮಂತ್ರಿಗಳು ಕಳೆದ ವರ್ಷದ ದರಕ್ಕೆ ಗೊಬ್ಬರ ಮಾರಾಟ ಮಾಡುವಂತೆ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಆದರೆ, ಅವರು ಪ್ರತಿನಿ ಧಿಸುತ್ತಿರುವ ಜಿಲ್ಲೆಯಲ್ಲಿಯೇ ಗೊಬ್ಬರವನ್ನು ಹೆಚ್ಚಿನ ದರಗಳಿಗೆ ಮಾರಾಟ ಮಾಡುತ್ತಿರುವುದು ದುರದೃಷ್ಟಕರ. ಇಂತಹ ಹೇಳಿಕೆಗಳನ್ನು ರೈತ ಸಮುದಾಯ ನಂಬುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ರೈತರನ್ನು ಎಲ್ಲಿಗೆ ತಳ್ಳುತ್ತೀರಿ?: ಯುವ ಘಟಕದ ಅಧ್ಯಕ್ಷ ಆನಂದ ಸಂಕಣ್ಣವರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಎಲ್ಲಿಯೂ ಗೊಬ್ಬರದ ದರಗಳನ್ನು ಏರಿಕೆ ಮಾಡಿಲ್ಲವೆಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆ ನೀಡಿದ್ದಾರೆ. ಆದರೆ, ಇಲ್ಲಿ ನಡೆಯುತ್ತಿರು ವುದೇ ಬೇರೆಯಾಗಿದೆ. ಕೂಡಲೇ ಇಬ್ಬರೂ ಸಚಿವರು ಗೊಬ್ಬರದ ದರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.