ಐದು ವರ್ಷಕ್ಕೊಮ್ಮೆ ಜಾತ್ರೋತ್ಸವ

Team Udayavani, Sep 16, 2019, 12:02 PM IST

ಹಾವೇರಿ: ಜಾತ್ರೆ ಆಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು.

ಹಾವೇರಿ: ಒಂದು ಶತಮಾನದ ಬಳಿಕ ನಗರದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಜಾತ್ರೆಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಮೂರು ದಿನಗಳ ಕಾಲ ಆಚರಿಸಲು ನಿರ್ಧರಿಸಲಾಗಿದೆ.

ನಗರದ ಶ್ರೀ ದ್ಯಾಮವ್ವದೇವಿ ದೇವಸ್ಥಾನದಲ್ಲಿ ರವಿವಾರ ಶ್ರೀಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ಸೇವಾ ಸಮಿತಿ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಶ್ರೀದೇವಿ ಜಾತ್ರೆಯನ್ನು ವಿವಿಧ ಕಾರಣಗಳಿಂದ ಕಳೆದ 115 ವರ್ಷಗಳಿಂದ ಆಚರಣೆ ಮಾಡಿಲ್ಲ. ಜಾತ್ರೆ ಮಾಡಬೇಕು ಎಂಬ ಅಪೇಕ್ಷೆಯನ್ನು ಬಹುವರ್ಷಗಳಿಂದ ನಗರದ ಎಲ್ಲ ಜನರು, ಭಕ್ತರು ವ್ಯಕ್ತಪಡಿಸುತ್ತಿದ್ದರು. ಅವರೆಲ್ಲರ ಅಪೇಕ್ಷೆಯಂತೆ ಈಗ ನಗರದಲ್ಲಿ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ.

ಸಭೆ ಆರಂಭದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಜಾತ್ರೆ ನಡೆಸುವ ಅಭಿಪ್ರಾಯಗಳು ಕೇಳಿಬಂದವು. ಬಳಿಕ ಸಾಕಷ್ಟು ಚರ್ಚೆಯ ಬಳಿಕ ಪ್ರತಿ ಐದು ವರ್ಷಗಳಿಗೊಮ್ಮೆ ಜಾತ್ರೆ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು. ಜಾತ್ರೆ ಇರುವ ವರ್ಷ ನಗರದಲ್ಲಿ ಹೋಳಿಯ ಬಣ್ಣದ ಓಕುಳಿ ಆಚರಣೆ ಕೈಬಿಡಲು ಸಹ ನಿರ್ಧರಿಸಲಾಯಿತು.

ಶತಮಾನದ ಬಳಿಕ ಆಚರಿಸುತ್ತಿರುವ ಮೊದಲ ಜಾತ್ರೆಯನ್ನು ಮುಂಬರುವ ಫೆಬ್ರುವರಿ 25ರಂದು ವಿಶೇಷ ಪೂಜಾ ವಿಧಿ ವಿಧಾನಗಳಿಂದ, ಸಂಪ್ರದಾಯಬದ್ಧವಾಗಿ ಅತಿ ಅದ್ದೂರಿಯಿಂದ ಆಚರಿಸಬೇಕು. ಜಾತ್ರೆ ಇರುವ ಈ ವರ್ಷ ನಗರದಲ್ಲಿ ಹೋಳಿ ಆಚರಿಸಬಾರದು. ಜಾತ್ರೆಗೆ ಎಲ್ಲರೂ ಎಲ್ಲರೀತಿಯಿಂದ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಕೋರಲಾಯಿತು.

ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ಗಂಗಾಧರ ಹೂಗಾರ ಮಾತನಾಡಿ, ಜಾತ್ರೆ ಸಂದರ್ಭದಲ್ಲಿ ಶ್ರೀದೇವಿಯನ್ನು ಎಂ.ಜಿ. ರಸ್ತೆಯಲ್ಲಿರುವ ದ್ಯಾಮವ್ವನ ಪಾದಗಟ್ಟಿ ಹಿಂಭಾಗ ಹೊಸದಾಗಿ ನಿರ್ಮಿಸಲಿರುವ ಚೌತಮನಿ ಕಟ್ಟೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಇದಕ್ಕೂ ಮೊದಲು ಶ್ರೀದ್ಯಾಮವ್ವದೇವಿಯನ್ನು ಮಂಗಳವಾರ ರಾತ್ರಿ ದೇವಸ್ಥಾನದಿಂದ ರಥದಲ್ಲಿ ಕೂಡ್ರಿಸಿಕೊಂಡು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಚೌತಮನಿ ಕಟ್ಟೆಗೆ ಕರೆತರಲಾಗುವುದು. ಅಲ್ಲಿಯೇ ಬುಧವಾರ ಹಾಗೂ ಗುರುವಾರ ಜಾತ್ರೆಯ ವಿಧಿ ವಿಧಾನ ಹಾಗೂ ವಿಶೇಷ ಪೂಜೆ ಅಲಂಕಾರಗಳನ್ನು ಮಾಡಲಾಗುವುದು. ಶುಕ್ರವಾರ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.

ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಎನ್‌. ಹೂಗಾರ ಹಾಗೂ ಕಾರ್ಯದರ್ಶಿ ಅಶೋಕ ಮುದಗಲ್ ಮಾತನಾಡಿ, ಜಾತ್ರೆ ಆಚರಣೆ ಹಿನ್ನೆಲೆಯಲ್ಲಿ ಶ್ರೀದೇವಿ ಸೇವಾ ಸಮಿತಿ ಈಗಾಗಲೇ ಕೈಕೊಂಡಿದೆ. ಜಾತ್ರೆಗಾಗಿ ದೇವಸ್ಥಾನ ನವೀಕರಣ, ಶ್ರೀದೇವಿಗೆ ಬಣ್ಣ ಹಚ್ಚುವುದು ಇತರೆ ಕಾರ್ಯಗಳು ಆರಂಭಗೊಂಡಿವೆ. ಭಕ್ತರು ಹಾಗೂ ಸಾರ್ವಜನಿಕರು ತನು-ಮನ-ಧನ ಸಹಾಯದೊಂದಿಗೆ ಜಾತ್ರೆಗೆ ಸಹಕಾರ ನೀಡಬೇಕು ಎಂದು ಕೋರಿದರು.

ಸೇವಾ ಸಮಿತಿ ಉಪಾಧ್ಯಕ್ಷ ಬೆಟ್ಟಪ್ಪ ಕುಳೇನೂರ, ಅರ್ಚಕ ಹನುಮಂತನಾಯ್ಕ ಬದಾಮಿ, ಭಕ್ತರಾದ ವಿರುಪಾಕ್ಷಪ್ಪ ಹತ್ತಿಮತ್ತೂರ, ಜಗದೀಶ ಚನ್ನಬಸಪ್ಪ ಕನವಳ್ಳಿ, ಉಮೇಶ ಮಹಾರಾಜಪೇಟ, ಜಿಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ಅನಿಲ ಮಹಾರಾಜಪೇಟ, ವಿವಿಧ ಸಂಘಟನೆ ಹಾಗೂ ಸಮಾಜ ಮುಖಂಡರಾದ ಕೃಷ್ಣಮೂರ್ತಿ ಕಳಂಜಿ, ಶೇಷಣ್ಣ ಹರಿಕಾರ, ಗೌಡಪ್ಪನವರ, ಕೆ.ಎ. ಕಬ್ಬಿಣಕಂತಿಮಠ, ದೊಡ್ಡದ್ಯಾಮಣ್ಣ ಬಡಿಗೇರ, ಪರಮೇಶ್ವರ ಪಾಟೀಲ, ಡಾ| ಪ್ರದೀಪ ದೊಡ್ಡಗೌಡ್ರ, ಕಿರಣ ಕೊಳ್ಳಿ, ಶಿವಯೋಗಿ ಹೂಲಿಕಂತಿಮಠ, ಬಸಪ್ಪ ಮುಗದೂರ, ಮಡಿವಾಳಯ್ಯ ಚೌಕಿಮಠ, ರಮೇಶ ನವಲೆ, ವಿಜಯಕುಮಾರ ಕೂಡ್ಲಪ್ಪನವರ, ಗಿರೀಶ ಗುಮಕಾರ, ನಟರಾಜ ದೇವಗಿರಿ, ಮಧೂರಕರ, ನಾಗರಾಜ ಜೋರಾಪುರ, ಅಶೋಕಸಿಂಗ್‌ ರಜಪೂತ, ಪ್ರಕಾಶ ಉಜ್ಜನಿಕೊಪ್ಪ, ಭರತ, ರುದ್ರಪ್ಪ ಜಾಬಿನ್‌, ಗಣೇಶ ಸಾನು, ಸತೀಶ ಮಡಿವಾಳರ, ರಮೇಶ ಆನವಟ್ಟಿ ಇದ್ದರು. ಸಮಿತಿ ಸದಸ್ಯ ಪೃಥ್ವಿರಾಜ ಬೆಟಗೇರಿ ಸ್ವಾಗತಿಸಿದರು. ಪರಮೇಶ್ವರ ಪಾಟೀಲ ವಂದಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ