ಮೀಸಲಾತಿ ಹೆಚ್ಚಿಸದಿದ್ದರೆ ಉಗ್ರ ಪ್ರತಿಭಟನೆ

•ಕಾಲಹರಣ ಮಾಡುವ ತೀರ್ಮಾನ ಕೈಗೊಂಡರೆ ಸುಮ್ಮನಿರಲ್ಲ: ಬಿ. ಶಿವಪ್ಪ ಎಚ್ಚರಿಕೆ

Team Udayavani, Jun 19, 2019, 10:36 AM IST

ಹಾವೇರಿ: ವಾಲ್ಮೀಕಿ ಸಮಾಜದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಾವೇರಿ: ಪರಿಶಿಷ್ಟ ಜಾತಿ ಮೀಸಲಾತಿಯನ್ನು ಕನಿಷ್ಠ ಶೇ.7ಕ್ಕೆ ಏರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಜೂ. 19ರಂದು ವಾಲ್ಮೀಕಿ ಸಮಾಜದ ಮುಖಂಡರ ಸಭೆ ಕರೆದಿದ್ದು, ಈ ಸಭೆಯಲ್ಲಿ ನಮ್ಮ ಬೇಡಿಕೆಗೆ ವ್ಯತಿರಿಕ್ತ ಇಲ್ಲವೇ ಅತೃಪ್ತಿಕರ ನಿರ್ಣಯ ಕೈಗೊಂಡರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ವಾಲ್ಮೀಕಿ ಸಮಾಜದ ಮುಖಂಡ, ನಿವೃತ್ತ ಜಿಲ್ಲಾಧಿಕಾರಿ ಬಿ. ಶಿವಪ್ಪ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಕರೆದಿರುವ ಪರಿಶಿಷ್ಟ ಪಂಗಡದ ಶಾಸಕರು, ಸಂಸದರು, ಮುಖಂಡರ ಸಭೆಯಲ್ಲಿ ನಮ್ಮ ಬೇಡಿಕೆ ಈಡೇರಿಸುವ ದೃಢ ನಿರ್ಧಾರ ಕೈಗೊಂಡರೆ ಅದನ್ನು ಸ್ವಾಗತಿಸುತ್ತೇವೆ. ಒಂದು ವೇಳೆ ಸುಮ್ಮನೇ ಕಾಲಹರಣ ಮಾಡುವ ತೀರ್ಮಾನ ಕೈಗೊಂಡರೆ ಜೂ. 21ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿನ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುವುದು ಎಂದರು.

ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ರಾಜನಹಳ್ಳಿಯಿಂದ ಪಾದಯಾತ್ರೆ ಆರಂಭಿಸಿದ್ದು, ಈಗ ಒಂಬತ್ತು ದಿನಗಳು ಕಳೆದರೂ ಸರಕಾರ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ಸ್ವಾಮೀಜಿ ಪಾದಯಾತ್ರೆ ಜೂ. 24ಕ್ಕೆ ಬೆಂಗಳೂರು ತಲುಪಲಿದ್ದು ಜೂ. 19ರ ಸಭೆಯ ನಿರ್ಧಾರದ ಆಧಾರದಲ್ಲಿ ಜೂ. 25ರಂದು ಅಲ್ಲಿ ಸತ್ಯಾಗ್ರಹ ಕೈಗೊಳ್ಳಲ್ಲಿದ್ದಾರೆ ಎಂದರು.

ಆಯಾ ಸಮುದಾಯದ ಜನಸಂಖ್ಯೆ ಆಧರಿಸಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ನೀಡಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. 1956ರಲ್ಲಿ ಅಂದಿನ ಸರಕಾರ ತನ್ನಲ್ಲಿ ಜನಸಂಖ್ಯೆ ಬಗ್ಗೆ ನಿಖರ ಮಾಹಿತಿ ಇಲ್ಲದ ಕಾರಣ ತಾತ್ಕಾಲಿಕವಾಗಿ ಶೇ.3 ರಷ್ಟು ಮೀಸಲಾತಿ ನೀಡುವ ನಿರ್ಣಯ ಕೈಗೊಂಡಿತು. ನಂತರ ಯಾವ ಸರ್ಕಾರವೂ ಸಮೀಕ್ಷೆ ನಡೆಸಿ, ಜನಸಂಖ್ಯೆ ಆಧರಿಸಿ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿಲ್ಲ. ಇದರಿಂದಾಗಿ ಪರಿಶಿಷ್ಟ ಪಂಗಡದಲ್ಲಿ ಬರುವ ವಾಲ್ಮೀಕಿ ಸಮುದಾಯದವರಿಗೆ ಶಿಕ್ಷಣ, ಸಾರ್ವಜನಿಕ ಉದ್ಯೋಗ ಕ್ಷೇತ್ರದಲ್ಲಿ ಭಾರಿ ಅನ್ಯಾಯವಾಗುತ್ತ ಬಂದಿದೆ.

ಈ ಹಿಂದೆ ಉಚ್ಚ ನ್ಯಾಯಾಲಯದ ಆದೇಶದಂತೆ 2016ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಶೇ. 7ರಷ್ಟು ಮೀಸಲಾತಿ ನೀಡುವಂತೆ ಅಂದಿನ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ, ಅಂದಿನ ಮುಖ್ಯಮಂತ್ರಿ ಅದನ್ನು ಮೂಲೆಗುಂಪು ಮಾಡಿದ್ದಾರೆ ಎಂದು ಅವರು ಆರೋಪಿಸಿದರು ಎಂದರು.

ಖೊಟ್ಟಿ ಪ್ರಮಾಣಪತ್ರ:ಹಲವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಎಸ್ಸಿ , ಎಸ್‌ಟಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಮೂಲ ಸಮುದಾಯಗಳಿಗೆ ದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಮುದಾಯಕ್ಕೆ ಕನಿಷ್ಠ ಶೇ.7ರಷ್ಟು ಮೀಸಲಾತಿ ನೀಡಬೇಕು. ರಾಜಕೀಯದಲ್ಲಿ ವಿಶೇಷ ಸ್ಥಾನಮಾನ ನೀಡಬೇಕು. ವಾಲ್ಮೀಕಿ ಸಮುದಾಯಕ್ಕೆ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿಡಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲಾತಿ ಘೋಷಿಸಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಸಮಾಜದ ಮುಖಂಡರಾದ ರಮೇಶ ಆನವಟ್ಟಿ, ಮಂಜುಳಾ ಕರಬಸಮ್ಮನವರ, ಎಚ್.ಎಂ. ಓಲೇಕಾರ, ಶ್ರೀಧರ ದೊಡ್ಡಮನಿ, ಜಿ.ಎಸ್‌. ತಳವಾಳ, ಶಿವಾನಂದ ಯಮನಪ್ಪನವರ, ನಾಗರಾಜ, ಭೀಮಣ್ಣ, ಚಂದ್ರು ಬೇಡರ, ಅಶೋಕ ಹರನಗೇರಿ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ