ರೈತನ ಮನ ತಣಿಸುವುದೇ ಮೃಗಶಿರಾ?

•ಬಾರೋ ಬಾರೋ ಮಳೆರಾಯ•ನೀರಿಲ್ಲದೇ ಕೈ ಕೊಡುತ್ತಿವೆ ತೋಟಗಾರಿಕೆ ಬೆಳೆಗಳು

Team Udayavani, Jun 10, 2019, 10:09 AM IST

ಹಾನಗಲ್ಲ: ಕೃಷಿ ಚಟುವಟಿಕೆಯಲ್ಲಿ ನಿರತ ರೈತರು.

ಹಾನಗಲ್ಲ: ಮಳೆ ಬಾರದೇ ದೀರ್ಘ‌ ಕಾಲದಿಂದ ಉಳಿಸಿ-ಬೆಳೆಸಿಕೊಂಡು ಬಂದ ತೋಟಗಾರಿಕೆ ಬೆಳೆಗಳು ಕೈ ಕೊಡುತ್ತಿದ್ದು, ತಾಲೂಕಿನ ರೈತರಲ್ಲಿ ಆತಂಕ ಮನೆ ಮಾಡಿದೆ.

ಹಾನಗಲ್ಲ ತಾಲೂಕಿನಲ್ಲಿ 9 ಸಾವಿರ ಹೆಕ್ಟೇರ್‌ಗೂ ಅಧಿಕ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. ಇದರಲ್ಲಿ ಮಾವು ಚಿಕ್ಕು, ಅಡಕೆ, ತೆಂಗು, ತರಕಾರಿಗಳು ಇಲ್ಲಿನ ವಿಶೇಷತೆಗಳಾಗಿವೆ. ಹಣ್ಣಿನ ಗಿಡ ಬೆಳೆಯಲು ಅತ್ಯಂತ ಸೂಕ್ತ ಭೂ ಪ್ರದೇಶ ಇದಾಗಿದೆ. ಹೀಗಾಗಿಯೇ ಇಲ್ಲಿನ ಮಾವು ದೇಶ-ವಿದೇಶಗಳಿಗೆ ರಫ್ತು ಆಗುತ್ತಿದೆ. ಈಗ ಮಳೆಯ ಕೊರತೆ ಹಾಗೂ ಫಸಲು ಬಾರದೇ ಬೇಸತ್ತು ರೈತ ಮಾವು ಬೆಳೆಯುವುದರಿಂದಲೇ ದೂರ ಸರಿಯುವ ಚಿಂತನೆಯಲ್ಲಿ ತೊಡಗಿದ್ದಾನೆ.

3.5 ಸಾವಿರ ಹೆಕ್ಟೇರ್‌ ಮಾವು, ಒಂದು ಸಾವಿರ ಹೆಕ್ಟೇರ್‌ ಬಾಳೆ, 2.7 ಸಾವಿರ ಹೆಕ್ಟೇರ್‌ ಅಡಕೆ, 133 ಹೆಕ್ಟೇರ್‌ ತೆಂಗು, 17 ಹೆಕ್ಟೇರ್‌ ಚಿಕ್ಕು ಸೇರಿದಂತೆ ಸಾವಿರಾರು ಹೆಕ್ಟೇರ್‌ ಭೂಮಿಯಲ್ಲಿರುವ ತೋಟಗಾರಿಕೆ ಬೆಳೆಗಳನ್ನು ಉಳಿಸುವುದು ಈಗಿನ ಸವಾಲಾಗಿದೆ. ಇವೆಲ್ಲ ಬಹುತೇಕ ಬಹು ವಾರ್ಷಿಕ ಬೆಳೆಗಳಾಗಿರುವುದರಿಂದ ದೀರ್ಘ‌ ಕಾಲದ ಮಳೆಯ ಅಗತ್ಯವನ್ನು ಅವಲಂಬಿಸಿವೆ. ನೀರು ಕಡಿಮೆಯಾದರೆ ಮೊದಲು ನಷ್ಟದತ್ತ ದಾಪುಗಾಲು ಹಾಕುವುದು ಅಡಿಕೆ ಬೆಳೆ. ಆದರೆ ಅಡಿಕೆ ಬೆಳೆಯಲು ಬಹಳಷ್ಟು ಉತ್ಸುಕರಾಗಿರುವ ರೈತರು ನಾಳೆ ಬರುವ ಮಳೆಯ ಭರವಸೆಯಲ್ಲಿಯೇ ಸರಕಾರ ಸಹಾಯಧನ ನೀಡದಿದ್ದರೂ ಹೆಚ್ಚು ಅಡಿಕೆ ಬೆಳೆಯಲು ಮುಂದಾಗುತ್ತಿರುವುದು ಅವರ ಸಾಹಸವೇ ಎನ್ನಬೇಕು.

ಮೊದಲು ಹಾನಗಲ್ಲ ತಾಲೂಕಿನಲ್ಲಿ ದೊಡ್ಡ ದೊಡ್ಡ ಕೆರೆಗಳನ್ನು ಅವಲಂಬಿಸಿ ತೋಟಗಾರಿಕೆ ಮಾಡುತ್ತಿದ್ದರು. ಅದರಲ್ಲೂ ವಿಶೇಷವಾಗಿ ಅಕ್ಕಿಆಲೂರು, ಹಾನಗಲ್ಲ, ನರೇಗಲ್ಲ ಸೇರಿದಂತೆ ಹಲವು ದೊಡ್ಡ ಕೆರೆಗಳ ಕೆಳಗಿನ ಭೂಮಿ ಅಡಿಕೆ ಹಾಗೂ ತೆಂಗು ಬೆಳೆಯುವುದನ್ನು ಕಾಣುತ್ತಿದ್ದೆವು. ಈಗ ಇಡೀ ತಾಲೂಕಿನಾದ್ಯಂತ ಕೊಳವೆಭಾವಿಗಳನ್ನು ಅವಲಂಬಿಸಿ ಅಡಿಕೆ ಬೆಳೆಯಲು ಮುಂದಾಗುತ್ತಿದ್ದಾರೆ. ಹಾನಗಲ್ಲ ತಾಲೂಕು ಅಡಿಕೆಗೆ ಸೂಕ್ತ ಅಲ್ಲ ಎಂದು ತಜ್ಞರು ಹೇಳುತ್ತಿದ್ದರೂ ಕೂಡ ಅಡಿಕೆ ಬೆಳೆಗೆ ರೈತರು ಹೆಚ್ಚು ಪಾಲು ಮುಂದಾಗುತ್ತಿರುವುದು ಗಮನಾರ್ಹ ಸಂಗತಿ.

ಮಾವು ಫಸಲು ಕಳೆದ ಐದಾರು ವರ್ಷಗಳಿಂದ ಕೈಕೊಟ್ಟ ಕಾರಣದಿಂದ ಮಾವು ಬೆಳೆಯನ್ನು ತೆಗೆದು ಈಗ ಪರ್ಯಾಯ ಬೆಳೆ ಬೆಳೆಯಲು ರೈತ ಚಿಂತನೆ ನಡೆಸುತ್ತಿದ್ದಾನೆ. ಹವಾಮಾನ ವೈಫರಿತ್ಯವೇ ಮಾವು ಫಸಲು ಕೈ ಕೊಡಲು ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಸ್ಥಿತಿ ಮಾವು ಬೆಳೆಗಾರರದ್ದಾಗಿದೆ. ಪ್ರತಿ ವರ್ಷ ಹೂ ಬಿಡುವಾಗ ಮಳೆ, ಇಬ್ಬನಿ, ಉಷ್ಣಾಂಶದೊಂದಿಗೆ ಫಸಲು ಬಂದಾಗ ಗಾಳಿ, ಆಣಿಕಲ್ಲು ಹೊಡತದಿಂದ ತಪ್ಪಿಸಿಕೊಳ್ಳುವ ಹೋರಾಟದ ನಡೆಸುವ ಸ್ಥಿತಿ ಇದೆ.

ಅಡಕೆ ತಿಗಣಿ ರೋಗಕ್ಕೆ ತುತ್ತಾಗುತ್ತಿದೆ. ಬೂದು ರೋಗ ಹಿಡಿಯುತ್ತಿದೆ. ಹಿಡಿ ಮುಂಡಿಗೆ ರೋಗ ಕಾಡುತ್ತಿದೆ. ಇದಕ್ಕೆಲ್ಲ ಅತೀವ ಉಷ್ಣಾಂಶವೇ ಕಾರಣ ಎಂದು ತಜ್ಞರು ಹೇಳುತ್ತಾರೆ. ಚಿಕ್ಕು ಹೂ ಕಚ್ಚುತ್ತಿಲ್ಲ. ಫಸಲು ಇಲ್ಲ. ಇದಕ್ಕೆಲ್ಲ ಕಾರಣ ಮಳೆ ಇಲ್ಲದಿರುವುದು. 3 ವರ್ಷದಿಂದ ಚಿಕ್ಕು ಬೆಳೆಯುವ ರೈತ ತೀರ ಸಂಕಷ್ಟದಲ್ಲಿದ್ದಾನೆ.

ತೋಟಗಾರಿಕೆ ಇಲಾಖೆ ನೀಡುವ ಯೋಜನೆಗಳು ಸಣ್ಣ ರೈತರಿಗೆ ಸೀಮಿತವಾಗಿವೆ. ಆದರೆ ನಿಜವಾದ ಆಸಕ್ತ ರೈತರಿಗೆ ಸೌಲಭ್ಯಗಳ ಕೊರತೆ ಇದೆ. ಬಿಪಿಎಲ್ ಕಾರ್ಡ್‌ ಹೊಂದಿದ ರೈತರಿಗೆ ನೀಡುವ ಸೌಲಭ್ಯಗಳು ಇತರೆ ರೈತರಿಗೂ ದೊರೆಯುವಂತಾದರೆ ಹಾನಗಲ್ಲ ತಾಲೂಕಿನಲ್ಲೂ ಉತ್ತಮ ತೋಟಗಾರಿಕೆ ಅಭಿವೃದ್ಧಿ ಸಾಧ್ಯ ಎನ್ನಲಾಗಿದೆ. ತೋಟಗಾರಿಕೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶವಿದೆ. ಆದರೆ ಇದಕ್ಕೆ ಕಾನೂನು ತೊಡಕುಗಳಿರುವುರಿಂದ ಎಲ್ಲ ರೈತರು ಇದರ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ರೈತರದ್ದಾಗಿದೆ. ಮಾವು ಪುನಃಶ್ಚೇತನ ಕಾರ್ಯಕ್ಕೆ ಹಲವಾರು ವರ್ಷಗಳಿಂದ ಸಹಾಯಧನಕ್ಕಾಗಿ ರೈತರು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಆದರೆ ಇದು ಕೇವಲ ಸಣ್ಣ ಹಿಡುವಳಿದಾರರಿಗೆ ಸೀಮಿತವಾಗಿ ಉಳಿದ ರೈತರು ಕೈ ಹಿಸುಕಿಕೊಳ್ಳುವಂತಾಗಿದೆ.

ಏನೇ ಆದರೂ ಹಾನಗಲ್ಲ ತಾಲೂಕಿನ ಕೃಷಿ ಭೂಮಿ ತೋಟಗಾರಿಕೆ ಬೆಳೆಗಳಿಗೆ ಹೇಳಿ ಮಾಡಿಸಿದ ಭೂಮಿ ಎಂಬ ವಾಸ್ತವ ತೋಟಗಾರಿಕೆ ಇಲಾಖೆಗೆ ಗೊತ್ತಿದ್ದರೂ ಇದನ್ನು ಅಭಿವೃದ್ಧಿ ಪಡಿಸುವಲ್ಲಿ ಅನುದಾನ ಕೊರತೆ ಕಾರಣವಾಗಿ ಹಿನ್ನಡೆಯಾಗುತ್ತಿದೆ. ಹಾನಗಲ್ಲ ತಾಲೂಕಿನಲ್ಲಿರುವ ಏಳು ನೂರಕ್ಕೂ ಅಧಿಕವಾಗಿರುವ ಕೆರೆಗಳನ್ನು ತುಂಬಿಸುವ ಯೋಜನೆ ಸಫಲವಾದರೆ ಇಡೀ ತಾಲೂಕಿನ ರೈತ ಸಮೃದ್ಧ-ಸಂತಸದ ರೈತನಾಗಬಲ್ಲ ಎಂಬುದರಲ್ಲಿ ಸಂದೇಹವೇ ಇಲ್ಲ. ಇದಕ್ಕಾಗಿ ಸರಕಾರ ಕೈ ಜೋಡಿಸಬೇಕಷ್ಟೆ.

•ರವಿ ಲಕ್ಷ್ಮೇಶ್ವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ