ಹೊಲದತ್ತ ಅನ್ನದಾತರ ಹೆಜ್ಜೆ

•ರೈತರಿಂದ ಕೃಷಿ ಸಲಕರಣೆ ಸಂಗ್ರಹ •ಭೂಮಿ ಹದಗೊಳಿಸಲು ಮುಂದಾದ ರೈತ

Team Udayavani, Jun 8, 2019, 10:21 AM IST

ಹಾವೇರಿ: ಕೃಷಿ ಭೂಮಿ ಹಸನು ಮಾಡುತ್ತಿರುವ ರೈತ.

ಹಾವೇರಿ: ಕಳೆದ ವರ್ಷ ಮುಂಗಾರು, ಹಿಂಗಾರು ಎರಡೂ ಮಳೆ ಕೈಕೊಟ್ಟು ಬರಗಾಲದ ಬವಣೆ, ಸಂಕಷ್ಟಕ್ಕೊಳಗಾಗಿದ್ದ ಜಿಲ್ಲೆಯ ರೈತರು ಈಗ ಹೊಸ ಆಸೆಯ ಚಿಗುರಿನೊಂದಿಗೆ ಮತ್ತೆ ಜಮೀನಿನತ್ತ ಹೆಜ್ಜೆ ಹಾಕುತ್ತಿದ್ದಾರೆ.

ಮಳೆಯಿಲ್ಲದೇ ನದಿ, ಕೆರೆ ಹಳ್ಳಗಳೆಲ್ಲ ಒಣಗಿದ್ದವು. ನಿನ್ನೆಯಷ್ಟೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಹೊಸ ಆಸೆ ಚಿಗುರೊಡೆಯುವಂತೆ ಮಾಡಿದೆ. ಹೀಗಾಗಿ ರೈತರು ಕೃಷಿ ಕಾರ್ಯಗಳಿಗೆ ಅವಶ್ಯವಿರುವ ಸಾಮಗ್ರಿಗಳ ಸಂಗ್ರಹಣೆ, ಸಿದ್ಧತೆ ನಡೆಸಿದ್ದಾರೆ. ಕೃಷಿಗೆ ಬೇಕಾಗುವ ಪ್ರಮುಖ ಸಲಕರಣೆಗಳಾದ ರಂಟಿ, ಕುಂಟಿ, ಕೊರಡು, ಬುಡಗುಂಟಿ, ನೊಗ, ಕಾಯಿಕೊಲು ದುರಸ್ತಿ ಮಾಡಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಸಮರ್ಪಕ ಮಳೆ ಇಲ್ಲದೇ ಮನೆಯ ಮೂಲೆ ಸೇರಿದ್ದ ಕೃಷಿ ಉಪಕರಣಗಳನ್ನು ಕಮ್ಮಾರನ ಕುಲುಮೆಗೆ ಒಯ್ದು ಸರಿ ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆಗಾಗಿ ರೈತರು ಎತ್ತುಗಳನ್ನು ಬಳಸುವರರು ತಮಗೆ ಬೇಕಾದ ನೊಗ, ಕುಂಟಿ, ಬಾರಕೋಲು, ಕೊರಡುಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಇನ್ನು ಟ್ರ್ಯಾಕ್ಟರ್‌ ಮೂಲಕ ಬಿತ್ತನೆ ಮಾಡುವವರು ಯಂತ್ರದ ನೇಗಿಲು, ರಂಟಿ ತಯಾರಿಸಿಕೊಳ್ಳುತ್ತಿದ್ದಾರೆ.

ಮರದ ಕೆಲಸ ಮಾಡುವವರು, ಕಮ್ಮಾರರು ಹೊಸ ಸಲಕರಣೆ ತಯಾರಿಕೆ ಹಾಗೂ ಹಳೆಯ ಸಲಕರಣೆ ಸಾಣೆಗೊಳಿಸುವಲ್ಲಿ ನಿರತರಾಗಿದ್ದಾರೆ. ಮಳೆ ಬಿದ್ದಾಗಲೊಮ್ಮೆ ಗರಿಕೆ ಚಿಗುರುವಂತೆ ಕಳೆದ ವರ್ಷ ಕಣ್ಣೀರಲ್ಲಿ ಕೈತೊಳೆದಿದ್ದ ರೈತರು ಈಗ ಮತ್ತೆ ಸಾವರಿಸಿಕೊಂಡು ಹೊಸ ನಿರೀಕ್ಷೆಯೊಂದಿಗೆ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.

ಬಿತ್ತನೆ ಗುರಿ: ಕೃಷಿ ಇಲಾಖೆ ಪ್ರಸಕ್ತ ವರ್ಷ 2,07,973 ಹೆಕ್ಟೇರ್‌ ಏಕದಳ, 7,209 ಹೆಕ್ಟೇರ್‌ ದ್ವಿದಳ, 31,854 ಹೆಕ್ಟೇರ್‌ ಎಣ್ಣೆಕಾಳು, 85,790 ಹೆಕ್ಟೇರ್‌ ವಾಣಿಜ್ಯ ಬೆಳೆ ಸೇರಿ ಒಟ್ಟು 3,32,826 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದೆ. ಮುಂಗಾರು ಹಂಗಾಮಿಗಾಗಿ ಜಿಲ್ಲೆಯ 19 ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಉಪಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಗೆ ವ್ಯವಸ್ಥೆ ಮಾಡಿದೆ.

ಬೀಜ ದಾಸ್ತಾನು: ಮುಂಗಾರು ಹಂಗಾಮಿಗೆ ಒಟ್ಟು 4165 ಕ್ವಿಂಟಲ್ ಬಿತ್ತನೆ ಬೀಜ ಸರಬರಾಜು ಆಗಿದ್ದು, ಇದರಲ್ಲಿ ಕೇವಲ 323 ಕ್ವಿಂಟಾಲ್ ಈಗಾಗಲೇ ವಿತರಣೆಯಾಗಿದೆ. ಇದರಲ್ಲಿ 321 ಕ್ವಿಂಟಾಲ್ ಶೇಂಗಾ ಬೀಜ, ಎರಡು ಕ್ವಿಂಟಾಲ್ ಸೋಯಾ ಅವರೆ ಎರಡು ವಿಧದ ಬಿತ್ತನೆ ಬೀಜಗಳು ಮಾತ್ರ ವಿತರಣೆಯಾಗಿವೆ. ನಿನ್ನೆಯಷ್ಟೇ ಮಳೆ ಬಿದ್ದರಿಂದರಿಂದ ಈಗ ಬೀಜ ಖರೀದಿ ಚುರುಕುಗೊಳ್ಳಲಿದೆ.

ಗೊಬ್ಬರ ದಾಸ್ತಾನು: ಮುಂಗಾರು ಹಂಗಾಮಿಗೆ ಸರಬರಾಜು ಆಗಿರುವ ಒಟ್ಟು 32722 ಮೆಟ್ರಿಕ್‌ ಟನ್‌ ರಸಗೊಬ್ಬರದಲ್ಲಿ 400 ಮೆಟ್ರಿಕ್‌ ಟನ್‌ ವಿತರಣೆಯಾಗಿದ್ದು 32322 ಮೆಟ್ರಿಕ್‌ ಟನ್‌ ಗೊಬ್ಬರು ದಾಸ್ತಾನು ಇದೆ. ಯೂರಿಯಾ 9525 ಮೆ.ಟನ್‌, ಡಿಎಪಿ 9048 ಮೆ.ಟನ್‌, ಎಂಓಪಿ 3541 ಮೆ.ಟನ್‌, ಕಾಂಪ್ಲೆಕ್ಸ್‌ 10055 ಮೆಟ್ರಿಕ್‌ ಟನ್‌ ದಾಸ್ತಾನು ಇದೆ. ಪ್ರಸ್ತುತ ಯೂರಿಯಾ 168 ಮೆಟ್ರಿಕ್‌ಟನ್‌, ಡಿಎಪಿ 98 ಮೆ.ಟನ್‌., ಕಾಂಪ್ಲೆಕ್ಸ್‌ 134 ಮೆ.ಟನ್‌ ಒಟ್ಟು 400 ಮೆ.ಟನ್‌ ರಸಗೊಬ್ಬರ ವಿತರಣೆಯಾಗಿದೆ. ಒಟ್ಟಾರೆ ಬುಧವಾರ ರಾತ್ರಿ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗೆ ಚಾಲನೆ ದೊರಕಿದ್ದು ಮುಂದೆಯೂ ಉತ್ತಮ ಮಳೆ ನಿರೀಕ್ಷೆಯಲ್ಲಿ ರೈತರು ಹೊಲಹಸನು ಮಾಡಿ, ಬಿತ್ತಗೆ ಮುಂದಾಗಿದ್ದಾರೆ.

•ಎಚ್.ಕೆ. ನಟರಾಜ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ