ಯೂರಿಯಾ ಅಭಾವ ಸೃಷ್ಟಿಸಿದರೆ ಕ್ರಮ ಕೈಗೊಳ್ಳಿ

Team Udayavani, Sep 8, 2019, 11:16 AM IST

ಬ್ಯಾಡಗಿ: ತಾಲೂಕಿನಲ್ಲಿ ಯೂರಿಯಾ ಕೊರತೆ ಕುರಿತು ರೈತರಿಂದ ದೂರುಗಳು ಕೇಳಿ ಬರುತ್ತಿವೆ. ಕೂಡಲೇ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗುವಂತೆ ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ ಕೃಷಿ ಅಧಿಕಾರಿಗೆ ಸೂಚನೆ ನೀಡಿದರು.

ಸುವರ್ಣಸೌಧದಲ್ಲಿ ಶನಿವಾರ ಜರುಗಿದ ತಾಪಂ ಕೆಡಿಪಿ ಸಭೆಯಲ್ಲಿ ರಸಗೊಬ್ಬರ ಕುರಿತು ನಡೆಸಿದ ಚರ್ಚೆಯಲ್ಲಿ ಮಾತನಾಡಿದ ಅವರು, ಇದೇ ಯೂರಿಯಾ ಗದ್ದಲದಲ್ಲಿ ಜಿಲ್ಲೆಯಲ್ಲಿ ಪ್ರಾಣ ಕಳೆದುಕೊಂಡ ಉದಾಹರಣೆಯಿದೆ. ಮತ್ತೂಮ್ಮೆ ಅಂತಹ ಯಾವುದೇ ಘಟನೆಗಳು ಜರುಗುವುದು ಬೇಡ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಯೂರಿಯಾ ಕೊರತೆಯಾಗದಂತೆ ನೋಡಿಕೊಳ್ಳಿ. ಅಗತ್ಯವಿದ್ದರೇ ಮತ್ತೂಮ್ಮೆ ಡೀಲರ್‌ಗಳ ಸಭೆ ಕರೆದು ಅವರಿಗೆ ತಿಳಿಹೇಳುವ ಕೆಲಸವಾಗಲಿ ಎಂದರು.

ಅಧ್ಯಕ್ಷರ ಮಾತುಗಳಿಗೆ ಧ್ವನಿಗೂಡಿಸಿದ ತಾಪಂ ಇಒ ಅಬಿದ್‌ ಗದ್ಯಾಳ, ಡೀಲರ್‌ಗಳ ಲೆಕ್ಕಪತ್ರ ಪರಿಶೋಧನೆ ಕಡ್ಡಾಯವಾಗಿ ನಡೆಸಬೇಕು. ರೇಟ್ ಬೋರ್ಡ್‌ ಮತ್ತು ಸ್ಟಾಕ್‌ಗಳನ್ನು ಎಲ್ಲ ರೈತರಿಗೂ ಕಾಣುವಂತೆ ಹಾಕುವ ವ್ಯವಸ್ಥೆ ಕೈಗೊಳ್ಳಿ.ಅಗತ್ಯಬಿದ್ದರೆ ಮಿಂಚಿನ ಸಂಚಾರ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟ ಯೂರಿಯಾ ಗೊಬ್ಬರವನ್ನು ವಶಕ್ಕೆ ತೆಗೆದುಕೊಳ್ಳುವ ಕೆಲಸವಾಗಬೇಕು. ಹಾಗಿದ್ದಲ್ಲಿ ನಾನೂ ತಮ್ಮೊಂದಿಗೆ ಬರಲು ಸಿದ್ಧ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕಕ ಕೃಷಿ ನಿರ್ದೇಶಕ ಅಮೃತೇಶ್ವರ, ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಎಲ್ಲಿಯೂ ಕಂಡು ಬಂದಿಲ್ಲ, ಆದರೂ ಸಹ ಹೆಚ್ಚಿನ ರಸಗೊಬ್ಬರವನ್ನು ದಾಸ್ತಾನು ಮಾಡುವ ಮೂಲಕ ರೈತರ ಬೇಡಿಕೆಗಳಿಗೆ ಅನುಗುಣವಾಗಿ ರಸಗೊಬ್ಬರವನ್ನು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ಕೆಲವೇ ದಿನಗಳಲ್ಲಿ ಇನ್ನೂ ಹೆಚ್ಚಿನ ರಸಗೊಬ್ಬರವನ್ನು ತರಿಸಲಾಗುತ್ತಿದೆ ಎಂದರು.

ಪ್ರಸಕ್ತ ವರ್ಷದಲ್ಲಿ ಸುರಿದ ಭಾರಿ ಮಳೆಗೆ ಈ ವರೆಗೆ ತಾಲೂಕಿನಲ್ಲಿ ಒಟ್ಟು 9091 ಹೆಕ್ಟರ್‌ ಪ್ರದೇಶದಲ್ಲಿನ ಕೃಷಿ ಬೆಳೆ ಹಾನಿಯಾಗಿದ್ದು, ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಎಲ್ಲ ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಸಲಾಗಿದ್ದು, ವಾಡಿಕೆಗಿಂತ ಶೇ.30 ಹೆಚ್ಚಿನ ಮಳೆಯಾಗಿದ್ದು, ಕೆಲವೇ ದಿನಗಳಲ್ಲಿ ಸರಕಾರದ ನಿಯಮದಂತೆ ಪರಿಹಾರದ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗುವುದು ಎಂದರು.

ಮಾಸಣಗಿ ಗ್ರಾಮದಲ್ಲಿ ರೈತರಿಗೆ ವಾರದ ಸಂತೆ ಪ್ರಾರಂಭಿಸುವಂತೆ ಕಳೆದ ಸಭೆಯಲ್ಲಿ ಎಪಿಎಂಸಿ ಅಧಿಕಾರಿಗಳಿಗೆ ತಿಳಿಸಿದರೂ ಈ ವರೆಗೂ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ ಎಂದು ತಾಪಂ ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ತೀವ್ರ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಪಿಎಂಸಿ ಕಾರ್ಯದರ್ಶಿ, ಮಾಸಣಗಿ ಗ್ರಾಮದಲ್ಲಿ ವಾರದ ಸಂತೆ ನಡೆಸಲು ಸ್ಥಳ ಗುರುತಿಸಿ ಕೊಡುವಂತೆ ಪಿಡಿಒ ಅವರಿಗೆ ಪತ್ರ ಬರೆದು ಕೇಳಲಾಗಿತ್ತು, ಸ್ಥಳದ ಲಭ್ಯತೆ ಇಲ್ಲವೆಂದು ಪಿಡಿಒ ಉತ್ತರ ನೀಡಿದ್ದರಿಂದ ಸದರಿ ಕಾಮಗಾರಿಯನ್ನು ಕೈಬಿಡಲಾಗಿದೆ ಎಂದು ಸಭೆಗೆ ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ವೈ.ಎನ್‌. ಕರೇಗೌಡ್ರ ಮಾತನಾಡಿ, ತಾಲೂಕಿನಲ್ಲಿ ಸುರಿದ ಅತಿಯಾದ ಮಳೆಗೆ ರೈತರ ತೋಟಗಳಲ್ಲಿ ಬೆಳೆದ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹಾನಿಗೊಳಗಾದ ರೈತರಿಗೆ ಪಾರದರ್ಶಕವಾದ ಪರಿಹಾರ ನೀಡಲು ಮುಂದಾಗಬೇಕು. ಸಮೀಕ್ಷೆ ಮಾಡುವುದರಲ್ಲಿ ಎಡವಟ್ಟಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯನ್ನಾಗಿಸುವುದಾಗಿ ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆಯ ವಿಜಯಲಕ್ಷಿ ್ಮೕ , ಕಳೆದ ತಿಂಗಳು ತಾಲೂಕಿನಲ್ಲಿ ಸುರಿದ ಮಳೆಗೆ 955 ಹೆಕ್ಟರ್‌ ಪ್ರದೇಶದ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಪ್ರತಿಯೊಬ್ಬರ ತೋಟಗಳನ್ನು ಪರಿಶೀಲಿಸಿ ಸರಿಯಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದಾಗಿ ತಿಳಿಸಿದರು.

ತಾಲೂಕಿನಾದ್ಯಂತ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ನಿಯಂತ್ರಣಕ್ಕೆ ಫಾಗಿಂಗ್‌ ವ್ಯವಸ್ಥೆಯನ್ನು ಪ್ರತಿ ಗ್ರಾಮದಲ್ಲಿಯೂ ಕಲ್ಪಿಸುವಂತೆ ತಾಪಂ ಇಒ ಅಬಿದ್‌ ಗದ್ಯಾಳ ಆರೋಗ್ಯಾಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯಾಧಿಕಾರಿ ಡಾ| ಬಿ.ಆರ್‌.ಲಮಾಣಿ, ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಈಗಾಗಲೇ ಒಂದು ಹಂತದ ಫಾಗಿಂಗ್‌ ಮಾಡಲಾಗಿದೆ. ಲಾರ್ವಾ ಸರ್ವೇ ಕಾರ್ಯ ಕೂಡ ಮುಕ್ತಾಯವಾಗಿದ್ದು, ಮಳೆ ನಿರಂತವಾಗಿ ಬರುತ್ತಿರುವುದರಿಂದ ಎರಡನೇ ಹಂತದ ಫಾಗಿಂಗ್‌ ಕಾರ್ಯಕ್ಕೆ ಅಡ್ಡಿಯಾಗಿದೆ. ತಾಲೂಕಿನಲ್ಲಿ ಈಗಾಗಲೇ 16 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳಿಗೂ ಸಮರ್ಪಕ ಚಿಕಿತ್ಸೆ ನೀಡುವ ಮೂಲಕ ತಹಬಂದಿಗೆ ತರಲಾಗಿದೆ ಎಂದರು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳ ಮಾಹಿತಿಯನ್ನು ಸಭೆಗೆ ವಿವರಿಸಿದರು. ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ