ಸ್ವಚ್ಛತೆ-ಜಲ ರಕ್ಷಣೆಗೆ ಆಂದೋಲನ

•ಸ್ವಚ್ಛ ಮೇವ ಜಯತೆ-ಜಲಾಮೃತ ಜಾಗೃತಿ •ಪರಿಸರ ರಕ್ಷಣೆ ಜವಾಬ್ದಾರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಡಿಸಿ

Team Udayavani, Jun 12, 2019, 10:44 AM IST

ಹಾವೇರಿ: ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹಾಗೂ ಜಿಪಂ ಸಿಇಒ ಕೆ.ಲೀಲಾವತಿ ಜಾಗೃತಿ ನಡಿಗೆಗೆ ಚಾಲನೆ ನೀಡಿದರು.

ಹಾವೇರಿ: ಇಂದಿನಿಂದ ಒಂದು ತಿಂಗಳ ವರೆಗೆ ಜಿಲ್ಲೆಯ ಗ್ರಾಮೀಣ ಸ್ವಚ್ಛತೆ ಹಾಗೂ ಜಲ ರಕ್ಷಣೆಗಾಗಿ ನಡೆಯುವ ‘ಸ್ವಚ್ಛ ಮೇವ ಜಯತೆ’ ಹಾಗೂ ‘ಜಲಾಮೃತ’ ಜಾಗೃತಿ ಆಂದೋಲನಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳ ನೇತೃತ್ವದಲ್ಲಿ ಜಾಗೃತಿ ನಡಿಗೆ ಮೂಲಕ ಚಾಲನೆ ನೀಡಲಾಯಿತು.

ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಾಕಾಥಾನ್‌ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಜಂಟಿಯಾಗಿ ಚಾಲನೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಿಂದ ಹೊಸಮನಿ ಸಿದ್ದಪ್ಪ ವೃತ್ತದ ವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ‘ಸ್ವಚ್ಛಮೇವ ಜಯತೆ’ ಹಾಗೂ ‘ಜಲಾಮೃತ’ ರಕ್ಷಣೆಯ ಜಾಗೃತಿಯ ಸಂದೇಶಗಳ ಮೂಲಕ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ನೇತೃತ್ವದಲ್ಲಿ ಸಿಇಒ ಲೀಲಾವತಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿದ್ಯಾರ್ಥಿಗಳು ವಾಕಾಥಾನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಲ ರಕ್ಷಣೆ ಹಾಗೂ ಸ್ವಚ್ಛತೆ ಮಹತ್ವದ ಘೋಷಣೆಗಳನ್ನು ಸಾರಿದರು.

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಮಾವೇಶಗೊಂಡು ಮಾನವ ಸರಪಳಿ ರಚಿಸಿ ಗ್ರಾಮಗಳ ಸ್ವಚ್ಛತೆಯ ಮಹತ್ವ, ತ್ಯಾಜ್ಯಗಳ ವ್ಯವಸ್ಥಿತ ವಿಲೇವಾರಿ, ಪರಿಸರ ರಕ್ಷಣೆ, ನೀರಿನ ಮಿತ ಬಳಕೆಯ ಕುರಿತಂತೆ ಸಂದೇಶಗಳನ್ನು ಬಿತ್ತರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಪ್ರತಿಜ್ಞಾವಿಧಿ ಬೋಧಿಸಿ, ‘ಆರೋಗ್ಯದ ಹಿತದೃಷ್ಟಿಯಿಂದ ಬಯಲಿನಲ್ಲಿ ಮಲ-ಮೂತ್ರ ವಿಸರ್ಜಿಸದೆ ಶೌಚಾಲಯವನ್ನೇ ಬಳಸುತ್ತೇವೆ. ಶೌಚಾಲಯವನ್ನು ಸದಾ ಸ್ವಚ್ಛವಾಗಿಡುತ್ತೇವೆ. ನನ್ನ ಮನೆಯ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ, ವಿಲೇವಾರಿ ಮಾಡಲು ಸಹಕರಿಸುತ್ತೇವೆ. ನೀರು ವ್ಯರ್ಥ ಮಾಡದೇ ಮಿತವಾಗಿ ಬಳಸುತ್ತೇವೆ. ನೀರು ಸಂರಕ್ಷಿಸಿ, ಗಿಡಗಳನ್ನು ಬೆಳೆಸುತ್ತೇವೆ. ಈ ಎಲ್ಲ ಕ್ರಮಗಳನ್ನು ಪಾಲಿಸುವಂತೆ ಇತರರನ್ನೂ ಪ್ರೇರೇಪಿಸುತ್ತೇನೆ. ನನ್ನ ಗ್ರಾಮವನ್ನು ಸ್ವಚ್ಛ-ಸುಂದರ ಹಾಗೂ ಆರೋಗ್ಯವಂತವಾಗಿಸಿ, ದೇಶಪ್ರೇಮಿ ನಾಗರಿಕನಾಗಿ ಸೇವೆ ಮಾಡುವುದಾಗಿ ದೃಢ ಪ್ರತಿಜ್ಞೆ ಮಾಡುತ್ತೇನೆ’ ಎಂದು ಪ್ರಮಾಣ ವಚನ ಬೋಧಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ