ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

•ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಕೊರತೆ•ಟೆಂಡರ್‌-ಕಮಿಷನ್‌ ಹೆಸರಿನಲ್ಲಿ ಲೂಟಿ

Team Udayavani, Jul 23, 2019, 10:28 AM IST

ಹಾವೇರಿ: ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಹಾಸ್ಟೆಲ್ಗಳು ಅವ್ಯವಸ್ಥೆಯ ಆಗರವಾಗಿದ್ದು, ಸರ್ಕಾರದ ಹಣ ಈ ಸಮುದಾಯದ ಹೆಸರಿನಲ್ಲಿ ನೀರಿನಂತೆ ಹರಿದು ಹೋಗುತ್ತಿದೆ. ಆದರೆ, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿಫಲರಾಗಿರುವ ಅಧಿಕಾರಗಳು ಟೆಂಡರ್‌ ಹಾಗೂ ಕಮೀಷನ್‌ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದಾರೆ. ಇತರೆ ವರ್ಗದ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶೇ. 40ರಷ್ಟನ್ನು ಸಹ ದಲಿತ ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ. ಕೆಲವೇ ಕೆಲವು ಹಾಸ್ಟೆಲ್ಗಳು ಮೂಲ ಸೌಕರ್ಯಗಳು ಇಲ್ಲದೇ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಬಹಳಷ್ಟು ಕಟ್ಟಡಗಳು ಶಿಥಿಲಗೊಂಡಿವೆ ಎಂದು ಆರೋಪಿಸಿದರು.

ದಲಿತ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದ್ದರೂ ವಸತಿ ವ್ಯವಸ್ಥೆ ದುಸ್ತರವಾಗಿದೆ. ಬಾಡಿಗೆ ಕಟ್ಟಡಗಳಲ್ಲೂ ಮೂಲ ಸೌಕರ್ಯ ಸಿಗದೆ ದಲಿತ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಒಬ್ಬ ಮೇಲ್ವಿಚಾರಕನಿಗೆ ಮೂರ್ನಾಲ್ಕು ಹಾಸ್ಟೆಲ್ಗಳ ಜವಾಬ್ದಾರಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ, ವಿದ್ಯಾಭ್ಯಾಸದ ಬಗ್ಗೆ ಗಮನಹರಿಸದಂತೆ ಮಾಡಿ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಅನಾಥರನ್ನಾಗಿ ಮಾಡಲಾಗಿದೆ. ಹಾಸ್ಟೆಲ್ ಮೇಲ್ವಿಚಾರಕರ ಹುದ್ದೆ ನಿರ್ವಹಿಸಲು ಕನಿಷ್ಟ ಪದವಿಯೊಂದಿಗೆ ಬಿಎಡ್‌ ಪದವಿ ಕಡ್ಡಾಯವಿದೆ. ಆದರೆ, ಈ ನಿಯಮವನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಗಾಳಿಗೆ ತೂರಿ ಅದೇ ಹಾಸ್ಟೆಲ್ಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವವರ ಸೇವಾ ಹಿರಿತನ ಪರಿಗಣಿಸಿ ಮೇಲ್ವಿಚಾಕರ ಹುದ್ದೆ ನೀಡಲಾಗುತ್ತಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

2019-20ನೇ ಸಾಲಿನ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೆ ಮಂಜೂರಾತಿ ಸಂಖ್ಯೆಗನುಗುಣವಾಗಿ ಮೆರಿಟ್ ಆಧಾರದ ಮೇಲೆ ಪ್ರವೇಶಾತಿ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯಿಂದ ಆದೇಶ ಹೊರಡಿಸಿರುವುದು ಖಂಡನೀಯ. 2013-14ನೇ ಸಾಲಿನ ಸರ್ಕಾರದ ಸುತ್ತೋಲೆಯಂತೆ ಹಾಸ್ಟೆಲ್ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಿರುವ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

ಡಿಎಸ್‌ಎಸ್‌ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ, ಪ್ರಮುಖರಾದ ಮಂಜಪ್ಪ ಮರೋಳ, ಬಸಣ್ಣ ಮುಗಳಿ, ಸಂಜೀಯಗಾಂ ಸಂಜಿವಣ್ಣನವರ, ಬಸವರಾಜ ಕಾಳೆ, ನಿಂಗಪ್ಪ ನಿಂಬಕ್ಕನವರ, ಮೈಲಪ್ಪ ಗೊಣಿಬಸಮ್ಮನವರ, ಮಾರುತಿ ಕಿಳ್ಳಿಕ್ಯಾತರ, ಫಕ್ಕಿರಪ್ಪ ಮಾಡಳ್ಳಿ, ಮೈಲಪ್ಪ ದಾಸಪ್ಪನವರ, ಪ್ರಶಾಂತ ಸಣ್ಣಮನಿ, ಬಸವರಾಜ ತಡಸದ, ರವಿ ಹುಣಸಿಮರದ, ಪರಮೇಶ ಮೈಲಮ್ಮನವರ, ದುರಗಪ್ಪ ಮಾದರ ಇತರರು ಪ್ರತಿಭಟನೆಯಲ್ಲಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ