ಬೇರುಬಿಟ್ಟ ಮರಳು ಮಾಫಿಯಾ

•ಪ್ರಭಾವಿಗಳ ಕಪಿಮುಷ್ಠಿಯಲ್ಲಿ ಮರಳುಗಾರಿಕೆ•ಸರ್ಕಾರದ ಆದೇಶಕ್ಕೂ ಕ್ಯಾರೇ ಎನ್ನದ ಅಧಿಕಾರಿ ವರ್ಗ

Team Udayavani, Jun 25, 2019, 8:20 AM IST

ಹಾವೇರಿ: ತುಂಗಭದ್ರಾ ನದಿ ತೀರದ ಮರಳು ಎಂದರೆ ವಜ್ರಗಳಲ್ಲಿ ಕೋಹಿನೂರ್‌ ಇದ್ದಾಗೆ. ಅಂಥ ಗುಣಮಟ್ಟದ ಮರಳು ಈಗ ಅಧಿಕಾರಸ್ಥರಿಗೆ ಖಜಾನೆಯಂತಾಗಿದೆ. ವ್ಯಾಪಕ ಪ್ರಮಾಣದಲ್ಲಿ ಗುಣಮಟ್ಟದ ಬಿಳಿ ಮರಳಿನ ನಿಕ್ಷೇಪ ಹೊಂದಿರುವ ಜಿಲ್ಲೆಯ ತುಂಗಭದ್ರಾ ಹಾಗೂ ವರದಾ ತೀರವನ್ನು ಮರಳು ಮಾಫಿಯಾ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.

ಕರ್ನಾಟಕ ಮರಳು ನೀತಿ ಅನುಷ್ಠಾನ ಕಷ್ಟ, ಮರಳು ಲಭ್ಯವಾಗುತ್ತಿಲ್ಲ ಎಂದು ಹೇಳುತ್ತ ಸಾರ್ವಜನಿಕರನ್ನು ಮರುಳು ಮಾಡುತ್ತ ಅಧಿಕಾರದಲ್ಲಿರುವವರು ಮರಳು ಲೂಟಿಯಲ್ಲಿ ತೊಡಗಿದ್ದಾರೆ. ಜಿಲ್ಲೆಗಷ್ಟೇ ಅಲ್ಲ, ಹೊರ ಜಿಲ್ಲೆಗಳಿಗೂ ಸಾಲುವಷ್ಟು ಮರಳು ನಿಕ್ಷೇಪ ಇಲ್ಲಿದ್ದರೂ ಜಿಲ್ಲೆಯ ಜನರಿಗೆ ಮಾತ್ರ ಮರಳು ಸಿಗದಂತಾಗಿರುವುದು ವಿಪರ್ಯಾಸ.

ಜಿಲ್ಲೆಯ ರಾಣಿಬೆನ್ನೂರು ತಾಲೂಕಿನಲ್ಲಿ ತುಂಗಭದ್ರಾ ತೀರ ಹಾಗೂ ಹಾವೇರಿ ತಾಲೂಕಿನ ವರದಾ ತೀರದಲ್ಲಿ ಗುಣಮಟ್ಟದ ಮರಳು ಸಿಗುತ್ತದೆ. ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಮರಳು ಸಂಗ್ರಹಣೆ, ಸ್ಟಾಕ್‌ ಯಾರ್ಡ್‌, ಸಾಗಣೆ ಇತ್ಯಾದಿ ಗುತ್ತಿಗೆ ನೀಡಲಾಗಿದ್ದರೂ ಅದು ಕೇವಲ ಹೆಸರಿಗೆ ಮಾತ್ರ.

ಸ್ಟಾಕ್‌ ಯಾರ್ಡಿನಲ್ಲಿ ಮರಳು ಸಂಗ್ರಹ ಇಲ್ಲದೆ ಇದ್ದರೂ ನಿತ್ಯವೂ 100-150ಕ್ಕೂ ಹೆಚ್ಚು ಲಾರಿಗಳು ರಾತ್ರಿ ವೇಳೆ ಹುಬ್ಬಳ್ಳಿ, ಧಾರವಾಡದವರೆಗೆ, ಇನ್ನೊಂದೆಡೆ ಅಲ್ಲಿಂದ ಬೆಂಗಳೂರುವರೆಗೂ ಮರಳು ಹೊತ್ತು ಸಾಗುತ್ತವೆ. ಜಿಲ್ಲೆಗೆ ಮರಳು ಲಭ್ಯವಾಗದಿದ್ದರೂ ಹೊರ ಜಿಲ್ಲೆಗೆ ಭರಪೂರ ಮರಳು ಅಕ್ರಮ ವಿಧಾನಗಳಲ್ಲಿ ಸಾಗಣೆಯಾಗುತ್ತಿದೆ.

ರಾತ್ರಿ ಸಾಗಾಟ: ನದೀ ತೀರದಿಂದ ಮರಳು ಹೊತ್ತು ಬರುವ ಟಿಪ್ಪರ್‌ಗಳು ಸ್ಟಾಕ್‌ ಯಾರ್ಡಿಗೆ ಬಾರದೇ ನೇರವಾಗಿ ಬೇರೆ ಜಿಲ್ಲೆಗೋ ಅಥವಾ ಖಾಸಗಿಯವರಿಗೋ ಹೋಗುತ್ತಿವೆ. ನದಿಯಲ್ಲಿ ನೀರಿನ ಮಟ್ಟ ಇಳಿದಂತೆಲ್ಲ ಮರಳು ಗಣಿಗಾರಿಕೆ ನದಿ ತಳಭಾಗವನ್ನೇ ಆಕ್ರಮಿಸಿಕೊಂಡಿದ್ದು ನದಿ ಪಾತ್ರ ಬಗೆದು ಹಾಕಲಾಗುತ್ತಿದೆ. ಸಂಜೆ 6ರ ಬಳಿಕ ಮರಳು ಸಾಗಣೆಗೆ ನಿಷೇಧ ಇದ್ದರೂ ಇಲ್ಲಿ ಸಾಗಣೆಯಾಗುವುದೇ ರಾತ್ರಿ ವೇಳೆಯಲ್ಲಿ. ಎಲ್ಲರಿಗೆ ಎಲ್ಲ ರೀತಿಯ ಮಾಮೂಲು ಮುಟ್ಟಿಸಿ ಗ್ರಾಹಕನ ಕೈ ಸೇರುವವರೆಗೆ ಮರಳಿನ ದರ ಈಗ ಲಾರಿಗೆ 32,000ರೂ. ದಾಟಿದೆ.

ಜಾಣ ಕುರುಡು: ಇಂಥ ಅಕ್ರಮ ಮರಳು ದಂಧೆಯಲ್ಲಿ ಯಾರಿದ್ದಾರೆ, ಯಾರಿಲ್ಲ ಎಂದು ಹೇಳುವುದೇ ಕಷ್ಟವಾಗಿದೆ. ಅಧಿಕಾರದಲ್ಲಿದ್ದವರು, ಅಧಿಕಾರದಲ್ಲಿರುವವರ ಬೆಂಬಲಿಗರು, ಅಧಿಕಾರ ಇಲ್ಲದಿದ್ದರೂ ತಮ್ಮದೇ ಸ್ವ ಪ್ರಭಾವ ಇರುವವರು ಹೀಗೆ ಅನೇಕರು ಈ ಜಾಲದಲ್ಲಿರುವುದು ಬಹಿರಂಗಗುಟ್ಟು. ಯಾವುದೋ ಗುತ್ತಿಗೆದಾರನ ಹೆಸರಿನಲ್ಲಿ ಇನ್ನಾರೋ ಮರಳು ಸಂಗ್ರಹಿಸುತ್ತಾರೆ.

ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಣೆಯಾಗುತ್ತಿರುವುದು ಕಂದಾಯ, ಪೊಲೀಸ್‌, ಪಿಡಬ್ಲುಡಿ ಸೇರಿದಂತೆ ಸಂಬಂಧಪಟ್ಟವರಿಗೆಲ್ಲರಿಗೂ ಗೊತ್ತಿದೆ. ಕೆಲ ಜನಪ್ರತಿನಿಧಿಗಳು, ಪ್ರಭಾವಿಗಳೇ ಈ ಅಕ್ರಮಗಳಿಗೆಲ್ಲ ಅಧಿಪತಿಗಳಾಗಿರುವುದರಿಂದ ಅಧಿಕಾರಿಗಳು ಸಹ ಏನೂ ಮಾಡದಂತಾಗಿದ್ದಾರೆ. ಕೆಲ ಅಧಿಕಾರಿಗಳು ನೋಡಿಯೂ ಸುಮ್ಮನಿದ್ದರೆ, ಇನ್ನು ಕೆಲವರು ಸಿಕ್ಕಿದ್ದೇ ಚಾನ್ಸು ಎಂಬಂತೆ ತಾವೂ ಅಕ್ರಮಗಳಿಗೆ ಕೈಜೋಡಿಸಿದ್ದಾರೆ.

ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಇಲ್ಲಿ ಎಲ್ಲವೂ ಕಾನೂನುಬದ್ಧವಾಗಿ ಹಾಗೂ ಅಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಪಾಲಿಸಲಾಗುತ್ತಿದೆ ಎಂಬಂತೆ ಬಿಂಬಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಕಾರ್ಯವೂ ನಡೆದಿದೆ. ಕೆಲ ಜನಪ್ರತಿನಿಧಿಗಳು, ಅಧಿಕಾರಿಗಳು ಕಪ್ಪ ವಸೂಲಿಗೆ ಕೈ ಮುಂದೆ ಮಾಡಿ ನಿಂತಿರುವ ಪರಿಣಾಮ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ತಡೆಗೆ ಕೈ ಜೋಡಿ ಸುವವರೇ ಇಲ್ಲದಂತಾಗಿದೆ. ಪಾಲು ಸಿಗದವರು ಮಾತ್ರ ಅಕ್ರಮಗಳ ಬಗ್ಗೆ ಮಾತನಾಡುವಂತಾಗಿರುವುದು ದುರದೃಷ್ಟಕರ ಸಂಗತಿ.

ದೂರು ದಾಖಲಾಗುತ್ತಿಲ್ಲ: ಅಕ್ರಮ ಮರಳು ದಂಧೆ ನಡೆಯುತ್ತಿರುವ ಕುರಿತು ಪೊಲೀಸ್‌ ಇಲಾಖೆಗೆ ದೂರು ನೀಡಲು ಹೋದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಿ ಎಂದು ಹೇಳುತ್ತಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡಲು ಹೋದರೆ ಲೋಕೋಪಯೋಗಿ ಇಲಾಖೆಗೆ ಹೋಗಿ ದೂರು ದಾಖಲಿಸಲು ಸೂಚಿಸುತ್ತಾರೆ. ಲೋಕೋಪಯೋಗಿ ಇಲಾಖೆಗೆ ದೂರು ನೀಡಲು ಹೋದರೆ ತಹಶೀಲ್ದಾರರಿಗೆ ದೂರು ನೀಡಲು ನಿರ್ದೇಶಿಸುತ್ತಾರೆ. ಅಧಿಕಾರಿಗಳ ಈ ಬೇಜವಾಬ್ದಾರಿ ವರ್ತನೆಯಿಂದ ಆಕ್ರೋಶಗೊಂಡಿರುವ ಕೆಲವರು ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ. ಆದರೆ, ಪ್ರತಿಫಲ ಮಾತ್ರ ಶೂನ್ಯವಾಗಿರುವುದು ದುರಂತ.

 

•ಎಚ್.ಕೆ. ನಟರಾಜ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ