- Sunday 08 Dec 2019
ಉರ್ದು ಶಾಲೆ ನಿವೇಶನಕ್ಕೆ ಪ್ರಸ್ತಾವನೆ ಸಲ್ಲಿಸಿ
Team Udayavani, Jul 19, 2019, 10:13 AM IST
ಹಾವೇರಿ: ಜಿಲ್ಲೆಯಲ್ಲಿರುವ ಉರ್ದು ಶಾಲೆಗಳಿಗೆ ಹಾಗೂ ಮೌಲಾನಾ ಆಜಾದ್ ಶಾಲೆಗಳಿಗೆ ಬೇಕಾಗಿರುವ ನಿವೇಶನ ಕುರಿತಂತೆ ವಾರದೊಳಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಅನುಷ್ಠಾನದಡಿ ಅಲ್ಪಸಂಖ್ಯಾತ ವರ್ಗಕ್ಕೆ ಕಲ್ಪಿಸಿರುವ ಸೌಕರ್ಯಗಳ ಕುರಿತಂತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಉರ್ದು ಶಾಲೆಗಳಿಗೆ ಕಾಂಪೌಂಡ್ ನಿರ್ಮಿಸಿ: ಜಿಲ್ಲೆಯಲ್ಲಿರುವ ಉರ್ದು ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಮಾಡಲು ಆದ್ಯತೆ ನೀಡಬೇಕು ಎಂದು ಜಿಲ್ಲಾ ಸಮಿತಿಯ ಅಧಿಕಾರೇತರ ಸದಸ್ಯರಾದ ಹಾನಗಲ್ಲನ ಬಾಬುಜಾನ್ ಸಭೆಯ ಗಮನ ಸೆಳೆದರು. ಇವರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿರುವ ಯಾವ ಉರ್ದು ಶಾಲೆಗಳಿಗೆ ಕಾಂಪೌಂಡ್ ಇಲ್ಲ ಎಂಬುದರ ಮಾಹಿತಿ ಸಂಗ್ರಹಿಸಿ ಕಾಂಪೌಂಡ್ ಅಗತ್ಯವಿರುವ ಶಾಲೆಗಳಿಗೆ ಆದ್ಯತೆ ಮೇರೆಗೆ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಅಂಗನವಾಡಿಯಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ವರ್ಗದ ಮಕ್ಕಳ ಪೈಕಿ ಅಪೌಷ್ಠಿಕತೆ ಎದುರಿಸುತ್ತಿರುವ ಮಕ್ಕಳಿಗೆ ಮೊಟ್ಟೆ, ಹಾಲು ಸೇರಿದಂತೆ ಪೌಷ್ಠಿಕ ಆಹಾರ ನೀಡಲು ಕ್ರಮ ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಠಡಿಗಳಿಗೆ ನಿವೇಶನ ಸಮಸ್ಯೆ: ಪ್ರಧಾನ ಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿ 70 ಉರ್ದು ಶಾಲಾ ಕೊಠಡಿಗಳು ಕಳೆದ ಸಾಲಿನಲ್ಲಿ ಮಂಜೂರಾಗಿದ್ದು, ಇದರಲ್ಲಿ 64 ಕೊಠಡಿಗಳು ಪೂರ್ಣಗೊಂಡಿವೆ. ಉಳಿದ ಆರು ಕೊಠಡಿಗಳಿಗೆ ನಿವೇಶನ ಸಮಸ್ಯೆ ಇದೆ. 14 ಮೌಲಾನಾ ಆಜಾದ್ ಶಾಲೆಗಳಿಗೆ ಕೊಠಡಿ ನಿರ್ಮಾಣಕ್ಕೆ ಮಂಜೂರಾಗಿದ್ದು, ಇದರಲ್ಲಿ ಎರಡು ಶಾಲೆಗಳ ಕೊಠಡಿಗಳ ನಿರ್ಮಾಣಕ್ಕೆ ನಿವೇಶನ ಸಮಸ್ಯೆ ಎದುರಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸಭೆಯ ಗಮನಸೆಳೆದರು.
ಸಾಲ ನಿಕಾರಕರಿಸದಿರಲು ಸಲಹೆ: ಸ್ವಉದ್ಯೋಗ ಒಳಗೊಂಡಂತೆ ಸರ್ಕಾರದ ಸಹಾಯಧನ ಹಾಗೂ ಬ್ಯಾಂಕ್ ಸಾಲ ಯೋಜನೆಯಡಿ ಅರ್ಜಿ ಸಲ್ಲಿಸಿದ ಅಲ್ಪಸಂಖ್ಯಾತ ವರ್ಗಗಳಿಗೆ ಯಾವುದೇ ವಿಳಂಬ ಮತ್ತು ಸಕಾರಣವಿಲ್ಲದೆ ಬ್ಯಾಂಕ್‌ಗಳು ಸಾಲ ನಿಕಾರಕರಿಸಿದ ನಿರ್ದಿಷ್ಟ ಪ್ರಸಂಗವಿದ್ದರೆ ನನ್ನ ಗಮನಕ್ಕೆ ತರಬೇಕು. ಈ ಕುರಿತಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಅಧಿಕಾರೇತರ ಸದಸ್ಯರಿಗೆ ಸಲಹೆ ನೀಡಿದರು.
183 ಮನೆಗಳ ನಿರ್ಮಾಣ ಗುರಿ: ವಿವಿಧ ಗ್ರಾಮೀಣ ವಸತಿ ಯೋಜನೆಯಡಿ 183 ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ. ಅಲ್ಪಸಂಖ್ಯಾತ ವರ್ಗದವರು ಹೆಚ್ಚಾಗಿರುವ ಸವಣೂರ ತಾಲೂಕಿಗೆ ಹೆಚ್ಚುವರಿ ಮನೆ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದನ್ನು ಹೊರತುಪಡಿಸಿ ಅಲ್ಪಸಂಖ್ಯಾತ ವರ್ಗಕ್ಕೆ ಹೆಚ್ಚುವರಿಯಾಗಿ ಮನೆಗಳ ಅವಶ್ಯಕತೆ ಇದ್ದರೆ ವರದಿ ತರಿಸಿ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಲೀಲಾವತಿ ತಿಳಿಸಿದರು. ನಗರ ಮತ್ತು ಗ್ರಾಮೀಣ ಅಲ್ಪಸಂಖ್ಯಾತ ವರ್ಗದವರಿಗೆ ನಿಗದಿತ ಖೋಟಾ ಹೊರತುಪಡಿಸಿ ಸಾಮಾನ್ಯ ವರ್ಗದಲ್ಲೂ ಪರಿಗಣಿಸಬೇಕು. ಅತೀ ಹೆಚ್ಚು ಅಲ್ಪಸಂಖ್ಯಾತರು ವಾಸಿಸುವ ಪ್ರದೇಶದಲ್ಲಿ ಹೆಚ್ಚುವರಿ ಮನೆಗಳ ಮಂಜೂರಾತಿ ಅವಶ್ಯಕತೆ ಇದ್ದರೆ ಸರ್ಕಾರಕ್ಕೆ ವಿಶೇಷ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಿರೀಕ್ಷಿತ ಮಟ್ಟದಲ್ಲಿ ಸಲ್ಲಿಕೆಯಾಗದ ಅರ್ಜಿ:
ಕೃಷಿ ಇಲಾಖೆಯಲ್ಲಿ ಕೃಷಿ ಯಾಂತ್ರಿಕರಣ ಯೋಜನೆ, ಸೂಕ್ಷ್ಮ ನೀರಾವರಿ ಯೋಜನೆ, ನೂತನ ಕೃಷಿ ಉತ್ತೇಜನ ಯೋಜನೆ, ಕೃಷಿ ಭಾಗ್ಯ ಯೋಜನೆಯಡಿ ಅಲ್ಪಸಂಖ್ಯಾತರ ವರ್ಗಗಳಿಗೆ ಜಿಲ್ಲೆಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಶೇ.15 ರಷ್ಟು ಅನುದಾನ ಬಳಕೆಮಾಡಬೇಕು. ಆದರೆ, ಅಲ್ಪಸಂಖ್ಯಾತ ಹಿಡುವಳಿದಾರರ ಸಂಖ್ಯೆ ಕಡಿಮೆ ಇರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳು ಬರುವುದಿಲ್ಲ ಎಂದು ಕೃಷಿ ಜಂಟಿ ನಿರ್ದೇಶಕರು ಸಭೆಯ ಗಮನಕ್ಕೆ ತಂದರು.
ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಯಡಿ ಅಲ್ಪಸಂಖ್ಯಾತ ವರ್ಗದವರಿಗೆ ಸರ್ಕಾರದ ಸೌಲಭ್ಯಗಳ ಕುರಿತಂತೆ ಹೆಚ್ಚಿನ ಪ್ರಚಾರ ಅಗತ್ಯವಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣ, ವಿಡಿಯೋ ಪ್ರದರ್ಶನ, ಪ್ರತಿ ಗ್ರಾಮದಲ್ಲೂ ಮಾಹಿತಿ ನೀಡುವ ಕಾರ್ಯಕ್ರಮ ರೂಪಿಸಬೇಕು ಎಂದು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ಅಲ್ಪಸಂಖ್ಯಾತ ವರ್ಗಕ್ಕೆ ಮೀನುಗಾರಿಕೆಗಾಗಿ ಕೊಳಗಳ ನಿರ್ಮಾಣಕ್ಕೆ ಹಣಕಾಸಿನ ನೆರವು ಹಾಗೂ ನಗರದಲ್ಲಿ ಮೀನು ಮಾರುಕಟ್ಟೆ ನಿರ್ಮಿಸಲು ನಿವೇಶನ ಕುರಿತಂತೆ ಪ್ರಸ್ತಾವನೆಯನ್ನು ತ್ವರಿತವಾಗಿ ವಿಲೇವಾರಿಗೊಳಿಸಲು ಸೂಚನೆ ನೀಡಿದರು.
ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಕುರಿತಂತೆ ಉದ್ಯೋಗ ವಿನಿಮಯ ಕಚೇರಿಯಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗೂ ಉದ್ಯೋಗ ಮೇಳ ಆಯೋಜಿಸಬೇಕು. ಈ ಕುರಿತಂತೆ ವ್ಯಾಪಕ ಪ್ರಚಾರ ನೀಡುವಂತೆ ಉದ್ಯೋಗ ವಿನಿಮಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಕ್ಪ್ ಆಸ್ತಿಗಳ ಸರ್ವೇ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ವಕ್ಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾನೂನು ಸುವ್ಯವಸ್ಥೆಗೆ ಕ್ರಮ:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ ಮಾತನಾಡಿ, ಕೋಮು ಸಾಮರಸ್ಯ, ಕಾನೂನು ಸುವ್ಯವಸ್ಥೆಗೆ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.ಸೂಕ್ಷ್ಮ ಸಂದರ್ಭದಲ್ಲಿ ಶಾಂತಿ ಸಭೆ ನಡೆಸಿ ಸಮಸ್ಯೆಗೆ ಸ್ಪಂದಿಸಿದೆ. ಯಾವುದೇ ಸಮಸ್ಯೆಗಳಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಅಥವಾ ಪೊಲೀಸ್ ಸಹಾಯವಾಣಿ 24 ತಾಸು ಕಾರ್ಯನಿರ್ವಹಿಸುತ್ತಿದೆ. ಕರೆ ಮಾಡಿದರೆ ತ್ವರಿತವಾಗಿ ಸ್ಪಂದಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಗೋಪಾಲ ಲಮಾಣಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಮಖಾನೆ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಆರ್.ವಾಸಣ್ಣ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಭೋಗಿ, ವಿವಿಧ ಇಲಾಖಾ ಅಧಿಕಾರಿಗಳು, ತಾಪಂ ಇಒ, ಪುರಸಭೆ, ನಗರಸಭೆ, ಪಪಂ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.
ಈ ವಿಭಾಗದಿಂದ ಇನ್ನಷ್ಟು
-
ಹಾವೇರಿ: ಹಿರೇಕೆರೂರು ಹಾಗೂ ರಾಣಿಬೆನ್ನೂರು ಉಪಚುನಾವಣೆ ಹಿನ್ನೆಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಒಂದು ತಿಂಗಳಿಂದ ಸುತ್ತಾಡಿದ ಅಭ್ಯರ್ಥಿಗಳು ಮತದಾನದ...
-
ಬ್ಯಾಡಗಿ: ಅರಿಯದೇ ಮಾಡಿದ ತಪ್ಪನ್ನು ಜವಾಬ್ದಾರಿಯುತ ನಾಗರಿಕ ಸಮಾಜ ಮನ್ನಿಸುತ್ತಿಲ್ಲ, ಹೀಗಾಗಿ ಎಚ್ಐವಿ(ಏಡ್ಸ್) ಸೋಂಕಿತರು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ....
-
ಹಾವೇರಿ: ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ದೌರ್ಜನ್ಯ ವಿರೋಧಿ ಸಿ, ಪಶುವೈದ್ಯೆ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ನಡೆದ ಎಂಟು ವರ್ಷದ ಬಾಲಕಿ ಮೇಲಿನ ಹತ್ಯಾಚಾರ...
-
ಹಾವೇರಿ:ಸೋಲುವ ಭೀತಿ ಹಾಗೂ ಹತಾಶ ಭಾವನೆಯಿಂದ ಬಿಜೆಪಿಯವರು ನನ್ನ ಮನೆ ಮೇಲೆ ಆದಾಯ ತೆರಿಗೆ ಹಾಗೂ ಅಬಕಾರಿ ದಾಳಿ ನಡೆಸಿದ್ದಾರೆ ಎಂದು ರಾಣಿಬೆನ್ನೂರು ಕ್ಷೇತ್ರದ...
-
ಹಾವೇರಿ:ಗೃಹ ಸಚಿವರು ಚುನಾವಣಾಧಿಕಾರಿಗಳಿಗೆ ಐದು ಬಾರಿ ದೂರವಾಣಿ ಕರೆ ಮಾಡಿ ಒತ್ತಡ ಹೇರಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮುಖಂಡರ ಮನೆ ಮೇಲೆ ದಾಳಿ ನಡೆಸುವಂತೆ...
ಹೊಸ ಸೇರ್ಪಡೆ
-
ಮಂಗಳೂರು: ಭಾರತೀಯರು ಗೋವಿಗೆ ನೀಡುವ ಗೌರವ ಅಪಾರ. ಮನುಷ್ಯನ ದೈನಂದಿನ ಜೀವನದಲ್ಲಿ ಗೋವಿನ ಪಾತ್ರ ಮಹತ್ವದ್ದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|...
-
ಕಾಠ್ಮಂಡು: ಈಜು ಮತ್ತು ಕುಸ್ತಿಪಟುಗಳ ಅಮೋಘ ನಿರ್ವಹಣೆಯಿಂದ ಭಾರತವು ಸೌತ್ ಏಶ್ಯನ್ ಗೇಮ್ಸ್ನಲ್ಲಿ ಭಾರೀ ಪ್ರಮಾಣದಲ್ಲಿ ಪದಕಗಳನ್ನು ಗೆಲ್ಲುತ್ತಿದೆ. ಆರನೇ...
-
ಕ್ಯಾನ್ಬೆರಾ: ಅಮೋಘ ಆಟದ ಪ್ರದರ್ಶನ ನೀಡಿದ ಭಾರತೀಯ ವನಿತೆಯರು ತ್ರಿರಾಷ್ಟ್ರ ವನಿತಾ ಹಾಕಿ ಕೂಟದ ಮೂರನೇ ಪಂದ್ಯದಲ್ಲಿ ಕಿವೀಸ್ ತಂಡವನ್ನು 4-1 ಗೋಲುಗಳಿಂದ ಭರ್ಜರಿಯಾಗಿ...
-
ಹೊಸದಿಲ್ಲಿ: ಕಳೆದ ತಿಂಗಳು ನಡೆದ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವ ಬಾಸ್ಕೆಟ್ಬಾಲ್ ಆಟಗಾರ ಸತ್ನಮ್ ಸಿಂಗ್ ಭಾಮರ ಅವರನ್ನು ರಾಷ್ಟ್ರೀಯ ದ್ರವ್ಯ...
-
ಹೊಸದಿಲ್ಲಿ: ಜಕಾರ್ತ ಏಶ್ಯನ್ ಗೇಮ್ಸ್ ನ 1,500 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಜಿನ್ಸನ್ ಜಾನ್ಸನ್ ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಗೆ ಅರ್ಹತೆ ಪಡೆಯುವ...